ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ-ಚೀನಾ ಸಹಕಾರ ಸಾಧ್ಯತೆ ವಿಫಲ

Update: 2019-03-11 15:34 GMT

ಬೀಜಿಂಗ್, ಮಾ. 11: ಭಾರೀ ಸಾಧ್ಯತೆಗಳ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಕೈಜೋಡಿಸುವ ಅಪರೂಪದ ಅವಕಾಶವೊಂದನ್ನು ಭಾರತ ಮತ್ತು ಚೀನಾಗಳು ಕೈಚೆಲ್ಲಿವೆ. ‘ಚಾಂಗ್’ಇ-4’ ಚಂದ್ರ ಶೋಧಕ ನೌಕೆಯಲ್ಲಿ ಒಯ್ಯಬೇಕಾದ ಭಾರತೀಯ ಉಪಗ್ರಹದ ಸ್ವರೂಪದ ಬಗ್ಗೆ ಉಭಯ ದೇಶಗಳ ನಡುವೆ ಭಿನ್ನಾಭಿಪ್ರಾಯ ತಲೆದೋರಿದ ಬಳಿಕ ಈ ಬೆಳವಣಿಗೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಚೀನಾದ ‘ಚಾಂಗ್’ಇ-4’ ಚಂದ್ರ ಶೋಧಕ ನೌಕೆಯು ಜನವರಿ 3ರಂದು ಚಂದ್ರನ ಭೂಮಿಗೆ ಕಾಣದ ಭಾಗದಲ್ಲಿ ಇಳಿದಿದೆ. ಚಂದ್ರನ ಈ ಭಾಗದಲ್ಲಿ ಇಳಿದ ಮೊದಲ ಶೋಧಕ ನೌಕೆ ಅದಾಗಿದೆ. ಅಂದಿನಿಂದ ಈ ನೌಕೆಯು ಚಂದ್ರನ ಮೇಲ್ಮೈಯ ಆಕರ್ಷಕ ಚಿತ್ರಗಳನ್ನು ಕಳುಹಿಸುತ್ತಿದೆ. ಚಂದ್ರನ ಮೇಲ್ಮೈಯಲ್ಲಿ ಅದು ಸರಣಿ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸುತ್ತಿದೆ. ಈ ಕಾರ್ಯಕ್ರಮದಲ್ಲಿ ಹಲವು ದೇಶಗಳು ಮತ್ತು ಸಂಸ್ಥೆಗಳು ಭಾಗಿಯಾಗಿವೆ.

‘ಚಾಂಗ್’ಇ-4’ ನೌಕೆಯು ಭಾರತೀಯ ಉಪಗ್ರಹವನ್ನೂ ಹೊತ್ತೊಯ್ದಿದ್ದರೆ, ಅದು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ-ಚೀನಾ ಸಹಕಾರದ ದೊಡ್ಡ ಹೆಜ್ಜೆಯಾಗಿರುತ್ತಿತ್ತು.

ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ (ಸಿಎನ್‌ಎಸ್‌ಎ) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ಮಾಹಿತಿಯನ್ನು ಖಚಿತಪಡಿಸಿವೆ. ಆದರೆ, ಸಹಕಾರ ಯಾಕೆ ಏರ್ಪಡಲಿಲ್ಲ ಎನ್ನುವುದಕ್ಕೆ ಸಂಬಂಧಿಸಿದ ವಿವರಗಳನ್ನು ಅವುಗಳು ನೀಡಲಿಲ್ಲ.

► ಭಿನ್ನ ಸ್ವರೂಪದಿಂದಾಗಿ ಸಮಸ್ಯೆ: ಚೀನಾ

‘‘2015 ಎಪ್ರಿಲ್‌ನಲ್ಲಿ, ಚಾಂಗ್’ಇ-4 ಚಂದ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿ ಸಿಎನ್‌ಎಸ್‌ಎಯ ಆಡಳಿತಗಾರ ಕ್ಸು ಡಾಝೆ ಜಗತ್ತಿನ ಪ್ರಮುಖ ಬಾಹ್ಯಾಕಾಶ ಸಂಸ್ಥೆಗಳ ಮುಖ್ಯಸ್ಥರಿಗೆ ಪತ್ರಗಳನ್ನು ಬರೆದರು. ಇದಕ್ಕೆ ಡಝನ್‌ಗೂ ಅಧಿಕ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಗಳು ಧನಾತ್ಮಕವಾಗಿ ಪ್ರತಿಕ್ರಿಯಿಸಿದವು’’ ಎಂದು ಸಿಎನ್‌ಎಸ್‌ಎ ‘ಹಿಂದೂಸ್ತಾನ್ ಟೈಮ್ಸ್’ಗೆ ಹೇಳಿದೆ.

‘‘ಈ ಕಾರ್ಯಕ್ರಮದಲ್ಲಿ ಸಹಕಾರಕ್ಕಾಗಿ ಭಾರತವೂ ಅರ್ಜಿಗಳನ್ನು ಹಾಕಿದೆ. ಆದರೆ, ಎರಡು ದೇಶಗಳ ಕಾರ್ಯಕ್ರಮಗಳ ಸ್ವರೂಪದಲ್ಲಿನ ಭಿನ್ನತೆಯಿಂದಾಗಿ, ಭಾರತೀಯ ಉಪಗ್ರಹವನ್ನು ಒಯ್ಯಲು ಚಾಂಗ್’ಇ-4 ನೌಕೆಗೆ ಸಾಧ್ಯವಾಗಲಿಲ್ಲ’’ ಎಂದು ಅದು ತಿಳಿಸಿದೆ.

► ವಿವರ ನೀಡಲು ಸಾಧ್ಯವಿಲ್ಲ: ಇಸ್ರೋ

‘‘ಇಲ್ಲ, ಅದರ ಬಗ್ಗೆ ವಿವರ ನೀಡಲು ಸಾಧ್ಯವಿಲ್ಲ... ಆ ವಿಷಯದ ಬಗ್ಗೆ ನಾವು ಹೇಳಿಕೆ ನೀಡುವುದಿಲ್ಲ’’ ಎಂದು ಇಸ್ರೋದ ವಕ್ತಾರರೊಬ್ಬರು ಹೇಳಿದರು.

ಜರ್ಮನಿ, ಸ್ವೀಡನ್, ನೆದರ್‌ಲ್ಯಾಂಡ್ಸ್ ಮತ್ತು ರಶ್ಯ ಸೇರಿದಂತೆ ಹಲವು ದೇಶಗಳು ಚೀನಾದ ಈ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಸಹಕಾರ ಏರ್ಪಡಿಸಿಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News