ಆಹ್ವಾನವಿಲ್ಲದೆ ನವಾಝ್ ಶರೀಫ್ ಮನೆಗೆ ಮೋದಿ ಹೋಗಿದ್ದನ್ನು 3ನೇ ಸರ್ಜಿಕಲ್ ಸ್ಟ್ರೈಕ್ ಎನ್ನುತ್ತೀರಾ ?

Update: 2019-03-12 07:47 GMT

 ಹೈದರಾಬಾದ್,ಮಾ.12: ಕಳೆದ ಐದು ವರ್ಷಗಳಲ್ಲಿ ನಮ್ಮ ಸರಕಾರ ಮೂರು ಬಾರಿ ಪಾಕಿಸ್ತಾನದ ಗಡಿ ದಾಟಿತ್ತು. ಎರಡು ಬಾರಿ ಈಗಾಗಲೇ ದಾಟಿದ್ದು, ಮೂರನೇಯದ್ದು ಯಾವಾಗ ಎಂದು ಈಗಲೇ ಹೇಳುವುದಿಲ್ಲ ಎಂದು ಕರ್ನಾಟಕದಲ್ಲಿ ಚುನಾವಣಾ ರ್ಯಾಲಿಯಲ್ಲಿ ಗೃಹ ಸಚಿವ ರಾಜ್‌ನಾಥ್ ಸಿಂಗ್ ಮತ್ತೊಂದು ಏರ್‌ಸ್ಟ್ರೈಕ್ ನಡೆಸಲಾಗುತ್ತದೆ ಎಂದು ಬಾಂಬ್ ಸಿಡಿಸಿದ್ದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಹಿಂದೆ ಆಹ್ವಾನವಿಲ್ಲದೆ ನವಾಝ್ ಶರೀಫರ ಮನೆಗೆ ಹೋಗಿರುವುದು ಬಹುಶಃ ಪಾಕ್ ಮೇಲೆ ನಡೆಸಿರುವ ಮೂರನೇ ಸ್ಟ್ರೈಕ್ ಆಗಿರಬಹುದು ಎಂದು ರಾಜ್‌ನಾಥ್ ಹೇಳಿಕೆಯನ್ನು ಉಲ್ಲೇಖಿಸಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಉವೈಸಿ ನಗೆ ಚಟಾಕಿ ಹಾರಿಸಿದ್ದಾರೆ.

 ‘‘ರಾಜ್‌ನಾಥ್ ಸಿಂಗ್ ಸರ್, ಭಾರತದ ಪ್ರಧಾನಮಂತ್ರಿ 2015ರಲ್ಲಿ ಆಹ್ವಾನವಿಲ್ಲದೆ ಮದುವೆ ಕಾರ್ಯಕ್ರಮವೊಂದಕ್ಕೆ ನವಾಝ್ ಶರೀಫ್ ಮನೆಗೆ ತೆರಳಿರುವುದು ಪಾಕ್ ಮೇಲೆ ನಡೆದ ಮೂರನೇ ಸ್ಟ್ರೈಕ್ ಆಗಿದೆಯೇ‘ ದಯವಿಟ್ಟು ಈ ಬಗ್ಗೆ ಉತ್ತರಿಸಿ’’ ಎಂದು ಒವೈಸಿ ಟ್ವೀಟ್ ಮಾಡಿದ್ದಾರೆ.

ಮಂಗಳೂರಿನಲ್ಲಿ ಶನಿವಾರ ಚುನಾವಣೆ ರ್ಯಾಲಿಯಲ್ಲಿ ಮಾತನಾಡುತ್ತಿದ್ದ ರಾಜ್‌ನಾಥ್ ಸಿಂಗ್, ಕೇಂದ್ರ ಸರಕಾರ ಉರಿ ಸೇನಾ ನೆಲೆ ಮೇಲೆ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ 2016ರ ಸರ್ಜಿಕಲ್ ಸ್ಟ್ರೈಕ್ ಹಾಗೂ ಇತ್ತೀಚೆಗೆ ಪುಲ್ವಾಮ ದಾಳಿಗೆ ಪ್ರತೀಕಾರವಾಗಿ ಪಾಕ್‌ನ ಬಾಲಕೋಟ್ ಮೇಲೆ ಏರ್‌ಸ್ಟ್ರೈಕ್ ನಡೆಸಿದೆ. ಮೂರನೇ ಸ್ಟ್ರೈಕ್ ನಡೆಯಲಿದ್ದು ಅದರ ಬಗ್ಗೆ ಈಗಲೇ ಮಾಹಿತಿ ನೀಡುವುದಿಲ್ಲ ಎಂದಿದ್ದರು.

ಪ್ರಧಾನಿ ಮೋದಿ 2015ರಲ್ಲಿ ಅಫ್ಘಾನಿಸ್ತಾನದ ಪ್ರವಾಸವನ್ನು ರದ್ದುಪಡಿಸಿ ನೇರವಾಗಿ ಲಾಹೋರ್‌ಗೆ ತೆರಳಿದ್ದರು. ಆಗಿನ ಪಾಕ್ ಪ್ರಧಾನಿ ನವಾಝ್ ಶರೀಫ್‌ರನ್ನು ಭೇಟಿಯಾಗಿ ಅಚ್ಚರಿ ಮೂಡಿಸಿದ್ದರು. ಆಗ ಭಾರತದ ಪ್ರಧಾನಿಯೊಬ್ಬರು 10 ವರ್ಷಗಳ ಬಳಿಕ ಮೊದಲ ಬಾರಿ ಪಾಕಿಸ್ತಾನಕ್ಕೆ ತೆರಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News