ಸಂವಿಧಾನದ ವಿರುದ್ಧ ಸಂಘ ಪರಿವಾರದ ಸಂಚು

Update: 2019-03-13 04:24 GMT

ಇಷ್ಟು ದಿನ ಭಾರತದ ಜನತೆ ಹೇಳುತ್ತಿದ್ದ ಬಿಜೆಪಿಯ ರಹಸ್ಯ ಕಾರ್ಯಸೂಚಿ ಈಗ ರಹಸ್ಯವಾಗಿ ಉಳಿದಿಲ್ಲ. ಭಾರತೀಯರನ್ನು ಜಾತಿ, ಧರ್ಮದ ಹೆಸರಿನಲ್ಲಿ ಒಡೆದ ಬಿಜೆಪಿ ಅರ್ಥಾತ್ ಸಂಘ ಪರಿವಾರ ಇದೀಗ ರಾಷ್ಟ್ರ ಒಪ್ಪಿಕೊಂಡ ಸಂವಿಧಾನದ ವಿರುದ್ಧ ಅಪಸ್ವರ ತೆಗೆದಿದೆ. ದಲಿತ ಮೇಧಾವಿಯೊಬ್ಬ ರಚಿಸಿದ ಸಂವಿಧಾನದ ಬಗ್ಗೆ ಈ ಪುರೋಹಿತಶಾಹಿ ಪರಿವಾರಕ್ಕೆ ಅಂತರಾಳದಲ್ಲಿದ್ದ ಅಸಹನೆ ಈಗ ಬಟಾ ಬಯಲಾಗಿದೆ.

ಭಾರತದ ಸಕಲ ಜನ ಸಮುದಾಯಗಳಿಗೆ ಸಮಾನಾವಕಾಶ ನೀಡಿರುವ ಬಾಬಾಸಾಹೇಬರ ಸಂವಿಧಾನದ ವಿರುದ್ಧ ಸಂಚು ನಡೆಯುತ್ತಲೇ ಇದೆ. ಇದೀಗ ಆರೆಸ್ಸೆಸ್ ಕಾರ್ಯದರ್ಶಿ ಸುರೇಶ್ ಜೋಶಿ ಸಂವಿಧಾನದ ವಿರುದ್ಧ ಕಿಡಿ ಕಾರಿದ್ದಾರೆ. ಗ್ವಾಲಿಯರ್‌ನಲ್ಲಿ ರವಿವಾರ ನಡೆದ ಆರೆಸ್ಸೆಸ್ ಅಖಿಲ ಭಾರತ ಪ್ರತಿನಿಧಿ ಸಭೆಯಲ್ಲಿ ಮಾತನಾಡಿದ ಸುರೇಶ್ ಜೋಶಿ ‘‘ಈ ಸಂವಿಧಾನದಿಂದ ಮಾತ್ರ ದೇಶ ಮುನ್ನಡೆಸಲು ಸಾಧ್ಯವಿಲ್ಲ, ಹಿಂದೂ ಧರ್ಮದ ಸಂಪ್ರದಾಯ ಮತ್ತು ನಂಬಿಕೆಗಳನ್ನು ಕಾಪಾಡಲು ಈ ಸಂವಿಧಾನದಿಂದ ಸಾಧ್ಯವಿಲ್ಲ. ಅದಕ್ಕಾಗಿ ಆರೆಸ್ಸೆಸ್ ಹೋರಾಟಕ್ಕಿಳಿಯಲಿದೆ’’ ಎಂದು ಹೇಳಿದ್ದಾರೆ. ಹಿಂದೂ ಧರ್ಮದ ಆಚರಣೆಗಳಾದ ಜಲ್ಲಿಕಟ್ಟು, ಪಟಾಕಿ ಸಿಡಿಸುವುದರ ಮೇಲಿನ ನಿರ್ಬಂಧ ಹಾಗೂ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಮಹಿಳೆಯರಿಗೆ ಪ್ರವೇಶ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಸಂಘ ಪರಿವಾರ ತನ್ನ ಹಿಡನ್ ಅಜೆಂಡಾ ಆರಂಭಿಸಿದೆ.

 ಸಂವಿಧಾನದ ಮೇಲೆ ಸಂಘ ಪರಿವಾರ ನಡೆಸಿರುವ ದಾಳಿ ಇದೇ ಮೊದಲ ಸಲವೇನಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಸಂವಿಧಾನದ ವಿರುದ್ಧ ಸಂಘ ಪರಿವಾರ ಮಸಲತ್ತು ನಡೆಸುತ್ತಲೇ ಬಂದಿದೆ. ಡಾ ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ರಚನೆಯ ಕರಡು ಸಮಿತಿ ಸಂವಿಧಾನ ರಚನಾ ಸಭೆಯ ಮುಂದೆ ಸಂವಿಧಾನವನ್ನು ಚರ್ಚೆಗೆ ಇಟ್ಟು ಸುದೀರ್ಘ ಸಮಾಲೋಚನೆಯ ಬಳಿಕ ಸಂವಿಧಾನವನ್ನು ಅಧಿಕೃತವಾಗಿ ಒಪ್ಪಿಕೊಳ್ಳಲಾಯಿತು. ಆಗಲೇ ಆರೆಸ್ಸೆಸ್‌ನ ಎರಡನೇ ಸರಸಂಘಚಾಲಕರಾದ ಮಾಧವ ಸದಾಶಿವ ಗೋಳ್ವ್ವಾಲ್ಕರ್ ಇದರ ಬಗ್ಗೆ ಅಪಸ್ವರ ತೆಗೆದಿದ್ದರು. ‘‘ಅಂಬೇಡ್ಕರ್ ರೂಪಿಸಿದ ಸಂವಿಧಾನ, ಭಾರತದ ಹಿಂದೂ ಸಂಸ್ಕೃತಿಯನ್ನು ಪ್ರತಿಬಿಂಬಿಸುವುದಿಲ್ಲ. ಈ ನೆಲದ ಪರಂಪರೆಗೆ ಪೂರಕವಾಗಿಲ್ಲ’’ ಎಂದು ಟೀಕಿಸಿದ್ದರು. ಆದರೆ ಗಾಂಧಿ ಹತ್ಯೆಯ ಆನಂತರ ಆರೆಸ್ಸೆಸ್ ವಿರುದ್ಧ ಅಂದಿನ ಗೃಹ ಸಚಿವ ವಲ್ಲಭಭಾಯಿ ಪಟೇಲರು ನಿಷೇಧ ಹೇರಿದ್ದರಿಂದ ಸಂಘ ಪರಿವಾರ ಬಾಯಿ ಮುಚ್ಚಿಕೊಂಡಿತ್ತು. ಈ ನಿಷೇಧದಿಂದ ಪಾರಾಗಲು ಗೋಳ್ವಾಲ್ಕರ್ ಅವರು ಮುಚ್ಚಳಿಕೆ ಪತ್ರ ಬರೆದು ಕೊಟ್ಟು ಬಂದ ನಂತರ ಆರೆಸ್ಸೆಸ್ ಮೇಲಿನ ನಿಷೇಧ ಹಿಂದೆಗೆದುಕೊಳ್ಳಲಾಯಿತು. ಆನಂತರ ಶಕ್ತಿ ಸಂಚಯ ಮಾಡಿಕೊಂಡ ಆರೆಸ್ಸೆಸ್ ಈಗ ಮತ್ತೆ ಚಿಗಿತುಕೊಂಡಿದೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಸಂವಿಧಾನ ಬದಲಿಸುವ, ಮೀಸಲಾತಿ ರದ್ದುಗೊಳಿಸುವ ಮಾತುಗಳು ಸಂಘದ ನಾಯಕರಿಂದ ಆಗಾಗ ಕೇಳಿ ಬರುತ್ತಿವೆ. ಆರೆಸ್ಸೆಸ್‌ನ ಈಗಿನ ಸರಸಂಘಚಾಲಕ ಮೋಹನ ಭಾಗವತ್ ಮತ್ತು ಸಂಘ ಮೂಲದ ಬಿಜೆಪಿ ನಾಯಕ ರಾಮ ಮಾಧವ ಆಗಾಗ ಈ ಮಾತನ್ನು ಹೇಳುತ್ತಲೇ ಬಂದಿದ್ದಾರೆ. ಈಗ ಸುರೇಶ್ ಜೋಶಿ ಸಂಘದ ಸಭೆಯಲ್ಲೇ ಈ ಮಾತನ್ನು ಹೇಳಿದ್ದರಿಂದ ಅವರ ಉದ್ದೇಶ ಇನ್ನಷ್ಟು ಸ್ಪಷ್ಟವಾಗಿದೆ

ಸುರೇಶ್ ಜೋಶಿ ಪ್ರತಿಪಾದಿಸುವ ಹಿಂದೂ ಸಂಸ್ಕೃತಿ, ನಂಬಿಕೆಗಳು ಯಾವ ನಂಬಿಕೆಗಳು ಎಂಬುದು ಗುಟ್ಟಾಗಿ ಉಳಿದಿಲ್ಲ. ಮಹಿಳೆಯರು ದೇವಾಲಯ ಪ್ರವೇಶ ಮಾಡಬಾರದು ಎಂಬುದು, ಹಿಂದೂ ಅಂದರೆ ಬ್ರಾಹ್ಮಣ ಧರ್ಮದ ನಂಬಿಕೆ ಅದನ್ನು ಸಂವಿಧಾನ ಪ್ರಶ್ನಿಸಬಾರದು ಎಂಬುದು ಜೋಶಿಯವರ ಹಿಂದೂ ಸಂಸ್ಕೃತಿಯಾಗಿದೆ. ‘‘ಪಟಾಕಿ ಸಿಡಿಸುವುದರಿಂದ ಪರಿಸರ ಮಾಲಿನ್ಯವಾಗುತ್ತದೆ, ಸಾವು ನೋವು ಸಂಭವಿಸುತ್ತವೆ’’ ಎಂದು ಸುಪ್ರೀಂ ಕೋರ್ಟ್ ನಿಷೇಧಿಸಿದೆ. ಅದನ್ನು ಸಂಘ ಒಪ್ಪಿಕೊಳ್ಳಲು ಸಿದ್ಧವಿಲ್ಲ. ಇದು ಇಲ್ಲಿಗೆ ನಿಲ್ಲುವುದಿಲ್ಲ. ದಲಿತರ ದೇವಾಲಯ ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು ಸಂವಿಧಾನ ರದ್ದುಗೊಳಿಸಿದೆ. ನಾಳೆ ಆರೆಸ್ಸೆಸ್ ಹಿಂದೂ ನಂಬಿಕೆ ಹೆಸರಿನಲ್ಲಿ ದಲಿತರ ದೇವಾಲಯ ಪ್ರವೇಶ ಮಾತ್ರವಲ್ಲ, ಪಟ್ಟಣ ಪ್ರವೇಶಕ್ಕೂ ವಿರೋಧ ವ್ಯಕ್ತಪಡಿಸಬಹುದು. ಇನ್ನು ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಇರುವ ಮೀಸಲಾತಿಯನ್ನು ಆರೆಸ್ಸೆಸ್ ಸರ ಸಂಘಚಾಲಕ ಮೋಹನ ಭಾಗವತ್ ಈಗಾಗಲೇ ಹಲವಾರು ಬಾರಿ ವಿರೋಧಿಸಿದ್ದಾರೆ.

ಇದರಿಂದ ಒಂದು ಅಂಶ ಸ್ಪಷ್ಟವಾಗುತ್ತದೆ. ಸಂಘ ಪರಿವಾರದ ಯಾವ ಅಜೆಂಡಾವೂ ಈಗ ಹಿಡನ್ ಆಗಿ ಉಳಿದಿಲ್ಲ. ಕೇಂದ್ರದಲ್ಲಿ ನರೇಂದ್ರ ಮೋದಿ ನಾಯಕತ್ವದ ಬಿಜೆಪಿ ಸರಕಾರ ಮತ್ತೆ ಅಸ್ತಿತ್ವಕ್ಕೆ ಬಂದರೆ ಸಂವಿಧಾನಕ್ಕೆ ಖಂಡಿತ ಗಂಡಾಂತರ ಎದುರಾಗಲಿದೆ. ಮೀಸಲಾತಿಗೂ ಅಪಾಯ ಉಂಟಾಗಲಿದೆ. ಹಾಗಾಗಿ ಜಾತಿ, ಮತ,ಲಿಂಗ ಭೇದವಿಲ್ಲದೇ ತಮಗೆ ಸಮಾನಾವಕಾಶವನ್ನು ನೀಡಿರುವ ಸಂವಿಧಾನವನ್ನು ಉಳಿಸಿಕೊಳ್ಳುವ ಹೊಣೆ ಜನತೆಯ ಮೇಲಿದೆ.
ಜನತೆ ಈಗ ಎಚ್ಚ್ಚೆತ್ತುಕೊಳ್ಳದಿದ್ದರೆ ಈ ದೇಶಕ್ಕೆ ಇಲ್ಲಿನ ಪ್ರಜಾಪ್ರಭುತ್ವಕ್ಕೆ ಭಾರೀ ಗಂಡಾಂತರ ಎದುರಾಗಲಿದೆ. ಈವರೆಗೆ ಅನುಭವಿಸುತ್ತ ಬಂದ ಸವಲತ್ತುಗಳು ಕಣ್ಮರೆಯಾಗುತ್ತವೆ. ಕಾರ್ಪೊರೇಟ್, ಕೋಮುವಾದಿ ಫ್ಯಾಶಿಸ್ಟ್ ಕೂಟ ಈ ದೇಶವನ್ನು ಸರ್ವನಾಶ ಮಾಡಲಿದೆ.

ಅಯೋಧ್ಯೆಯ ರಾಮ ಮಂದಿರ ನಿರ್ಮಾಣ, ಗೋ ರಕ್ಷಣೆ ಅಭಿಯಾನ ಇವೆಲ್ಲ ಸಂಘ ಪರಿವಾರದ ರಾಜಕೀಯ ಅಜೆಂಡಾಗಳು. ರಾಮನ ಮೇಲೆ ಭಕ್ತಿಗಿಂತ ಆತನ ಹೆಸರಿನಲ್ಲಿ ಕೋಮು ಧ್ರುವೀಕರಣ ಮಾಡಿ ರಾಜಕೀಯ ಅಧಿಕಾರ ಹಿಡಿಯುವುದು ಸಂಘ ಪರಿವಾರದ ಗುರಿ, ರಾಜಕೀಯ ಅಧಿಕಾರ ಹಿಡಿದ ಆನಂತರ ದಲಿತ ಹಿಂದುಳಿದ ವರ್ಗಗಳ ಮೀಸಲಾತಿ ರದ್ದುಗೊಳಿಸುವುದು, ಅವಕಾಶ ವಂಚಿತ ಸಮುದಾಯಗಳಿಗೆ ಹಾಗೂ ಮಹಿಳೆಯರಿಗೆ ರಕ್ಷಣೆ ಒದಗಿಸಿರುವ ಅಂಬೇಡ್ಕರ್ ಸಂವಿಧಾನವನ್ನು ಬದಲಿಸಿ ಶ್ರೇಣೀಕೃತ ಜಾತಿ ಪದ್ಧ್ದತಿಯನ್ನು ದೇಶದ ಮೇಲೆ ಹೇರುವುದು ಹಾಗೂ ಮನುವಾದದ ದಿಕ್ಕಿನತ್ತ ದೇಶವನ್ನು ಮುನ್ನಡೆಸುವುದು ಸಂಘ ಪರಿವಾರದ ಗುರಿ. ಸಂವಿಧಾನ ಬದಲಾವಣೆ ಮಾತನ್ನು ಅನಂತಕುಮಾರ್‌ಹೆಗಡೆ ಅವರಂಥ ಬಿಜೆಪಿ ಮಂತ್ರಿಗಳು ಈಗಾಗಲೇ ಹೇಳುತ್ತಾ ಬಂದಿದ್ದಾರೆ. ಇದು ಅವರಾಡಿದ ಮಾತಲ್ಲ, ಆರೆಸ್ಸೆಸ್ ಆಡಿಸಿದ ಮಾತು ಎಂಬುದು ಜೋಶಿ ಹೇಳಿಕೆಯಿಂದ ಸ್ಪಷ್ಟವಾಗಿದೆ.

 ಬರುವ ಚುನಾವಣೆ ಸಂವಿಧಾನ ನಿರ್ನಾಮ ಮಾಡಲು ಹೊರಟವರು ಮತ್ತು ಸಂವಿಧಾನ ಸಂರಕ್ಷಕರ ನಡುವಿನ ಹೋರಾಟವಾಗಿದೆ. ಜನತೆ ಈ ಎರಡರ ನಡುವೆ ಒಂದನ್ನು ಆರಿಸಿಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News