ಬಿಜೆಪಿ ನಾಯಕ ಶೇರ್ ಮಾಡಿದ ಅಭಿನಂದನ್ ಚಿತ್ರಗಳಿರುವ ಪೋಸ್ಟರ್ ಗಳನ್ನು ಫೇಸ್ ಬುಕ್ ನಿಂದ ತೆಗೆದು ಹಾಕಿ

Update: 2019-03-13 06:16 GMT
ಅಭಿನಂದನ್ ವರ್ಧಮಾನ್

ಹೊಸದಿಲ್ಲಿ, ಮಾ.13: ಬಿಜೆಪಿ ನಾಯಕ ಹಾಗೂ ದಿಲ್ಲಿ ಶಾಸಕ ಪ್ರಕಾಶ್ ಶರ್ಮ ಫೇಸ್ ಬುಕ್ ನಲ್ಲಿ ಶೇರ್ ಮಾಡಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಚಿತ್ರವಿರುವ ಎರಡು ರಾಜಕೀಯ ಪೋಸ್ಟರ್ ಗಳನ್ನು ತೆಗೆದು ಹಾಕುವಂತೆ ಚುನಾವಣಾ ಆಯೋಗ ಫೇಸ್ ಬುಕ್ ಗೆ ನಿರ್ದೇಶಿಸಿದೆ. 

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಕಾಶ್ ಶರ್ಮ ಅವರ ಭಾವಚಿತ್ರಗಳೂ ಇರುವ ಈ ಪೋಸ್ಟರ್ ಗಳನ್ನು ಮಾರ್ಚ್ 1ರಂದು ಶರ್ಮ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಾರೆನ್ನಲಾಗಿದೆ.

ಎಪ್ರಿಲ್ 11ರಂದು ಆರಂಭಗೊಳ್ಳಲಿರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಾರಿಯಾಗಿರುವ ಚುನಾವಣಾ ನೀತಿ ಸಂಹಿತೆಯನ್ವಯ ಸಾಮಾಜಿಕ ಜಾಲತಾಣವೊಂದರಲ್ಲಿ ಪ್ರಕಟವಾಗಿರುವ ಚಿತ್ರವೊಂದರ ಮೇಲೆ ಕ್ರಮ ಕೈಗೊಂಡಿರುವುದು ಇದೇ ಮೊದಲ ಬಾರಿ ಎಂದು ಹೇಳಲಾಗಿದೆ. ರಕ್ಷಣಾ ಪಡೆ ಸಿಬ್ಬಂದಿಯ ಚಿತ್ರಗಳನ್ನು ಚುನಾವಣಾ ಉದ್ದೇಶಗಳಿಗೆ ರಾಜಕೀಯ ಪಕ್ಷಗಳು ಬಳಸಬಾರದೆಂದು ಚುನಾವಣಾ ಆಯೋಗ ಸೂಚಿಸಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.

ಶರ್ಮ ಅವರು ಪೋಸ್ಟ್ ಮಾಡಿದ್ದ ಚಿತ್ರಗಳ ವಿರುದ್ಧ ಇ ವಿಜಿಲ್ ಆ್ಯಪ್ ನಲ್ಲಿ ದೂರನ್ನು ಪಡೆದ ನಂತರ ಚುನಾವಣಾ ಆಯೋಗ ಈ ಬಗ್ಗೆ ಫೇಸ್ ಬುಕ್ ನ ಪಬ್ಲಿಕ್ ಪಾಲಿಸಿ ಫಾರ್ ಇಂಡಿಯಾ ಆ್ಯಂಡ್ ಸೌತ್ ಏಷ್ಯಾದ ನಿರ್ದೇಶಕ ಶಿವನಾಥ್ ತುರಾಲ್ ಬಳಿ ಈ ವಿಚಾರ ಎತ್ತಿತ್ತು.

ಶರ್ಮ ಶೇರ್ ಮಾಡಿದ್ದ ಒಂದು ಪೋಸ್ಟರ್ ನಲ್ಲಿ ‘ಝುಕ್ ಗಯಾ ಹೈ ಪಾಕಿಸ್ತಾನ್, ಲೌಟ್ ಆಯಾ ಹೈ ದೇಶ್ ಕಾ ವೀರ್ ಜವಾನ್’’ ಎಂದು ಬರೆಯಲಾಗಿದ್ದರೆ ಇನ್ನೊಂದರಲ್ಲಿ ಪ್ರಧಾನಿಯನ್ನು ಹೊಗಳಿ ‘‘ಮೋದೀ ಜಿ ದ್ವಾರ ಇತ್ನೆ ಕಮ್ ಸಮಯ್ ಮೈ ಬಹಾದ್ದೂರ್ ಅಭಿನಂದನ್ ಕೋ ವಾಪಸ್ ಲಾನಾ ಭಾರತ್ ಕಿ ಬಹುತ್ ಕೂಟ್ ನೀತಿಕ್ ವಿಜಯ್ ಹೈ’’ ಎಂದು ಬರೆಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News