×
Ad

ಸಾಲದ ಹೊರೆ: ಇಬ್ಬರು ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆಗೆ ಶರಣಾದ ವ್ಯಾಪಾರಿ

Update: 2019-03-13 12:40 IST

ಘಾಝಿಯಾಬಾದ್, ಮಾ.13:  ಸಾಲದಲ್ಲಿ ಮುಳುಗಿದ್ದ ವ್ಯಾಪಾರಿಯೊಬ್ಬ ತನ್ನ ಇಬ್ಬರು ಮಕ್ಕಳಿಗೆ ವಿಷವುಣಿಸಿ ತಾನು ಮನೆಯ ಸೀಲಿಂಗ್ ಗೆ ಬೆಡ್ ಶೀಟ್ ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಘಾಝಿಯಾಬಾದ್ ನ ಸಿಹಾನಿ ಗ್ರಾಮದಲ್ಲಿ ನಡೆದಿದೆ.

ಮನಾಲಿ ಎಂಬಲ್ಲಿ ಉಪಹಾರ ಗೃಹ  ನಡೆಸುತ್ತಿದ್ದ ಸುಂದರ್ ಪಾಲ್   ಭಾರೀ ನಷ್ಟ ಅನುಭವಿಸಿದ್ದನು. ಅಲ್ಲದೆ  6.9 ಲಕ್ಷ ರೂ.ಸಾಲ ಆತನಿಗೆ  ಮಂಜೂರಾಗಿದ್ದರೂ ಕೈಗೆ ಬಂದಿರಿಲ್ಲ. . ಇದರಿಂದಾಗಿ ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಸುಂದರ್ ಪಾಲ್ ಸೋಮವಾರ ತಡರಾತ್ರಿ ತನ್ನ ಮನೆಯಲ್ಲಿ ಹದಿನೈದರ ಹರೆಯದ ವಿಕಲಚೇತನ ಮಗ ತುಷಾರ್ ಮತ್ತು 11ರ ಹರೆಯದ ಮಗಳು ಮಾಹಿಗೆ ಸಿಹಿ ತಿಂಡಿಯಲ್ಲಿ ವಿಷ ನೀಡಿದ್ದಾನೆ. ಬಳಿಕ ಆತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸುಂದರ್ ಪಾಲ್ ಗೆ ಮೂವರು ಮಕ್ಕಳು . ಇಬ್ಬರು ಮಕ್ಕಳು ಆತನೊಂದಿಗೆ ನಿದ್ರಿಸುತ್ತಿದ್ದರು. ಮನೆಯ ಇನ್ನೊಂದು ಕೊಣೆಯಲ್ಲಿ ಪತ್ನಿ ಶಶಿ  ಜೊತೆ ಐದರ ಹರೆಯದ ಪುತ್ರ ನಮನ್ ಇದ್ದನು.

ಮಂಗಳವಾರ ಬೆಳಗ್ಗಿನ ಜಾವ 3:00 ಶಶಿಗೆ ಎಚ್ಚರಗೊಂಡು ಪತಿಯ ಕೋಣೆಯತ್ತ ತೆರಲಿದಾಗ ಅಲ್ಲಿ ದೀಪ ಉರಿಯುತ್ತಿತ್ತು. ಕೊಠಡಿಯಲ್ಲಿ ಇಬ್ಬರು ಮಕ್ಕಳು ಪ್ರಜ್ಞೆಯಿಲ್ಲದೆ ಬಿದ್ದಿರುವುದು ಕಂಡು ಬಂತು ಮತ್ತು ಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂತು ಎನ್ನಲಾಗಿದೆ.

ಸುಂದರ್ ಪಾಲ್  ಕಳೆದ ಎರಡೂವರೆ ವರ್ಷಗಳಿಂದ ಮನಾಲಿಯಲ್ಲಿ ಉಪಹಾರಗೃಹ ನಡೆಸುತ್ತಿದ್ದನು. ಮಂಜಿನಿಂದ ಆವೃತ್ತಗೊಂಡ ಮನಾಲಿಯಿಂದ ಕಳೆದ ಜನವರಿಯಲ್ಲಿ ಊರಿಗೆ ಆಗಮಿಸಿದ್ದನು.  ಮಾರ್ಚ್ 15ರಂದು ಮತ್ತೆ ವಾಪಸಾಗುವ ಯೋಚನೆಯಲ್ಲಿದ್ದ. ಊರಿಗೆ ಆಗಮಿಸಿದ್ದ ಆತ ಸಂಬಂಧಿಕರು ಮತ್ತು ನೆರೆಮನೆಯವರ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ ಎನ್ನಲಾಗಿದೆ.

ಕಳೆದ ಸೋಮವಾರ ಹೊರಗೆ ಹೋಗಿದ್ದ ಸುಂದರ್ ಪಾಲ್ ಸಿಹಿ ತಿಂಡಿಯೊಂದಿಗೆ ವಾಪಸಾಗಿದ್ದನು. ರಾತ್ರಿ ತನಕ ಇಬ್ಬರು ಮಕ್ಕಳೊಂದಿಗೆ ಲೂಡೋ  ಆಡಿದ್ದನು. ಆದರೆ ಪತ್ನಿ ಮತ್ತು ಕಿರಿಯ ಮಗ ಈತನೊಂದಿಗೆ ಆಟದಲ್ಲಿ ಭಾಗಿಯಾಗಿರಲಿಲ್ಲ. ಪತ್ನಿ ಸಶಿ ಆರೋಗ್ಯ ಇಲಾಖೆಯ ಉದ್ಯೋಗಿ. ಪಲ್ಸ್ ಪೋಲಿಯೊ  ಕಾರ್ಯಕ್ಕಾಗಿ ಮರುದಿನ ಬೆಳಗ್ಗೆ ಬೇಗನೆ ಏಳುವ ಉದ್ದೇಶಕ್ಕಾಗಿ ಮತ್ತು ಕಿರಿಯ ಮಗ ಪರೀಕ್ಷೆಯ ಕಾರಣಕ್ಕಾಗಿ ಇನ್ನೊಂದು ಕೋಣೆಯಲ್ಲಿ ಮಲಗಿದ್ದರು ಎಂದು ತಿಳಿದು ಬಂದಿದೆ.

ನಿದ್ದೆಗೆ ಹೋಗುವ ಮುನ್ನ ಸುಂದರ್ ಪಾಲ್ ತನ್ನ ಇಬ್ಬರು ಮಕ್ಕಳಿಗೆ  ವಿಷ ಬೆರೆಸಿದ ಸಿಹಿ ತಿಂಡಿ ನೀಡಿದ್ದಾನೆ. ತಂದೆಯ ಕೃತ್ಯದ ಅರಿವಿಲ್ಲದ ಮಕ್ಕಳು ವಿಷಪೂರಿತ ಸಿಹಿ ತಿಂಡಿ ಸೇವಿಸಿ ಇಹಲೋಕ ತ್ಯಜಿಸಿದ್ದಾರೆ. ಬಳಿಕ  ಸುಂದರ್ ಪಾಲ್  ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು  ಪೊಲೀಸರು ತಿಳಿಸಿದ್ದಾರೆ.

ಮನಾಲಿಯಲ್ಲಿ ಟ್ಯಾಕ್ಸಿ ವ್ಯವಹಾರದಲ್ಲಿ ಸುಂದರ್ ಪಾಲ್ ಭಾರಿ ನಷ್ಟ ಅನುಭವಿಸಿದ್ದ.  ಬಳಿಕ  ತನ್ನ ಸಹೋದರ ಅನುಜ್ ಜತೆ ಉಪಹಾರಗೃಹ ತೆರೆದಿದ್ದನು. ಆದರೆ ಅಲ್ಲಿಯೂ ಆತನ ಅದೃಷ್ಟ ಚೆನ್ನಾಗಿರಲಿಲ್ಲ ಎನ್ನಲಾಗಿದೆ. ಸುಂದರ್ ಪಾಲ್ ಸಾಯುವ ಮುನ್ನ ಡೈರಿಯಲ್ಲಿ  ತನಗೆ 6.8 ಲಕ್ಷ  ರೂ . ಸಾಲ ಮಂಜೂರಾಗಿದ್ದರೂ  ಹಣ ಕೈಗೆ ಸಿಗದೆ ನಿರಾಸೆ ಅನುಭವಿಸಿರುವ  ವಿಚಾರವನ್ನು ಬರೆದಿದ್ದಾನೆ  ಎಂದು ಮೂಲಗಳು ತಿಳಿಸಿವೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News