ಮುಝಫ್ಫರನಗರ ಗಲಭೆ: ಸೋದರರ ಹತ್ಯೆಯ ಪ್ರತ್ಯಕ್ಷದರ್ಶಿ ಯುವಕನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

Update: 2019-03-13 09:18 GMT

ಮುಝಫ್ಫರನಗರ್, ಮಾ.13: ಮುಝಫ್ಫರನಗರ್ ಹಿಂಸಾಚಾರದ ವೇಳೆ ತನ್ನಿಬ್ಬರು ಸೋದರರ ಹತ್ಯೆಗೆ ಸಾಕ್ಷಿಯಾಗಿದ್ದ ವ್ಯಕ್ತಿಯೊಬ್ಬರನ್ನು ಖಟೋಲಿ ಎಂಬಲ್ಲಿ ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಮೃತ ವ್ಯಕ್ತಿಯನ್ನು ಅಶ್ಫಾಕ್ ಎಂದು ಗುರುತಿಸಲಾಗಿದೆ.

ಅಶ್ಫಾಕ್ ರ ಸೋದರರ ಹತ್ಯೆ ಪ್ರಕರಣದಲ್ಲಿ ಎಂಟು ಆರೋಪಿಗಳು ವಿಚಾರಣೆಯೆದುರಿಸುತ್ತಿದ್ದರು. ಮುಂದಿನ ವಿಚಾರಣೆ ಮಾರ್ಚ್ 25ಕ್ಕೆ ನಿಗದಿಯಾಗಿತ್ತು. ಹಾಲು ವಿತರಿಸಲು ಅಶ್ಫಾಕ್ ಹೋಗುತ್ತಿದ್ದಾಗ ಆವರನ್ನು ಹತ್ಯೆಗೈಯಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಆರೋಪಿಗಳ ಪತ್ತೆಗಾಗಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

ಹಿಂಸಾಚಾರದ ವೇಳೆ ಅಶ್ಫಾಕ್ ಸೋದರರಾದ ನವಾಬ್ ಹಾಗೂ ಶಹೀದ್ ಕೊಲೆಗೀಡಾಗಿದ್ದರು. ಈ ಸಂಬಂಧ ಅಶ್ಫಾಕ್ ದಾಖಲಿಸಿದ್ದ ಪ್ರಕರಣವನ್ನು ವಾಪಸ್ ಪಡೆಯದೇ ಇದ್ದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಆರೋಪಿಗಳು ಬೆದರಿಕೆಯೊಡ್ಡಿದ್ದರು ಎನ್ನಲಾಗಿದ್ದು ಬೆದರಿಕೆಯ ಹಿನ್ನೆಲೆಯಲ್ಲಿ ಇತ್ತೀಚೆಗೆ ಅಶ್ಫಾಕ್ ಪೊಲೀಸ್ ರಕ್ಷಣೆಯನ್ನೂ ಕೋರಿದ್ದರು.

2013ರ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಸಂಭವಿಸಿದ್ದ ಮುಝಫ್ಫರನಗರ್ ಕೋಮು ಹಿಂಸಾಚಾರದಲ್ಲಿ 60 ಜನರು ಬಲಿಯಾಗಿ 40,000ಕ್ಕೂ ಅಧಿಕ ಜನರು ನಿರ್ವಸಿತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News