ರಾಹುಲ್ ಗಾಂಧಿಯಿಂದ ಅನುಷ್ಕಾ ಶರ್ಮಾವರೆಗೆ: ಸೆಲೆಬ್ರಿಟಿಗಳಿಗೆ ಟ್ವೀಟ್ ಮೂಲಕ ಪ್ರಧಾನಿ ಹೇಳಿದ್ದೇನು?

Update: 2019-03-13 09:17 GMT

ಹೊಸದಿಲ್ಲಿ, ಮಾ.13: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಾಖಲೆ ಸಂಖ್ಯೆಗಳಲ್ಲಿ ಮತ ಚಲಾಯಿಸಲು ಜನರನ್ನು `ಉತ್ತೇಜಿಸಿ' ಎಂದು ಮನವಿ ಮಾಡಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಟ್ವೀಟ್ ಮಾಡಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಸಹಿತ ಹಲವು ಖ್ಯಾತನಾಮ ರಾಜಕಾರಣಿಗಳಿಂದ ಹಿಡಿದು ಬಾಲಿವುಡ್ ಕಲಾವಿದರಾದ ಆಲಿಯಾ ಭಟ್, ರಣವೀರ್ ಸಿಂಗ್ ಮತ್ತಿತರ ಸೆಲೆಬ್ರಿಟಿಗಳನ್ನ ಟ್ಯಾಗ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ ಅಖಿಲೇಶ್ ಯಾದವ್, “ಪ್ರಧಾನಿ ಮಹಾಮೈತ್ರಿಗೆ ಮಹಾಪರಿವರ್ತನೆಗೆ ಅಪೀಲು ಸಲ್ಲಿಸಿದ್ದಾರೆಂಬುದಕ್ಕೆ ನನಗೆ ಖುಷಿಯಾಗಿದೆ. ಎಲ್ಲಾ ಮತದಾರರು ಅತ್ಯಧಿಕ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿ ಹೊಸ ಪ್ರಧಾನಿಯನ್ನು ಆರಿಸುವಂತೆ ಮನವಿ ಸಲ್ಲಿಸುತ್ತೇನೆ'' ಎಂದಿದ್ದಾರೆ.

ಪ್ರಧಾನಿ ತಮ್ಮ ಪೋಸ್ಟ್ ನಲ್ಲಿ ನಟಿಯರಾದ ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮ, ನಟ ವರುಣ್ ಧವನ್ ಅವರನ್ನು ಟ್ಯಾಗ್ ಮಾಡಿ, “ನಿಮ್ಮ ಸಂದೇಶ ನಮ್ಮ ನಾಗರಿಕರ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದೆಂದು ನಿರೀಕ್ಷಿಸುತ್ತೇನೆ,'' ಎಂದು ಟ್ವೀಟ್ ಮಾಡಿದ್ದಾರೆ. ಅಂತೆಯೇ ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಸಲ್ಮಾನ್ ಖಾನ್, ಕೈಗಾರಿಕೋದ್ಯಮಿಗಳಾದ ರತನ್ ಟಾಟಾ  ಹಾಗೂ ಆನಂದ್ ಮಹೀಂದ್ರಾ ಅವರನ್ನೂ ಪ್ರಧಾನಿ ಟ್ಯಾಗ್ ಮಾಡಿದ್ದಾರೆ.

ಪ್ರಧಾನಿಯ ಕೋರಿಕೆಗೆ ನಟರಾದ ಅಕ್ಷಯ್ ಕುಮಾರ್, ಚಿತ್ರ ನಿರ್ದೇಶಕ ಕರಣ್ ಜೋಹರ್ ಮತ್ತಿತರರು ಪ್ರತಿಕ್ರಿಯಿಸಿದ್ದಾರೆ.

ಇದಕ್ಕೂ ಮುಂಚೆ ಪ್ರಧಾನಿ ಬ್ಲಾಗ್ ಪೋಸ್ಟ್ ಮಾಡಿ ``ಪ್ರಜಾಪ್ರಭುತ್ವಕ್ಕೆ ನಾಲ್ಕು ಮನವಿಗಳನ್ನು'' ಮಾಡಿದ್ದಾರೆ. ಈ ಮನವಿಗಳೇನೆಂದರೆ ಅರ್ಹ ಮತದಾರರು ತಮ್ಮ ಹೆಸರು ನೋಂದಾಯಿಸುವುದು, ಅವರ ಹೆಸರು ಮತದಾರರ ಪಟ್ಟಿಯಲ್ಲಿರುವಂತೆ ನೋಡಿಕೊಳ್ಳುವುದು, ಮತದಾನ ಮಾಡುವ ಸಮಯ ನಿರ್ಧರಿಸುವುದು ಹಾಗೂ ಸ್ನೇಹಿತರು ಹಾಗೂ ಕುಟುಂಬ ವರ್ಗದವರೂ ಮತದಾನದಲ್ಲಿ ಭಾಗವಹಿಸುವಂತೆ ಉತ್ತೇಜಿಸುವುದು.

“ಹೆಚ್ಚು ಮತದಾನವೆಂದರೆ ಬಲಿಷ್ಠ ಪ್ರಜಾಪ್ರಭುತ್ವ, ಬಲಿಷ್ಠ ಪ್ರಜಾಪ್ರಭುತ್ವವೆಂದರೆ ಅಭಿವೃದ್ಧಿ ಹೊಂದಿದ ಭಾರತ'' ಎಂದು ಪ್ರಧಾನಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News