ವಾದ್ರಾ ಆಗಲಿ, ಪ್ರಧಾನಿಯಾಗಲಿ ತಪ್ಪು ಮಾಡಿದರೆ ತನಿಖೆಗೊಳಪಡಿಸಬೇಕು: ರಾಹುಲ್

Update: 2019-03-13 09:56 GMT

ಚೆನ್ನೈ, ಮಾ.13: “ಕಾನೂನು ಎಲ್ಲರಿಗೂ ಸಮನಾಗಿ ಅನ್ವಯವಾಗಬೇಕು. ಪ್ರತಿಯೊಬ್ಬರನ್ನೂ ವಿಚಾರಣೆ ನಡೆಸುವ ಹಕ್ಕು ಸರಕಾರಕ್ಕಿದೆ. ಆದರೆ ಕೆಲವರನ್ನು ಮಾತ್ರ ಆಯ್ದು ವಿಚಾರಣೆ ನಡೆಸಬಾರದು. ರಫೇಲ್ ಒಪ್ಪಂದದ ಕುರಿತಂತೆ ಡಸಾಲ್ಟ್ ಜತೆ  ಪರ್ಯಾಯ ಸಂಧಾನ ನಡೆಸಿರುವುದಕ್ಕೆ ಪ್ರಧಾನಿಯೇ ನೇರ ಹೊಣೆ ಎಂದು ಸರಕಾರಿ ದಾಖಲೆಗಳಲ್ಲಿ ಇದೆ. ವಾದ್ರಾ ಆಗಲಿ ಪ್ರಧಾನಿಯಾಗಲಿ ಎಲ್ಲರನ್ನೂ ತನಿಖೆಗೊಳಪಡಿಸಬೇಕು'' ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಚೆನ್ನೈ ನಗರದ ಸ್ಟೆಲ್ಲಾ ಮೇರೀಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದ ರಾಹುಲ್ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಮೇಲಿನಂತೆ ಹೇಳಿದ್ದರೆ.

ಪ್ರಧಾನಿಯನ್ನು ನೇರ ಗುರಿಯಾಗಿಸಿ ಮತ್ತೆ ಮಾತನಾಡಿದ ರಾಹುಲ್ ``ಪ್ರಧಾನಿ ನರೇಂದ್ರ ಮೋದಿ ಹೀಗೆ 3,000 ಮಹಿಳೆಯರ ನಡುವೆ ನಿಂತುಕೊಂಡು ನೇರ ಪ್ರಶ್ನೆಗಳನ್ನು ಎಷ್ಟು ಬಾರಿ ಎದುರಿಸಿದ್ದನ್ನು ನೀವು ನೋಡಿದ್ದೀರಿ?, ಯಾರು ಕೂಡ ಯಾವುದೇ ಪ್ರಶ್ನೆಗಳನ್ನು ಕೇಳಬಹುದಾದ ಇಂತಹ ಕಾರ್ಯಕ್ರಮಗಳಲ್ಲಿ ಅವರನ್ನು ನೀವು ಎಷ್ಟು ಬಾರಿ ನೋಡಿದ್ದೀರಿ?'' ಎಂದು ರಾಹುಲ್ ಪ್ರಶ್ನಿಸಿದರು.

ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಮಹಿಳಾ ಮೀಸಲಾತಿ ಮಸೂದೆ ಜಾರಿಗೊಳಿಸುವ ಆಶ್ವಾಸನೆ ನೀಡಿದ ಅವರು ಸರಕಾರಿ ನೌಕರಿಗಳಲ್ಲೂ ಮಹಿಳೆಯರಿಗೆ ಶೇ. 33 ಮೀಸಲಾತಿ ನೀಡುವುದಾಗಿ ತಿಳಿಸಿದರು.

ಮೋದಿ ಸರಕಾರ ದೇಶದ ವೈವಿಧ್ಯತೆಯನ್ನು ಮರೆತು ಒಂದೇ ಸಿದ್ಧಾಂತ ಹೇರಲು ಯತ್ನಿಸುತ್ತಿದೆ. ದೇಶದಲ್ಲಿ ಈಗ ಸೈದ್ಧಾಂತಿಕ ಯುದ್ಧ ನಡೆಯುತ್ತಿದೆ ಎಂದು ರಾಹುಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News