ಯುವ ಆಟಗಾರರಿಗೆ ಉತ್ತಮ ಅವಕಾಶ

Update: 2019-03-14 03:32 GMT
ಸುರೇಂದರ್

ಬೆಂಗಳೂರು, ಮಾ.13: ಮುಂಬರುವ ಅಝ್ಲನ್ ಶಾ ಕಪ್ ಹಾಕಿ ಪಂದ್ಯಾವಳಿಯು 2020ರ ಒಲಿಂಪಿಕ್ಸ್‌ನ ಅರ್ಹತಾ ಟೂರ್ನಿಗಳಿಗೆ ಸಿದ್ಧವಾಗಲು ಭಾರತ ತಂಡದ ಯುವ ಆಟಗಾರರಿಗೆ ಉತ್ತಮ ಅವಕಾಶವಾಗಿದೆ ಎಂದು ಭಾರತ ಹಾಕಿ ತಂಡದ ಉಪನಾಯಕ ಸುರೇಂದರ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

28ನೇ ಅಝ್ಲನ್ ಶಾ ಹಾಕಿ ಪಂದ್ಯಾವಳಿಗೆ ಭಾರತವು ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಸುಮಿತ್, ನೀಲಕಂಠ ಶರ್ಮಾ ಗುರಿಂದರ್ ಸಿಂಗ್, ಸಿಮ್ರನ್‌ಜೀತ್ ಸಿಂಗ್‌ರಂತಹ ಯುವ ಅಟಗಾರರನ್ನು ಕಣಕ್ಕಿಳಿಸುತ್ತಿದೆ. ಹಿರಿಯರ ತಂಡದ ಮೂಲಕ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆಗೈದಿರುವ ಈ ಆಟಗಾರರು ಉತ್ತಮ ಪ್ರದರ್ಶನದ ಮೂಲಕ ಗಮನಸೆಳೆದಿದ್ದಾರೆ.

‘‘ಅಝ್ಲನ್ ಶಾ ಪಂದ್ಯಾವಳಿಯು ಯಾವಾಗಲೂ ಯುವ ಆಟಗಾರರ ಪರೀಕ್ಷೆಗೆ ವೇದಿಕೆ ಒದಗಿಸುತ್ತದೆ ಹಾಗೂ ಅಂತರ್‌ರಾಷ್ಟ್ರೀಯ ಮಟ್ಟವನ್ನು ಅವರು ಹೇಗೆ ಅಳವಡಿಸಿಕೊಂಡಿದ್ದಾರೆ ಎಂಬುದನ್ನು ತಿಳಿಸುತ್ತದೆ. ಈ ವರ್ಷದಲ್ಲಿ ನಾವು ಸ್ಪರ್ಧಿಸುವ ಪ್ರಮುಖ ಟೂರ್ನಿಯಾದ ಒಲಿಂಪಿಕ್ ಅರ್ಹತಾ ಪಂದ್ಯಾವಳಿಗೆ ಅವರ ಇಲ್ಲಿಯ ಅನುಭವ ಅನುಕೂಲವಾಗಲಿದೆ’’ ಎಂದು ಸುರೇಂದರ್ ಹೇಳಿದ್ದಾರೆ.

‘‘ಈ ಟೂರ್ನಿಗೆ ಆಯ್ಕೆಯಾದ ಕೆಲವು ಆಟಗಾರರು ಎಫ್‌ಐಎಚ್ ಚಾಂಪಿಯನ್ಸ್ ಟ್ರೋಫಿ ಹಾಗೂ 2018ರ ಪುರುಷರ ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ. ಪಂದ್ಯದಲ್ಲಿ ಒಂದು ಅಥವಾ ಎರಡು ಗೋಲುಗಳ ಹಿನ್ನಡೆಯಲ್ಲಿದ್ದಾಗ ಒತ್ತಡವನ್ನು ನಿಭಾಯಿಸುವ ಬಗ್ಗೆ ನಾವು ಅವರಿಗೆ ಹೇಳಿಕೊಡುತ್ತಿದ್ದೇವೆ. ಅವರ ಉತ್ತಮ ಪ್ರದರ್ಶನವು ಒಲಿಂಪಿಕ್ಸ್‌ನಲ್ಲಿ ನಮಗೆ ಲಾಭ ತರಲಿದೆ’’ ಎಂದು ರಾಷ್ಟ್ರೀಯ ಕ್ರೀಡೆಯ ಉಪನಾಯಕ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News