ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ-20 ಟೂರ್ನಿ: ಕರ್ನಾಟಕ ಚಾಂಪಿಯನ್

Update: 2019-03-14 15:32 GMT

ಇಂದೋರ್, ಮಾ.14: ಲೀಗ್ ಹಾಗೂ ಸೂಪರ್ ಲೀಗ್ ಹಂತದಲ್ಲಿ ಎಲ್ಲ ಪಂದ್ಯಗಳನ್ನು ಜಯಿಸಿ ಅಜೇಯ ದಾಖಲೆ ಕಾಯ್ದುಕೊಂಡಿದ್ದ ಕರ್ನಾಟಕ ತಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ-20 ಟೂರ್ನಮೆಂಟ್‌ನಲ್ಲಿ ಮೊದಲ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಇಲ್ಲಿನ ಹೋಳ್ಕರ್ ಕ್ರೀಡಾಂಗಣದಲ್ಲಿ ಗುರುವಾರ ಗೆಲ್ಲಲು 156 ರನ್ ಗುರಿ ಪಡೆದ ಕರ್ನಾಟಕ ತಂಡ ಮಾಯಾಂಕ್ ಅಗರ್ವಾಲ್(ಔಟಾಗದೆ 85, 57 ಎಸೆತ, 6 ಬೌಂಡರಿ, 3 ಸಿಕ್ಸರ್) ಹಾಗೂ ರೋಹನ್ ಕದಮ್(60,39 ಎಸೆತ, 6 ಬೌಂಡರಿ, 3 ಸಿಕ್ಸರ್) ಅವರ ಅತ್ಯುತ್ತಮ ಪ್ರದರ್ಶನದ ನೆರವಿನಿಂದ 18.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಟೂರ್ನಿಯಲ್ಲಿ ಈ ಬಾರಿ ಎಲ್ಲ ತಂಡಗಳ ಎದುರು ಆರಂಭದಲ್ಲೇ ಅಮೋಘ ಪ್ರದರ್ಶನ ನೀಡಿದ ಕರ್ನಾಟಕ ಮಂಗಳವಾರ ಕೊನೆಯ ಸೂಪರ್ ಲೀಗ್ ಪಂದ್ಯವನ್ನು ಜಯಿಸುವ ಮೂಲಕ ಟೂರ್ನಿ ಯ ಎಲ್ಲ 11 ಪಂದ್ಯಗಳನ್ನು ಜಯಿಸಿದ ಸಾಧನೆ ಮಾಡಿತ್ತು. ಮೊದಲ ಬಾರಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿತ್ತು.

ಮನೀಷ್ ಪಾಂಡೆ ಬಳಗ ಈ ಪಂದ್ಯವನ್ನು ಜಯಿಸುವ ಮೂಲಕ ದೇಶಿ ಕ್ರಿಕೆಟ್‌ನಲ್ಲಿ ಸತತ 14 ಪಂದ್ಯಗಳನ್ನು ಜಯಿಸಿದ ದಾಖಲೆಯನ್ನು ಸರಿಗಟ್ಟಿದೆ. 2014ರ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಸತತ 14 ಪಂದ್ಯಗಳನ್ನು ಜಯಿಸಿದ ಸಾಧನೆ ಮಾಡಿತ್ತು. ಸ್ಪರ್ಧಾತ್ಮಕ ಗುರಿ ಪಡೆದಿದ್ದ ಕರ್ನಾಟಕ 2.2 ಓವರ್‌ಗಳಲ್ಲಿ 14 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ 2ನೇ ವಿಕೆಟ್‌ಗೆ 92 ರನ್ ಜೊತೆಯಾಟದಲ್ಲಿ ಭಾಗಿಯಾದ ರಾಹುಲ್ ಹಾಗೂ ಮಾಯಾಂಕ್ ತಂಡದ ಆತಂಕವನ್ನು ದೂರ ಮಾಡಿದರು.ಔಟಾಗದೆ 85 ರನ್ ಗಳಿಸಿದ ಮಾಯಾಂಕ್ ಇನ್ನೂ 9 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಭರ್ಜರಿ ಗೆಲುವು ತಂದರು.

ಮಹಾರಾಷ್ಟ್ರ: 155/4: ಇದಕ್ಕೂ ಮೊದಲು ಟಾಸ್ ಜಯಿಸಿದ ಕರ್ನಾಟಕ ತಂಡದ ನಾಯಕ ಮನೀಷ್ ಪಾಂಡೆ ಮಹಾರಾಷ್ಟ್ರವನ್ನು ಬ್ಯಾಟಿಂಗ್‌ಗೆ ಇಳಿಸಿದರು. ಮಧ್ಯಮ ಕ್ರಮಾಂಕದ ದಾಂಡಿಗ ನೌಶಾದ್ ಶೇಖ್(ಔಟಾಗದೆ 69, 41 ಎಸೆತ, 5 ಬೌಂಡರಿ, 3 ಸಿಕ್ಸರ್) ಏಕಾಂಗಿ ಹೋರಾಟ ನೀಡಿ ಮಹಾರಾಷ್ಟ್ರ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 155 ರನ್ ಗಳಿಸಲು ನೆರವಾದರು.

ಇನಿಂಗ್ಸ್ ಆರಂಭಿಸಿದ ಋತುರಾಜ್ ಗಾಯಕ್ವಾಡ್(12) ಹಾಗೂ ನಾಯಕ ರಾಹುಲ್ ತ್ರಿಪಾಠಿ(30)ಮೊದಲ ವಿಕೆಟ್‌ಗೆ 35 ರನ್ ಸೇರಿಸಲಷ್ಟೇ ಶಕ್ತರಾದರು. ಅಭಿಮನ್ಯು ಮಿಥುನ್ ಈ ಜೋಡಿಯನ್ನು ಬೇಗನೇ ಬೇರ್ಪಡಿಸಿದರು.

 ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ವಿಜಯ್ ರೆಲ್(8)ಬಂದಷ್ಟೇ ವೇಗವಾಗಿ ಪೆವಿಲಿಯನ್‌ಗೆ ಸೇರಿದರು. 32 ಎಸೆತಗಳಲ್ಲಿ 3 ಬೌಂಡರಿ ನೆರವಿನಿಂದ 30 ರನ್ ಗಳಿಸಿದ ತ್ರಿಪಾಠಿ 9.3ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದಾಗ ಮಹಾರಾಷ್ಟ್ರದ ಸ್ಕೋರ್ 55ಕ್ಕೆ 3.

ಆಗ ತಂಡಕ್ಕೆ ಆಸರೆಯಾಗಿ ನಿಂತ ನೌಶಾದ್, ಅಂಕಿತ್ ಭಾವ್ನೆ(29, 25 ಎಸೆತ, 4 ಬೌಂಡರಿ)ಅವರೊಂದಿಗೆ 4ನೇ ವಿಕೆಟ್‌ಗೆ 81 ರನ್ ಉಪಯುಕ್ತ ಜೊತೆಯಾಟ ನಡೆಸಿದರು.

ಕರ್ನಾಟಕದ ಪರ ಮಿಥುನ್(2-24) ಯಶಸ್ವಿ ಬೌಲರ್ ಎನಿಸಿಕೊಂಡರು. ಕಾರ್ಯಪ್ಪ(1-26) ಹಾಗೂ ಸುಚಿತ್(1-20)ತಲಾ ಒಂದು ವಿಕೆಟ್ ಪಡೆದರು.

► ಸಂಕ್ಷಿಪ್ತ ಸ್ಕೋರ್

ಮಹಾರಾಷ್ಟ್ರ: 20 ಓವರ್‌ಗಳಲ್ಲಿ 155/4

(ನೌಶಾದ್ ಶೇಖ್ ಔಟಾಗದೆ 69, ರಾಹುಲ್ ತ್ರಿಪಾಠಿ 30, ಅಂಕಿತ್ ಭಾವ್ನೆ 29, ಮಿಥುನ್ 2-24)

ಕರ್ನಾಟಕ: 18.3 ಓವರ್‌ಗಳಲ್ಲಿ 159/2

(ಮಾಯಾಂಕ್ ಅಗರ್ವಾಲ್ ಔಟಾಗದೆ 85, ರೋಹನ್ ಕದಮ್ 60, ಫಲ್ಲಾ 1-33)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News