ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ ಬಾರ್ಸಿಲೋನ

Update: 2019-03-14 18:19 GMT

ಬಾರ್ಸಿಲೋನ, ಮಾ.14: ರಿಯಲ್ ಮ್ಯಾಡ್ರಿಡ್ ತಂಡದ ರೊನಾಲ್ಡೊ ಹ್ಯಾಟ್ರಿಕ್ ಗೋಲು ಬಾರಿಸಿದ ಒಂದು ದಿನದ ಬಳಿಕ ಮತ್ತೊಬ್ಬ ಸ್ಟಾರ್ ಆಟಗಾರ ಬಾರ್ಸಿಲೋನ ತಂಡದ ಲಿಯೊನೆಲ್ ಮೆಸ್ಸಿ ಮಿಂಚು ಹರಿಸಿದ್ದಾರೆ. ಲಿಯೊನ್ ತಂಡದ ವಿರುದ್ಧ ಬುಧವಾರ ನಡೆದ ಚಾಂಪಿಯನ್ಸ್ ಲೀಗ್‌ನ ಪ್ರಿ-ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮೆಸ್ಸಿ ದಾಖಲಿಸಿದ ಅವಳಿ ಗೋಲುಗಳ ನೆರವಿನಿಂದ ಬಾರ್ಸಿಲೋನ 5-1 ಗೋಲುಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಟೂರ್ನಿಯ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದೆ.

ಇಲ್ಲಿನ ಕ್ಯಾಂಪ್‌ನೊವಾ ಕ್ರೀಡಾಂಗಣದಲ್ಲಿ ಸಾಹಸ ಮೆರೆದ ಮೆಸ್ಸಿಯ ತಂಡವು ಪಂದ್ಯದ ಕೊನೆಯ ಹಂತದಲ್ಲಿ ಲಿಯೊನ್ ತಂಡ ಪ್ರದರ್ಶನದಲ್ಲಿ ವಾಪಸಾತಿ ಮಾಡುವುದನ್ನು ತಡೆದು ಗೆಲುವು ಕಂಡಿತು.

ವಿಜೇತ ಬಾರ್ಸಿಲೋನ ತಂಡದ ಪರ ಮೆಸ್ಸಿ 18ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ಉತ್ತಮ ಆರಂಭ ಒದಗಿಸಿದರು. 31ನೇ ನಿಮಿಷದಲ್ಲಿ ಫಿಲಿಪ್ ಕುಟಿನ್ಹೊ ಮೂಲಕ ಮತ್ತೊಂದು ಗೋಲು ಬಾರ್ಸಾ ತಂಡಕ್ಕೆ ಬಂದಿತು. ಆ ಬಳಿಕ ಎದುರಾಳಿ ಲಿಯೊನ್ ಪರ ಟೌಸರ್ಟ್ ಗೋಲು ಗಳಿಸಿ ತಮ್ಮ ತಂಡ ಪೈಪೋಟಿ ನಡೆಸಿದೆ ಎಂಬುದನ್ನು ತೋರಿಸಿದರು. ಮತ್ತೆ ಕಾಲ್ಚಳಕ ತೋರಿದ ಮೆಸ್ಸಿ 78ನೇ ನಿಮಿಷದಲ್ಲಿ ಗೋಲು ಬಾರಿಸಿ ಬಾರ್ಸಾ ಮುನ್ನಡೆಯನ್ನು 3-1ಕ್ಕೆ ಹೆಚ್ಚಿಸಿದರು. ಗೆರಾಲ್ಡ್ ಪಿಕ್(81) ಹಾಗೂ ಒಸ್ಮಾನೆ ಡೆಂಬೆಲ್ (86) ಸ್ಪಾನಿಶ್ ತಂಡದ ಗೆಲುವನ್ನು ಸುಲಭವಾಗಿಸಿದರು. ಮೆಸ್ಸಿ ಸದ್ಯ ಚಾಂಪಿಯನ್ಸ್ ಲೀಗ್‌ನಲ್ಲಿ 108 ಗೋಲುಗಳ ಸರದಾರನಾಗಿದ್ದು. ರೊನಾಲ್ಡೊಗಿಂತ(124) ಹಿಂದಿದ್ದಾರೆ. ಸ್ಪಾನಿಶ್‌ನ ಏಕೈಕ ಪ್ರತಿನಿಧಿಯಾಗಿ ಎಂಟರಘಟ್ಟಕ್ಕೆ ಪ್ರವೇಶಿಸಿರುವ ಬಾರ್ಸಿಲೋನ ತಂಡ, ಜುವೆಂಟಸ್, ಮ್ಯಾಂಚೆಸ್ಟರ್ ಯುನೈಟೆಡ್, ಮ್ಯಾಂಚೆಸ್ಟರ್ ಸಿಟಿ, ಲಿವರ್‌ಪೂಲ್, ಟೊಟ್ಟೆನ್‌ಹ್ಯಾಮ್ ಹಾಟ್‌ಸ್ಪರ್ ಹಾಗೂ ಪೊರ್ಟೊ ಅಜಾಕ್ಸ್ ತಂಡಗಳನ್ನು ಸೇರಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News