ಶಿಕ್ಷಕರ ಈ ಮುಷ್ಕರ ಎಷ್ಟು ಸರಿ?

Update: 2019-03-15 05:23 GMT

ಪ್ರತಿವರ್ಷ ಎಸೆಸೆಲ್ಸಿ, ಪಿಯುಸಿ ಪರೀಕ್ಷೆಗಳ ದಿನಾಂಕ ಹೊರಬಿದ್ದ ದಿನವೇ ಇನ್ನೊಂದು ಪ್ರಕಟನೆ ಹೊರ ಬೀಳುತ್ತದೆ. ಅದುವೇ ಶಿಕ್ಷಕರ ಮೌಲ್ಯಮಾಪನ ಬಹಿಷ್ಕಾರ ಬೆದರಿಕೆ. ತಮ್ಮ ಬೇಡಿಕೆಗಳನ್ನು ಈಡೇರಿಸದೇ ಇದ್ದರೆ ಪಿಯುಸಿ ಪರೀಕ್ಷಾ ಮೌಲ್ಯ ಮಾಪನ ಬಹಿಷ್ಕರಿಸುತ್ತೇವೆ ಎಂಬ ಬೆದರಿಕೆಯನ್ನು ಶಿಕ್ಷಕರು ಪ್ರತಿವರ್ಷ ಸರಕಾರಕ್ಕೆ ಒಡ್ಡುತ್ತಲೇ ಇದ್ದಾರೆ. ಈ ಮುಷ್ಕರದಿಂದಾಗಿ, ಫಲಿತಾಂಶ ತಡವಾಗಿ ಹೊರಬಿದ್ದು ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾದ ಉದಾಹರಣೆಗಳೂ ಇವೆ. ಈ ಬಾರಿಯೂ ಪಿಯುಸಿ ಶಿಕ್ಷಕರು ಇದೇ ತಂತ್ರವನ್ನು ಬಳಸಿ ಸರಕಾರವನ್ನು ‘ಬ್ಲಾಕ್‌ಮೇಲ್’ ಮಾಡಲು ಹೊರಟಿದ್ದಾರೆ. ಅಂದರೆ ತಮ್ಮ ಬೇಡಿಕೆಗಳಿಗಾಗಿ ವಿದ್ಯಾರ್ಥಿಗಳನ್ನೇ ಒತ್ತೆಯಾಳುಗಳನ್ನಾಗಿಸಿಕೊಂಡು ಸರಕಾರವನ್ನು ಮಣಿಸಲು ಹೊರಟಿದ್ದಾರೆ. ಸರಕಾರ ಮತ್ತು ಶಿಕ್ಷಕರ ತಿಕ್ಕಾಟದಲ್ಲಿ ಎಂದಿನಂತೆ ವಿದ್ಯಾರ್ಥಿಗಳು ಮತ್ತೆ ತೊಂದರೆ ಅನುಭವಿಸಲಿದ್ದಾರೆ.

 ತಮ್ಮ ಬೇಡಿಕೆಗಳಿಗಾಗಿ ಧರಣಿ ಮುಷ್ಕರ ನಡೆಸುವ ಹಕ್ಕು ಶಿಕ್ಷಕರಿಗಿದೆ. ಶಿಕ್ಷಕರು ಈ ಸಮಾಜವನ್ನು ರೂಪಿಸುವ ಶಿಲ್ಪಿಗಳು. ಒಂದು ನಾಡಿನ ಭವಿಷ್ಯ, ಅಲ್ಲಿರುವ ಶಿಕ್ಷಕರನ್ನು ಅವಲಂಬಿಸಿ ನಿಂತಿದೆ. ಇಂತಹ ಶಿಕ್ಷಕರು ತಮ್ಮ ಹಕ್ಕನ್ನು ಕೇಳಿದರೆ ಅದನ್ನು ಅಪರಾಧ ಎಂದು ಭಾವಿಸಬೇಕಾಗಿಲ್ಲ. ಸರಕಾರ ಅವರ ಬೇಡಿಕೆಗೆ ತಕ್ಷಣ ಸ್ಪಂದಿಸಬೇಕು. ಈ ಹಿಂದೆ ಹಲವು ಬಾರಿ ಸರಕಾರ ನೀಡಿದ ಭರವಸೆ ಹುಸಿಯಾಗಿರುವುದರಿಂದ ಅವರು ಅನಿವಾರ್ಯವಾಗಿ ಮುಷ್ಕರಕ್ಕಿಳಿಯಬೇಕಾಗಿದೆ. ಮುಂಭಡ್ತಿ, ವೇತನ ತಾರತಮ್ಯ, ಬೇಸಿಗೆ ರಜೆ ರದ್ದು ಮೊದಲಾವುಗಳು ಅವರ ಪ್ರಮುಖ ಬೇಡಿಕೆಯಾಗಿವೆ. ಆದರೆ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಬಳಸಿರುವ ತಂತ್ರ ಆಕ್ಷೇಪಾರ್ಹವಾಗಿದೆ. ಈ ಮುಷ್ಕರ ವಿದ್ಯಾರ್ಥಿಗಳ ಹೆಗಲ ಮೇಲೆ ಕೋವಿಯಿಟ್ಟು ಸರಕಾರವನ್ನು ಬೆದರಿಸಿದಂತೆ. ನಮ್ಮ ಬೇಡಿಕೆಗಳನ್ನು ಈಡೇರಿಸದೇ ಇದ್ದರೆ ನಾವು ಈ ವಿದ್ಯಾರ್ಥಿಗಳ ಬದುಕನ್ನು ಹಾಳುಗೆಡವುತ್ತೇವೆ ಎನ್ನುವ ಎಚ್ಚರಿಕೆಯ ಸಂದೇಶ ಇದರ ಹಿಂದಿದೆ. ‘ಬೇರೆ ಸಂದರ್ಭಗಳಲ್ಲಿ ಮುಷ್ಕರ ಮಾಡಿದರೆ ಸರಕಾರ ಸ್ಪಂದಿಸುವುದಿಲ್ಲ’ ಎಂಬ ಸಮರ್ಥನೆಯನ್ನು ಶಿಕ್ಷಕರ ಸಂಘಟನೆಗಳು ಹೇಳುತ್ತವೆ.

‘ಮುಷ್ಕರ ನಡೆಸಿದಾಗ ಕೆಲವರಿಗೆ ತೊಂದರೆಗಳಾಗುವುದು ಸಹಜ. ವಿವಿಧ ಸಂಘಟನೆಗಳು ಬೇಡಿಕೆ ಈಡೇರಿಸಲು ರಸ್ತೆತಡೆಗಳನ್ನು ನಡೆಸುವಾಗ ಸಾರ್ವಜನಿಕರಿಗೆ ಹಾನಿಯಾಗುವುದಿಲ್ಲವೆ?’ ಎಂದೂ ಕೇಳುವವರಿದ್ದಾರೆ. ಮೊದಲೇ ಹೇಳಿದಂತೆ ಶಿಕ್ಷಕರು ಬೇರೆ ನೌಕರರಂತಲ್ಲ. ಸೈನಿಕರು, ವೈದ್ಯರು, ಪೊಲೀಸರು ಮತ್ತು ಶಿಕ್ಷಕರಿಗೆ ವಿಶೇಷ ಹೊಣೆಗಾರಿಕೆಗಳಿವೆ. ಯುದ್ಧ ಘೋಷಣೆಯಾದಾಗ ಸೈನಿಕರು ತಮ್ಮ ಬೇಡಿಕೆ ಮುಂದಿಟ್ಟು ಧರಣಿ ಕೂತರೆ ಏನಾದೀತು? ಚುನಾವಣೆ ಘೋಷಣೆಯಾದಾಗ ಪೊಲೀಸರು ತಮ್ಮ ಬೇಡಿಕೆ ಮುಂದಿಟ್ಟು ಮುಷ್ಕರ ನಡೆಸಿದರೆ ಸಮಾಜದ ಗತಿ? ಈ ನಾಲ್ಕು ವರ್ಗಗಳಲ್ಲಿ ಶಿಕ್ಷಕರ ಸ್ಥಾನ ಅತ್ಯಂತ ಉನ್ನತವಾದುದು. ಯೋಧರು, ವೈದ್ಯರು, ಪೊಲೀಸರು ಇವರೆಲ್ಲರನ್ನು ರೂಪಿಸುವವರು ಶಿಕ್ಷಕರು. ಇವರ ವರ್ತನೆ ಇತರರಿಗೆ ಮಾದರಿಯಾಗಿರುವುದರಿಂದ, ತಮ್ಮ ಬೇಡಿಕೆ ಈಡೇರಿಕೆಗಾಗಿ ಮುಷ್ಕರಕ್ಕಿಳಿಯುವಾಗ ಎರಡೆರಡು ಬಾರಿ ಯೋಚಿಸಬೇಕು. ಸರಕಾರದ ಮೇಲಿನ ಸಿಟ್ಟಿಗೆ ವಿದ್ಯಾರ್ಥಿಗಳ ಬೆನ್ನಿಗೆ ಬರೆ ಎಳೆಯುವುದು ಎಷ್ಟು ಸರಿ? ಇಡೀ ವರ್ಷ ವಿದ್ಯಾರ್ಥಿಗಳನ್ನು ತಿದ್ದಿ ತೀಡಿ ಅವರನ್ನು ಬೆಳೆಸಿದ ಶಿಕ್ಷಕರೇ ಅವರನ್ನು ವರ್ಷದ ಕೊನೆಯಲ್ಲಿ ತಮ್ಮ ಸ್ವಾರ್ಥಕ್ಕಾಗಿ ವಿದ್ಯಾರ್ಥಿಗಳ ಭವಿಷ್ಯವನ್ನು ಚಿವುಟಿದಂತಾದೀತು. ತಮ್ಮ ಶಿಕ್ಷಕರಿಂದಾಗಿಯೇ ಭವಿಷ್ಯ ಅಸ್ತವ್ಯಸ್ತವಾಯಿತೆನ್ನುವುದು ವಿದ್ಯಾರ್ಥಿಗಳಿಗೆ ಅದೆಷ್ಟು ನೋವು ನೀಡಬಹುದು? ಅಂತಹ ವಿದ್ಯಾರ್ಥಿಗಳ ಮುಂದೆ ಶಿಕ್ಷಕರು ಹೇಗೆ ಮುಖ ತೋರಿಸಬೇಕು?

ಇವೆೆಲ್ಲದರ ಅರ್ಥ ಶಿಕ್ಷಕರು ತಮ್ಮ ಬೇಡಿಕೆಗಾಗಿ ಮುಷ್ಕರ ಮಾಡಬಾರದು ಎಂದಲ್ಲ. ಅದಕ್ಕಾಗಿ ಅವರು ಬೇರೆ ದಾರಿಗಳನ್ನು ಹುಡುಕಬೇಕು. ಹಾಗೆಯೇ ಇತರ ಸಂಘಟನೆಗಳ ಬೆಂಬಲವನ್ನು ಪಡೆದುಕೊಂಡು ಸರಕಾರಕ್ಕೆ ಒತ್ತಡ ಹೇರಬೇಕು. ಶಿಕ್ಷಕರು ಜ್ಞಾನವಂತರು. ಸರಕಾರದ ಮನಸ್ಸನ್ನು ತಟ್ಟುವಂತೆ ಮುಷ್ಕರದ ದಾರಿಗಳನ್ನು ಹುಡುಕಲು ಅವರಿಗೆ ಯಾರೂ ಕಲಿಸಿಕೊಡಬೇಕಾಗಿಲ್ಲ. ಇದೇ ಸಂದರ್ಭದಲ್ಲಿ ಉಳಿದೆಲ್ಲ ನೌಕರಿಗೆ ಹೋಲಿಸಿದರೆ ಶಿಕ್ಷಕರಿಗೆ ನೀಡುತ್ತಿರುವ ಸೌಲಭ್ಯಗಳು ತೀರಾ ಕಳಪೆಯಾಗಿಲ್ಲ. ಇಂದು ರಾಜ್ಯಾದ್ಯಂತ ಶಿಕ್ಷಕರ ಗುಣಮಟ್ಟದ ಕುರಿತಂತೆ ಅಧ್ಯಯನ ನಡೆಸಿದರೆ ಆಘಾತಕಾರಿ ಅಂಶಗಳು ಹೊರ ಬೀಳುತ್ತವೆ. ಒಬ್ಬ ಶಿಕ್ಷಕನಿಗೆ ಇರಬೇಕಾದ ಪ್ರತಿಭೆ, ವಿದ್ವತ್ತುಗಳ ಕೊರತೆ ಢಾಳಾಗಿ ಎದ್ದು ಕಾಣುತ್ತದೆ. ಹಾಗೆಯೇ, ತಮ್ಮ ವೃತ್ತಿಗೆ ನ್ಯಾಯ ನೀಡುವ ಶಿಕ್ಷಕರ ಕೊರತೆ ವ್ಯಾಪಕವಾಗಿದೆ. ನಮ್ಮ ಶಿಕ್ಷಣದ ಗುಣಮಟ್ಟ ಕುಸಿಯಲು ಇದೂ ಒಂದು ಕಾರಣ. ಸರಕಾರಿ ಶಾಲೆಗಳು ಹಂತ ಹಂತವಾಗಿ ಮುಚ್ಚುವುದಕ್ಕೆ ಇಂತಹ ಅನರ್ಹ ಶಿಕ್ಷಕರ ಕೊಡುಗೆ ದೊಡ್ಡದಿದೆ. ತಮಗೆ ಸಿಕ್ಕಿದ ಸೌಲಭ್ಯಕ್ಕೆ ಪ್ರತಿಯಾಗಿ ನಾವು ಏನು ನೀಡಿದ್ದೇವೆ ಎನ್ನುವ ಆತ್ಮವಿಮರ್ಶೆಗೂ ಇದು ಸಕಾಲ.

ಇದೇ ಸಂದರ್ಭದಲ್ಲಿ ಶಿಕ್ಷಕರ ಕುರಿತಂತೆ ಸರಕಾರಕ್ಕೂ ಹೊಣೆಗಾರಿಕೆಯಿದೆ. ಚಾಲಕರು, ವೈದ್ಯರು ಮುಷ್ಕರಕ್ಕೆ ಕರೆ ನೀಡಿದಾಗ ತಕ್ಷಣ ಸ್ಪಂದಿಸುವ ಸರಕಾರ, ಶಿಕ್ಷಕರ ಬೇಡಿಕೆಯ ಬಗ್ಗೆ ಸದಾ ನಿರ್ಲಕ್ಷವನ್ನು ತೋರುತ್ತಾ ಬಂದಿದೆ. ಶಿಕ್ಷಕರು ಮುಷ್ಕರಕ್ಕೆ ಕರೆ ನೀಡಿದಾಕ್ಷಣ ಎಸ್ಮಾ ಜಾರಿಗೊಳಿಸಿ ಅವರ ಬಾಯಿ ಮುಚ್ಚಿಸಬಹುದು ಎಂದು ಸರಕಾರ ಭಾವಿಸಿದಂತಿದೆ. ಬಹುಶಃ ಸರಕಾರದ ಈ ವರ್ತನೆಯೂ ಶಿಕ್ಷಕರ ಆಕ್ರೋಶಕ್ಕೆ ಮುಖ್ಯ ಕಾರಣವಾಗಿದೆ. ಮೌಲ್ಯ ಮಾಪನ ಸಂದರ್ಭದಲ್ಲಿ ಶಿಕ್ಷಕರು ಮುಷ್ಕರಕ್ಕಿಳಿದಾಗ , ನಿಮ್ಮ ಬೇಡಿಕೆಯನ್ನು ಪರಿಗಣಿಸುತ್ತೇವೆ ಎಂದು ಭರವಸೆ ನೀಡುವ ಸರಕಾರ ಬಳಿಕ ಎಚ್ಚರವಾಗುವುದು ಮತ್ತೊಮ್ಮೆ ಶಿಕ್ಷಕರು ಮೌಲ್ಯಮಾಪನವನ್ನು ಬಹಿಷ್ಕರಿಸಿದಾಗ. ಮುಖ್ಯವಾಗಿ ಶಿಕ್ಷಕರಿಗೆ ಸರಕಾರ ಯಾವೆಲ್ಲ ಭರವಸೆಗಳನ್ನು ಈ ಹಿಂದೆ ನೀಡಿದೆಯೋ ಅವೆಲ್ಲವನ್ನೂ ಪ್ರಾಮಾಣಿಕವಾಗಿ ಈಡೇರಿಸಬೇಕು. ಎಸ್ಮಾದ ಮೂಲಕ ಶಿಕ್ಷಕರ ಮುಷ್ಕರವನ್ನು ಸದೆ ಬಡಿಯುವುದು ತಪ್ಪು. ಬದಲಿಗೆ ಅವರ ಜೊತೆಗೆ ಮಾತುಕತೆ ನಡೆಸಿ ಅವರ ಅಹವಾಲುಗಳನ್ನು ತಕ್ಷಣ ಆಲಿಸಲಿ. ಅದರ ಸತ್ಯಾಸತ್ಯತೆಗಳನ್ನು ಪರಿಶೀಲಿಸಿ ಅರ್ಹವಾದ ಬೇಡಿಕೆಗಳನ್ನು ತಕ್ಷಣ ಈಡೇರಿಸಲಿ. ಇಲ್ಲವಾದರೆ ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ, ಸರಕಾರ ಮತ್ತು ಶಿಕ್ಷಕರ ತಿಕ್ಕಾಟದಲ್ಲಿ ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾದೀತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News