ನ್ಯೂಝಿಲೆಂಡ್ ಮಸೀದಿಯಲ್ಲಿ ಶೂಟೌಟ್: ಹಲವರು ಬಲಿ

Update: 2019-03-15 05:23 GMT

ಕ್ರೈಸ್ಟ್‌ಚರ್ಚ್, ಮಾ. 15: ನ್ಯೂಝಿಲೆಂಡಿನ ಕ್ರೈಸ್ಟ್‌ಚರ್ಚ್ ನಗರದ ಮಸೀದಿಯಲ್ಲಿ ನಡೆದ ಶೂಟೌಟ್‌ನಲ್ಲಿ ಹಲವು ಮಂದಿ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಶುಕ್ರವಾರ ಮುಂಜಾನೆ ನಡೆದ ಈ ದಾಳಿಯಲ್ಲಿ ಆಗಿರುವ ಸಾವು ನೋವಿನ ವಿವರಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಆದರೆ ಜನ ಮನೆಗಳಿಂದ ಹೊರಗೆ ಬಾರದಂತೆ ಕೇಂದ್ರ ಕ್ರೈಸ್ಟ್‌ಚರ್ಚ್ ಭಾಗದ ನಿವಾಸಿಗಳಿಗೆ ಸಂದೇಶ ನೀಡಿದ್ದಾರೆ.

"ಕಪ್ಪು ದಿರಿಸಿನ ವ್ಯಕ್ತಿ ಮಸ್ಜಿದ್ ಅಲ್ ನೂರ್ ಪ್ರವೇಶಿಸಿದ. ಬಳಿಕ ಹತ್ತಾರು ಬಾರಿ ಗುಂಡು ಹೊಡೆದ ಶಬ್ದ ಕೇಳಿಸಿತು. ಜನ ಮಸೀದಿಯಿಂದ ಹೊರಬಂದು ಓಡುತ್ತಿರುವುದು ಕಂಡುಬಂತು" ಎಂದು ಲೆನ್ ಪೆನೇಹಾ ಎಂಬ ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದ್ದಾರೆ.

ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವ ಮುನ್ನ ದಾಳಿಕೋರ ಓಡಿಹೋಗಿದ್ದನ್ನೂ ಕಂಡಿದ್ದಾಗಿ ಅವರು ವಿವರಿಸಿದ್ದಾರೆ. ಮಸೀದಿಯ ಒಳಗೆ ಹೋಗಿ ನೆರವಿಗೆ ಮುಂದಾದಾಗ, ಎಲ್ಲೆಂದರಲ್ಲಿ ಮೃತದೇಹಗಳು ಬಿದ್ದಿದ್ದವು ಎಂದು ತಿಳಿಸಿದ್ದಾರೆ.

ಈ ಘಟನೆಯ ಹಿನ್ನೆಲೆಯಲ್ಲಿ ಎಲ್ಲ ಶಾಲೆಗಳನ್ನು ಮುಚ್ಚಲು ಆದೇಶಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಮೈಕ್ ಬುಷ್ ಪ್ರಕಟಿಸಿದ್ದಾರೆ. ಅಂತೆಯೇ ಜನ ರಸ್ತೆಗಳಿಗೆ ಇಳಿಯದಂತೆ ಹಾಗೂ ಯಾವುದೇ ಅನುಮಾನಾಸ್ಪದ ವರ್ತನೆ ಕಂಡುಬಂದಲ್ಲಿ ವರದಿ ಮಾಡುವಂತೆ ಸೂಚಿಸಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News