ಬೇಹುಗಾರಿಕೆ ನಡೆಸಲು ಕಂಪೆನಿಗಳಿಗೆ ಚೀನಾ ಹೇಳುವುದಿಲ್ಲ: ಚೀನಾ ಪ್ರಧಾನಿ

Update: 2019-03-15 16:17 GMT

ಬೀಜಿಂಗ್, ಮಾ. 15: ವಿದೇಶಗಳಲ್ಲಿ ಬೇಹುಗಾರಿಕೆ ನಡೆಸುವಂತೆ ತಂತ್ರಜ್ಞಾನ ಕಂಪೆನಿಗಳಿಗೆ ಚೀನಾ ಸೂಚನೆಗಳನ್ನು ನೀಡುತ್ತದೆ ಎಂಬ ಆರೋಪವನ್ನು ಚೀನಾ ಪ್ರಧಾನಿ ಲಿ ಕೆಕಿಯಾಂಗ್ ಶುಕ್ರವಾರ ನಿರಾಕರಿಸಿದ್ದಾರೆ.

ಪಾಶ್ಚಿಮಾತ್ಯ ದೇಶಗಳಲ್ಲಿ ಚೀನಾ ಬೇಹುಗಾರಿಕೆ ಕುರಿತ ಕಳವಳಗಳು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಚೀನಾ ಪ್ರಧಾನಿ ಈ ಸ್ಪಷ್ಟೀಕರಣ ನೀಡಿದ್ದಾರೆ.

ಚೀನಾದ ಪ್ರಮುಖ ಟೆಲಿಕಾಂ ಕಂಪೆನಿ ವಾವೆ ಟೆಕ್ನಾಲಜೀಸ್ ವಿದೇಶಗಳಲ್ಲಿ ಬೇಹುಗಾರಿಕೆ ನಡೆಸುತ್ತಿದೆ ಎಂಬ ಆರೋಪಗಳು ಕೇಳಿಬಂದಿರುವುದನ್ನು ಸ್ಮರಿಸಬಹುದಾಗಿದೆ.

ಜಗತ್ತಿನ ಅತಿ ದೊಡ್ಡ ಟೆಲಿಕಾಂ ಸಲಕರಣೆಗಳ ಪೂರೈಕೆದಾರ ಕಂಪೆನಿಯಾಗಿರುವ ವಾವೆ ಬೇಹುಗಾರಿಕೆ ಆರೋಪಗಳು ಕೇಳಿಬಂದ ಬಳಿಕ, ಚೀನಾ ಮತ್ತು ಹಲವಾರು ಪಾಶ್ಚಾತ್ಯ ದೇಶಗಳ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿರುವುದನ್ನು ಸ್ಮರಿಸಬಹುದಾಗಿದೆ.

ಈ ಆರೋಪಗಳನ್ನು ಸ್ವತಃ ವಾವೇ ಕಂಪೆನಿ ತಿರಸ್ಕರಿಸಿದೆ. ಆದಾಗ್ಯೂ, ವಾವೇ ಕಂಪೆನಿಯ ತಂತ್ರಜ್ಞಾನದ ಬಳಕೆಯ ಮೇಲೆ ಅಮೆರಿಕ ನಿರ್ಬಂಧಗಳನ್ನು ವಿಧಿಸಿದೆ.

‘‘ಇದು ಚೀನಾದ ಕಾನೂನಿಗೆ ಅನುಗುಣವಾಗಿಲ್ಲ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ. ಚೀನಾ ವರ್ತಿಸುವ ರೀತಿ ಇದಲ್ಲ. ನಾವು ಹಾಗೆ ಮಾಡಿಲ್ಲ, ಇನ್ನು ಮುಂದೆಯೂ ಮಾಡುವುದಿಲ್ಲ’’ ಎಂದು ಲೀ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News