ಮ್ಯೂನಿಕ್ ನಿಂದ ಕ್ರೈಸ್ಟ್‌ಚರ್ಚ್: ಕ್ರೀಡಾಳುಗಳನ್ನು ಕಾಡಿದ ಹಿಂಸೆ

Update: 2019-03-15 18:12 GMT

ಕ್ರೈಸ್ಟ್‌ಚರ್ಚ್, ಮಾ.15: ನ್ಯೂಝಿಲ್ಯಾಂಡ್‌ನಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಬಾಂಗ್ಲಾ ಕ್ರಿಕೆಟಿಗರು ಪಾರಾಗಿದ್ದಾರೆ. ಕ್ರೀಡಾಪಟುಗಳನ್ನು ಗುರಿಯಾಗಿಟ್ಟುಕೊಂಡು ನಡೆದ ಹಿಂಸೆಗೆ ರಕ್ತಸಿಕ್ತ ಇತಿಹಾಸವಿದೆ. ವಿಶ್ವ ಶಾಂತಿಯ ವಿಚಾರವನ್ನು ಪಸರಿಸುವಂತಹ ಗುಣವುಳ್ಳ ಕ್ರೀಡೆ ತಾನೇ ಆಪತ್ತಿಗೆ ಸಿಲುಕಿದ ಕೆಲವು ಉದಾಹರಣೆಗಳು ಈ ರೀತಿಯಾಗಿವೆ.

►1972 ಮ್ಯೂನಿಕ್ ಒಲಿಂಪಿಕ್ಸ್: ಕ್ರೀಡಾಪಟುಗಳನ್ನು ಗುರಿಯಾಗಿಟ್ಟುಕೊಂಡು ನಡೆದ ಅತ್ಯಂತ ಭೀಷಣ ದಾಳಿ 1972 ಸೆಪ್ಟ್ಟಂಬರ್ 5ರಂದು ನಡೆಯಿತು. ಭಯೋತ್ಪಾದಕರ ಒತ್ತೆಯಾಳುಗಳಾಗಿ ಸಿಲುಕಿದ ಇಸ್ರೇಲ್‌ನ 11 ಮಂದಿ ಅಥ್ಲೀಟ್‌ಗಳು ಹಾಗೂ ಕೋಚ್‌ಗಳು 16 ತಾಸುಗಳ ಮಾರಣಾಂತಿಕ ದಾಳಿಯಲ್ಲಿ ಹತ್ಯೆಗೀಡಾದರು.

►1987 ನ್ಯೂಝಿಲ್ಯಾಂಡ್ ತಂಡದ ಶ್ರೀಲಂಕಾ ಪ್ರವಾ: ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲು ಶ್ರೀಲಂಕಾಗೆ ತೆರಳಿದ್ದ ನ್ಯೂಝಿಲೆಂಡ್ ತಂಡ ಕೇವಲ ಒಂದೇ ಪಂದ್ಯದ ಬಳಿಕ ಪ್ರವಾಸವನ್ನು ರದ್ದುಗೊಳಿಸಿತು. ಕಾರಣ ಕೊಲಂಬೊದಲ್ಲಿ ಕಿವೀಸ್ ತಂಡ ತಂಗಿದ್ದ ಹೊಟೇಲ್ ಸಮೀಪ ಪ್ರತ್ಯೇಕತಾವಾದಿಗಳು ಸ್ಫೋಟಿಸಿದ ಬಾಂಬ್‌ನಿಂದಾಗಿ 113 ನಾಗರಿಕರು ಸಾವನ್ನಪ್ಪಿದರು. ಆದರೆ ಅದೃಷ್ಟವಶಾತ್ ಕ್ರಿಕೆಟಿಗರು ಪಾರಾಗಿದ್ದರು.

►2002 ನ್ಯೂಝಿಲ್ಯಾಂಡ್ ತಂಡದ ಪಾಕ್ ಪ್ರವಾ : ಪಾಕ್ ಪ್ರವಾಸ ಕೈಗೊಂಡಿದ್ದ ಕಿವೀಸ್ ತಂಡ ತಂಗಿದ್ದ ಹೊಟೇಲ್ ಹೊರಭಾಗದಲ್ಲಿ ಸ್ಫೋಟ ಸಂಭವಿಸಿ 12 ಜನರು ಸಾವನ್ನಪ್ಪಿದರು. ನ್ಯೂಝಿಲ್ಯಾಂಡ್ ಕ್ರಿಕೆಟ್ ಮಂಡಳಿ ತನ್ನ ಆಟಗಾರರನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ನಿರ್ಧರಿಸಿತು.

►2009 ಶ್ರೀಲಂಕಾ ತಂಡದ ಪಾಕ್ ಪ್ರವಾ: ಶ್ರೀಲಂಕಾ ತಂಡ ಲಾಹೋರ್‌ನ ಗಡ್ಡಾಫಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಎರಡನೇ ಟೆಸ್ಟ್ ನ ಮೂರನೇ ದಿನದಾಟವಾಡಲು ಬಸ್‌ನಲ್ಲಿ ತೆರಳುತ್ತಿತ್ತು. ಈ ವೇಳೆ ಕನಿಷ್ಠ 12 ಜನರಿದ್ದ ಉಗ್ರಗಾಮಿಗಳ ಗುಂಪು ಕ್ರಿಕೆಟಿಗರಿದ್ದ ಬಸ್‌ನ ಮೇಲೆ ಗುಂಡಿನ ದಾಳಿ ನಡೆಸಿತು. ಪರಿಣಾಮ 6 ಜನ ಲಂಕಾ ಕ್ರಿಕೆಟಿಗರು ಗಾಯಗೊಂಡರು. ಬಸ್ ಚಾಲಕ ಈ ಘಟನೆಯಲ್ಲಿ ಸಾವನ್ನಪ್ಪಿದ. ಕ್ರಿಕೆಟಿಗರ ರಕ್ಷಣೆಗೆ ಧಾವಿಸಿದ 6 ಪೊಲೀಸರು ಹಾಗೂ ಇಬ್ಬರು ನಾಗರಿಕರೂ ಘಟನೆಯಲ್ಲಿ ಪ್ರಾಣ ಕಳೆದುಕೊಂಡರು. ಲಂಕಾ ತಂಡ ತವರಿಗೆ ಮರಳಿತು. ಆ ಬಳಿಕ ಪಾಕ್ ತಂಡ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನ್ನು ತನ್ನ ನೆಲದಲ್ಲಿ ನಡೆಸಿಲ್ಲ.

►ಆಫ್ರಿಕನ್ ನೇಶನ್ಸ್ ಕಪ್ ಫುಟ್ಬಾಲ್ ಟೂರ್ನಿ: ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಕ್ಯಾಬಿಂಡಾದ ಅಂಗೋಲನ್ ಪ್ರಾಂತಕ್ಕೆ ತೆರಳುತ್ತಿದ್ದ ಟೊಗೊ ರಾಷ್ಟ್ರೀಯ ಫುಟ್ಬಾಲ್ ತಂಡವಿದ್ದ ಬಸ್ ಪ್ರತ್ಯೇಕತಾವಾದಿಗಳಿಂದ ಗುಂಡಿನ ದಾಳಿಗೆ ಒಳಗಾಯಿತು. ದಾಳಿಯಲ್ಲಿ ತಂಡದ ಸಹಾಯಕ ವ್ಯವಸ್ಥಾಪಕ ಹಾಗೂ ಮಾಧ್ಯಮ ಅಧಿಕಾರಿ ಹತ್ಯೆಗೀಡಾದರು.

►2019 ಬಾಂಗ್ಲಾ ತಂಡದ ನ್ಯೂಝಿಲ್ಯಾಂಡ್ ಪ್ರವಾ: ಪ್ರವಾಸದ 3ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವಾಡಲು ತೆರಳುತ್ತಿದ್ದ ಬಾಂಗ್ಲಾ ತಂಡದ ಮೇಲೆ ಕ್ರೈಸ್ಟ್ ಚರ್ಚ್‌ನ ಮಸ್ಝೀದ್ ಅಲ್ ನೂರ್ ಬಳಿ ಆಸ್ಟ್ರೇಲಿಯದ ಪ್ರತ್ಯೇಕತಾವಾದಿ ಎಂದು ಹೇಳಲಾದ ಬಂದೂಕುಧಾರಿಯೊಬ್ಬ ದಾಳಿ ನಡೆಸಿದ. 49 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಟೂರ್ನಿ ರದ್ದುಗೊಂಡಿದೆ. ಬಾಂಗ್ಲಾ ಆಟಗಾರರು ದಾಳಿಯಿಂದ ಪಾರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News