ಕೆರ್ಬರ್, ಬೆನ್ಸಿಕ್ ಸೆಮಿಫೈನಲ್‌ಗೆ

Update: 2019-03-15 18:14 GMT

ಇಂಡಿಯನ್ ವೆಲ್ಸ್, ಮಾ.15: ಅಮೆರಿಕದ ಖ್ಯಾತ ಆಟಗಾರ್ತಿ ವೀನಸ್ ವಿಲಿಯಮ್ಸ್‌ಗೆ 7-6(3), 6-3 ಸೆಟ್‌ಗಳಿಂದ ಸೋಲುಣಿಸಿದ ಜರ್ಮನಿಯ ಏಂಜೆಲಿಕ್ ಕೆರ್ಬರ್ ಗುರುವಾರ ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಟೈ-ಬ್ರೇಕರ್‌ವರೆಗೂ ಸಾಗಿದ ಮೊದಲ ಸೆಟ್‌ನಲ್ಲಿ ವೀನಸ್ ವಿಲಿಯಮ್ಸ್ ಎಸಗಿದ 6 ಅನಗತ್ಯ ತಪ್ಪುಗಳು ಜರ್ಮನಿ ಆಟಗಾರ್ತಿಯು ಸೆಟ್ ವಶಪಡಿಸಿಕೊಳ್ಳಲು ನೆರವಾದವು. ಎರಡು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಕೆರ್ಬರ್, ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿ ಮೊದಲ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ತಮ್ಮ ಮುಂದಿನ ಸುತ್ತಿನ ಪಂದ್ಯದಲ್ಲಿ ಅವರು ಸ್ವಿಸ್ ಆಟಗಾರ್ತಿ ಬೆಲಿಂಡಾ ಬೆನ್ಸಿಕ್ ಅವರ ಸವಾಲನ್ನು ಎದುರಿಸಲಿದ್ದಾರೆ.

ಇನ್ನೊಂದೆಡೆ ಬೆನ್ಸಿಕ್ ಅವರು ವಿಶ್ವದ ನಂ.5 ಆಟಗಾರ್ತಿ ಝೆಕ್ ಗಣರಾಜ್ಯದ ಕರೋಲಿನಾ ಪ್ಲಿಸ್ಕೊವಾ ಅವರನ್ನು 6-3, 4-6, 6-3 ಸೆಟ್‌ಗಳಿಂದ ಮಣಿಸಿ ಸೆಮಿಫೈನಲ್‌ಗೆ ಕಾಲಿಟ್ಟರು.

ಮಂಗಳವಾರ ವಿಶ್ವ ನಂ.1 ಆಟಗಾರ್ತಿ ಜಪಾನ್‌ನ ನವೊಮಿ ಒಸಾಕಾರನ್ನು ಸದೆಬಡಿದಿದ್ದ ಬೆನ್ಸಿಕ್, ಪ್ಲಿಸ್ಕೋವಾ ಎದುರಿನ ಪಂದ್ಯದಲ್ಲಿ ಪೈಪೋಟಿಯುತ ಪಂದ್ಯದಲ್ಲಿ ಜಯದ ನಗೆ ಬೀರಿದರು.

ಈ ವರ್ಷದ ಆರಂಭದಿಂದ ವಿಶ್ವದ ನಂ.23 ಆಟಗಾರ್ತಿ ಬೆನ್ಸಿಕ್ ಅಗ್ರ 10ರ ಪಟ್ಟಿಯಲ್ಲಿನ 6 ಆಟಗಾರ್ತಿಯರಿಗೆ ಸೋಲಿನ ರುಚಿ ತೋರಿಸಿದ್ದಾರೆ.

►ಮೊಂಫಿಲ್ಸ್ ನಿವೃತ್ತಿ: ಥೀಮ್ ಸೆಮಿಗೆ

ಫ್ರಾನ್ಸ್ ಆಟಗಾರ ಗಾಯಗೊಂಡು ನಿವೃತ್ತಿ ಪಡೆದ ಕಾರಣ ಅವರ ಎದುರಾಳಿ ಆಟಗಾರ ವಿಶ್ವದ ನಂ.7 ಡೊಮಿನಿಕ್ ಥೀಮ್ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಅವರು ಕೆನಡಾದ ಮಿಲೊಸ್ ರಾವೊನಿಕ್ ಅವರ ಸವಾಲಿಗೆ ಸಜ್ಜಾಗಲಿದ್ದಾರೆ.

ವಿಶ್ವದ ನಂ.19ನೇ ಆಟಗಾರ ಮೊಂಫಿಲ್ಸ್ ಅವರು ಥೀಮ್ ಎದುರಿನ ಪಂದ್ಯ ಆರಂಭಕ್ಕೂ ಮುನ್ನವೇ ಗಾಯದ ಕಾರಣ ಪಂದ್ಯದಿಂದ ಹಿಂದೆ ಸರಿದರು. ಪಾದದ ನೋವಿಗೆ ಒಳಗಾಗಿದ್ದ ಅವರು ಚಿಕಿತ್ಸೆ ಪಡೆದಿದ್ದರು. ಆದರೆ ಬುಧವಾರ ರಾತ್ರಿ ನಾಲ್ಕನೇ ಸುತ್ತಿನ ಪಂದ್ಯದ ಬಳಿಕ ನೋವು ಉಲ್ಬಣಿಸಿತ್ತು. ಹೀಗಾಗಿ ಕ್ವಾ.ಫೈನಲ್ ಪಂದ್ಯವಾಡಲು ಅವರಿಗೆ ಸಾಧ್ಯವಾಗಲಿಲ್ಲ.

ಇನ್ನೊಂದೆಡೆ ವಿಶ್ವ ರ್ಯಾಂಕಿಂಗ್‌ನಲ್ಲಿ 14ನೇ ಸ್ಥಾನದಲ್ಲಿರುವ ರಾವೊನಿಕ್ ಅವರು ಅದೃಷ್ಟಶಾಲಿ ಆಟಗಾರ ಸರ್ಬಿಯದ ಮಿಯೊಮಿರ್ ಕೆಕ್ಮೊನೊವಿಕ್ ಅವರನ್ನು 6-3, 6-4 ಸೆಟ್‌ಗಳ ಅಂತರದಿಂದ ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News