ಏಕೈಕ ಟೆಸ್ಟ್: ಐರ್ಲೆಂಡ್ 172 ರನ್‌ಗೆ ಆಲೌಟ್

Update: 2019-03-15 18:15 GMT

ಡೆಹ್ರಾಡೂನ್(ಭಾರತ), ಮಾ.15: ಐರ್ಲೆಂಡ್ ತಂಡವನ್ನು ಶುಕ್ರವಾರ ಇಲ್ಲಿ ಆರಂಭವಾದ ಏಕೈಕ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 172 ರನ್‌ಗೆ ನಿಯಂತ್ರಿಸಿದ ಅಫ್ಘಾನಿಸ್ತಾನ ತನ್ನ ಇಬ್ಬರು ಆರಂಭಿಕ ಆಟಗಾರರನ್ನು ಕಳೆದುಕೊಂಡು 2 ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿದೆ.

ಮೊದಲ ದಿನದಾಟದಲ್ಲಿ ಪತನವಾದ ಒಟ್ಟು 12 ವಿಕೆಟ್‌ಗಳ ಪೈಕಿ 9 ವಿಕೆಟ್‌ಗಳು ಸ್ಪಿನ್ನರ್‌ಗಳ ಪಾಲಾದವು. ಅಫ್ಘಾನ್‌ನ ರಹಮತ್ ಶಾ(ಔಟಾಗದೆ 22) ಹಾಗೂ ಹಶ್ಮತುಲ್ಲಾ ಶಾಹಿದಿ(ಔಟಾಗದೆ 13) ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಆರಂಭಿಕ ಆಟಗಾರ ಮುಹಮ್ಮದ್ ಶಹಝಾದ್ 40 ರನ್ ಗಳಿಸಿ ಔಟಾದರು. 8 ವಿಕೆಟ್ ಹೊಂದಿರುವ ಅಫ್ಘಾನ್ ಇನ್ನೂ 80 ರನ್ ಹಿನ್ನಡೆಯಲ್ಲಿದೆ. ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ಒಂದು ಹಂತದಲ್ಲಿ 85 ರನ್‌ಗೆ 9 ವಿಕೆಟ್ ಕಳೆದುಕೊಂಡಿತ್ತು. ಆಗ 37ರ ಹರೆಯದ 11ನೇ ಕ್ರಮಾಂಕದ ಆಟಗಾರ ಟಿಮ್ ಮುರ್ತಾಘ್ ಅಜೇಯ ಅರ್ಧಶತಕ(54,75 ಎಸೆತ, 4 ಬೌಂಡರಿ, 2 ಸಿಕ್ಸರ್)ಸಿಡಿಸಿ ತಂಡದ ಮೊತ್ತವನ್ನು 172ಕ್ಕೆ ತಲುಪಿಸಿದರು.

ಅಫ್ಘಾನ್ ತಂಡದ ತ್ರಿವಳಿ ಸ್ಪಿನ್ನರ್‌ಗಳಾದ ಮುಹಮ್ಮದ್ ನಬಿ, ರಶೀದ್ ಖಾನ್ ಹಾಗೂ ವಖಾರ್ ಸಲಾಮ್‌ಖೆಲ್ 7 ವಿಕೆಟ್ ಹಂಚಿಕೊಂಡರು. ತಂಡ ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗಿಳಿದ ಬಾಲಂಗೋಚಿ ಮುರ್ತಾಘ್‌ಗೆ ಜಾರ್ಜ್ ಡಾಕ್ರೆಲ್(39) ಸಮರ್ಥ ಸಾಥ್ ನೀಡಿದ್ದು, ಕೊನೆಯ ವಿಕೆಟ್‌ಗೆ 87 ರನ್ ಜೊತೆಯಾಟ ನಡೆಸಿದರು. ಐರ್ಲೆಂಡ್ ಕಳಪೆ ಮೊತ್ತ ಗಳಿಸುವುದರಿಂದ ಪಾರು ಮಾಡಿದರು. ಡಾಕ್ರೆಲ್ ವಿಕೆಟನ್ನು ಕಬಳಿಸಿದ ಯಾಮಿನ್ ಅಹ್ಮದ್‌ಝೈಲ್(3-41) ಕೊನೆಯ ವಿಕೆಟ್ ಜೊತೆಯಾಟಕ್ಕೆ ತೆರೆ ಎಳೆದರು.

ರಶೀದ್ ಖಾನ್(2-20) ತಾನೆಸೆದ ಮೊದಲ ಓವರ್‌ನಲ್ಲಿ ಐರ್ಲೆಂಡ್ ಪರ ಚೊಚ್ಚಲ ಪಂದ್ಯ ಆಡಿದ ಐವರು ದಾಂಡಿಗರ ಪೈಕಿ ಇಬ್ಬರನ್ನು ಬೇಗನೆ ಔಟ್ ಮಾಡಿ ಶಾಕ್ ನೀಡಿದರು. ಮುಹಮ್ಮದ್ ನಬಿ(3-36) ಹಿರಿಯ ಆಟಗಾರ ಕೆವಿನ್ ಒಬ್ರಿಯಾನ್(12) ಹಾಗೂ ಸ್ಟುವರ್ಟ್ ಥಾಂಪ್ಸನ್(3) ವಿಕೆಟ್ ಉರುಳಿಸಿ ತಂಡದ ಸಂಕಷ್ಟ ಹೆಚ್ಚಿಸಿದರು. ಎಡಗೈ ಸ್ಪಿನ್ನರ್ ಸಲಾಮ್ ಖೆಲ್(2-35)ಲಂಚ್ ವಿರಾಮದ ಬಳಿಕ ಆ್ಯಂಡಿ ಮೈಕ್‌ಬ್ರೈನ್ ಹಾಗೂ ಕ್ಯಾಮರೂನ್-ಡೌ ವಿಕೆಟನ್ನು ಉರುಳಿಸಿದರು. ಆದರೆ, ಟೀ ವಿರಾಮದ ತನಕ ಮುರ್ತಾಘ್ ಅವರ ಅತ್ಯುತ್ತಮ ಬ್ಯಾಟಿಂಗ್‌ನಿಂದಾಗಿ ಅಫ್ಘಾನ್ ಪ್ರತಿರೋಧ ಎದುರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News