ಐಸಿಸಿ ವಿಶ್ವಕಪ್ ಬಳಿಕ ಡುಮಿನಿ ನಿವೃತ್ತಿ

Update: 2019-03-15 18:16 GMT

ಜೋಹಾನ್ಸ್‌ಬರ್ಗ್, ಮಾ.15: ಇಂಗ್ಲೆಂಡ್‌ನಲ್ಲಿ ಮೇ 30ರಿಂದ ಆರಂಭವಾಗಲಿರುವ ಐಸಿಸಿ ವಿಶ್ವಕಪ್ ಅಂತ್ಯಕ್ಕೆ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗುವುದಾಗಿ ದಕ್ಷಿಣ ಆಫ್ರಿಕದ ಆಲ್‌ರೌಂಡರ್ ಜೆ.ಪಿ.ಡುಮಿನಿ ಶುಕ್ರವಾರ ಘೋಷಿಸಿದ್ದಾರೆ. ಟಿ-20 ಮಾದರಿ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸುವುದಾಗಿ ಎಡಗೈ ದಾಂಡಿಗ ಡುಮಿನಿ ಸ್ಪಷ್ಪಪಡಿಸಿದ್ದಾರೆ.

‘‘ನಿವೃತ್ತಿ ನಿರ್ಧಾರ ಯಾವಾಗಲೂ ಸುಲಭಸಾಧ್ಯವಲ್ಲ. ಇದು ನಿವೃತ್ತಿಗೆ ಸರಿಯಾದ ಸಮಯವೆಂದು ಭಾವಿಸಿದ್ದೇನೆ. ನಾನು ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾದರೂ ಅಂತರ್‌ರಾಷ್ಟ್ರೀಯ ಹಾಗೂ ದೇಶೀಯ ಮಟ್ಟದ ಟಿ-20 ಕ್ರಿಕೆಟ್‌ನಲ್ಲಿ ಲಭ್ಯವಿರುತ್ತೇನೆ. ನನ್ನ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುವೆ. ಕುಟುಂಬ ಸದಸ್ಯರು ನನ್ನ ಮೊದಲ ಆದ್ಯತೆಯಾಗಿದ್ದಾರೆ’’ ಎಂದು ಡುಮಿನಿ ನುಡಿದರು.

34ರ ಹರೆಯದ ಡುಮಿನಿ 2017ರ ಸೆಪ್ಟಂಬರ್‌ನಲ್ಲಿ ಟೆಸ್ಟ್ ಮಾದರಿ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. 46 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು 32.85ರ ಸರಾಸರಿಯಲ್ಲಿ 6 ಶತಕ ಹಾಗೂ 8 ಅರ್ಧಶತಕಗಳ ಸಹಿತ 2,103 ರನ್ ಗಳಿಸಿದ್ದಾರೆ. ದ.ಆಫ್ರಿಕದ ಪರ 193 ಏಕದಿನ ಪಂದ್ಯಗಳನ್ನು ಆಡಿರುವ ಡುಮಿನಿ 37.39ರ ಸರಾಸರಿಯಲ್ಲಿ 5,407 ರನ್ ಗಳಿಸಿದ್ದು, 68 ವಿಕೆಟ್‌ಗಳ ಜೊತೆಗೆ 5,407 ರನ್ ಗಳಿಸಿದ್ದಾರೆ. 2011 ಹಾಗೂ 2015ರ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕ ತಂಡದಲ್ಲಿದ್ದರು. ಈ ವರ್ಷ ಮೂರನೇ ಹಾಗೂ ಕೊನೆಯ ವಿಶ್ವಕಪ್ ಆಡಲು ಸಜ್ಜಾಗಿದ್ದಾರೆ.

ಮುಂಬರುವ ವಿಶ್ವಕಪ್‌ನ ಬಳಿಕ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗುವುದಾಗಿ ದ.ಆಫ್ರಿಕದ ಹಿರಿಯ ಸ್ಪಿನ್ನರ್ ಇಮ್ರಾನ್ ತಾಹಿರ್ ಘೋಷಿಸಿದ ಕೆಲವೇ ದಿನಗಳ ಬಳಿಕ ಡುಮಿನಿ ಕೂಡ ನಿವೃತ್ತಿ ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News