ಫ್ಯಾಬಿಯೊ ಕನ್ನಾವರೊ ಚೀನಾ ಫುಟ್ಬಾಲ್ ಕೋಚ್
Update: 2019-03-15 23:48 IST
ಶಾಂಘೈ, ಮಾ.15: ವಿಶ್ವಕಪ್ ವಿಜೇತ ಇಟಲಿ ತಂಡದ ನಾಯಕ ಫ್ಯಾಬಿಯೊ ಕನ್ನಾವರೊ ಅವರನ್ನು ಶುಕ್ರವಾರ ಚೀನಾ ಫುಟ್ಬಾಲ್ ತಂಡದ ಕೋಚ್ ಆಗಿ ನೇಮಿಸಲಾಗಿದೆ. ಫುಟ್ಬಾಲ್‌ನಲ್ಲಿ ಬಲಿಷ್ಠಗೊಳ್ಳುವ ತನ್ನ ಆಸೆಗೆ ನೀರೆರೆಯಲು ಚೀನಾ ಈ ನೇಮಕ ಮಾಡಿದೆ.
ಚೀನಾದ ಫುಟ್ಬಾಲ್ ಇತಿಹಾಸದಲ್ಲಿ ಬಲಿಷ್ಠ ತಂಡಗಳಲ್ಲಿ ಒಂದು ಎಂದು ಗುರುತಿಸಿಕೊಂಡಿರುವ ಚೀನಾ ಸೂಪರ್ ಲೀಗ್‌ನ ದೈತ್ಯ ತಂಡ ಗುವಾಂಗ್‌ಝೌ ಎವರ್‌ಗ್ರೇಡ್‌ನಲ್ಲಿ ಈಗಾಗಲೇ ಕೋಚ್ ಆಗಿರುವ 45 ವರ್ಷದ ಮಾಜಿ ಡಿಫೆಂಡರ್ ಕನ್ನಾವರೊ ಚೀನಾದ ರಾಷ್ಟ್ರೀಯ ತಂಡಕ್ಕೂ ತರಬೇತಿ ನೀಡಲಿದ್ದಾರೆ. ಚೀನಾ ತಂಡದ ಕೋಚ್ ಆಗಿದ್ದ ಇಟಲಿಯವರೇ ಆದ ಮಾರ್ಸೆಲ್ಲೊ ಲಿಪ್ಪಿ ಜನವರಿಯಲ್ಲಿ ಸ್ಥಾನ ತ್ಯಜಿಸಿದ್ದು ಅವರ ಸ್ಥಾನದಲ್ಲಿ 2006ರಲ್ಲಿ ಫುಟ್ಬಾಲ್ ವಿಶ್ವಕಪ್ ವಿಜೇತ ಇಟಲಿ ತಂಡದ ನಾಯಕನನ್ನು ನೇಮಿಸಲಾಗಿದೆ. ಕನ್ನಾವರೊ ಚೀನಾ ತಂಡಕ್ಕೆ ತಾತ್ಕಾಲಿಕವೋ ಅಥವಾ ಶಾಶ್ವತ ಕೋಚ್ ಆಗಲಿದ್ದಾರೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.