ಕ್ರೈಸ್ಟ್‌ಚರ್ಚ್ ದಾಳಿ: ಕ್ರಿಕೆಟಿಗರ ಖಂಡನೆ

Update: 2019-03-15 18:21 GMT

ಹೊಸದಿಲ್ಲಿ, ಮಾ.15: ಕ್ರೈಸ್ಟ್‌ಚರ್ಚ್ ಮಸೀದಿಯಲ್ಲಿ ಶುಕ್ರವಾರ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಿಂದ ಪ್ರವಾಸಿ ಬಾಂಗ್ಲಾದೇಶ ಕ್ರಿಕೆಟ್ ತಂಡ ಕೂದಲೆಳೆಯಿಂದ ಪಾರಾಗಿದ್ದು, ಈ ಘಟನೆಯ ಬಗ್ಗೆ ವಿಶ್ವದೆಲ್ಲೆಡೆಯ ಕ್ರಿಕೆಟಿಗರು ಆಘಾತ ವ್ಯಕ್ತಪಡಿಸಿದ್ದಾರೆ.

ಹ್ಯಾಗ್ಲಿ ಪಾರ್ಕ್‌ನಲ್ಲಿರುವ ಮಸ್ಜಿದ್ ಅಲ್ ನೂರ್ ಮಸೀದಿಯಲ್ಲಿ ಭಯೋತ್ಪಾದಕ ದಾಳಿಯಲ್ಲಿ ಹಲವು ಮಂದಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಶನಿವಾರ ಆರಂಭವಾಗಬೇಕಾಗಿದ್ದ ನ್ಯೂಝಿಲ್ಯಾಂಡ್-ಬಾಂಗ್ಲಾದೇಶದ 3ನೇ ಟೆಸ್ಟ್ ಪಂದ್ಯವನ್ನು ರದ್ದುಪಡಿಸಲಾಗಿದೆ. ಬಾಂಗ್ಲಾದೇಶ ತಂಡ ಶುಕ್ರವಾರದ ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ಪ್ರವೇಶಿಸಲು ಸಿದ್ಧವಾಗುತ್ತಿದ್ದಂತೆ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ‘‘ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಘೋರ ಘಟನೆಯಲ್ಲಿ ಸಂತ್ರಸ್ತರಾದ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ನಾವು ತೀವ್ರ ಸಂತಾಪ ಸೂಚಿಸುತ್ತೇವೆ. ಉಭಯ ತಂಡಗಳು, ಸಿಬ್ಬಂದಿ ವರ್ಗ ಹಾಗೂ ಪಂದ್ಯದ ಅಧಿಕಾರಿಗಳು ಸುರಕ್ಷಿತರಾಗಿದ್ದಾರೆ. ಟೆಸ್ಟ್ ಪಂದ್ಯ ರದ್ದುಪಡಿಸಿರುವ ಕ್ರಮವನ್ನು ಐಸಿಸಿ ಸಂಪೂರ್ಣ ಬೆಂಬಲಿಸುತ್ತದೆ’’ ಐಸಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೇವಿಡ್ ರಿಚರ್ಡ್‌ಸನ್ ಹೇಳಿದ್ದಾರೆ.

ಘಟನೆಯಿಂದ ನನಗೆ ಆಘಾತವಾಗಿದೆ. ಈ ಪೈಶಾಚಿಕ ಕೃತ್ಯಕ್ಕೆ ಬಲಿಯಾದ ಕುಟುಂಬದವರಿಗೆ ನನ್ನ ಹೃದಯ ಮಿಡಿಯುತ್ತಿದೆ ಎಂದು ಭಾರತದ ನಾಯಕ ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ನ್ಯೂಝಿಲ್ಯಾಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿ ಗುಂಡಿನ ದಾಳಿ ನಡೆದ ಘಟನೆ ಕೇಳಿ ನನಗೆ ಶಾಕ್ ಆಯಿತು. ಸಂತ್ರಸ್ತ ಕುಟುಂಬಕ್ಕೆ ಸಂತಾಪ ಸೂಚಿಸುವೆ- ವಿವಿಎಸ್ ಲಕ್ಷ್ಮಣ್. ನ್ಯೂಝಿಲೆಂಡ್‌ನಲ್ಲಿ ನಡೆದ ಶೂಟಿಂಗ್ ಹಾಗೂ ಗನ್‌ಶಾಟ್‌ನಂತಹ ಘಟನೆಯನ್ನು ತಡೆಯಬೇಕಾಗಿದೆ. ವಿಶ್ವವೇ ಕೆಟ್ಟ ಪರಿಸ್ಥಿತಿಯಲ್ಲಿದೆ ಎಂದು ನಮಗೆ ತಿಳಿದಿದೆ-ಹರ್ಷಾ ಭೋಗ್ಲೆ. ಕ್ರೈಸ್ಟ್‌ಚರ್ಚ್‌ನಲ್ಲಿನ ಘಟನೆಯಿಂದ ನನಗೆ ತುಂಬಾ ಬೇಸರವಾಗಿದೆ... ಬಾಧಿತ ಕುಟುಂಬಕ್ಕೆ ದುಃಖ ಸಲ್ಲಿಸುವ ಶಕ್ತಿ ಸಿಗಲಿ-ಮಹೇಲ ಜಯವರ್ಧನೆ.

ಕ್ರೈಸ್ಟ್‌ಚರ್ಚ್‌ನ ಮಸೀದಿಯಲ್ಲಿ ಗುಂಡಿನ ಹಾರಾಟ ನಡೆದಾಗ ದೇವರೇ ನಮ್ಮನ್ನು ಇಂದು ಬದುಕುಳಿಸಿದ... ನಾವೆಲ್ಲರೂ ನಿಜಕ್ಕೂ ಅದೃಷ್ಟಶಾಲಿಗಳು...ಇಂತಹ ಘಟನೆ ಎಂದೂ ನಡೆಯಬಾರದು-ಮುಶ್ಫಿಕುರ್ರಹೀಂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News