ಸೀಟು ಹಂಚಿಕೆಯಲ್ಲಿ ಗೆದ್ದ ಮೈತ್ರಿ

Update: 2019-03-16 04:31 GMT

ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ರಾಜ್ಯದಲ್ಲಿ ಸ್ಥಾನ ಹಂಚಿಕೆಯನ್ನು ಯಶಸ್ವಿಯಾಗಿ ಮುಗಿಸಿರುವುದು ಮೈತ್ರಿ ಸರಕಾರದ ಬಹುದೊಡ್ಡ ಸಾಧನೆಯಾಗಿದೆ. ‘ನಾವು ಭಿಕ್ಷುಕರಲ್ಲ’ ಎನ್ನುವ ಮಾತುಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಹೋದಲ್ಲಿ ಬಂದಲ್ಲಿ ಆಡಿಕೊಳ್ಳುತ್ತಾ ಮಿತ್ರ ಪಕ್ಷವಾದ ಕಾಂಗ್ರೆಸನ್ನು ಎಚ್ಚರಿಸುತ್ತಾ ಇದ್ದರು. ಒಂದು ವೇಳೆ ಸೀಟು ಹಂಚಿಕೆಯಲ್ಲಿ ಮಿತ್ರರ ನಡುವೆ ಭಿನ್ನಮತ ಮೂಡಿದ್ದಿದ್ದರೆ ಅದು ಲೋಕಸಭಾ ಚುನಾವಣೆಯ ಮೇಲೆ ಮಾತ್ರವಲ್ಲ, ರಾಜ್ಯದಲ್ಲಿ ಅಸ್ತಿತ್ವವಿರುವ ಸರಕಾರದ ಮೇಲೂ ಭಾರೀ ಪರಿಣಾಮವನ್ನು ಬೀರುತ್ತಿತ್ತು. ಈ ಸಂದರ್ಭಕ್ಕಾಗಿ ಬಿಜೆಪಿಯೂ ಕಾದು ಕುಳಿತಿತ್ತು. ಆದರೆ ಕಾಂಗ್ರೆಸ್ ಸೀಟು ಹಂಚಿಕೆಯಲ್ಲಿ ತನ್ನೆಲ್ಲ ಪ್ರತಿಷ್ಠೆಯನ್ನು ಬದಿಗಿಟ್ಟು ಜೆಡಿಎಸ್ ಜೊತೆಗೆ ವ್ಯವಹರಿಸಿದೆ.

ಈ ಹಿಂದಿನ ಸೋಲಿನಿಂದ ಕಾಂಗ್ರೆಸ್ ಪಕ್ಷ ಪಾಠ ಕಲಿತಿದೆಯೆನ್ನುವುದನ್ನು ಇದು ಸ್ಪಷ್ಟ ಪಡಿಸುತ್ತದೆ. ಉಡುಪಿ-ಚಿಕ್ಕಮಗಳೂರು, ತುಮಕೂರು ಮತ್ತು ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವಲ್ಲಿ ಅನಗತ್ಯ ತಕರಾರುಗಳನ್ನು ಕಾಂಗ್ರೆಸ್ ಮಾಡದೇ ಇರುವುದು ಬಿಜೆಪಿಗೆ ಬಹಳಷ್ಟು ನಿರಾಸೆ ತಂದಂತಿದೆ. ಗೆಲುವಿನೆಡೆ ಹೆಜ್ಜೆಯಿಡುವ ನಿಟ್ಟಿನಲ್ಲಿ ಬಹುದೊಡ್ಡ ತಡೆಯನ್ನು ಮೈತ್ರಿ ಪಕ್ಷಗಳು ಯಶಸ್ವಿಯಾಗಿ ನಿವಾರಿಸಿವೆ. ಜೆಡಿಎಸ್-ಕಾಂಗ್ರೆಸ್‌ನ ಈ ಒಗ್ಗಟ್ಟು ಮುಂದಿನ ಲೋಕಸಭಾ ಚುನಾವಣೆಯ ಮೇಲೆ ಧನಾತ್ಮಕ ಪರಿಣಾಮ ಬೀರುವುದರಲ್ಲಿ ಯಾವ ಸಂಶಯವೂ ಇಲ್ಲ.

ಮಂಡ್ಯದಲ್ಲಿ ದೇವೇಗೌಡರ ಮೊಮ್ಮಗನಿಗೆ ಅಂಬರೀಷ್ ಪತ್ನಿ ದೊಡ್ಡ ಸವಾಲಾಗಿದ್ದಾರೆ. ಮಂಡ್ಯದಲ್ಲಿ ಸ್ಪರ್ಧಿಸಲು ಜೆಡಿಎಸ್‌ನ ಹಲವು ಅರ್ಹ ನಾಯಕರಿದ್ದಾರಾದರೂ ಮೊಮ್ಮಗನೆನ್ನುವ ಒಂದೇ ಒಂದು ಅರ್ಹತೆಯಿಂದ ಅದನ್ನು ನಿಖಿಲ್‌ಗೆ ಬಿಟ್ಟು ಕೊಟ್ಟಿರುವುದು ಜೆಡಿಎಸ್ ಒಳಗಿನ ಹಲವು ನಾಯಕರಿಗೆ ಅಸಮಾಧಾನ ತಂದಿದೆ. ಅವರ ಪಾಲಿಗೆ ಇದು ನುಂಗಲಾರದ ತುತ್ತು. ಇದೇ ಸಂದರ್ಭದಲ್ಲಿ ಮಂಡ್ಯದಲ್ಲಿ ಸುಮಲತಾ ಸ್ಪರ್ಧಿಸಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದಲೂ ಕೇಳಿ ಬಂದಿದೆ. ಆದರೆ ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದರಿಂದ ಸುಮಲತಾ ಸ್ಪರ್ಧೆಯಿಂದ ಹಿಂದೆ ಸರಿಯಬೇಕು ಅಥವಾ ಬಿಜೆಪಿಯಿಂದ ಸ್ಪರ್ಧಿಸಬೇಕು ಎನ್ನುವ ಸ್ಥಿತಿಯಿದೆ. ಒಂದು ವೇಳೆ ಬಿಜೆಪಿಗೆ ಸೇರಿದರೆ ಸುಮಲತಾ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರು ನೇರವಾಗಿ ಸುಮಲತಾ ಅಂಬರೀಷ್‌ಗಾಗಿ ಬಿಜೆಪಿಯೊಂದಿಗೆ ಗುರುತಿಸಿಕೊಳ್ಳುವುದು ಅಸಾಧ್ಯವಾದ ಮಾತು.

ಈ ಸನ್ನಿವೇಶವನ್ನು ಸುಮಲತಾ ಅವರು ಮುತ್ಸದಿತನದಿಂದ ನಿಭಾಯಿಸಿದ್ದಾರೆ. ಅವರು ಪಕ್ಷೇತರರಾಗಿ ಸ್ಪರ್ಧಿಸಲು ನಿರ್ಧರಿಸಿದಂತಿದೆ. ಸುಮಲತಾ ಪಕ್ಷೇತರರಾಗಿ ನಿಂತರೆ ಬಿಜೆಪಿ ಸ್ಪರ್ಧಿಯನ್ನು ಹಾಕದೇ ಅವರನ್ನು ಬೆಂಬಲಿಸಲು ಈಗಾಗಲೇ ನಿರ್ಧರಿಸಿದೆ. ಅತ್ತ ಕಾಂಗ್ರೆಸ್‌ನ ಮತಗಳನ್ನು ಒಡೆದು, ಇತ್ತ ಬಿಜೆಪಿಯ ಮತಗಳೊಂದಿಗೆ ಸುಮಲತಾ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಆದರೆ ಅಂಬರೀಷ್ ತನ್ನ ಕೊನೆಯ ದಿನಗಳಲ್ಲಿ ರಾಜಕೀಯ ವರ್ಚಸ್ಸನ್ನು ಕಳೆದುಕೊಂಡಿದ್ದರು. ಅವರಿಂದ ಜನರು ಏನು ನಿರೀಕ್ಷೆಗಳನ್ನು ಇಟ್ಟಿದ್ದರೋ ಅವನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದರು. ಇದೀಗ ಅನುಕಂಪದ ಅಲೆ ಸುಮಲತಾ ಅವರ ಕೈ ಹಿಡಿಯಬೇಕು. ಆದರೆ ಮಂಡ್ಯದ ನೆಲದಲ್ಲಿ ಆಳವಾಗಿ ಬೇರೂರಿರುವ ಜಾತಿ ರಾಜಕಾರಣ ಕೊನೆಯ ಕ್ಷಣದಲ್ಲಿ ದೇವೇಗೌಡರ ಮಗನ ಕಡೆಗೆ ವಾಲಿದರೆ ಸುಮಲತಾ ಗೆಲ್ಲುವುದು ಕಷ್ಟವಾಗಬಹುದು. ಇತ್ತ ಚಿಕ್ಕಮಗಳೂರು-ಉಡುಪಿ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷ ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದು ಹಲವರ ಹುಬ್ಬೇರಿಸುವಂತೆ ಮಾಡಿದೆ. ಉಡುಪಿಯಲ್ಲಿ ಜೆಡಿಎಸ್ ಯಾವುದೇ ತಳಮಟ್ಟದ ಕಾರ್ಯಕರ್ತರ ನೆಲೆವನ್ನು ಹೊಂದಿಲ್ಲ. ಚಿಕ್ಕಮಗಳೂರಿನಲ್ಲಿ ಒಂದಿಷ್ಟು ವರ್ಚಸ್ಸನ್ನು ಇನ್ನೂ ಉಳಿಸಿಕೊಂಡಿದೆ.

ಉಡುಪಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಹಲವು ಕಾಂಗ್ರೆಸ್ ನಾಯಕರಿಗೆ ತೀವ್ರ ನಿರಾಸೆಯಾಗಿದೆ. ಕಾಂಗ್ರೆಸ್‌ನಲ್ಲಿರುವ ಮೃದು ಹಿಂದುತ್ವದತ್ತ ವಾಲಿಕೊಂಡಿರುವ ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್ ಜೆಡಿಎಸ್ ಪರವಾಗಿ ಬೀದಿಗಿಳಿಯುತ್ತಾರೆ ಎಂದು ನಂಬುವಂತಿಲ್ಲ. ಒಂದು ಕಾಲನ್ನು ಬಿಜೆಪಿಯ ಅಂಗಳಕ್ಕಿಟ್ಟಿರುವ ಈ ಇಬ್ಬರು ನಾಯಕರು, ಒಳಗೊಳಗೆ ಬಿಜೆಪಿಯ ಪರವಾಗಿ ಕೆಲಸ ಮಾಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜೆಡಿಎಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಆರಿಸಿಕೊಳ್ಳಬೇಕಾಗಿದೆ. ಸದ್ಯಕ್ಕೆ ವೈಎಸ್‌ವಿ ದತ್ತಾ ಹೆಸರು ಕೇಳಿ ಬರುತ್ತಿದೆ. ವೈಯಕ್ತಿಕವಾಗಿ ಸಜ್ಜನ ರಾಜಕಾರಣಿ ಎಣಿಸಿಕೊಂಡಿರುವ ದತ್ತಾ ಬಿಜೆಪಿಯ ಹಿಂದುತ್ವ ರಾಜಕಾರಣದ ಅಲೆಯನ್ನು ಮೀರಿ, ಜನಸಮೂಹವನ್ನು ತಲುಪುವುದು ಸಣ್ಣ ಸವಾಲೇನೂ ಅಲ್ಲ. ಶೋಭಾ ಕರಂದ್ಲಾಜೆಯಂತಹ ಅಪ್ರಬುದ್ಧ ಗಯ್ಯಾಳಿ ರಾಜಕಾರಣಿಗೆ ಹೋಲಿಸಿದರೆ ದತ್ತಾ ಸರ್ವ ರೀತಿಯಲ್ಲೂ ಲೋಕಸಭೆಗೆ ಆಯ್ಕೆಯಾಗಲು ಅರ್ಹತೆಯನ್ನು ಹೊಂದಿದ್ದಾರೆ.

ಈ ಬಾರಿ ಶೋಭಾ ವಿರುದ್ಧ ಬಿಜೆಪಿಯೊಳಗೂ ವ್ಯಾಪಕ ಅಸಮಾಧಾನವಿದೆ. ಈ ಅಸಮಾಧಾನ ಜೆಡಿಎಸ್‌ಗೆ ವರವಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವ ಹಾಗಿಲ್ಲ. ಮಂಗಳೂರು ಲೋಕಸಭಾ ಕ್ಷೇತ್ರ ಸಾಕಷ್ಟು ಕುತೂಹಲ ಮೂಡಿಸಿದೆ. ಮೂರು ದಶಕಗಳಿಂದ ಈ ಕ್ಷೇತ್ರವನ್ನು ಬಿಜೆಪಿ ಗೆಲ್ಲುತ್ತಾ ಬಂದಿದೆ. ಹಿರಿಯ ರಾಜಕಾರಣಿ ಜನಾರ್ದನ ಪೂಜಾರಿಯವರು ನಿರಂತರ ಸೋಲನುಭವಿಸುವ ಮೂಲಕ ಈ ಕ್ಷೇತ್ರದಲ್ಲಿ ದಾಖಲೆ ನಿರ್ಮಿಸಿದ್ದಾರೆ. ಇದೀಗ ಪೂಜಾರಿಯವರು ರಾಜಕೀಯವಾಗಿ ವೃದ್ಧಾಶ್ರಮ ಸೇರಿದ್ದಾರೆ. ಮೊದಲ ಬಾರಿಗೆ ಕಾಂಗ್ರೆಸ್ ಪೂಜಾರಿಯ ಬದಲಿಗೆ ಇನ್ನೋರ್ವ ಅಭ್ಯರ್ಥಿಯನ್ನು ಆರಿಸಲು ಮುಂದಾಗಿದೆ. ಕರಾವಳಿಯಲ್ಲಿ ಬಿಲ್ಲವ ಸಮಾಜ ಚುನಾವಣೆಯಲ್ಲಿ ನಿರ್ಣಾಯಕವಾಗಿದೆ. ಇಂದು ಕರಾವಳಿಯಲ್ಲಿ ಸಂಘಪರಿವಾರಕ್ಕಾಗಿ ನೂರಾರು ಬಿಲ್ಲವ ಯುವಕರು ಕ್ರಿಮಿನಲ್‌ಗಳಾಗಿ ಜೈಲು ಸೇರಿದ್ದಾರೆ. ಬಿಲ್ಲವರನ್ನೇ ಬಳಸಿ ಬಿಲ್ಲವ ಸಮುದಾಯದಿಂದ ನಾಯಕರು ಮೂಡಿ ಬರದಂತೆ ನೋಡಿಕೊಳ್ಳುವಲ್ಲಿ ಬಿಜೆಪಿ ಬಹುತೇಕ ಯಶಸ್ವಿಯಾಗಿದೆ. ಕಾಂಗ್ರೆಸ್ ಜನಾರ್ದನ ಪೂಜಾರಿಯನ್ನು ರಾಷ್ಟ್ರಮಟ್ಟದ ನಾಯಕನಾಗಿ ರೂಪಿಸಿತು. ಬಿಜೆಪಿ ಅವರನ್ನೂ ಮೂಲೆ ಸೇರುವಂತೆ ಮಾಡಿತು.

ಇಂದು ಚುನಾವಣೆಯಲ್ಲಿ ಬಿಲ್ಲವರು ರಾಜಕೀಯ ಶಕ್ತಿಯಾಗಿ ಕಾಣಿಸಿಕೊಳ್ಳುತ್ತಾರಾದರೂ, ರಾಷ್ಟ್ರ, ರಾಜ್ಯಮಟ್ಟದಲ್ಲಿ ಬಿಲ್ಲವರನ್ನು ಪ್ರತಿನಿಧಿಸುವ ಒಬ್ಬರೇ ಒಬ್ಬ ವರ್ಚಸ್ಸುಳ್ಳ ನಾಯಕರಿಲ್ಲ. ಕಾಂಗ್ರೆಸ್ ಈ ನಿಟ್ಟಿನಲ್ಲಿ ಮತ್ತೆ ಬಿಲ್ಲವ ಸಮುದಾಯದ ನಾಯಕರನ್ನೇ ಮಂಗಳೂರು ಲೋಕಸಭೆಗೆ ಇಳಿಸುವ ಸಾಧ್ಯತೆಗಳು ಕಾಣುತ್ತಿವೆ. ವಿನಯಕುಮಾರ್ ಸೊರಕೆ ಬಿಲ್ಲವರಾದರೂ, ಬಿಜೆಪಿಯ ಕುರಿತಂತೆ ಅವರಿಗಿರುವ ಮೃದು ನಿಲುವು, ಅವರ ವಿರುದ್ಧ ಮುಸ್ಲಿಮ್ ಸಮುದಾಯಕ್ಕಿರುವ ಆಕ್ರೋಶ ಅವರನ್ನು ಅಭ್ಯರ್ಥಿಯಾಗದಂತೆ ತಡೆದಿದೆ. ಸೊರಕೆ ಕರಾವಳಿಯ ಪಾಲಿಗೆ ಸವಕಲು ನಾಣ್ಯವಾಗಿದ್ದಾರೆ. ಇದೀಗ ರಾಷ್ಟ್ರಮಟ್ಟದ ವರ್ಚಸ್ಸಿರುವ ಬಿಲ್ಲವ ಸಮುದಾಯವನ್ನು ಪ್ರತಿನಿಧಿಸುವ ಬಿ.ಕೆ ಹರಿಪ್ರಸಾದ್ ಅವರ ಹೆಸರು ಹೆಚ್ಚು ಚಲಾವಣೆಯಲ್ಲಿದೆ.

ಇವರ ಹೊರತಾದ ಬೇರೆ ಆಯ್ಕೆ ಕಾಂಗ್ರೆಸ್‌ಗೆ ಇಲ್ಲ ಎನ್ನುವುದು ಸದ್ಯದ ವಾತಾವರಣದಲ್ಲಿ ಎದ್ದು ಕಾಣುತ್ತಿದೆ. ರಾಜಕೀಯ ಪ್ರಬುದ್ಧತೆಯ ಕೊರತೆಯಿರುವ ನಳಿನ್‌ಕುಮಾರ್ ಕಟೀಲ್ ಜನರಿಗೆ ಈಗಾಗಲೇ ಅಪ್ರಸ್ತುತರಾಗಿದ್ದಾರೆ. ಮೋದಿ ಮತ್ತು ಹಿಂದುತ್ವ ಈ ಎರಡು ಪದಗಳಷ್ಟೇ ಕಟೀಲ್ ಅವರನ್ನು ಗೆಲ್ಲಿಸಬೇಕು. ಉಳಿದಂತೆ ತುಮಕೂರನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದು ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರನ್ನು ಕೆರಳಿಸಿದೆ. ಮೈತ್ರಿಯಾದರೆ ಸಾಕಾಗದು. ಚುನಾವಣೆಯ ಸಂದರ್ಭದಲ್ಲಿ ಕಾರ್ಯಕರ್ತರೂ, ಸ್ಥಳೀಯ ನಾಯಕರೂ ಆ ಮೈತ್ರಿಯನ್ನು ಗೌರವಿಸಿ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸಿದರೆ ಮಾತ್ರ ಬಿಜೆಪಿಯನ್ನು ಪರಿಣಾಮಕಾರಿಯಾಗಿ ಎದುರಿಸಿ ಗೆಲ್ಲಲು ಸಾಧ್ಯ. ಈ ಎಚ್ಚರಿಕೆ ಮೈತ್ರಿ ಕೂಟದ ಉಭಯ ನಾಯಕರಿಗೂ ಇರಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News