ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್

Update: 2019-03-16 03:46 GMT

ಹೊಸದಿಲ್ಲಿ, ಮಾ.16: ಸಾರ್ವತ್ರಿಕ ಚುನಾವಣೆಯ ಪ್ರಕ್ರಿಯೆ ಕೊನೆಗೊಂಡ ಬೆನ್ನಲ್ಲೇ ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಯನ್ನೂ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಬಹುತೇಕ ಜೂನ್ ಮೊದಲ ವಾರದಿಂದಲೇ ಏಳು ಹಂತಗಳಲ್ಲಿ ಚುನಾವಣೆಗಳು ನಡೆಯಲಿವೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ರಾಜ್ಯದ ಆಡಳಿತ ಯಂತ್ರ ಮತ್ತು ಗೃಹ ಸಚಿವಾಲಯ ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಅನುಗುಣವಾಗಿ, ಪವಿತ್ರ ರಮಝಾನ್ ಉಪವಾಸ ಮುಗಿದ ಬಳಿಕ ಮತ್ತು ಅಮರನಾಥ ಯಾತ್ರೆ ಆರಂಭಕ್ಕೆ ಮುನ್ನ ಚುನಾವಣೆ ನಡೆಸಲು ಆಯೋಗ ಸಜ್ಜಾಗುತ್ತಿದೆ. ಸದ್ಯ ಜಾರಿಯಲ್ಲಿರುವ ರಾಷ್ಟ್ರಪತಿ ಆಳ್ವಿಕೆ ಅವಧಿ ಜುಲೈನಲ್ಲಿ ಕೊನೆಗೊಳ್ಳಲಿದ್ದು, ಅದಕ್ಕೂ ಮುನ್ನ ಚುನಾವಣಾ ಪ್ರಕ್ರಿಯೆ ಮುಗಿಯಲಿದೆ ಎಂದು ಹೇಳಲಾಗಿದೆ. ರಾಜ್ಯದಲ್ಲಿ ಜನಪ್ರತಿನಿಧಿಗಳ ಸರ್ಕಾರದ ಅವಕಾಶವನ್ನು ನಿರಾಕರಿಸಲಾಗಿದೆ ಎಂಬ ಟೀಕೆಗಳಿಗೆ ಈ ಚುನಾವಣೆ ಉತ್ತರವಾಗಲಿದೆ.

ಜಮ್ಮು ಕಾಶ್ಮೀರದಲ್ಲಿ ಭದ್ರತಾ ವ್ಯವಸ್ಥೆ ಚಂಚಲವಾಗಿರುವ ಹಿನ್ನೆಲೆಯಲ್ಲಿ, ಏಳು ಹಂತಗಳಲ್ಲಿ ಚುನಾವಣೆ ನಡೆಸುವಂತೆ ಸಲಹೆ ಮಾಡಲಾಗಿದೆ. ಈ ರಾಜ್ಯದಲ್ಲಿ ಲೋಕಸಭಾ ಚುನಾವಣೆ ಐದು ಹಂತಗಳಲ್ಲಿ ನಡೆಯುತ್ತಿದೆ. ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ ಉದ್ವಿಗ್ನ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಲೋಕಸಭಾ ಅಭ್ಯರ್ಥಿಗಳಿಗೆ ಮತ್ತು ವಿಧಾನಸಭಾ ಅಭ್ಯರ್ಥಿಗಳಿಗೆ ಭದ್ರತೆ ಒದಗಿಸುವುದು ಅಸಾಧ್ಯ ಎಂಬ ಕಾರಣಕ್ಕೆ ವಿಧಾನಸಭಾ ಚುನಾವಣೆಯನ್ನು ಲೋಕಸಭಾ ಚುನಾವಣೆ ವೇಳೆಯೇ ನಡೆಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಅಂದಾಜು 1,000 ಮಂದಿ ಸ್ಪರ್ಧಿಸುವ ನಿರೀಕ್ಷೆ ಇದೆ. ಉದ್ವಿಗ್ನ ಸ್ಥಿತಿ ಹಿನ್ನೆಲೆಯಲ್ಲಿ ಇಷ್ಟು ಮಂದಿಗೆ ಭದ್ರತೆ ಒದಗಿಸುವುದು ಕಷ್ಟಸಾಧ್ಯ ಎಂದು ಗೃಹ ಸಚಿವಾಲಯ ಅಭಿಪ್ರಾಯಪಟ್ಟಿತ್ತು. ಲೋಕಸಭಾ ಚುನಾವಣೆಯ ಕರ್ತವ್ಯಕ್ಕೇ 70 ಸಾವಿರ ಮಂದಿ ಅರೆ ಸೇನಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ರಮಝಾನ್ ಮಾಸ ಬಹುಶ: ಮೇ 5ರಿಂದ ಜೂನ್ 4ರವರೆಗೆ ಇದ್ದು, ಜುಲೈ 1ರಿಂದ ಅಮರನಾಥ ಯಾತ್ರೆ ಆರಂಭವಾಗುತ್ತಿದೆ. ಅದಕ್ಕೂ ಮುನ್ನ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಆಯೋಗ ಸಜ್ಜಾಗುತ್ತಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News