ಮುಂಬೈ ರೈಲ್ವೇ ಸೇತುವೆ ಕುಸಿತ: ತಂದೆಯನ್ನು ರಕ್ಷಿಸಿ ಪ್ರಾಣತ್ಯಾಗ ಮಾಡಿದ ಪುತ್ರ

Update: 2019-03-16 06:17 GMT

ಮುಂಬೈ, ಮಾ.16: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ರೈಲ್ವೇಸ್ ಸ್ಟೇಶನ್‌ನ ಹಿಮಾಚಲ ಸೇತುವೆ ಗುರುವಾರ ಸಂಜೆ ಕುಸಿದುಬಿದ್ದು ಆರು ಮಂದಿ ಸಾವನ್ನಪ್ಪಿದ್ದು, ಕನಿಷ್ಠ 31 ಮಂದಿ ಗಾಯಗೊಂಡಿದ್ದರು. ಈ ವೇಳೆ ಯುವಕನೊಬ್ಬ ತನ್ನ ತಂದೆಯನ್ನು ರಕ್ಷಿಸಿ ತಾನು ಸೇತುವೆ ಅಡಿ ಬಿದ್ದು ಪ್ರಾಣ ತ್ಯಾಗ ಮಾಡಿರುವ ಘಟನೆ ನಡೆದಿದೆ.

 ಝಹೀದ್ ಖಾನ್ ಎಂಬಾತ ರೈಲ್ವೇ ಸೇತುವೆ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಕಾಲು ಸೇತುವೆಯ ಸಿಮೆಂಟ್ ಸ್ಲಾಬ್ ಕುಸಿಯಲಾರಂಭಿಸಿತು. ತಕ್ಷಣವೇ ಎಚ್ಚೆತ್ತ ಆತ ತನ್ನ ಹಿಂದೆ ನಡೆದುಕೊಂಡು ಬರುತ್ತಿದ್ದ 60ರ ವಯಸ್ಸಿನ ತನ್ನ ತಂದೆ ಸಿರಾಜ್‌ರನ್ನು ಹಿಂದಕ್ಕೆ ತಳ್ಳಿದರು. ಪರಿಣಾಮ ಝಹೀದ್ ಕಾಲು ಸೇತುವೆಯ ಅಡಿ ಬಿದ್ದರು. ತಂದೆ ತನ್ನ ಎದುರೇ ಮಗ ಸೇತುವೆ ಅಡಿ ಸಮಾಧಿಯಾಗಿದ್ದನ್ನು ಕಂಡು ಮರುಗಿದರು.

ಘಟನೆಯಲ್ಲಿ ಸಾವನ್ನಪ್ಪಿರುವ 32ರ ಹರೆಯದ ಝಹೀದ್ ಘಾಟ್‌ಕೋಪರ್‌ನ ಮೈತ್ರಿ ಅಪಾರ್ಟ್ ಮೆಂಟ್‌ನಲ್ಲಿ ವಾಸವಾಗಿದ್ದರು.

  ‘‘ಝಹೀದ್  ತನ್ನ ತಂದೆಯನ್ನು ಹಿಂದಕ್ಕೆ ತಳ್ಳದೇ ಇರುತ್ತಿದ್ದರೆ ಅವರು ಕೂಡ ಬ್ರಿಡ್ಜ್ ಅಡಿ ಬಿದ್ದ್ದು ಸಾವನ್ನಪ್ಪುತ್ತಿದ್ದರು. ಸಿರಾಜ್‌ಗಿಂತ ಸ್ವಲ್ಪ ಮುಂದೆ ಬ್ರಿಡ್ಜ್ ಕುಸಿದ ಕಾರಣ ಪ್ರಾಣಾಯಪಾಯದಿಂದ ಪಾರಾಗಿದ್ದಾರೆ’’ ಎಂದು ನೆರೆ ಮನೆಯ ಮಕ್ಸೂದ್ ಖಾನ್ ಹೇಳಿದ್ದಾರೆ.

 ಘಟನೆಯಲ್ಲಿ ಸಿರಾಜ್  ಬೆನ್ನು, ಎದೆಗೆ ಗಾಯವಾಗಿದ್ದು, ಸೈಂಟ್ ಜಾರ್ಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈಗ ಅವರಿಗೆ ಸರಿಯಾಗಿ ನಿಲ್ಲಲು ಆಗುತ್ತಿಲ್ಲ.

ತಂದೆಗಾಗಿ ಪ್ರಾಣ ತ್ಯಾಗ ಮಾಡಿದ ಝಹೀದ್ ಅಂತ್ಯಸಂಸ್ಕಾರದಲ್ಲಿ 300ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News