ಪ್ರಯಾಗ್‌ರಾಜ್ ಬಿಜೆಪಿ ಸಂಸದ ಶ್ಯಾಮ್ ಗುಪ್ತಾ ರಾಜೀನಾಮೆ, ಎಸ್ಪಿಗೆ ಸೇರ್ಪಡೆ

Update: 2019-03-16 08:57 GMT

ಹೊಸದಿಲ್ಲಿ, ಮಾ.16: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಪಕ್ಷಾಂತರ ಪರ್ವ ಜೋರಾಗಿಯೇ ನಡೆಯುತ್ತಿದೆ. ಉತ್ತರಪ್ರದೇಶದ ಪ್ರಯಾಗ್‌ರಾಜ್(ಅಲಹಾಬಾದ್)ಸಂಸದ ಶ್ಯಾಮ್ ಚರಣ್ ಗುಪ್ತಾ ಶನಿವಾರ ಬಿಜೆಪಿಗೆ ರಾಜೀನಾಮೆ ನೀಡಿದ್ದು, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಸೇರಿಕೊಂಡರು. ಮುಂಬರುವ ಚುನಾವಣೆಯಲ್ಲಿ ಬಾಂಡಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.

ಮಾಜಿ ಸಮಾಜವಾದಿ ನಾಯಕರಾಗಿರುವ ಗುಪ್ತಾ 1999ರಲ್ಲಿ ಸಮಾಜವಾದಿ ಪಕ್ಷದ ಟಿಕೆಟ್‌ನಲ್ಲಿ ಬಾಂಡಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಆದರೆ, ಮಾಯಾವತಿಯ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಎದುರು ಸೋತಿದ್ದರು. 2004ರಲ್ಲಿ ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಿ ಜಯ ಸಾಧಿಸಿದ್ದರು.

ಗುಪ್ತಾ 2009ರಲ್ಲಿ ಫುಲ್ಪುರ ಕ್ಷೇತ್ರದಿಂದ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದು, ಆಗ ಸೋಲುಂಡಿದ್ದರು. ಪೂರ್ವ ಉತ್ತರಪ್ರದೇಶದ ಪ್ರಬಲ ಬನಿಯಾ ಸಮುದಾಯದ ಮುಖಂಡ ಗುಪ್ತಾ 2014ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅಲಹಾಬಾದ್‌ನಿಂದ(ಈಗಿನ ಪ್ರಯಾಗ್‌ರಾಜ್)ಸ್ಪರ್ಧಿಸಿ ಜಯ ಸಾಧಿಸಿದ್ದರು.

ಬಿಜೆಪಿ ಉತ್ತರಪ್ರದೇಶದಲ್ಲಿ  ತನ್ನ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸುವ ಮೊದಲೇ ಗುಪ್ತಾ ಪಕ್ಷಾಂತರ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News