ದೋಹಾ ವಿಶ್ವಕಪ್‌ಗೆ ದೀಪಾ ಅಲಭ್ಯ

Update: 2019-03-16 18:23 GMT

ಬಾಕು (ಅಝರ್‌ಬೈಜಾನ್), ಮಾ.16: ಭಾರತದ ಪ್ರಮುಖ ಜಿಮ್ನಾಸ್ಟಿಕ್ ತಾರೆ ದೀಪಾ ಕರ್ಮಾಕರ್‌ರ 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ವಿಶ್ವಾಸಕ್ಕೆ ಧಕ್ಕೆ ಬಂದೊದಗಿದೆ. ಇಲ್ಲಿ ನಡೆಯುತ್ತಿರುವ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ ವಿಶ್ವಕಪ್‌ನ ವಾಲ್ಟ್ ವಿಭಾಗದ ಫೈನಲ್‌ನಲ್ಲಿ ಅವರ ಮಂಡಿನೋವು ಉಲ್ಭಣವಾಗಿದ್ದು, ಮುಂದಿನ ವಾರ ನಡೆಯಲಿರುವ ದೋಹಾ ವಿಶ್ವಕಪ್‌ನಿಂದ ಅವರನ್ನು ಹೊರಗುಳಿಯುವಂತೆ ಮಾಡಿದೆ. ತ್ರಿಪುರಾದ 25 ವರ್ಷದ ದೀಪಾ ಭಾರೀ ಕಠಿಣವಾದ 540 ವಾಲ್ಟ್ ವಿಭಾಗದ ಅರ್ಹತಾ ಸುತ್ತಿನಲ್ಲಿ 14.299 ಸರಾಸರಿ ಅಂಕ ಗಳಿಸಿ ಮೂರನೇ ಸ್ಥಾನದೊಂದಿಗೆ ಫೈನಲ್‌ಗೆ ಕಾಲಿಟ್ಟಿದ್ದರು. ಆದರೆ ಪ್ರಥಮ ವಾಲ್ಟ್ ಫೈನಲ್‌ನಲ್ಲಿ ಕಣಕ್ಕಿಳಿಯುವ ವೇಳೆ ಮಂಡಿನೋವು ತೀವ್ರಗೊಂಡ ಕಾರಣ ಹತಾಶೆಗೊಳಗಾದರು. ‘‘ಈ ದಿನದ ಫೈನಲ್‌ಗೂ ಮುನ್ನ ದೀಪಾ ಮಂಡಿನೋವಿನ ಸಮಸ್ಯೆಯಿಂದ ಬಳಲಿದ್ದರು. ನಿನ್ನೆ ಫಿಸಿಯೊ ಅವರ ಪರಿಶೀಲನೆ ಬಳಿಕ ಅಲ್ಪ ಚೇತರಿಸಿಕೊಂಡಿದ್ದರು. ಇಂದಿನ ವಾಲ್ಟ್ ಫೈನಲ್‌ನಲ್ಲಿ ಅವರು ಸ್ಪರ್ಧಿಸಿದರೂ ಪ್ರಥಮ ವಾಲ್ಟ್‌ನಲ್ಲಿ ನೋವು ಉಲ್ಭಣಿಸಿತು’’ಎಂದು ಭಾರತ ಜಿಮ್ನಾಸ್ಟಿಕ್ ಒಕ್ಕೂಟದ ಉಪಾಧ್ಯಕ್ಷ ರಿಯಾಝ್ ಭಾಟಿ ಪಿಟಿಐಗೆ ಮಾಹಿತಿ ನೀಡಿದರು.

‘‘ನೋವಿನ ಕಾರಣ ಎರಡನೇ ವಾಲ್ಟ್‌ನಲ್ಲಿ ಅವರು ಅಂಗಣಕ್ಕಿಳಿಯಲಿಲ್ಲ. ಇದರೊಂದಿಗೆ ಬಾಕು ವಿಶ್ವಕಪ್‌ನಲ್ಲಿ ಅವರ ಅಭಿಯಾನ ಕೊನೆಗೊಂಡಿದೆ. ದೋಹಾ ವಿಶ್ವಕಪ್‌ಗೂ ಅವರು ಅಲಭ್ಯರಾಗುವರು. ಚಿಕಿತ್ಸೆ ಪಡೆದ ಬಳಿಕ ಏಶ್ಯನ್ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುವ ಗುರಿ ಇದೆ’’ ಎಂದು ರಿಯಾಝ್ ಹೇಳಿದರು.

ಏಶ್ಯನ್ ಚಾಂಪಿಯನ್‌ಶಿಪ್ ಜೂ.13-16ರವರೆಗೆ ಮಂಗೋಲಿಯದಲ್ಲಿ ನಡೆಯಲಿದ್ದರೆ ವಿಶ್ವ ಚಾಂಪಿಯನ್‌ಶಿಪ್ ಟೂರ್ನಿಯು ಅಕ್ಟೋಬರ್ 4ರಿಂದ 13ರವರೆಗೆ ಜರ್ಮನಿಯಲ್ಲಿ ನಡೆಯಲಿದೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಒಲಿಂಪಿಕ್ಸ್‌ಗೆ ದೀಪಾ ಅರ್ಹತೆ ಗಳಿಸಲಿದ್ದಾರೆ ಎಂದು ರಿಯಾಝ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News