ಪರಿಕ್ಕರ್ ದೇಹಸ್ಥಿತಿ ಮತ್ತಷ್ಟು ಉಲ್ಬಣ: ಹೊಸ ಸಿಎಂ ಹುಡುಕಾಟದಲ್ಲಿ ಬಿಜೆಪಿ

Update: 2019-03-17 04:04 GMT

ಪಣಜಿ, ಮಾ. 17: ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ರಾಜ್ಯದಲ್ಲಿ ಸರ್ಕಾರ ರಚನೆಗೆ ಹಕ್ಕುಪ್ರತಿಪಾದಿಸಿ ಕಾಂಗ್ರೆಸ್ ಪಕ್ಷ ರಾಜ್ಯಪಾಲರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಸರ್ಕಾರ ಉಳಿಸಿಕೊಳ್ಳುವ ಕಾರ್ಯಾಚರಣೆಗೆ ಇಳಿದಿದ್ದು, ಇದೀಗ ಹೊಸ ಮುಖ್ಯಮಂತ್ರಿಯ ಹುಡುಕಾಟದಲ್ಲಿ ತೊಡಗಿದೆ.

ಶನಿವಾರ ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ದಿಢೀರ್ ಸಭೆ ನಡೆದಿದ್ದು, ಶಾಸಕರಲ್ಲೇ ಒಬ್ಬರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಬೇಕು ಎಂದು ಶಾಸಕರು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಕೇಂದ್ರ ನಾಯಕರು ವೀಕ್ಷಕರನ್ನು ಕಳುಹಿಸಿ, ಶಾಸಕರ ಸಲಹೆ ಪಡೆದು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಅಂತಿಮಪಡಿಸಲು ಮುಂದಾಗಿದ್ದಾರೆ. ವೀಕ್ಷಕರು ಮೈತ್ರಿ ಸರ್ಕಾರದ ಪಾಲುದಾರ ಪಕ್ಷಗಳಾದ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ, ಗೋವಾ ಫಾರ್ವರ್ಡ್ ಪಾರ್ಟಿ ಹಾಗೂ ಮೂವರು ಪಕ್ಷೇತರ ಶಾಸಕರ ಜತೆ ಕೂಡಾ ಚರ್ಚಿಸಲಿದ್ದಾರೆ.

ಈ ಮಧ್ಯೆ ಗೋವಾ ಫಾರ್ವರ್ಡ್ ಪಕ್ಷದ ಮೂವರು ಶಾಸಕರು ಹಾಗು ಮೂವರು ಪಕ್ಷೇತರ ಶಾಸಕರು ಪರಿಕ್ಕರ್ ಅವರ ಖಾಸಗಿ ನಿವಾಸಕ್ಕೆ ತೆರಳಿ ನಿಷ್ಠೆ ವ್ಯಕ್ತಪಡಿಸಿದ್ದಾರೆ. ಪರಿಕ್ಕರ್ ಆರೋಗ್ಯ ಸ್ಥಿತಿ ಹದಗೆಟ್ಟರೂ, ಅವರ ನಾಯಕತ್ವದಲ್ಲಿ ವಿಶ್ವಾಸವಿದೆ ಎಂದು ನಗರ ಯೋಜನಾ ಸಚಿವ ವಿಜಯ್ ಸರ್‌ದೇಸಾಯಿ ನೇತೃತ್ವದ ಆರು ಶಾಸಕರ ತಂಡ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News