ಉ.ಪ್ರ.ದಲ್ಲಿ 7 ಸ್ಥಾನಗಳನ್ನು ಎಸ್‌ಪಿ, ಬಿಎಸ್‌ಪಿಗೆ ಬಿಟ್ಟುಕೊಟ್ಟ ಕಾಂಗ್ರೆಸ್

Update: 2019-03-17 15:33 GMT

ಲಕ್ನೋ, ಮಾ. 17: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಒಟ್ಟು 80 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಸ್ಪರ್ಧಿಸದೇ ಇರಲು ಕಾಂಗ್ರೆಸ್ ರವಿವಾರ ನಿರ್ಧರಿಸಿದೆ. ಆದರೆ, ಈ ಕ್ಷೇತ್ರಗಳನ್ನು ಸಮಾಜವಾದಿ ಪಕ್ಷ-ಬಹುಜನ ಸಮಾಜ ಪಕ್ಷಗಳ ಮೈತ್ರಿಗೆ ಬಿಟ್ಟುಕೊಡಲು ನಿರ್ಣಯಿಸಿದೆ.

‘‘ನಾವು ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಹಾಗೂ ರಾಷ್ಟ್ರೀಯ ಲೋಕದಳಕ್ಕೆ 7 ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದ್ದೇವೆ’’ ಎಂದು ಉತ್ತರಪ್ರದೇಶ ಕಾಂಗ್ರೆಸ್ ವರಿಷ್ಠ ರಾಜ್ ಬಬ್ಬರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಮಣಿಪುರಿ, ಕನೌಜ, ಫಿರೋಜಾಬಾದ್ ಹಾಗೂ ಯಾವೆಲ್ಲಾ ಸ್ಥಾನಗಳು ಇವೆಯೋ ಅವುಗಳನ್ನು ಮಾಯಾವತಿ, ಜಯಂತ್ ಚೌಧುರಿ ಹಾಗೂ ಅಜಿತ್ ಸಿಂಗ್‌ಗೆ ಸ್ಪರ್ಧಿಸಲು ಬಿಟ್ಟುಕೊಟ್ಟಿದ್ದೇವೆ” ಎಂದು ಅವರು ತಿಳಿಸಿದ್ದಾರೆ. ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಮಣಿಪುರದಿಂದ ಹಾಗೂ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಅವರ ಪತ್ನಿ ದಿಂಪಲ್ ಯಾದವ್ ಕನೌಜದಿಂದ ಸ್ಪರ್ಧಿಸುವ ಸಾಧ್ಯತೆ ಇದೆ.

ಎರಡು ಸ್ಥಾನಗಳಾದ ಗೋಂಡಾ ಹಾಗೂ ಪಿಲಿಭಿಟ್ ಅನ್ನು ಅಪ್ನಾ ದಲ್‌ಗೆ ಬಿಟ್ಟು ಕೊಡಲಾಗುವುದು. ಕಾಂಗ್ರೆಸ್ ಹಾಗೂ ಆಪ್ನಾ ದಳದ ಕೃಷ್ಣ ಪಟೇಲ್ ಬಣ ಶನಿವಾರ ಮೈತ್ರಿ ಮಾಡಿಕೊಂಡಿದೆ ಎಂದು ಬಬ್ಬರ್ ಹೇಳಿದ್ದಾರೆ. ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷ ಕಳೆದ ಜನವರಿಯಲ್ಲಿ ಮೈತ್ರಿ ಘೋಷಿಸಿತ್ತು. ಈ ತಿಂಗಳ ಆರಂಭದಲ್ಲಿ ರಾಷ್ಟ್ರೀಯ ಲೋಕ ದಳ ಕೂಡ ಈ ಮೈತ್ರಿಗೆ ಸೇರ್ಪಡೆಯಾಗಿತ್ತು. ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ 37 ಸ್ಥಾನಗಳಲ್ಲಿ, ಬಹುಜನ ಸಮಾಜ ಪಕ್ಷ 38 ಸ್ಥಾನಗಳಲ್ಲಿ ಹಾಗೂ ರಾಷ್ಟ್ರೀಯ ಲೋಕ ದಳ 3 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News