ಅಫ್ಘಾನ್: ತಾಲಿಬಾನ್ ಜೊತೆ ಭೀಕರ ಕಾಳಗ; 50ಕ್ಕೂ ಅಧಿಕ ಅಫ್ಘಾನ್ ಯೋಧರ ಹತ್ಯೆ

Update: 2019-03-17 17:30 GMT

ಕಾಬೂಲ್, ಮಾ.17: ಬಾಲಾ ಮುರ್ಗಬ್ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ತಾಲಿಬಾನ್ ಬಂಡುಕೋರರ ರೊಂದಿಗೆ ಭೀಕರ ಕದನ ನಡೆಸುತ್ತಿರುವ ಸಂದರ್ಭದಲ್ಲಿ 100ಕ್ಕೂ ಅಧಿಕ ಅಪ್ಘಾನ್ ಯೋಧರು ತಮ್ಮ ಗಡಿ ಠಾಣೆಗಳನ್ನು ತೊರೆದು, ನೆರೆಯ ಟರ್ಕ್‌ಮೆನಿಸ್ತಾನಕ್ಕೆ ಲಾಯನಗೈಯಲು ಯತ್ನಿಸಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.

ಪಲಾಯನಗೈದ ಯೋಧರಿಗೆ ಟರ್ಕ್‌ಮೆನಿಸ್ತಾನದ ಗಡಿದಾಟಲು ಅನುಮತಿ ದೊರೆತಿಲ್ಲವಾದ ಕಾರಣ ಅವರ ಭವಿಷ್ಯ ಅತಂತ್ರವಾಗಿದೆಯೆಂದು ಪಶ್ಚಿಮ ಬಾಡ್ಗಿಸ್ ಪ್ರಾಂತದ ಸದಸ್ಯ ಮುಹಮ್ಮದ್ ನಾಸೆರ್ ನಝರಿ ತಿಳಿಸಿದ್ದಾರೆ. ಯುದ್ಧದಲ್ಲಿ 50ಕ್ಕೂ ಅಧಿಕ ಮಂದಿ ಅಫ್ಗಾನ್ ಸೈನಿಕರು ಸಾವನ್ನಪ್ಪಿದ್ದು, 100 ಮಂದಿ ನಾಪತ್ತೆಯಾಗಿದ್ದಾರೆಂದು ಅವರು ಹೇಳಿದ್ದಾರೆ.

ಯುದ್ಧದಲ್ಲಿ ತಾಲಿಬಾನ್ ಬಂಡುಕೋರರು ಹಲವಾರು ಅಫ್ಘಾನ್ ಯೋಧರನ್ನು ಬಂಧಿಸಿದ್ದು, ಅವರ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿರುವುದಾಗಿ ತಿಳಿದುಬಂದಿದೆ. ಬಾಲಾ ಮುರ್ಗಬ್ ಜಿಲ್ಲೆಯಲ್ಲಿ ನಡೆಯುತ್ತಿರುವ ಕದನದಲ್ಲಿ 16 ಮಂದಿ ಅಫ್ಘಾನ್ ಯೋಧರು ಮೃತಪಟ್ಟಿದ್ದು, ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆಂದು ಪ್ರಾಂತೀಯ ಗವರ್ನರ್ ಅವರ ವಕ್ತಾರ ಜಂಶೀದ್ ಶಹಾಬಿ ತಿಳಿಸಿದ್ದಾರೆ. ಬಾಲಾ ಮುರ್ಗಬ್‌ನಲ್ಲಿ ನಡೆಯುತ್ತಿರುವ ಕದನದಲ್ಲಿ ಅಫ್ಘಾನ್ ಪಡೆಗಳು ತಾಲಿಬಾನ್ ಬಂಡುಕೋರರ ವಿರುದ್ಧ ವ್ಯಾಪಕವಾಗಿ ವಾಯುದಾಳಿಗಳನ್ನು ನಡೆಸುತ್ತಿದ್ದ ಹಾಗೂ ಇನ್ನೂ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ಅಲ್ಲಿಗೆ ರವಾನಿಸಿದೆ. ಭಾರೀ ಸಂಖ್ಯೆಯ ಯೋಧರು ಟರ್ಕ್‌ಮೆನಿಸ್ತಾನಕ್ಕೆ ಪರಾರಿಯಾಗಲು ಯತ್ನಿಸಿದ್ದಾರೆಂದು ಶಹಾಬಿ ತಿಳಿಸಿದ್ದರಾದಾರೂ ಅವರ ಸಂಖ್ಯೆಯನ್ನು ಬಹಿರಂಗಪಡಿಸಿಲ್ಲ. ಕಾಳಗದಲ್ಲಿ 40ಕ್ಕೂ ಅಧಿಕ ಮಂದಿ ತಾಲಿಬಾನ್ ಬಂಡುಕೋರರು ಮೃತ ಪಟ್ಟಿದ್ದಾರೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News