ಜನಾಂಗವಾದವೆಂಬ ರೋಗಕ್ಕೆ ಮಾನವವಾದದ ಔಷಧ

Update: 2019-03-18 05:12 GMT

ರೋಗಗಳಿಗೆ ಗಡಿಗಳಿರುವುದಿಲ್ಲ. ನಿಜವಾಗಿ ಗಡಿಗಳೇ ರೋಗಗಳು. ಮಾನವರು ತಮ್ಮದೆಂದು ನಂಬುವ ನಾಡುಗಳ, ತಮ್ಮದೆನ್ನುವ ಹಿತಾಸಕ್ತಿಗಳ ಮತ್ತು ತಮ್ಮ ಬುದ್ಧ್ದಿ, ಮನಸ್ಸು ಭಾವನೆ ಹಾಗೂ ವಿವೇಕಗಳ ಸುತ್ತ ಕಟ್ಟಿ ಬೆಳೆಸುವ ನಾನು, ನನ್ನವರು ಮತ್ತು ಅನ್ಯರು ಅಥವಾ ನಾವು, ನಮ್ಮವರು ಮತ್ತು ಅನ್ಯರು ಎಂದು ಪ್ರತ್ಯೇಕಿಸುವ ಗೋಡೆಗಳು ಇತಿಹಾಸದುದ್ದಕ್ಕೂ ಹಲವು ವಿನಾಶಗಳಿಗೆ ಕಾರಣವಾಗುತ್ತಾ ಬಂದಿವೆ. ಈ ಗಡಿಗಳು, ಗೋಡೆಗಳು ಮತ್ತು ಮಾನಸಿಕ ಬೇಲಿಗಳು ಅಥವಾ ತೆರೆಗಳು ಸತ್ಯ - ಅಸತ್ಯ, ನ್ಯಾಯ-ಅನ್ಯಾಯಗಳ, ಮಾತ್ರವಲ್ಲ, ಮಾನವೀಯತೆಯ ಮೂಲ ಪ್ರಜ್ಞೆಯನ್ನೇ ಅಳಿಸಿಬಿಡುತ್ತವೆ.

ಮೊನ್ನೆ ಶುಕ್ರವಾರ ನ್ಯೂಝಿಲ್ಯಾಂಡ್‌ನ ಎರಡು ಮಸೀದಿಗಳಿಗೆ ನುಗ್ಗಿ ಹತ್ತಾರು ಮಂದಿಯನ್ನು ಕೊಂದ ಆಸ್ಟ್ರೇಲಿಯಾದ ಯುವಕ, ಬೇಲಿಗಳಿಗೆ ಸಂಬಂಧಿಸಿದ ಈ ಪ್ರಾಚೀನ ಸತ್ಯವನ್ನಷ್ಟೇ ನಮಗೆ ಮತ್ತು ನಮ್ಮ ಗಡಿ - ಗೋಡೆ ಪ್ರಧಾನವಾದ ಮಾನವ ಸಮಾಜಕ್ಕೆ ನೆನಪಿಸಿದ್ದಾನೆ. ದೊಡ್ಡ ಪ್ರಮಾಣದ ದುರಂತಗಳು ನಡೆದಾಗ ಅವುಗಳ ಕುರಿತು ಪ್ರಕಟವಾಗುವ ಪ್ರತಿಕ್ರಿಯೆ ಮತ್ತು ವಿಶ್ಲೇಷಣೆಗಳೂ ಆ ದುರಂತಗಳಷ್ಟೇ ಮುಖ್ಯವಾಗಿರುತ್ತವೆ. ಒಂದು ದುರಂತವನ್ನು ಸಂವೇದನಾಶೀಲವಾಗಿ, ವಿಮರ್ಶಾತ್ಮಕವಾಗಿ, ವಿಶಾಲ ಮಾನವೀಯ ಹಿನ್ನೆಲೆಯಲ್ಲಿ ನೋಡಿ ವಿಶ್ಲೇಷಿಸಿದಾಗ ಉದ್ವಿಗ್ನ ಸಮಾಜಕ್ಕೆ ಸಾಂತ್ವನ ಸಿಗುತ್ತದೆ. ಅಂತಹ ದುರಂತಗಳು ಏಕೆ ಸಂಭವಿಸುತ್ತವೆ ಎಂಬ ಜಟಿಲ ಪ್ರಶ್ನೆಗೆ ಸೂಕ್ತ ಉತ್ತರಗಳು ಸಿಗುತ್ತವೆ, ಅಂತಹ ದುರಂತಗಳ ಸಾಧ್ಯತೆಯನ್ನೇ ಇಲ್ಲವಾಗಿಸಬೇಕೆಂಬ ಬದ್ಧತೆ ಸಾಮೂಹಿಕ ಸ್ತರದಲ್ಲಿ ಬೆಳೆಯುತ್ತದೆ ಮತ್ತು ಅಂತಹ ದುರಂತಗಳಿಗೆ ಅವಕಾಶವೇ ಇಲ್ಲದ ಮನಸ್ಸುಗಳನ್ನು ಹಾಗೂ ಸಮಾಜವನ್ನು ಕಟ್ಟಿ ಬೆಳೆಸುವ ದಾರಿಗಳು ಕೂಡಾ ತೆರೆದುಕೊಳ್ಳುತ್ತವೆ. ಅದೇ ವೇಳೆ, ತಪ್ಪಾದ ಪ್ರತಿಕ್ರಿಯೆಗಳು ಮತ್ತು ತಪ್ಪಾದ ವಿಶ್ಲೇಷಣೆಗಳು ಆತಂಕ ಮತ್ತು ಉದ್ವಿಗ್ನತೆಗಳನ್ನು ಬೆಳೆಸುತ್ತವೆ. ದುರಂತವನ್ನು ಸಾಹಸವಾಗಿಸಿಬಿಡುತ್ತವೆ. ಮತ್ತಷ್ಟು ದೊಡ್ಡ ದುರಂತಗಳಿಗೆ ದಾರಿ ತೆರೆಯುವ ವಾತಾವರಣ ನಿರ್ಮಾಣವಾಗುತ್ತದೆ.

ನ್ಯೂಝಿಲ್ಯಾಂಡ್ ದುರಂತದ ಬೆನ್ನಿಗೆ ಈ ಎರಡೂ ಬಗೆಯ ಪ್ರತಿಕ್ರಿಯೆಗಳು ಬಂದಿವೆ. ಒಂದು ಕಡೆ ಆ ದೇಶದ ಪ್ರಧಾನಿ ಜಸಿಂದಾ ಆರ್ಡರ್ನ್ ಸಂಪ್ರದಾಯದಂತೆ ಕೇವಲ ಕೆಲವು ಔಪಚಾರಿಕ ಮಾತುಗಳನ್ನಾಡುವ ಬದಲು ಬಹಳ ಭಾವುಕರಾಗಿ ಸ್ಪಂದಿಸಿದ್ದಾರೆ. ದುರಂತದ ಗಾಂಭೀರ್ಯವನ್ನು, ಸಂತ್ರಸ್ತರ ನೋವನ್ನು ಮತ್ತು ಹತ್ಯಾಕಾಂಡದ ಹಿಂದಿನ ಮಾನಸಿಕತೆಯನ್ನು ಅವರು ಸರಿಯಾಗಿ ಗ್ರಹಿಸಿದ್ದಾರೆಂಬುದು ಅವರ ಹೇಳಿಕೆಗಳಿಂದ ಮಾತ್ರವಲ್ಲ, ದುರಂತದ ಬಳಿಕದ ಅವರ ವಿವಿಧ ನಡೆಗಳಿಂದ ಮತ್ತು ಅವರು ಘೋಷಿಸಿರುವ ಶಸ್ತ್ರಾಸ್ತ್ರ ನಿಯಂತ್ರಣವೇ ಮುಂತಾದ ಕ್ರಮಗಳಿಂದ ನಿಚ್ಚಳವಾಗಿದೆ. ದುರಂತದ ದಿನವನ್ನು ದೇಶದ ಇತಿಹಾಸದ ಅತ್ಯಂತ ಕರಾಳ ದಿನವೆಂದು ಕರೆದ ಆಕೆ, ಹತರಾದವರೆಲ್ಲ ನಮ್ಮವರು, ಈ ಹೀನ ಕೃತ್ಯ ನಡೆಸಿದವರು ಖಂಡಿತ ನಮ್ಮವರಲ್ಲ. ಅಂಥವರಿಗೆ ನ್ಯೂಝಿಲ್ಯಾಂಡ್‌ನಲ್ಲಿ ಯಾವ ಜಾಗವೂ ಇಲ್ಲ ಎನ್ನುವ ಮೂಲಕ ಜನಾಂಗವಾದಕ್ಕೆ ಪ್ರಬಲ ಪ್ರಹಾರ ನೀಡಿದರು. ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮೋರಿಸನ್ ಕೂಡ ಬಹಳ ಸ್ಪಷ್ಟ ಶಬ್ದಗಳಲ್ಲಿ ತಮ್ಮ ದೇಶದ ಪ್ರಜೆಯೊಬ್ಬ ನಡೆಸಿದ ಪ್ರಸ್ತುತ ಭಯಾನಕ ಕುಕೃತ್ಯವನ್ನು ಖಂಡಿಸಿದರು. ಇಂಗ್ಲೆಂಡಿನ ಬಕ್ಕಿಂಗ್ ಹ್ಯಾಂ ಅರಮನೆಯಲ್ಲಿ ರಾಷ್ಟ್ರ ಧ್ವಜವನ್ನು ತಗ್ಗಿಸುವ ಮೂಲಕ ಶೋಕ ಪ್ರಕಟಿಸಲಾಯಿತು. ನ್ಯೂಝಿಲ್ಯಾಂಡ್‌ನ ಎಲ್ಲ ಮತ ಧರ್ಮ, ಪಕ್ಷ ಪಂಥಗಳ ಜನರು ಸಾಮೂಹಿಕವಾಗಿ ಶೋಕಾಚರಿಸಿದರು. ಆ ದೇಶದಲ್ಲಿ ಕೇವಲ 1ಶೇ. ಇರುವ ಮುಸ್ಲಿಮರಿಗೆ ಸಾಂತ್ವನ ಹೇಳಿದರು. ಸಾವಿರಾರು ಮಂದಿ, ದುರಂತ ಸಂಭವಿಸಿದ ಸ್ಥಳಕ್ಕೆ ಹೋಗಿ ಹೂ ಗುಚ್ಛಗಳನ್ನಿಟ್ಟು ಮೃತರಿಗೆ ಗೌರವ ಸಲ್ಲಿಸಿದರು. ತಾವು ಯಾರೂ ಜನಾಂಗವಾದವನ್ನು ಬೆಂಬಲಿಸುವುದಿಲ್ಲ ಎಂಬುದನ್ನು ವಿವಿಧ ಸಾಂಕೇತಿಕ ವಿಧಾನಗಳಿಂದ ಸಾರಿದರು.

ಇನ್ನೊಂದು ಕಡೆ ಈ ದುರಂತದ ಬೆನ್ನಿಗೆ ಕೆಲವರ ಮನೋರೋಗ ಅನಾವರಣಗೊಂಡಿತು. ಹಂತಕ ಯುವಕನ ಅಭಿಮಾನಪಾತ್ರರಾದ, ಮೆಕ್ಸಿಕೋ ಗಡಿಗೋಡೆಗಾಗಿ ತಮ್ಮ ಬದುಕನ್ನು ಮೀಸಲಿಟ್ಟಿರುವ ಮತ್ತು ಈ ಹಿಂದೆ ನಿಯೋ ನಾಝಿಗಳನ್ನು ವೈಭವೀಕರಿಸಿ ಕುಖ್ಯಾತರಾಗಿರುವ ಅಮೆರಿಕಾಧ್ಯಕ್ಷ ಡೊನಾಲ್ಡ್ ಟ್ರಂಪ್ ದುರಂತವನ್ನು ಖಂಡಿಸಿದರಾದರೂ ಅವರು ಬಳಸಿದ ಪದಗಳಲ್ಲಿ ಯಾವುದು ಗಂಭೀರ ಮತ್ತು ಯಾವುದು ವ್ಯಂಗ್ಯ ಎಂಬುದು ಸ್ಪಷ್ಟವಿರಲಿಲ್ಲ. ಪ್ರಸ್ತುತ ಹತ್ಯಾಕಾಂಡವು, ಉಗ್ರ ಬಿಳಿಯ ಜನಾಂಗವಾದವು ಹೆಚ್ಚುತ್ತಿರುವುದನ್ನು ಸೂಚಿಸುತ್ತಿದೆ ಎಂಬ ಸಾರ್ವತ್ರಿಕ ಜನಾಭಿಪ್ರಾಯವನ್ನು ಅವರು ತಳ್ಳಿ ಹಾಕಿದರು. ಟ್ರಂಪ್ ಅವರ ಪ್ರತಿಕ್ರಿಯೆ ನೋಡಿದಾಗ, ಹಂತಕ ಯುವಕ ಟ್ರಂಪ್‌ರ ಅಭಿಮಾನಿಯಾಗಿದ್ದುದು ಆಕಸ್ಮಿಕವಲ್ಲ ಎಂಬುದು ಮಾತ್ರ ಎಲ್ಲರಿಗೂ ಸ್ಪಷ್ಟವಾಗಿ ಬಿಟ್ಟಿತು.

ಫ್ರೇಝರ್ ಆನ್ನಿಂಗ್ ಎಂಬ ಆಸ್ಟ್ರೇಲಿಯಾದ ಒಬ್ಬ ಜನಾಂಗವಾದಿ ಸಂಸದ ‘‘ಮುಸ್ಲಿಂ ಮತಾಂಧರನ್ನು ದೇಶದೊಳಗೆ ಬರಲು ಅನುಮತಿಸುವ ಧೋರಣೆಯೇ ರಕ್ತಪಾತಗಳಿಗೆ ನೈಜ ಕಾರಣ’’ ಎಂದು ಟ್ವೀಟ್ ಮಾಡಿದಾಗ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮೋರಿಸನ್ ಅವರೇ ಖುದ್ದಾಗಿ ... ‘‘ಫ್ರೇಝರ್ ಆ್ಯನ್ನಿಂಗ್‌ರ ಹೇಳಿಕೆ ಜಿಗುಪ್ಸೆ ಹುಟ್ಟಿಸುತ್ತದೆ. ಇಂತಹ ವಿಚಾರಗಳಿಗೆ ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ಮಾತ್ರವಲ್ಲ ಆಸ್ಟ್ರೇಲಿಯಾದಲ್ಲೆಲ್ಲೂ ಅವಕಾಶವಿಲ್ಲ’’ ಎಂದು ಇದನ್ನು ಖಂಡಿಸಿದರು. ಪ್ರತಿಪಕ್ಷ ನಾಯಕ ಬಿಲ್ ಶೊರ್ಟನ್ ‘‘ಆ್ಯನ್ನಿಂಗ್‌ರಿಗೆ ಪ್ರಚಾರದ ದಾಹವಿದೆ. ಅವರು ಅನ್ಯದೇಶಗಳಲ್ಲಿರುವ ಆಸ್ಟ್ರೇಲಿಯನ್ ನಾಗರಿಕರನ್ನು ಅಪಾಯಕ್ಕೆ ಒಡ್ಡ ಬಯಸುತ್ತಾರೆಯೇ? ಈ ಮೂರ್ಖನಿಗೆ ಆಮ್ಲಜನಕ ನಿರಾಕರಿಸಬೇಕೆನ್ನುವುದಕ್ಕೆ ಇದು ಇನ್ನೊಂದು ಕಾರಣ’’ ಎಂದಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಮಾಲ್ಕಮ್ ಟರ್ನ್ ಬುಲ್ ‘‘ನಮ್ಮ ಸಂಸತ್ತಿನಲ್ಲಿ ಆತನ ಉಪಸ್ಥಿತಿ ಸಂಸತ್ತಿಗೊಂದು ಅಪಚಾರವಾಗಿದೆ. ದೇಶದ ಜನರನ್ನು ಪರಸ್ಪರರ ವಿರುದ್ಧ ಎತ್ತಿಕಟ್ಟುವ ಮೂಲಕ ಆತ ಭಯೋತ್ಪಾದಕರ ಅಪೇಕ್ಷೆಯನ್ನೇ ಈಡೇರಿಸುತ್ತಿದ್ದಾರೆ’’ ಎಂದು ಹೇಳಿದ್ದಾರೆ. ಈ ಬಗೆಯ ಪ್ರತಿಕ್ರಿಯೆ ನಿಜವಾಗಿ ಅಲ್ಲಿನ ಸಮಾಜದಲ್ಲಿ ಸದ್ಮೌಲ್ಯಗಳು ಸಾಕಷ್ಟು ಜೀವಂತವಾಗಿವೆ ಮತ್ತು ಆಶಾವಾದಕ್ಕೆ ಧಾರಾಳ ಅವಕಾಶ ಇದೆ ಎಂಬುದಕ್ಕೆ ಪುರಾವೆಯಾಗಿದೆ.

ಈ ದುರಂತವನ್ನು ವಿಶ್ಲೇಷಿಸಲು ಹೊರಡುವ ಯಾರೂ ಆತುರದ ತೀರ್ಮಾನಗಳಿಗೆ ಇಳಿಯಬಾರದು. ನ್ಯೂಝಿಲ್ಯಾಂಡ್ ಒಂದು ಕ್ರೈಸ್ತ ಬಾಹುಳ್ಯದ ದೇಶವೆಂಬ ಕಾರಣಕ್ಕೆ ಅಥವಾ ದುರಂತ ನಡೆದ ಊರಿನ ಹೆಸರು ಕ್ರೈಸ್ಟ್ ಚರ್ಚ್ ಎಂಬ ಕಾರಣಕ್ಕೆ ಈ ದುರಂತವನ್ನು ಯಾರೂ ಕ್ರೈಸ್ತ ಧರ್ಮ ಅಥವಾ ಕ್ರೈಸ್ತ ಸಮುದಾಯದ ಜೊತೆ ಜೋಡಿಸುವ ವಿಕೃತ ಆಲೋಚನೆಗಳಿಗೆ ಮನದ ಮೂಲೆಯಲ್ಲೂ ಜಾಗ ಕೊಡಬಾರದು. ಜನಾಂಗದ್ವೇಷ, ನರಹತ್ಯೆ ಇವೆಲ್ಲ ಶುಕ್ರವಾರ ಹತರಾದ ಮುಸ್ಲಿಮರ ಪಾಲಿಗೆ ಎಷ್ಟು ಅಪಥ್ಯವಾಗಿತ್ತೋ ಕ್ರೈಸ್ತರು ಮತ್ತು ಯಹೂದಿಗಳ ಪಾಲಿಗೂ ಅಷ್ಟೇ ಅಪಥ್ಯವಾಗಿದೆ. ಕ್ರೈಸ್ತ ಅಥವಾ ಯಹೂದಿ ಹೆಸರುಗಳೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುವ ಅಥವಾ ತಾವು ಕ್ರೈಸ್ತರು ಅಥವಾ ಯಹೂದಿಗಳು ಎಂದು ಹೇಳಿಕೊಳ್ಳುವ ಎಲ್ಲರೂ ಆ ಧರ್ಮ ಅಥವಾ ಸಮುದಾಯಗಳ ಪ್ರತಿನಿಧಿಗಳಾಗಿರುವುದಿಲ್ಲ. ಅವರ ಕುಕೃತ್ಯಗಳಿಗೆ ಅವರ ಧರ್ಮ ಅಥವಾ ಸಮುದಾಯ ಹೊಣೆಯಾಗಿರುವುದಿಲ್ಲ. ನಿಜವಾಗಿ ಶುಕ್ರವಾರ ನ್ಯೂಝಿಲ್ಯಾಂಡ್‌ನಲ್ಲಿ ಅಷ್ಟೊಂದು ಮಂದಿಯ ಹತ್ಯೆ ನಡೆಸಿದ ಯುವಕ ಜನಾಂಗವಾದಿ ವಿಚಾರಧಾರೆಯ ಪ್ರಭಾವದಿಂದ ಮಾನಸಿಕ ಹಾಗೂ ಬೌದ್ಧಿಕವಾಗಿ ಕುರುಡಾಗಿದ್ದ, ವಿವೇಕ ಕಳೆದುಕೊಂಡು ಹುಚ್ಚನಾಗಿ ಬಿಟ್ಟಿದ್ದ. ಜನಾಂಗವಾದದ ವಿನಾಶಕಾರಿ ಅಮಲೇ ಹಾಗೆ. ಆ ಅಮಲಿನಲ್ಲಿ ಅವನಿಗೆ, ತಾನು ತನ್ನಂತಹ ಮಾನವರನ್ನು ಕೊಲ್ಲುತ್ತಿದ್ದೇನೆ ಎಂದು ಅನಿಸಿಯೇ ಇರಲಿಲ್ಲ. ಅವನ ಬಂದೂಕಿಗೆ ಬಲಿಯಾದವರೆಲ್ಲರೂ ಅವನ ದೃಷ್ಟಿಯಲ್ಲಿ ಅವನ ಜನಾಂಗದ ಹಿತಾಸಕ್ತಿಗಳಿಗೆ ಹಾನಿ ಮಾಡುತ್ತಿರುವ ಅನ್ಯರು, ಪರಕೀಯರು ಮತ್ತು ಶತ್ರುಗಳಾಗಿದ್ದರು. ಅವನ ಕೃತ್ಯ ಯಾವುದಾದರೂ ಕ್ಷಣಿಕ ಆವೇಶದ ಫಲವೂ ಆಗಿರಲಿಲ್ಲ. ತನ್ನ ದುಸ್ಸಾಹಸಕ್ಕಾಗಿ ಅವನು ಹಲವು ದಿನಗಳ ಭರ್ಜರಿ ತಯಾರಿ ನಡೆಸಿದ್ದ. ಅವನ ದೃಷ್ಟಿಯಲ್ಲಿ ಅವನ ಹೀನ ಕೃತ್ಯ ಒಂದು ಸಾಹಸವಾಗಿತ್ತು ಮತ್ತು ತನ್ನ ಜನಾಂಗಕ್ಕೆ ತಾನು ಸಲ್ಲಿಸುವ ಸೇವೆಯಾಗಿತ್ತು. ಆದ್ದರಿಂದಲೇ ಅವನ ಮನದಲ್ಲಿ ಕಿಂಚಿತ್ತೂ ಪಾಪ ಪ್ರಜ್ಞೆ ಇರಲಿಲ್ಲ. ತನ್ನ ಸಾಹಸವನ್ನು ಚಿತ್ರೀಕರಿಸಿ, ದಾಖಲಿಸಿ ಜಗತ್ತಿಗೆ ಬಿತ್ತರಿಸುವ ಕೆಲಸವನ್ನೂ ಅವನೇ ಮಾಡಿದ್ದ. ಇದನ್ನೆಲ್ಲಾ ನೋಡಿದರೆ ಅವನೂ ನಮ್ಮ ಸಹಾನುಭೂತಿಗೆ ಅರ್ಹನಾಗುತ್ತಾನೆ. ನಾವು ನಿಜವಾಗಿ ಜಿಗುಪ್ಸೆ ಪಡಬೇಕಾದುದು ಒಬ್ಬ ಮಾನವನೊಳಗಿನ ಮಾನವೀಯ ಅಂತಃಕರಣವನ್ನು ಅಷ್ಟೊಂದು ಪರಿಪೂರ್ಣವಾಗಿ ಇಲ್ಲವಾಗಿಸಿ ಬಿಟ್ಟ ಆ ಜನಾಂಗವಾದ ಮತ್ತು ಆ ಅನ್ಯತೆಯ ವಿಚಾರಧಾರೆಯ ವಿರುದ್ಧವೇ ಹೊರತು ಅವನ ವಿರುದ್ಧವಲ್ಲ.

ಪಶ್ಚಿಮದಲ್ಲಿ ಬಿಳಿಯ ಜನಾಂಗವಾದ ಪದೇ ಪದೇ ತನ್ನ ಉಪಸ್ಥಿತಿಯನ್ನು ಸಾರುತ್ತಲೇ ಇದೆ. ಅದರ ಬಲಿಪಶುಗಳು ಕೇವಲ ಮುಸ್ಲಿಮರಲ್ಲ. ಆಫ್ರಿಕಾ, ಮಧ್ಯ ಪ್ರಾಚ್ಯ, ಭಾರತ, ಚೀನಾ ಮುಂತಾದ ಪ್ರದೇಶಗಳಿಂದ ಇತ್ತೀಚಿಗೆ ಅಥವಾ ಒಂದೆರಡು ತಲೆಮಾರುಗಳ ಹಿಂದೆ ಪಶ್ಚಿಮಕ್ಕೆ ವಲಸೆ ಬಂದ ಬಿಳಿಯರಲ್ಲದ ಎಲ್ಲರೂ ಈ ಜನಾಂಗವಾದಿಗಳ ಪಾಲಿಗೆ ‘ಅನ್ಯರು’. ಈ ಅನ್ಯತೆ ಬಿಳಿಯರಲ್ಲದ ಕ್ರೈಸ್ತರಿಗೂ ಅನ್ವಯಿಸುತ್ತದೆ. ಪ್ರಸ್ತುತ ಅನ್ಯರನ್ನು ಮಾನವರೆಂದು ಗುರುತಿಸಲಿಕ್ಕೂ ಜನಾಂಗವಾದಿಗಳು ತಯಾರಿಲ್ಲ. ಈ ಜನಾಂಗವಾದ ಪಶ್ಚಿಮದಲ್ಲಿ ವಿವಿಧ ಮಟ್ಟಗಳಲ್ಲಿ ಸಮಾಜದ ಮೇಲೆ ವ್ಯಾಪಕ ಪ್ರಭಾವ ಬೀರಿದೆ. ನಿತ್ಯ ಜೀವನದಲ್ಲಿ ಅದು ಪೂರ್ವಗ್ರಹ, ತಾತ್ಸಾರ, ಅವಗಣನೆ, ಪಕ್ಷಪಾತ ಮುಂತಾದ ನಾಜೂಕಾದ ರೂಪಗಳಲ್ಲಿ ಪ್ರಕಟವಾದರೆ ಅಪರೂಪಕ್ಕೊಮ್ಮೆ ಈ ರೀತಿ ಹತ್ಯಾಕಾಂಡದ ರೂಪದಲ್ಲಿ ಪ್ರತ್ಯಕ್ಷವಾಗುತ್ತದೆ. ದುರಂತವೇನೆಂದರೆ ಜನಾಂಗವಾದಕ್ಕೆ ಪಶ್ಚಿಮದ ದೇಶಗಳಲ್ಲಿನ ಆಡಳಿತ ಮತ್ತು ಮಾಧ್ಯಮ ರಂಗಗಳಲ್ಲಿ ಪ್ರಬಲ ಪ್ರಾತಿನಿಧ್ಯ ಪ್ರಾಪ್ತವಿರುವುದರಿಂದ ಅಲ್ಲಿ ಸಾಮಾಜಿಕ ಸ್ತರದಲ್ಲಿ ಅದಕ್ಕೆ ಅನಧಿಕೃತ ಮಾನ್ಯತೆಯೂ ಇದೆ.

ಐದು ತಿಂಗಳ ಹಿಂದಷ್ಟೇ ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ರಾಬರ್ಟ್ ಗ್ರೆಗರಿ ಬೋವರ್ಸ್ ಎಂಬೊಬ್ಬ ಬಿಳಿಯ ಜನಾಂಗವಾದಿ, ಸೆನೆಗಾಗ್‌ನಲ್ಲಿ ಪ್ರಾರ್ಥನಾ ನಿರತರಾಗಿದ್ದ 12 ಮಂದಿ ಯಹೂದಿಗಳ ಹತ್ಯೆ ನಡೆಸಿದ್ದ. 2017 ರಲ್ಲಿ ಅಲೆಗ್ಸಾಂಡರ್ ಬಿಸೋನೆಟ್ಟಿ ಎಂಬಾತ ಕೆನಡಾದ ಕ್ಯುಬೆಕ್ ಸಿಟಿ ಮಸೀದಿಯಲ್ಲಿ ಆರು ಮಂದಿ ಮುಸ್ಲಿಮರನ್ನು ವಧಿಸಿದ್ದ. 2015 ರಲ್ಲಿ ಡೈಲಾನ್ ರೂಫ್ ಎಂಬಾತ ಅಮೆರಿಕದ ದಕ್ಷಿಣ ಕ್ಯಾರೊಲಿನಾದ ಒಂದು ಚರ್ಚ್ ನಲ್ಲಿ ಒಂಬತ್ತು ಮಂದಿ ಕರಿಯ ಕ್ರೈಸ್ತರ ಸಾಮೂಹಿಕ ಹತ್ಯೆ ನಡೆಸಿದ್ದ. 2011 ರಲ್ಲಿ ಆ್ಯಂಡರ್ಸ್ ಬೆಹ್ರಿಂಗ್ ಬ್ರೈವಿಕ್ ಎಂಬಾತ ನಾರ್ವೆಯಲ್ಲಿ 77 ಮಂದಿಯ ಸಮೂಹ ಹತ್ಯೆ ನಡೆಸಿದ್ದ. ಹೀಗೆ ಅಮೆರಿಕ, ಕೆನಡಾ ಮತ್ತು ನಾರ್ವೆ ಎಂಬ ಮೂರು ಭಿನ್ನ ದೇಶಗಳಲ್ಲಿ - ಚರ್ಚು, ಮಸೀದಿ ಮತ್ತು ಸೆನೆಗಾಗ್ - ಎಂಬ ಮೂರು ವಿಭಿನ್ನ ಧರ್ಮಗಳ ಪ್ರಾರ್ಥನಾಲಯಗಳು ಸಮನಾಗಿ ಬಲಿಪೀಠಗಳಾಗಿ ಬಿಟ್ಟವು. ಆದರೆ ಕಟುಕರ ಪಾತ್ರ ವಹಿಸಿದವರೆಲ್ಲರೂ ಸಮನಾಗಿ, ದೇಶ, ಧರ್ಮಗಳ ಗಡಿಗಳಿಗೆ ಅತೀತವಾದ ಜನಾಂಗವಾದ ಎಂಬ ಒಂದೇ ವ್ಯಾಧಿಯಿಂದ ನರಳುತ್ತಿದ್ದವರು. ಆದ್ದರಿಂದಲೇ ನಾವು ಈ ರೋಗವನ್ನು ಗುರಿಯಾಗಿಸಬೇಕೇ ಹೊರತು ರೋಗಿಗಳನ್ನಲ್ಲ. ಪಶ್ಚಿಮದ ಹಲವು ರಾಷ್ಟ್ರಗಳಲ್ಲಿ ಅಲ್ಲಿನ ಬೇಹುಗಾರಿಕಾ ವ್ಯವಸ್ಥೆಯ ದಕ್ಷತೆಯಿಂದಾಗಿ ಈ ತರದ ಜನಾಂಗವಾದಿ ರೋಗಿಗಳು ಯೋಜಿಸಿದ್ದ ಹಲವು ವ್ಯಾಪಕ ಹತ್ಯಾಕಾಂಡದ ಯೋಜನೆಗಳನ್ನು ಮುಂದಾಗಿ ಪತ್ತೆ ಹಚ್ಚಿ ವಿಫಲಗೊಳಿಸಲು ಸಾಧ್ಯವಾಗಿದೆ. ಆದರೆ ನಿಜವಾಗಿ ಮಾನವೀಯ ಭ್ರಾತೃತ್ವದ ಸಂದೇಶವನ್ನು ಪರಿಣಾಮಕಾರಿಯಾಗಿ ಪ್ರಚಾರ ಮಾಡಿ ಸಾರ್ಥಕತೆ ಇರುವುದು ಪ್ರೀತಿ ಮತ್ತ್ತು ಬಂಧುತ್ವದಲ್ಲೇ ಹೊರತು ದ್ವೇಷ ಮತ್ತು ಜನಾಂಗವಾದದಲ್ಲಿ ಅಲ್ಲ ಎಂಬುದನ್ನು ಯುವಪೀಳಿಗೆಗೆ ಮನವರಿಕೆ ಮಾಡಿಸುವ ಮೂಲಕ ದ್ವೇಷದ ಎಲ್ಲ ಸಂದೇಶಗಳನ್ನು ವೈಚಾರಿಕವಾಗಿ ಮಣ್ಣು ಮುಕ್ಕಿಸಿ ಬಿಡುವುದೇ ಈ ಸಮಸ್ಯೆಗೆ ಇರುವ ನೈಜ ಪರಿಹಾರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News