ಎರಿಕ್‌ಸನ್‌ಗೆ 462 ಕೋಟಿ ರೂ. ಪಾವತಿಸಿದ ಆರ್‌ಕಾಮ್: ಜೈಲು ಶಿಕ್ಷೆಯಿಂದ ಪಾರಾದ ಅನಿಲ್ ಅಂಬಾನಿ

Update: 2019-03-18 15:06 GMT

ಮುಂಬೈ, ಮಾ. 18: ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಸ್ವೀಡನ್‌ನ ಟೆಲಿಕಾಂ ಉಪಕರಣಗಳ ಉತ್ಪಾದನಾ ಕಂಪೆನಿ ಎರಿಕ್‌ಸನ್‌ಗೆ ಭಾರತೀಯ ಟೆಲಿಕಾಂ ಕಂಪೆನಿ ರಿಲಾಯನ್ಸ್ ಕಮ್ಯೂನಿಕೇಶನ್ 462 ಕೋಟಿ ರೂಪಾಯಿ ಪಾವತಿಸಿದೆ. ಇದರೊಂದಿಗೆ ರಿಲಾಯನ್ಸ್ ಕಮ್ಯೂನಿಕೇಷನ್ ಅಧ್ಯಕ್ಷ ಅನಿಲ್ ಅಂಬಾನಿ ಜೈಲು ಶಿಕ್ಷೆಯಿಂದ ಪಾರಾಗಿದ್ದಾರೆ.

ರಿಲಾಯನ್ಸ್ ಕಮ್ಯೂನಿಕೇಶನ್ 462 ಕೋಟಿ ರೂಪಾಯಿ ಪಾವತಿಸಿರುವುದಾಗಿ ಎರಿಕ್‌ಸನ್‌ನ ವಕ್ತಾರೆ ಹೇಳಿದ್ದಾರೆ.

ರಿಲಾಯನ್ಸ್ ಕಮ್ಯೂನಿಕೇಷನ್ ಒಂದು ಬಾರಿಯ ಪಾವತಿ 550 ಕೋಟಿ ರೂಪಾಯಿ ಹಾಗೂ ಬಡ್ಡಿ 21 ಕೋಟಿ ರೂಪಾಯಿ ಸೇರಿದಂತೆ ಒಟ್ಟು 571 ಕೋಟಿ ರೂಪಾಯಿಯನ್ನು ಎರಿಕ್‌ಸನ್‌ಗೆ ಪಾವತಿಸಬೇಕಾಗಿತ್ತು.

  ಪೂರ್ವ ನಿರ್ವಹಣಾ ಸೇವೆಗಾಗಿ ಸುಮಾರು 550 ಕೋಟಿ ರೂಪಾಯಿ ಪಾವತಿಸುವುದಾಗಿ ಅನಿಲ್ ಅಂಬಾನಿ ಅವರ ರಿಲಾಯನ್ಸ್ ಕಮ್ಯೂನಿಕೇಶನ್ ಎರಿಕ್‌ಸನ್‌ಗೆ ಭರವಸೆ ನೀಡಿತ್ತು. ಆದರೆ, ಭರವಸೆ ಈಡೇರಿಸಲು ವಿಫಲವಾಗಿತ್ತು. ಇದನ್ನು ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ಎಂದು ಪರಿಗಣಿಸಿತ್ತು ಹಾಗೂ ನಾಲ್ಕು ವಾರಗಳ ಒಳಗೆ ಬಾಕಿ ಪಾವತಿಸುವಂತೆ ಆದೇಶಿಸಿತ್ತು. ಈ ಗಡು ಮಾರ್ಚ್ 19ಕ್ಕೆ ಅಂತ್ಯಗೊಳ್ಳಲಿತ್ತು.

 ಮಾರ್ಚ್ 19ರ ಒಳಗಡೆ ಎರಿಕ್‌ಸನ್‌ಗೆ ಬಾಕಿ ಪಾವತಿಸಲು ವಿಫಲವಾಗಿದ್ದಲ್ಲಿ ಅನಿಲ್ ಅಂಬಾನಿ ಅವರು ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗಬಹುದು ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಎಚ್ಚರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News