‘ಬಿಜೆಪಿಯ ಫೈರ್‌ಬ್ರಾಂಡ್’ ಗಿರಿರಾಜ್ ಸಿಂಗ್‌ಗೆ ಟಿಕೆಟ್ ನಿರಾಕರಣೆ !

Update: 2019-03-18 17:28 GMT

ಪಾಟ್ನಾ,ಮಾ.18: ತಾನು ಪ್ರತಿನಿಧಿಸುತ್ತಿದ್ದ ಬಿಹಾರದ ನವಾಡಾ ಲೋಕಸಭಾ ಕ್ಷೇತ್ರವು ಎನ್‌ಡಿಎ ಅಂಗಪಕ್ಷ ಎಲ್‌ಜೆಪಿ ಪಾಲಾಗಿರುವುದು ಫೈರ್‌ಬ್ರಾಂಡ್ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಗಿರಿರಾಜ ಸಿಂಗ್ ಅವರನ್ನು ವಿಷಣ್ಣರಾಗಿಸಿದೆ.

ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್,ಸ್ಥಾನ ಹಂಚಿಕೆಯ ಅನಿವಾರ್ಯತೆ ಇರಬಹುದು. ಆದರೆ ಬಿಹಾರದ ಇತರ ಯಾವುದೇ ಕೇಂದ್ರ ಸಚಿವರು ತಮ್ಮ ಹಾಲಿ ಕ್ಷೇತ್ರವನ್ನು ಬಿಟ್ಟುಕೊಡುವ ಸಾಧ್ಯತೆಗಳಿಲ್ಲ ಎನ್ನುವುದನ್ನು ಒತ್ತಿ ಹೇಳಲು ತಾನು ಬಯಸುತ್ತೇನೆ ಎಂದರು.

ತನ್ನ ಕ್ಷೇತ್ರವನ್ನು ಪೋಷಿಸಲು ತಾನು ಬಹಳಷ್ಟು ಕೆಲಸ ಮಾಡಿದ್ದರೂ ತನಗೆ ನವಾಡಾ ಕ್ಷೇತ್ರವನ್ನು ನಿರಾಕರಿಸಲಾಗಿದೆ ಎಂದರು.

ಎನ್‌ಡಿಎ ರವಿವಾರ ತನ್ನ ಅಭ್ಯರ್ಥಿಗಳ ಪಟ್ಟಿ ಮತ್ತು ತನ್ನ ಮೂರು ಅಂಗಪಕ್ಷಗಳಾದ ಬಿಜೆಪಿ,ಜೆಡಿಯು ಮತ್ತು ಎಲ್‌ಜಿಪಿ ಸ್ಪರ್ಧಿಸುವ ಕ್ಷೇತ್ರಗಳನ್ನು ಪ್ರಕಟಿಸಿತ್ತು. ಅದರಂತೆ ರಾಜ್ಯದ ತಲಾ 17 ಸ್ಥಾನಗಳಲ್ಲಿ ಬಿಜೆಪಿ ಮತ್ತು ಜೆಡಿಯು ಹಾಗೂ ಆರು ಸ್ಥಾನಗಳಲ್ಲಿ ಎಲ್‌ಜೆಪಿ ಸ್ಪರ್ಧಿಸಲಿವೆ.

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಿಂಗ್,ತಾನು ನವಾಡಾ ಕ್ಷೇತ್ರದಿಂದ ಪುನರಾಯ್ಕೆಯನ್ನು ಬಯಸಿರುವುದಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ನಿತ್ಯಾನಂದ ರಾಯ್ ಅವರಿಗೆ ಕನಿಷ್ಠ 200 ಸಲವಾದರೂ ತಿಳಿಸಿದ್ದೆ ಎಂದರು.

ಬೇಗುಸರಾಯ್‌ನಿಂದ ಸ್ಪರ್ಧಿಸುವಂತೆ ಪಕ್ಷವು ತನಗೆ ಸೂಚಿಸಬಹುದು ಎಂಬ ವರದಿಗಳ ಕುರಿತಂತೆ ಅವರು,ತಾನು ಹಿಂದೆ,ಇಂದು ಮತ್ತು ಮುಂದೆಯೂ ಪಕ್ಷದ ಕಾರ್ಯಕರ್ತನಾಗಿದ್ದೇನೆ ಎಂದು ಕಹಿಧ್ವನಿಯಲ್ಲಿ ಉತ್ತರಿಸಿದರು. 2014ರ ಚುನಾವಣೆಯಲ್ಲಿ ಅವರು ಬೇಗುಸರಾಯ್‌ನಿಂದ ಸ್ಪರ್ಧಿಸಲು ಬಯಸಿದ್ದರಾದರೂ ಅವರಿಗೆ ಅಷ್ಟೇನೂ ಸುರಕ್ಷಿತವಲ್ಲದ ನವಾಡಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿತ್ತು ಮತ್ತು ಮೋದಿ ಅಲೆಯಲ್ಲಿ ಅವರು ಗೆದ್ದೂ ಬಂದಿದ್ದರು.

ಆದರೆ ಬೇಗುಸರಾಯ್ ಕ್ಷೇತ್ರದಿಂದ ಈ ಬಾರಿ ಸಿಪಿಐ ಅಭ್ಯರ್ಥಿಯಾಗಿ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯ ಬಗ್ಗೆ ತಾನು ಜಾಗೃತನಾಗಿದ್ದೇನೆ ಎಂದು ಸಿಂಗ್ ಹೇಳಿದರು.ಬೇಗುಸರಾಯ್‌ನಲ್ಲಿ ಸಿಪಿಐನ ಪ್ರಾಬಲ್ಯವಿರುವುದರಿಂದ ಸಿಂಗ್ ಅವರ ಭೂಮಿಹಾರ್ ಜಾತಿಗೇ ಸೇರಿರುವ ಕುಮಾರ್ ಅವರಿಗೆ ಕಠಿಣ ಸವಾಲನ್ನೊಡ್ಡುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News