13,000 ಭಯೋತ್ಪಾದಕರ ಬಂಧನ: ಚೀನಾ

Update: 2019-03-18 17:51 GMT

ಬೀಜಿಂಗ್, ಮಾ. 18: ವಾಯುವ್ಯ ಚೀನಾದ ಕ್ಸಿನ್‌ಜಿಯಾಂಗ್ ರಾಜ್ಯದಲ್ಲಿ 2014ರಿಂದ ಸುಮಾರು 13,000 ಭಯೋತ್ಪಾದಕರನ್ನು ಬಂಧಿಸಲಾಗಿದೆ ಹಾಗೂ 1,500ಕ್ಕೂ ಅಧಿಕ ಭಯೋತ್ಪಾದಕ ಗುಂಪುಗಳನ್ನು ನಿಗ್ರಹಿಸಲಾಗಿದೆ ಎಂದು ಚೀನಾ ಸೋಮವಾರ ನೂತನ ಧೋರಣಾ ಪತ್ರವೊಂದರಲ್ಲಿ ಹೇಳಿದೆ.

ಈ ವಲಯದಲ್ಲಿ ಜಾರಿಗೊಳಿಸಲಾಗಿರುವ ವಿವಾದಾಸ್ಪದ ಭದ್ರತಾ ಕ್ರಮಗಳನ್ನು ಅದು ಸಮರ್ಥಿಸಿಕೊಂಡಿದೆ.

ಕ್ಸಿನ್‌ಜಿಯಾಂಗ್ ಉಯಿಘರ್ ಸ್ವಾಯತ್ತ ವಲಯದಲ್ಲಿ ಉಯಿಘರ್ ಮುಸ್ಲಿಮರಿಗಾಗಿ ನಡೆಸಲಾಗುತ್ತಿರುವ ಬಂಧನ ಶಿಬಿರಗಳಿಗಾಗಿ ಚೀನಾ ಅಂತರ್‌ರಾಷ್ಟ್ರೀಯ ಸಮುದಾಯದಿಂದ ತೀವ್ರ ಟೀಕೆಗೆ ಒಳಗಾಗಿರುವುದನ್ನು ಸ್ಮರಿಸಬಹುದಾಗಿದೆ. ಉಯಿಘರ್ ಮುಸ್ಲಿಮ್ ಸಮುದಾಯದ 10 ಲಕ್ಷಕ್ಕೂ ಅಧಿಕ ಸದಸ್ಯರನ್ನು ಈ ಶಿಬಿರಗಳಲ್ಲಿ ಹಿಡಿದಿಡಲಾಗಿದೆ ಎಂದು ಹೇಳಲಾಗಿದೆ.

ಆದರೆ, ಈ ಶಿಬಿರಗಳು ‘ಉದ್ಯೋಗ ತರಬೇತಿ ಕೇಂದ್ರಗಳು’ ಹಾಗೂ ಉಗ್ರವಾದದಿಂದ ಪ್ರಭಾವಿತಗೊಂಡಿರುವವರನ್ನು ಸಾಮಾನ್ಯ ಮನುಷ್ಯರನ್ನಾಗಿ ಮಾಡುವ ಹಾಗೂ ಜೀವನೋಪಾಯ ಗಳಿಕೆಗೆ ತರಬೇತಿ ನೀಡುವ ‘ಕ್ಯಾಂಪಸ್’ಗಳು ಎಂಬುದಾಗಿ ಚೀನಾ ಹೇಳಿಕೊಳ್ಳುತ್ತಿದೆ.

‘‘ಚೀನಾದ ಭಯೋತ್ಪಾದನೆ ನಿಗ್ರಹ ಪ್ರಯತ್ನಗಳ ಫಲಿತಾಂಶವಾಗಿ ವಲಯದ ಸ್ಥಳೀಯ ಅಧಿಕಾರಿಗಳು 2014ರಿಂದ 1,588 ಹಿಂಸಾತ್ಮಕ ಹಾಗೂ ಭಯೋತ್ಪಾದಕ ಗುಂಪುಗಳನ್ನು ನಿಗ್ರಹಿಸಿದ್ದಾರೆ, 12,995 ಭಯೋತ್ಪಾದಕರನ್ನು ಬಂಧಿದ್ದಾರೆ, 2,052 ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ, ಅಕ್ರಮ ಧಾರ್ಮಿಕ ಚಟುವಟಿಕೆಗಳಿಗಾಗಿ 30,645 ಮಂದಿಯನ್ನು ಶಿಕ್ಷಿಸಿದ್ದಾರೆ ಹಾಗೂ 3,45,229 ಅಕ್ರಮ ಧಾರ್ಮಿಕ ಬರಹಗಳ ಪ್ರತಿಗಳನ್ನು ವಶಪಡಿಸಿಕೊಂಡಿದ್ದಾರೆ’’ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News