ಮುಸ್ಲಿಂ ಮೀಸಲಾತಿ ನಾಟಕವೇ?

Update: 2019-03-18 18:11 GMT

ಮಾನ್ಯರೇ,

ನಮ್ಮದು ಜಾತ್ಯತೀತ ಪಕ್ಷ , ಈ ಬಾರಿ ರಾಜ್ಯದಲ್ಲಿ ಮೂರು ಅಥವಾ ನಾಲ್ಕು ಮುಸ್ಲಿಂ ಅಭ್ಯರ್ಥಿಗಳಿಗೆ ಲೋಕಸಭಾ ಚುನಾವಣೆಯಲ್ಲಿ ಸೀಟು ಸಿಗುವ ಸಾಧ್ಯತೆಗಳಿವೆ ಎನ್ನುತ್ತಿದ್ದ ಕಾಂಗ್ರೆಸ್‌ನಲ್ಲಿ, ಇದೀಗ ಒಬ್ಬ ಮುಸ್ಲಿಂ ಅಭ್ಯರ್ಥಿಗೂ ಲೋಕಸಭಾ ಸೀಟು ಸಿಗುವ ನಿರೀಕ್ಷೆಗಳಿಲ್ಲ. ರಾಜ್ಯದ ಜನಸಂಖ್ಯೆಯಲ್ಲಿ ಸುಮಾರು ಶೇ. 12.91 ಮುಸ್ಲಿಮರು ಇದ್ದಾರೆ ಮತ್ತು ಬಹಳಷ್ಟು ಕ್ಷೇತ್ರಗಳಲ್ಲಿ ಅವರ ಮತಗಳಿಗೆ ನಿರ್ಣಾಯಕ ಪಾತ್ರವಿದ್ದರೂ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅವರನ್ನು ಕೇವಲ ವೋಟರ್‌ಗಳಂತೆ ಕಾಣುತ್ತಿರುವುದು ವಿಪರ್ಯಾಸ. ಕಾಂಗ್ರೆಸ್ ಅಭ್ಯರ್ಥಿ ರಿಝ್ವೆನ್ ಸ್ಪರ್ಧಿಸುತ್ತಿದ್ದ ಕ್ಷೇತ್ರವಾದ ಬೆಂಗಳೂರು ಸೆಂಟ್ರಲ್‌ನಲ್ಲಿ ಚಿತ್ರನಟ ಪ್ರಕಾಶ್ ರಾಜ್ ಸ್ಪರ್ಧಿಸುತ್ತಿದ್ದಾರೆಂದಾಗ, ‘‘ತನ್ನನ್ನು ಜಾತ್ಯತೀತರೆನ್ನುವ ಪ್ರಕಾಶ್ ರಾಜ್, ಕಾಂಗ್ರೆಸ್ ಮುಸ್ಲಿಂ ಅಭ್ಯರ್ಥಿಗೆಂದು ಮೀಸಲಿಟ್ಟ ಕ್ಷೇತ್ರದಲ್ಲಿ ಸ್ಪರ್ಧಿಸಿ, ಲೋಕಸಭೆ ಪ್ರವೇಶಿಸಲಿದ್ದ ಮುಸ್ಲಿಂ ಅಭ್ಯರ್ಥಿಯನ್ನು ವಂಚಿತನನ್ನಾಗಿಸುತ್ತಿದ್ದಾರೆ ’’ ಎಂದು ಆರೋಪಿಸುತ್ತಿದ್ದ ಕಾಂಗ್ರೆಸ್ ನಾಯಕರು, ಇದೀಗ ರಾಜ್ಯದಲ್ಲಿ ಇತರ ಎಲ್ಲಾ ಕ್ಷೇತ್ರಗಳಿರುವಾಗ, ಕಾಂಗ್ರೆಸ್‌ನ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ತಂದು, ಮುಸ್ಲಿಂ ಬಾಹುಳ್ಯವಿರುವ ಬೆಂಗಳೂರು ಸೆಂಟ್ರಲ್‌ನಿಂದಲೇ ಸ್ಪರ್ಧಿಸುವಂತೆ ಪ್ರಯತ್ನಿಸುತ್ತಿದ್ದು, ಅಲ್ಪಸಂಖ್ಯಾತ ಅಭ್ಯರ್ಥಿಯೊಬ್ಬ ಗೆಲ್ಲಬಹುದಾಗಿದ್ದ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರನ್ನೇ ಸೀಟಿನಿಂದ ವಂಚಿತರನ್ನಾಗಿಸಲು ಪ್ರಯತ್ನಿಸುತ್ತಿರುವುದು ಬೇಸರದ ಸಂಗತಿ.

ಮುಸ್ಲಿಂ ಅಲ್ಪಸಂಖ್ಯಾತರು ಹೆಚ್ಚಿರುವ ಶಿಗ್ಗಾವಿಯು, ಕ್ಷೇತ್ರ ವಿಂಗಡಣೆಯಿಂದಾಗಿ ಹಾವೇರಿ ಲೋಕಸಭಾ ವ್ಯಾಪ್ತಿಗೆ ಒಳಪಡದೆ ಇರುವುದರಿಂದ ಕಳೆದ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಮುಸ್ಲಿಂ ಅಭ್ಯರ್ಥಿಯಾಗಿರುವ ಸಲೀಂ ಅಹ್ಮದ್ ಸೋತಿದ್ದರು. ಆ ಕಾರಣದಿಂದಾಗಿ ಮುಸ್ಲಿಂ ಅಭ್ಯರ್ಥಿಗಳು ಗೆಲ್ಲುವುದೇ ಇಲ್ಲ, ಮುಸ್ಲಿಂ ಅಭ್ಯರ್ಥಿಗೆ ಈ ಸಲ ಹಾವೇರಿ ಯಲ್ಲಿ ಸೀಟು ನೀಡಬಾರದು ಎಂದು ಗುಲ್ಲೆಬ್ಬಿಸಲಾಗುತ್ತಿದೆ. ಆದರೆ ಹಾವೇರಿ ಕ್ಷೇತ್ರದಲ್ಲಿ ಈವರೆಗೆ ನಡೆದ 16 ಲೋಕಸಭಾ ಚುನಾವಣೆಗಳಲ್ಲಿ 10 ಬಾರಿ ಮುಸ್ಲಿಂ ಅಲ್ಪಸಂಖ್ಯಾತರೇ ಗೆದ್ದಿದ್ದಾರೆ ಎನ್ನುವುದನ್ನು ನೆನಪಿಡಬೇಕಾಗುತ್ತದೆ. ಅದೇ ಸಂದರ್ಭದಲ್ಲಿ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಿ ಐದೈದು ಸಲ ಸೋತರೂ, ಆರನೆಯ ಸಲವೂ ‘‘ನಾನು ಕಾಂಗ್ರೆಸ್ ಅಭ್ಯರ್ಥಿ’’ ಎನ್ನುತ್ತಿರುವ ಪೂಜಾರಿಯಂತಹ ನಾಯಕರು ಕಾಂಗ್ರೆಸ್‌ನಲ್ಲಿರುವಾಗ, ಒಂದೆರೆಡು ಸಲ ಸೋತ ಮುಸ್ಲಿಂ ಅಭ್ಯರ್ಥಿಗಳು ಗೆಲ್ಲುವುದೇ ಇಲ್ಲ ಎಂದು ತೀರ್ಮಾನಿಸಿ ಅವರನ್ನು ಮೂಲೆಗುಂಪು ಮಾಡುತ್ತಿರುವುದು ನ್ಯಾಯವೇ?.

ಕಾಂಗ್ರೆಸ್‌ನ ‘ಜಾತ್ಯತೀತ’ ಕಾರ್ಯಕರ್ತರು ಮುಸ್ಲಿಮ್ ಅಭ್ಯರ್ಥಿಗಳಿಗೆ ಓಟು ಹಾಕುವುದಿಲ್ಲ, ಅವರ ಪರ ಪ್ರಚಾರ ಮಾಡುವುದಿಲ್ಲ, ಇನ್ನು ಮುಸ್ಲಿಂ ಅಭ್ಯರ್ಥಿ ಸ್ಪರ್ಧಿಸಿದರೆ ಕೇವಲ ಅಲ್ಪಸಂಖ್ಯಾತರೇ ಓಟು ಹಾಕಬೇಕು. ಹೀಗೇ ಕಾಂಗ್ರೆಸ್‌ನಲ್ಲಿ ಹತ್ತು ಹಲವು ಅಲಿಖಿತ ನಿಯಮಗಳಿರುವಾಗ, ಮುಸ್ಲಿಂ ಅಭ್ಯರ್ಥಿಗಳು ಗೆಲ್ಲುವುದಾದರೂ ಹೇಗೆ? ಕಾಂಗ್ರೆಸ್‌ನ ನಾಯಕರು ಈ ಅಲಿಖಿತ ನಿಯಮಗಳನ್ನು ಬದಲಿಸಿ, ಯಾವುದೇ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ನಿಲ್ಲಿಸಿದರೂ ನಾವು ಅವರನ್ನು ಗೆಲ್ಲಿಸುತ್ತೇವೆ ಎಂಬ ಮನಃಸ್ಥಿತಿ ತನ್ನ ಕಾರ್ಯಕರ್ತರಲ್ಲಿ ಉಂಟುಮಾಡುವುದಿಲ್ಲವೋ, ಅಂದಿನವರೆಗೆ ಕಾಂಗ್ರೆಸ್ ತನ್ನನ್ನು ಜಾತ್ಯತೀತ ಪಕ್ಷವೆನ್ನುವುದಾದರೂ ಹೇಗೆ?

ಹಾಗೆಯೇ ಜೆಡಿಎಸ್ ಕೂಡ, ಅಲ್ಪಸಂಖ್ಯಾತ ಮತಗಳನ್ನು ಲೆಕ್ಕಮಾಡಿಯೇ, ತನ್ನ ಅಭ್ಯರ್ಥಿಗಳು ಗೆಲ್ಲುತ್ತಾರೆಂದು ಭಾವಿಸುತ್ತದೆ. ಏಕೆಂದರೆ ಅದರ ಗೆಲುವಿಗೂ ಅಲ್ಪಸಂಖ್ಯಾತ ಮತಗಳೇ ಮುಖ್ಯ ಪಾತ್ರವಹಿಸುತ್ತದೆ ಎನ್ನುವುದು ವಾಸ್ತವ. ಈ ಸಲ ತನ್ನ 8 ಸೀಟುಗಳ ಪೈಕಿ ಒಂದನ್ನಾದರೂ ಅಲ್ಪಸಂಖ್ಯಾತರಿಗೆ ನೀಡಬಹುದಿತ್ತಲ್ಲವೇ?.

 ಇನ್ನು ‘‘ಸಬ್‌ಕಾ ಸಾತ್ ಸಬ್‌ಕಾ ವಿಕಾಸ್’’ ಎಂದು ಕಳೆದ ಐದು ವರ್ಷಗಳಿಂದ ದೇಶವಿಡೀ ನಿರಂತರ ಡಂಗುರ ಸಾರುತ್ತಾ ಬಂದಿರುವ ಮೋದಿಯು, ನಾವು ಮುಸ್ಲಿಮರಿಗಾಗಿ ಅದು ಮಾಡಿದ್ದೇವೆ, ಇದು ಮಾಡಿದ್ದೇವೆ, ಹಾಗಾಗಿ ಈ ಸಲ ಮುಸ್ಲಿಮರು ನಮಗೂ ಓಟು ಹಾಕುತ್ತಾರೆ ಎನ್ನುವಾಗ, ಅವರು ತನ್ನ ಪಕ್ಷದ ಒಬ್ಬನೇ ಒಬ್ಬ ಮುಸ್ಲಿಮನನ್ನು ರಾಜ್ಯದ ಯಾವುದಾದರೊಂದು ಕ್ಷೇತ್ರದಲ್ಲಿ ತನ್ನ ಪಕ್ಷದ ಅಭ್ಯರ್ಥಿ ಎಂದು ಘೋಷಿದ್ದಾರೆಯೇ?
ಇಂದು ಮುಸ್ಲಿಮರನ್ನು ರಾಜಕೀಯ ಕ್ಷೇತ್ರದಲ್ಲಿ ಬಹುತೇಕ ಪಕ್ಷಗಳು ಅಸ್ಪಶ್ಯರಂತೆ ಕಾಣುತ್ತಿರುವುದು ವಾಸ್ತವ.

Writer - -ತಲ್ಹ ಇಸ್ಮಾಯೀಲ್ ಬೆಂಗ್ರೆ

contributor

Editor - -ತಲ್ಹ ಇಸ್ಮಾಯೀಲ್ ಬೆಂಗ್ರೆ

contributor

Similar News