ಐಎಎಸ್ ಅಧಿಕಾರಿ ಖೇಮ್ಕಾ ವಿರುದ್ಧ ಪ್ರತಿಕೂಲಕರ ವರದಿ: ಹರ್ಯಾಣ ಸರಕಾರಕ್ಕೆ ಹೈಕೋರ್ಟ್ ತರಾಟೆ

Update: 2019-03-18 18:20 GMT

ಹೊಸದಿಲ್ಲಿ, ಮಾ.18: ಹರ್ಯಾಣ ಮುಖ್ಯಮಂತ್ರಿ ಮನೋಹರ್‌ಲಾಲ್ ಖಟ್ಟರ್ ಅವರು ತನ್ನ ವಾರ್ಷಿಕ ಕಾರ್ಯನಿರ್ವಹಣಾ ವಿವರಣೆ ವರದಿ(ಪಿಎಆರ್)ಯಲ್ಲಿ ಐಎಎಸ್ ಅಧಿಕಾರಿ ಅಶೋಕ್ ಖೆಮ್ಕಾ ಬಗ್ಗೆ ಪ್ರತಿಕೂಲಕರವಾದ ವರದಿಗಳನ್ನು ಪ್ರಕಟಿಸಿರುವುದಕ್ಕಾಗಿ ಹೈಕೋರ್ಟ್, ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಖೆಮ್ಕಾ ಅವರ ಪ್ರಾಮಾಣಿಕತೆಯು ಸಂದೇಹಾತೀತವಾಗಿದೆ ಎಂದು ಹೇಳಿದ ನ್ಯಾಯಾಲಯವು,ಅವರ ವೃತ್ತಿ ಬದುಕಿಗೆ ಆಗಿರುವ ಹಾನಿಯಿಂದ ಅವರಿಗೆ ರಕ್ಷಣೆ ನೀಡುವ ಅಗತ್ಯವಿದೆಯೆಂದು ಹೇಳಿದೆ.

ಇಂತಹದ್ದೊಂದು ವೃತ್ತಿಪರ ಪ್ರಾಮಾಣಿಕತೆಯನ್ನು ಹೊಂದಿರುವ ವ್ಯಕ್ತಿಯನ್ನು ತ್ವರಿತವಾಗಿ ಸವೆದುಹೋಗುತ್ತಿರುವ ನಮ್ಮ ರಾಜಕೀಯ, ಸಾಮಾಜಿಕ ಹಾಗೂ ಆಡಳಿತಾತ್ಮಕ ವ್ಯವಸ್ಥೆಯಿಂದ ರಕ್ಷಿಸಬೇಕಾದ ಅಗತ್ಯವಿದೆಯೆಂದು ನ್ಯಾಯಮೂರ್ತಿಗಳಾದ ರಾಜೀವ್ ಶರ್ಮಾ ಹಾಗೂ ಕುಲದೀಪ್ ಸಿಂಗ್ ಅವರನ್ನು ಒಳಗೊಂಡ ನ್ಯಾಯಪೀಠ ತಿಳಿಸಿದೆ.

ಮುಖ್ಯಮಂತ್ರಿ ಖಟ್ಟರ್ ಅವರು,2016-17ರ ಸಾಲಿನ ವಾರ್ಷಿಕ ಕಾರ್ಯನಿರ್ವಹಣೆ ವಿವರಣಾ ವರದಿಯಲ್ಲಿ ತನ್ನ ಬಗ್ಗೆ ಬರೆದಿರುವ ಪ್ರತಿಕೂಲಕರವಾದ ಅಭಿಪ್ರಾಯಗಳನ್ನು ತೆಗೆದುಹಾಕುವಂತೆ ಹಾಗೂ ಪರಾಮರ್ಶನಾ ಸಮಿತಿಯು ತನ್ನ ಕಾರ್ಯನಿರ್ವಹಣೆಗೆ ನೀಡಲಾದ 9.92 ಅಂಕಗಳನ್ನು ಮರುಸ್ಥಾಪಿಸುವಂತೆ ಕೋರಿ ಖೆಮ್ಕಾ ಅವರು ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್‌ನ ಮೆಟ್ಟಲೇರಿದ್ದರು. ಅಶೋಕ್ ಖೆಮ್ಕಾ ಅವರ ಕಾರ್ಯನಿರ್ವಹಣೆಗೆ ಪರಾಮರ್ಶನಾ ಪ್ರಾಧಿಕಾರವು 10ರಲ್ಲಿ 9.92 ಅಂಕಗಳನ್ನು ನೀಡಿತ್ತು. ಆದರೆ ಕಟ್ಟರ್ ನೇತೃತ್ವದ ಸ್ವೀಕಾರ ಪ್ರಾಧಿಕಾರವು ಕಾರ್ಯನಿರ್ವಹಣಾ ವರದಿಯಲ್ಲಿ ಆ ಗ್ರೇಡಿಂಗನ್ನು 9.00ಕ್ಕೆ ಇಳಿಸಿದ್ದರು. ಖೇಮ್ಕಾ ಪರವಾಗಿ ಹೈಕೋರ್ಟ್ ನ್ಯಾಯವಾದಿ ಶ್ರೀನಾಥ್ ಎ. ಖೇಮ್ಕಾ ವಾದಿಸಿದ್ದರು. 2018ರ ಡಿಸೆಂಬರ್‌ನಲ್ಲಿ ಕಾರ್ಯನಿರ್ವಹಣಾ ವರದಿಯ ಬಗ್ಗೆ ಅಶೋಕ್ ಖೇಮ್ಕಾ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ನ್ಯಾಯಾಧೀಕರಣ ತಿರಸ್ಕರಿಸಿತ್ತು. ಕಾರ್ಯನಿರ್ವಹಣಾ ವರದಿಯನ್ನು ಮುಖ್ಯಮಂತ್ರಿಯವರು ಕಾನೂನಿನ ಮಿತಿಯೊಳಗೆ ಬರೆದಿರುವುದಾಗಿ ಅದು ಸ್ಪಷ್ಟಪಡಿಸಿತ್ತು.

ರಾಜಕೀಯ ನಾಯಕತ್ವದಡಿಯಲ್ಲಿ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಯು, ತೀವ್ರವಾದ ಒತ್ತಡಗಳಿಂದ ಕಾರ್ಯನಿರ್ವಹಿಸಬೇಕಾಗಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಈ ಎಲ್ಲಾ ಒತ್ತಡ, ಎಳೆತಗಳ ನಡುವೆಯೂ ಅಧಿಕಾರಿಯು ಕಾನೂನಿನ ಪ್ರಕಾರವಾಗಿ ಕೆಲಸ ಮಾಡಬೇಕಾಗಿದೆ. ಅತ್ಯಂತ ಕಠಿಣ ಸನ್ನಿವೇಶಗಳಲ್ಲಿಯೂ ಪರಿಣಾಮಕಾರಿಯಾದ ವೃತ್ತಿಪರ ಪ್ರಾಮಾಣಿಕತೆಯನ್ನು ಪ್ರದರ್ಶಿಸಿರುವುದಕ್ಕಾಗಿ ಅರ್ಜಿದಾರ ಖೇಮ್ಕಾ ಅವರು ದೇಶದಲ್ಲೇ ಜನಪ್ರಿಯರಾಗಿದ್ದಾರೆಂದು ಪಂಜಾಬ್-ಹರ್ಯಾಣ ಹೈಕೋರ್ಟ್‌ನ ವಿಭಾಗೀಯ ಪೀಠವು ತೀರ್ಪಿನಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News