ಪಾರಿಕ್ಕರ್ ಎಂಬ ದುರಂತ ನಾಯಕ

Update: 2019-03-19 06:11 GMT

ರಾಜಕೀಯವೆಂದರೆ ಅಬ್ಬರ, ಭಾವಾವೇಶಗಳ ಪ್ರದರ್ಶನ ಎಂದು ಬಿಂಬಿತವಾಗುತ್ತಿರುವ ಈ ದಿನಗಳಲ್ಲಿ, ಇವೆಲ್ಲವುಗಳಿಗೂ ಹೊರತಾದ ಸಜ್ಜನ ಸರಳ ರಾಜಕೀಯ ನಾಯಕನೊಬ್ಬನನ್ನು ದೇಶ ಕಳೆದುಕೊಂಡಿದೆ. ಹೌದು, ತಮ್ಮ ಮೆದು ಮಾತು, ಸರಳತೆ ಮತ್ತು ಸಜ್ಜನಿಕೆಗಾಗಿಯೇ ಪಾರಿಕ್ಕರ್ ಗುರುತಿಸಿಕೊಂಡವರು. ಬಿಜೆಪಿಯಲ್ಲಿ ನಾಯಕನಾಗಲು ವಿದ್ಯಾರ್ಹತೆಯ ಅಗತ್ಯವೇ ಇಲ್ಲ ಎನ್ನುವುದು ಸಾಬೀತಾಗುತ್ತಿರುವ ಸಂದರ್ಭದಲ್ಲಿ, ಪಾರಿಕ್ಕರ್ ಭಾರತದ ರಾಜ್ಯವೊಂದರ ಸಿಎಂ ಆಗಿದ್ದ ಮೊದಲ ಐಐಟಿ ಪದವೀಧರ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಆರೆಸ್ಸೆಸ್‌ನ ಗರಡಿಯಲ್ಲಿ ರೂಪುಗೊಂಡವರಾದರೂ, ರಾಜಕೀಯ ಏಳಿಗೆಗಾಗಿ ಅವರು ಕೋಮು ಉದ್ವಿಗ್ನಕಾರಿ ಭಾಷಣಗಳಿಗೆ ಮೊರೆ ಹೋದವರಲ್ಲ. ವಿದೇಶಿ ಪ್ರವಾಸಿಗರನ್ನೇ ನೆಚ್ಚಿಕೊಂಡಿರುವ ಗೋವಾ ಎನ್ನುವ ರಾಜ್ಯವನ್ನು ಒಬ್ಬ ಕಟ್ಟರ್ ಹಿಂದುತ್ವದ ನಾಯಕನಾಗಿ ನಿಭಾಯಿಸಲು ಸಾಧ್ಯವಿಲ್ಲ ಎನ್ನುವ ವಾಸ್ತವವನ್ನು ಅರ್ಥ ಮಾಡಿಕೊಂಡು ಆಡಳಿತ ನಡೆಸಿದವರು ಪಾರಿಕ್ಕರ್.

ಈ ಕಾರಣದಿಂದಲೇ ಗೋಮಾಂಸದ ಕುರಿತಂತೆ ಅವರು ಎಂದಿಗೂ ಭಾವನಾತ್ಮಕ ನಿರ್ಧಾರಕ್ಕ್ಕೆ ಬರಲಿಲ್ಲ. ದೇಶಾದ್ಯಂತ ಬಿಜೆಪಿ ಗೋವನ್ನು ಮುಂದಿಟ್ಟು ರಾಜಕಾರಣ ಮಾಡುವಾಗ ಗೋವಾದಲ್ಲಿ ಗೋಮಾಂಸಕ್ಕೆ ಯಾವುದೇ ನಿಷೇಧ ಹೇರದೆ, ಪ್ರಬುದ್ಧತೆಯನ್ನು ಮೆರೆದವರು. ಒಂದು ವೇಳೆ, ಗೋಮಾಂಸಕ್ಕೆ ನಿಷೇಧ ಹೇರಿದ್ದೇ ಆದರೆ ಗೋವಾದ ಆರ್ಥಿಕ ಕ್ಷೇತ್ರದ ಮೇಲೆ ಅಗಾಧ ಪರಿಣಾಮ ಬೀರುತ್ತದೆ ಎನ್ನುವ ಸ್ಪಷ್ಟ ಅರಿವನ್ನು ಅವರು ಹೊಂದಿದ್ದರು. ಗೋವಾದಲ್ಲಿ ಬಿಜೆಪಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದ್ದರೆ ಅದಕ್ಕೆ ಮುಖ್ಯ ಕಾರಣವೇ ಪಾರಿಕ್ಕರ್ ಅವರಾಗಿದ್ದ್ಜಾರೆ. ಗೋವಾವನ್ನು ಕೇಂದ್ರವಾಗಿಟ್ಟು ಒಬ್ಬ ಯಶಸ್ವಿ ನಾಯಕನಾಗಿ ಹೊರಹೊಮ್ಮಿದ ಪಾರಿಕ್ಕರ್, ರಾಷ್ಟ್ರಮಟ್ಟದ ನಾಯಕನಾಗಲು ಹೊರಟು ಎಡವಿದರು. ಮೋದಿಯವರ ಅಬ್ಬರ, ಗದ್ದಲಗಳನ್ನೇ ಬಂಡವಾಳವಾಗಿಟ್ಟುಕೊಂಡ ರಾಷ್ಟ್ರ ರಾಜಕೀಯ ಕೊನೆಗೂ ಪಾರಿಕ್ಕರ್ ಎಂಬ ಸಜ್ಜನ, ಸರಳ ನಾಯಕನನ್ನು ಬಲಿ ತೆಗೆದುಕೊಂಡಿತು. ರಾಷ್ಟ್ರ ರಾಜಕಾರಣದಲ್ಲಿ ವಿಫಲರಾಗಿ, ಮತ್ತೆ ಗೋವಾಕ್ಕೆ ಮರಳುವಾಗ, ಮೋದಿ ಸರಕಾರದ ಕಳಂಕಗಳು ಅವರನ್ನು ಶಾಶ್ವತವಾಗಿ ಅಂಟಿಕೊಂಡಿತ್ತು. ಮತ್ತು ಆ ಕಳಂಕದ ಜೊತೆಗೇ ಅವರು ಇಹಲೋಕವನ್ನು ತ್ಯಜಿಸಬೇಕಾಯಿತು. ಯಾವುದೇ ಭ್ರಷ್ಟಾಚಾರದಲ್ಲಿ ಗುರುತಿಸಿಕೊಳ್ಳದ ಪಾರಿಕ್ಕರ್, ಮೋದಿಯ ಅಂಬಾನಿ ಪ್ರೀತಿಗಾಗಿ ರಫೇಲ್ ಹಗರಣದಲ್ಲಿ ಅನಿವಾರ್ಯವಾಗಿ ಸಿಲುಕಿಕೊಳ್ಳಬೇಕಾಯಿತು. ಇದು ಅವರನ್ನು ತೀವ್ರವಾಗಿ ಕಾಡಿದ ಹಿನ್ನೆಲೆಯಲ್ಲಿಯೇ ಅವರು ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಗೋವಾಕ್ಕೆ ಮರಳುವಂತಾಯಿತು.

ಒಬ್ಬ ಮುತ್ಸದ್ದಿ ನಾಯಕನಾಗಿದ್ದೂ ದೇಶದ ರಕ್ಷಣಾ ಸಚಿವ ಸ್ಥಾನವನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಅವರಿಗೆ ಸಾಧ್ಯವಾಗಲಿಲ್ಲ. ಕಾಶ್ಮೀರ ಮತ್ತು ಚೀನಾದ ಕುರಿತಂತೆ ಕೇಂದ್ರದ ತಪ್ಪು ನಡೆಗಳ ದುಷ್ಪರಿಣಾಮಗಳನ್ನೆಲ್ಲ ರಕ್ಷಣಾ ಸಚಿವರಾಗಿ ಪಾರಿಕ್ಕರ್ ಹೊತ್ತುಕೊಳ್ಳಬೇಕಾಯಿತು. ಪಾಕಿಸ್ತಾನ-ಭಾರತ ಗಡಿಭಾಗದಲ್ಲಿ ಉಗ್ರರ ದಾಂಧಲೆ ಹೆಚ್ಚಳವಾದುದು, ಯೋಧರ ಮೇಲೆ ಪದೇ ಪದೇ ದಾಳಿ ನಡೆದುದು ಪಾರಿಕ್ಕರ್ ರಕ್ಷಣಾ ಸಚಿವರಾದ ಸಂದರ್ಭದಲ್ಲೇ ಆಗಿದೆ. ಅತ್ತ ಚೀನಾ ಕೂಡ ಗಡಿಯಲ್ಲಿ ತಕರಾರು ತೆಗೆಯತೊಡಗಿತು. ಇದೇ ಸಂದರ್ಭದಲ್ಲಿ ಉರಿಯಲ್ಲಿ ಸೈನಿಕರ ಮೇಲೆ ಉಗ್ರರು ಭೀಕರ ದಾಳಿ ನಡೆಸಿದರು. ಇದಾದ ಬಳಿಕ ನಡೆದ ‘ಸರ್ಜಿಕಲ್ ಸ್ಟ್ರೈಕ್’ನ್ನು ದೇಶದ ಇತಿಹಾಸದಲ್ಲೇ ಮೊದಲ ಬಾರಿ ರಾಜಕೀಯಕ್ಕೆ ಬಳಸಿಕೊಂಡ ಕಳಂಕವನ್ನೂ ಪಾರಿಕ್ಕರ್ ಹೊತ್ತುಕೊಂಡರು. ಸೇನೆ ಕೆಲವು ಅನಿವಾರ್ಯ ಸಂದರ್ಭದಲ್ಲಿ ಗಡಿಯನ್ನು ಉಲ್ಲಂಘಿಸಿ ಕಾರ್ಯಾಚರಣೆ ನಡೆಸುತ್ತದೆ. ಆದರೆ ಇದನ್ನು ಬಹಿರಂಗವಾಗಿ ಯಾವುದೇ ದೇಶಗಳೂ ಸಾರಿಕೊಳ್ಳುವುದಿಲ್ಲ. ಈ ಹಿಂದೆಯೂ ಭಾರತದ ಸೇನೆ ಗಡಿ ಉಲ್ಲಂಘಿಸಿ ಕಾರ್ಯಾಚರಣೆ ನಡೆಸಿದ ಉದಾಹರಣೆಗಳಿವೆ. ಆದರೆ ಅದು ರಾಜಕೀಯಕ್ಕೆ ಸಂಬಂಧಿಸಿದ ವಿಷಯವಲ್ಲ. ಸೇನೆಯ ಆಂತರಿಕ ವಿಚಾರ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರೋಪಿಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ ಎನ್ನುವ ಕಾರಣಕ್ಕಾಗಿ ಸೇನೆ ಅದನ್ನು ಗುಟ್ಟಾಗಿಡುತ್ತದೆ. ಆದರೆ ಉರಿಯಲ್ಲಿ ಯೋಧರ ಮೇಲೆ ನಡೆದ ದಾಳಿಯಿಂದ ತೀವ್ರ ಮುಜುಗರಕ್ಕೊಳಗಾಗಿದ್ದ ಕೇಂದ್ರ ಸರಕಾರ ಮುಖ ಉಳಿಸಿಕೊಳ್ಳುವುದಕ್ಕಾಗಿ ಸೇನೆಯಿಂದಲೇ ಪತ್ರಿಕಾಗೋಷ್ಠಿಯನ್ನು ನಡೆಸಿತು. ಸೇನೆಯ ಮೇಲೆ ನಡೆದ ಆಘಾತಕಾರಿ ರಾಜಕೀಯ ಹಸ್ತಕ್ಷೇಪ ಇದಾಗಿತ್ತು. ಪಾರಿಕ್ಕರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸೇನೆಯ ಕಾರ್ಯಾಚರಣೆಯ ಹೆಗ್ಗಳಿಕೆಯನ್ನು ಆರೆಸ್ಸೆಸ್‌ನ ತಲೆಗೆ ಕಟ್ಟಿದರು. ಭಾರತೀಯ ಸೇನೆಗೂ ಆರೆಸ್ಸೆಸ್‌ಗೂ ಏನು ಸಂಬಂಧ ಎನ್ನುವುದನ್ನು ಅವರು ಸ್ಪಷ್ಟ ಪಡಿಸಲು ವಿಫಲರಾದರು. ಸೇನೆಯನ್ನು ರಾಜಕೀಯ ದುರುದ್ದೇಶಗಳಿಗೆ ಬಳಸಿದ ದೊಡ್ಡ ಆರೋಪ ಅವರನ್ನು ಬದುಕಿನ ಕೊನೆಯವರೆಗೂ ಹಿಂಬಾಲಿಸಿತು. ಸರ್ಜಿಕಲ್ ಸ್ಟ್ರೈಕ್‌ನಲ್ಲಿ ಉಗ್ರರು ಹತರಾಗಿದ್ದರೋ ಇಲ್ಲವೋ ಆದರೆ ಆ ಬಳಿಕವೂ ಕಾಶ್ಮೀರದಲ್ಲಿ ಉಗ್ರರ ದಾಳಿ ಮುಂದುವರಿಯಿತು. ಜೊತೆಗೆ ಕಾಶ್ಮೀರ ಉರಿಯತೊಡಗಿತು. ಇದೇ ಸಂದರ್ಭದಲ್ಲಿ ರಫೇಲ್ ಒಪ್ಪಂದದಲ್ಲಿ ಅಂಬಾನಿಯ ಅಕ್ರಮ ಪ್ರವೇಶ ಮುನ್ನೆಲೆಗೆ ಬಂತು. ಪರಿಸ್ಥಿತಿಯ ಒತ್ತಡವನ್ನು ಎದುರಿಸುವಲ್ಲಿ ಪಾರಿಕ್ಕರ್ ಸಂಪೂರ್ಣ ವಿಫಲರಾದರು. ಇತ್ತ ಗೋವಾದಲ್ಲಿ ಕಾಂಗ್ರೆಸ್ ಅತ್ಯಧಿಕ ಸ್ಥಾನವನ್ನು ಪಡೆಯಿತು. ರಕ್ಷಣಾ ಸಚಿವನ ಸ್ಥಾನದಿಂದ ಹೇಗಾದರೂ ಕಳಚಿಕೊಳ್ಳಬೇಕು ಎನ್ನುವ ಸ್ಥಿತಿಯಲ್ಲಿದ್ದ ಪಾರಿಕ್ಕರ್, ಗೋವಾದ ಸನ್ನಿವೇಶವನ್ನು ನೆಪವಾಗಿ ಬಳಸಿಕೊಂಡರು. ಅಧಿಕ ಸ್ಥಾನ ಪಡೆದ ಕಾಂಗ್ರೆಸನ್ನು ಅಧಿಕಾರಕ್ಕೇರಲು ಬಿಡದೆ, ಅಕ್ರಮ ದಾರಿಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವಂತೆ ನೋಡಿಕೊಂಡರು ಮಾತ್ರವಲ್ಲ, ಅವರೇ ಗೋವಾದ ಮುಖ್ಯಮಂತ್ರಿಯಾದರು.

ಗಡಿಯಲ್ಲಿ ಪರಿಸ್ಥಿತಿ ಹದಗೆಡುತ್ತಿರುವ ಹೊತ್ತಿನಲ್ಲಿ, ಏಕಾಏಕಿ ರಕ್ಷಣಾ ಇಲಾಖೆಗೆ ರಾಜೀನಾಮೆ ನೀಡಿ ಅವರು ಗೋವಾಕ್ಕೆ ಮರಳಿದ್ದು ದೇಶದ ಕುರಿತ ಅವರ ಬದ್ಧತೆಯನ್ನು ಪ್ರಶ್ನೆ ಮಾಡಿತು. ರಕ್ಷಣಾ ಸಚಿವ ಸ್ಥಾನ ಆ ಬಳಿಕ ಬಹುಕಾಲ ಅನಾಥವಾಗಿ ಉಳಿಯ ಬೇಕಾಯಿತು. ರಫೇಲ್ ಒಪ್ಪಂದ ಹಗರಣದಲ್ಲಿ ಪಾರಿಕ್ಕರ್ ನೇರ ಪಾತ್ರ ವಹಿಸಿದ್ದರೋ ಅಥವಾ ಅವರನ್ನು ಬಳಸಿಕೊಳ್ಳಲಾಯಿತೋ ಎನ್ನುವುದು ಇನ್ನೂ ಸ್ಪಷ್ಟವಿಲ್ಲ. ಆದರೆ ಪಾರಿಕ್ಕರ್ ಅವರಲ್ಲಿ ರಫೇಲ್ ಹಗರಣದ ಕುರಿತಂತೆ ಭಾರೀ ಮಾಹಿತಿಗಳಿದ್ದವು. ದೇಶದ ಹಿತಾಸಕ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡಾದರೂ ಅವರು ಕೊನೆಯ ಗಳಿಗೆಯಲ್ಲಿ ಸತ್ಯವನ್ನು ಹೇಳಬಹುದಿತ್ತು. ಆದರೆ ದೇಶಕ್ಕಿಂತ ಆರೆಸ್ಸೆಸ್ ಮತ್ತು ಬಿಜೆಪಿಯೇ ದೊಡ್ಡದು ಎನ್ನುವುದನ್ನು ಅವರು ಸಾಬೀತು ಪಡಿಸಿದರು. ಕ್ಯಾನ್ಸರ್ ರೋಗ ಉಲ್ಬಣಾವಸ್ಥೆಯಲ್ಲಿದ್ದರೂ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದೇ ಇದ್ದುದು ಕೂಡ ತೀವ್ರ ಟೀಕೆಗೆ ಕಾರಣವಾಗಿತ್ತು. ಗೋವಾ ಸರಕಾರ ಅಕ್ಷರಶಃ ಇದರಿಂದಾಗಿ ಐಸಿಯು ಸೇರಿತ್ತು. ರಾಜೀನಾಮೆ ನೀಡದೇ ಇರುವುದಕ್ಕೂ, ರಫೇಲ್ ಹಗರಣಕ್ಕೂ ನಂಟಿದೆಯೆಂದು ವಿರೋಧ ಪಕ್ಷಗಳ ನಾಯಕರು ಆರೋಪಿಸುವಂತಾಯಿತು. ಹೇಗೆ ರಾಜಕೀಯ ಕ್ಯಾನ್ಸರ್‌ಗಿಂತಲೂ ಭೀಕರ ರೋಗವಾಗಿ ಒಬ್ಬ ಸರಳ, ಸಜ್ಜನ ರಾಜಕಾರಣಿಯನ್ನು ನುಂಗಿ ಹಾಕಬಹುದು ಎನ್ನುವುದಕ್ಕೆ ಪಾರಿಕ್ಕರ್ ದುರಂತವೇ ಅತ್ಯುತ್ತಮ ಉದಾಹರಣೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News