‘‘ಹೇ ರಾಮ್...ರಾ...ಮ್... ರಾ...ಮ್’’

Update: 2019-03-20 09:16 GMT

ಭಾಗ-14

ಗಾಂಧೀಜಿ ಸಂಜೆ 4:30ರವರೆಗೆ ಸರ್ದಾರ್ ಪಟೇಲರೊಡನೆ ಮಾತನಾಡುತ್ತಾ ಕುಳಿತಿದ್ದರು. ಪ್ರಾರ್ಥನಾ ಸಭೆಗೆ ಹೊತ್ತಾಯಿತೆಂದು ಆಭಾ ಚಡಪಡಿಸುತ್ತಿದ್ದಳು. ಗಾಂಧೀಜಿಗೆ ಗಡಿಯಾರ ತೋರಿಸಿದಳು. ಸರ್ದಾರ್ ಹೊರನಡೆದರು. ಗಾಂಧೀಜಿ ಪ್ರಾರ್ಥನಾ ಸಭೆಗೆ ನಡೆಯಲು ಎದ್ದರು. ಹೋಗುವಾಗ, ಕಾಥಿಯಾವಾಡದಿಂದ ಬಂದಿದ್ದವರು ತಮ್ಮ ದರ್ಶನಕ್ಕೆ ಕಾದಿದ್ದಾರೆ ಎಂದು ಹೇಳಿದಾಗ, ಗಾಂಧೀಜಿ: ‘‘ಪ್ರಾರ್ಥನೆ ಮುಗಿದ ನಂತರ ಬಂದು ಕಾಣಲು ಹೇಳಿ ಆಗ ನಾನು ಬದುಕಿದ್ದರೆ.’’
ಅವರು ಬದುಕಿಗೆ ಹಿಂದಿರುಗಲಿಲ್ಲ!

ಗಾಂಧೀಜಿ ಒಂದು ಕ್ಷಣ ದಂಗುಬಡಿದವರಂತೆ ನಿಬ್ಬೆರಗಾಗಿ ಕೂತರು. ಹೀಗಾಗಬಹುದೆಂದು ಅವರು ನಿರೀಕ್ಷಿಸಿರಲಿಲ್ಲ. ದುಃಖದಿಂದ ಎದೆ ಭಾರವಾಯಿತು. ಅಂದು ಬೆಳಗ್ಗೆಯೇ ಮೆಹ್ರೌಲಿ ಮಸೀದಿಯಲ್ಲಿ ಮುಸ್ಲಿಮರು ತಮ್ಮ ಧಾರ್ಮಿಕ ನಿಯಮ-ಸ್ತ್ರೀಯರನ್ನು ಮಸೀದಿಯ ಪ್ರಾರ್ಥನಾ ಮಂದಿರ ದೊಳಗೆ ಬಿಟ್ಟುಕೊಳ್ಳಬಾರದೆಂಬ ನಿಯಮವನ್ನು ಸಡಿಲಿಸಿ ಗಾಂಧೀಜಿಯ ಆಸರೆಯಂತಿದ್ದ ಮನು ಮತ್ತು ಅಭಾ ಯುವತಿಯರನ್ನು ಗಾಂಧಿ ಮಸೀದಿಯೊಳಗೆ ಕರೆದುಕೊಂಡು ಪಕ್ಕದಲ್ಲಿ ಕೂಡಿಸಿದ್ದರು! ಮುಸ್ಲಿಮರಲ್ಲಿ ಇಂತಹ ಪರಿವರ್ತನೆ, ಔದಾರ್ಯ, ಕೋಮುಸೌಹಾರ್ದ, ಶಾಂತಿ ಆಕಾಂಕ್ಷೆಯನ್ನುಂಟು ಮಾಡಿದ ಗಾಂಧಿ ಇಂದು ಈಗ ಬಿರ್ಲಾ ಗೃಹದ ಪ್ರಾರ್ಥನಾ ಮೈದಾನದಲ್ಲಿ ಹಿಂದೂಗಳ ಆಕ್ರೋಶಕ್ಕೆ ಗುರಿಯಾಗಬೇಕಾಗಿ ಬಂದದ್ದು, ತಮ್ಮ ಕೋಮುಸೌಹಾರ್ದ, ಪ್ರೇಮ, ಹಿಂದೂ-ಮುಸ್ಲಿಂ ಐಕ್ಯಮತ್ಯ, ಶಾಂತಿ, ಅಹಿಂಸಾ ತತ್ತ್ವದ ಸೋಲಿನ ಪ್ರತ್ಯಕ್ಷ ಸಾಕ್ಷಿಯಾಗಿ ಕಾಣಿಸಿರಬೇಕು. ಸಭೆಯಲ್ಲಿ ಶಾಂತಿ ನೆಲೆಸಿದ ಮೇಲೆ ಗಾಂಧೀಜಿ, ಭಾರವಾದ ಹೃದಯದಿಂದ ಮೆಲುದನಿಯಲ್ಲಿ:
‘‘ನೀವು ನನ್ನನ್ನು ಹಿಮಾಲಯಕ್ಕೆ ಹೋಗೆಂದು ಹೇಳುತ್ತಿದ್ದೀರಿ. ಮತ್ತೆ ಕೆಲವರು ನಾನು ಇಲ್ಲೇ ಇರಬೇಕೆಂದು ಹೇಳುತ್ತಿದ್ದಾರೆ. ಯಾರ ಮಾತು ಕೇಳಬೇಕೋ ತಿಳಿಯದು. ನನ್ನ ಮಟ್ಟಿಗೆ ಇದೇ ನನ್ನ ಹಿಮಾಲಯ!!’’ ಎಂದು ಉದ್ಗಾರ ತೆಗೆದರು. ದುಃಖದಿಂದ ಮೆಲುದನಿಯಲ್ಲಿ ಹೇಳಿದರು: ‘‘ದೈವಾಜ್ಞೆಯಂತೆ ಮಾಡುತ್ತೇನೆ. ಈ ಅವ್ಯವಸ್ಥೆಯ ಮಧ್ಯದಲ್ಲಿ ಶಾಂತಿಯನ್ನು ಅರಸುತ್ತೇನೆ’’ ಹಿಂದಿನ ದಿನವೇ ಖಿನ್ನ ಮನಸ್ಕರಾಗಿ ಹೇಳಿದ್ದರು: ‘‘ಸ್ವಾತಂತ್ರ ಎಂದರೆ ಇಂಡಿಯಾದಲ್ಲಿರುವ ಸಮಸ್ತ ವರ್ಗ, ವರ್ಣ, ಮತದವರೂ ಸಮಾನರು ಎಂದರ್ಥ. ಬಹುಸಂಖ್ಯಾತ ಕೋಮಿನವರು ಅಲ್ಪಸಂಖ್ಯಾತ ಕೋಮಿನವರ ಮೇಲೆ ಸವಾರಿ ಮಾಡುವುದಲ್ಲ. ನಮ್ಮ ಭವಿಷ್ಯತ್ತಿನ ಈ ಆಶಾವಾದವನ್ನು ಕೈಬಿಟ್ಟು ನಮ್ಮ ಹೃದಯಗಳನ್ನು ರೋಗಗ್ರಸ್ತ ಮಾಡದಿರೋಣ’’ ಎಂದಿದ್ದರು. ಆ ಕಾರ್ಯವನ್ನು ನೆರವೇರಿಸಲಿಕ್ಕಾಗಿ ಬದುಕಿರಬೇಕು. ‘‘ಮದನಲಾಲನ ಬಾಂಬಿನಿಂದ ದೇವರು ಉಳಿಸಿದ್ದು ಈ ಕಾರ್ಯವನ್ನು ನೆರವೇರಿಸಲಿಕ್ಕಾಗಿಯೋ ಏನೋ !’’ ಫೆಬ್ರವರಿ 3ರಂದು ದಿಲ್ಲಿಯಿಂದ ಹೊರಟು ವಾರ್ಧಾಕ್ಕೆ ಹೋಗಿ ಅಲ್ಲಿಂದ ಪಾಕಿಸ್ತಾನಕ್ಕೆ ಹೊರಡಬೇಕು. ಆದರೆ ಅವರೇ: ‘‘ಯಾರಿಗೆ ಗೊತ್ತು? ನಾನು ಅಲ್ಲಿಯತನಕ ಬದುಕಿರುತ್ತೇನೋ ಇಲ್ಲವೋ. ನಾಳೆ ಏನಾಗುತ್ತದೆ ಎಂಬುದು ಯಾರಿಗೆ ಗೊತ್ತು?’’ ಎಂದು ನಿಟ್ಟುಸಿರು ಬಿಟ್ಟಿದ್ದರು. ಅದೇಕೆ ಅವರ ಬಾಯಿಂದ ಈ ಮಾತು ಬಂತೊ!
 ಪ್ರಾರ್ಥನಾ ಸಭೆಯಲ್ಲಿ ಗಾಂಧೀಜಿ ಇನ್ನೊಂದು ಮಾತನ್ನೂ ಪ್ರಸ್ತಾಪಿಸಿದರು. ಸ್ವಾತಂತ್ರಾನಂತರ ಅತಿ ಸ್ವಲ್ಪ ಸಮಯದಲ್ಲೇ ಅಧಿಕಾರದ ರುಚಿ ಕಂಡ, ದೇಶಕ್ಕಾಗಿ ಅಪಾರ ಕಷ್ಟನಷ್ಟ ಅನುಭವಿಸಿದ ತ್ಯಾಗಿಗಳೇ ಈಗ ಭ್ರಷ್ಟಾಚಾರದಲ್ಲಿ ತೊಡಗಿದ ಬಗ್ಗೆ ಅಪಾರ ಸಂತಾಪವನ್ನು ಬಾಯಿಬಿಟ್ಟು ಮುಚ್ಚುಮರೆಯಿಲ್ಲದೆ ಬಹಿರಂಗ ಪ್ರಾರ್ಥನಾ ಸಭೆಯಲ್ಲೇ ಸಾರಿದ್ದರು. ಅಂಥವರೇ ಹಾಗಾದರೆ ಯಾರನ್ನು ನಂಬುವುದು? ಇದನ್ನು ಗಮನದಲ್ಲಿಟ್ಟುಕೊಂಡು ಗಾಂಧೀಜಿ ಹೇಳಿದರು:
 ‘‘ಕಾಂಗ್ರೆಸ್ ನಮಗೆ ರಾಜಕೀಯ ಸ್ವಾತಂತ್ರವನ್ನು ಗೆದ್ದುಕೊಟ್ಟಿದೆ. ಆದರೆ ಜನರಿಗೆ ಆರ್ಥಿಕ ಸ್ವಾತಂತ್ರವನ್ನು, ಸಾಮಾಜಿಕ ಸ್ವಾತಂತ್ರವನ್ನು, ನೈತಿಕ ಬಾಳನ್ನು ಗೆದ್ದು ಕೊಡಬೇಕಾಗಿದೆ. ಈ ಸ್ವಾತಂತ್ರ ಪಡೆಯುವುದು ರಾಜಕೀಯ ಸ್ವಾತಂತ್ರ ಪಡೆಯುವುದಕ್ಕಿಂತ ಕಷ್ಟದಾಯಕ... ಕಾಂಗ್ರೆಸ್ ಪ್ರಾಥಮಿಕ ರಾಜಕೀಯ ಸ್ವಾತಂತ್ರವನ್ನು ಗಳಿಸಿಕೊಟ್ಟಿದೆ. ಇದಕ್ಕಿಂಥ ಕಷ್ಟಕರವಾದ ಸಮಾನತೆಯ ಸ್ವಾತಂತ್ರವನ್ನು ಪಡೆಯಬೇಕಾಗಿದೆ.’’
ಪ್ರಾರ್ಥನಾ ಸಭೆ ಮುಗಿದ ಬಳಿಕ ಮೇಲೆದ್ದು ನಡೆದರು.
ಆ ರಾತ್ರಿ ಗಾಂಧೀಜಿ ಕಾಂಗ್ರೆಸ್ ಪಕ್ಷದ ನೂತನ ಅಂಗರಚನೆಯ ರೂಪುರೇಷೆಯನ್ನು ಬರೆದರು. ಅದನ್ನು ಪೂರ್ಣಗೊಳಿಸದೆ ಮಲಗಿದರು.
ಗ್ವಾಲಿಯರ್‌ನಲ್ಲಿ ಡಾ. ಪರಚುರೆಯಿಂದ ವಿದೇಶೀ ಪಿಸ್ತೂಲನ್ನು ಪಡೆದ ನಾಥೂರಾಮ್ ಮತ್ತು ಆಪ್ಟೆ 28ರ ರಾತ್ರಿ ದಿಲ್ಲಿಗೆ ಹೊರಟು ಮರುದಿನ ಹಳೆ ದಿಲ್ಲಿ ರೈಲು ನಿಲ್ದಾಣ ತಲುಪಿದರು. ಅಲ್ಲಿ ನಲ್ಲಿಯ ಬಳಿ ಸುಳಿದಾಡುತ್ತಿದ್ದ ಕರ್ಕರೆಯನ್ನು ಕಂಡು ಮೂವರೂ ಆ ಸಹಸ್ರಾರು ಬರುವ ಹೋಗುವ ಜನರ ಮಧ್ಯದಲ್ಲಿ ರೈಲ್ವೆ ವಿಶ್ರಾಂತಿ ಗೃಹಕ್ಕೆ ತೆರಳಿದರು. ನಾಥೂರಾಮ್ ಮೆಲ್ಲನೆ ಪಿಸುಗುಟ್ಟಿದ, ‘‘ನಾನು ಈ ಕೆಲಸ ಮಾಡಿ ಮುಗಿಸುತ್ತೇನೆ. ತಂದಿರುವ ಪಿಸ್ತೂಲು ಕೆಲಸ ಮಾಡುತ್ತದೆಯೊ? ಗುಂಡು ಹಾರುತ್ತದೆಯೊ ಎಂಬುದನ್ನು ಪರೀಕ್ಷಿಸಿ ದಿಟಪಡಿಸಿಕೊಳ್ಳಬೇಕು. ಪಿಸ್ತೂಲು ಹಾರಿಸಿ ಪರೀಕ್ಷಿಸುವ ಗುಟ್ಟಾದ ಸ್ಥಳಕ್ಕೆ ಹೋಗಬೇಕು’’ ತನ್ನ ಕೋಟಿನ ಒಳ ಜೇಬಿನಲ್ಲಿದ್ದ ಕಾಡತೂಸುಗಳನ್ನು ಗುಟ್ಟಾಗಿ ತೋರಿಸಿದ. ಐದಾರು ಗುಂಡುಗಳಿದ್ದವು. ‘‘ಇನ್ನೂ ಇವೆ. ಇವುಗಳನ್ನು ಪರೀಕ್ಷಾರ್ಥವಾಗಿ ಪ್ರಯೋಗಿಸಲು ತೊಂದರೆಯಿಲ್ಲ.’’ ಅದಕ್ಕೆ ಪ್ರಶಸ್ತವಾದ ಗುಟ್ಟಾದ ಸ್ಥಳ ಬಿರ್ಲಾ ಗೃಹದ ಹಿಂದಿನ ರಕ್ಷಿತ ಅರಣ್ಯ ಎಂದು ನಿರ್ಧರಿಸಿ ಮೂವರೂ ಮೊದಲು ಬಿರ್ಲಾ ಗೃಹಕ್ಕೆ ಹೋದರು. ಪ್ರಾರ್ಥನಾ ಸಭೆ ನಡೆಯುವ ಆ ಬಯಲು ಜಾಗಕ್ಕೆ ಯಾರು ಬೇಕಾದರೂ ನಿರಾತಂಕವಾಗಿ ಹೋಗಿಬರುವುದನ್ನು ನೋಡಿದರು. ತಾವು ತಮ್ಮ ಕೆಲಸ ನೆರವೇರಿಸಲು ದೊಡ್ಡ ಅಡ್ಡಿ ಆತಂಕ ಅಡಚಣೆ ಏನೂ ಆಗಲಾರದೆಂದು ದಿಟಪಡಿಸಿಕೊಂಡರು. ತರುವಾಯ ಬಿರ್ಲಾ ಗೃಹದ ಹಿಂದಿದ್ದ ಕಾಡಿನಲ್ಲಿ ಒಂದು ನಿರ್ಜನ ಪ್ರದೇಶಕ್ಕೆ ದಟ್ಟ ಕಾಡಿನೊಳಕ್ಕೆ ಹೋದರು. ಅಲ್ಲೊಂದು ಒಂಟಿ ಜಾಲಿ ಮರದ ಬಳಿ ಹೋದರು. ಆಪ್ಟೆ ಆ ಮರದ ಬೊಡ್ಡೆಗೆ, ಬೆನ್ನು ಮಾಡಿ ಕುಳಿತುಕೊಂಡು ತನ್ನ ತಲೆ ಮರದ ಬೊಡ್ಡೆಯ ಯಾವ ಎತ್ತರಕ್ಕೆ ಬರುತ್ತದೆ ಎಂಬುದನ್ನು ಒಂದು ಚಾಕುವಿನಿಂದ ಗುರುತು ಮಾಡಿದ. ಆ ಗುರುತನ್ನು ತಲೆಯಂತೆ ಗುಂಡಾಕಾರವಾಗಿ ಚಿತ್ರಿಸಿದ.
ನಾಥೂರಾಮ್ ಆ ಜಾಲಿ ಮರದ ಬುಡದಿಂದ 20-25 ಅಡಿ ಹಿಂದಕ್ಕೆ ಸರಿದು ಅಲ್ಲಿ ನಿಂತು ರಿವಾಲ್ವರ್‌ಅನ್ನು ಗುಂಡಿನಿಂದ ಬಾರ್ ಮಾಡಿ, ಆಪ್ಟೆ ಗುರ್ತು ಮಾಡಿದ್ದ ‘ಗಾಂಧಿ ತಲೆಯ’ ಚಿತ್ರಕ್ಕೆ ಗುರಿ ಇಟ್ಟು ಗುಂಡು ಹಾರಿಸಿದ. ನಾಲ್ಕು ಬಾರಿ ಗುಂಡಿಕ್ಕಿದ. ಆ ಸದ್ದನ್ನು ಕೇಳಲು ಅಲ್ಲಿ ಬೇರೆ ಯಾರೂ ಇರಲಿಲ್ಲ. ಆಪ್ಟೆ ಜಾಲಿ ಮರದ ಬುಡದತ್ತ ಬಂದು ಗುಂಡು ಬಿದ್ದ ಸ್ಥಳ ನೋಡಿದ. ನಾಲ್ಕು ಗುಂಡುಗಳು ಮರದ ಬಡ್ಡೆಯಲ್ಲಿ ಗುರುತು ಮಾಡಿದ್ದ ಗಾಂಧಿ ತಲೆಯಲ್ಲಿ ಸಿಕ್ಕಿಕೊಂಡಿದ್ದವು.
‘‘ನಾಥೂರಾಮ್ ಬರೋಬ್ಬರಿ ಹೊಡೆದೆ ! ಗುರಿ ತಪ್ಪಿಲ್ಲ.’’
ಅಲ್ಲಿಂದ ಹೊರಟು ಹಳೆ ದಿಲ್ಲಿ ರೈಲು ನಿಲ್ದಾಣದ ವಿಶ್ರಾಂತಿ ಗೃಹಕ್ಕೆ ಹಿಂದಿರುಗಿದರು. ಜೀವಾವಧಿ ಶಿಕ್ಷೆ ತೀರಿಸಿ ಜೈಲಿನಿಂದ ಬಿಡುಗಡೆ ಹೊಂದಿ ಹೊರಬಂದಿದ್ದ ಕರ್ಕರೆಯನ್ನು ಗ್ರಂಥಕರ್ತರು ಲ್ಯಾಡಿಕಾಲಿನ್ಸ್ ಮತ್ತು ಡೊಮೆನಿಕ್ ಲ್ಯಾಪ್ಪಿರೇ ಪ್ರಶ್ನಿಸಿದಾಗ ಅವನು ಹೇಳುತ್ತಾನೆ:
‘‘ಅಂದು ನಾಥೂರಾಮ್ ಬಹಳ ಖುಷಿಯಲ್ಲಿದ್ದ. ಆರಾಮ ಆಗಿದ್ದ. ರಾತ್ರಿ 8:30ರ ಹೊತ್ತಿನಲ್ಲಿ, ‘ಬನ್ನಿ, ಇಂದು ನಾವೆಲ್ಲ ಕೂಡಿ ಕೊನೆಯ ಬಾರಿ ಸುಖಭೋಜನ ಮಾಡೋಣ. ಮತ್ತೆ ನಾವು ಎಂದಿಗೂ ಕೂಡಿ ಊಟ ಮಾಡಲಾರೆವು....’ ರಾತ್ರಿ ಹೊಟೇಲ್‌ನಲ್ಲಿ ಹೊಟ್ಟೆ ತುಂಬ ಊಟ ಮಾಡಿ, ರೈಲ್ವೆ ವಿಶ್ರಾಂತಿ ಗೃಹಕ್ಕೆ ಹಿಂದಿರುಗಿದೆವು. ನಾಥೂರಾಮ್ ಹೇಳಿದ: ‘ನಾನು ಒಬ್ಬನೇ ಇರಬಯಸುತ್ತೇನೆ. ನೀವು ಹೊರಡಿ.’ ನಾನು, ಆಪ್ಟೆ, ಹೊರಟು ಮಲಗಲಿದ್ದ ಗೋಡ್ಸೆಯನ್ನು ಹಿಂದಿರುಗಿ ನೋಡಿದೆವು. ಗಾಂಧಿಯನ್ನು ಕೊಲ್ಲಲಿದ್ದ ಗೋಡ್ಸೆ ತನ್ನ ಹಾಸಿಗೆಯ ಮೇಲೆ ‘ಅಡ್ಡಾಗಿ’ ತಾನು ತಂದಿದ್ದ ಒಂದು ಪುಸ್ತಕ ಓದುತ್ತಿದ್ದ.’’


ಜನವರಿ 30 ಶುಕ್ರವಾರ ಬೆಳಗಿನ ಜಾವ 3:30 ಗಂಟೆಗೆ ಗಾಂಧೀಜಿ ಎದ್ದರು. ಪ್ರತಿದಿನ ಮಾಡುತ್ತಿದ್ದ ಪ್ರಾರ್ಥನೆ ಮತ್ತು ಧ್ಯಾನ ಮಾಡಿದರು. ಸುಮಾರು ಐದು ಗಂಟೆಗೆ ಮಲಗಿ ಒಂದು ಜೊಂಪು ನಿದ್ದೆ ಮಾಡಿದರು. ಎದ್ದು ತಮ್ಮ ಪತ್ರ ವ್ಯವಹಾರದ ಕಡತ ಹುಡುಕಿದರು. ಅವರು ಹಿಂದಿನ ರಾತ್ರಿ ಬರೆದ ಪತ್ರವನ್ನು ಓದಿಕೊಂಡರು. ಅದರಲ್ಲಿ ಬರೆದಿದ್ದರು:
‘‘ನನ್ನ ಪ್ರಿಯ ಪ್ಯಾರೇಲಾಲ್,
‘‘...ನಾನು ಸೇವಾಗ್ರಾಮಕ್ಕೆ ಹೋಗುವ ಆಲೋಚನೆ ಇನ್ನೂ ಅನಿಶ್ಚಿತವಾಗಿದೆ. ದಿಲ್ಲಿಯಲ್ಲಿ ನನ್ನ ಕೆಲಸ ಮುಗಿದಿದೆ ಎಂದು ಹೇಳವುದಾದರೆ, ನಾನು ಇಲ್ಲಿರಬೇಕಾದ ಆವಶ್ಯಕತೆ ಇರಲಾರದು. ಆದರೆ ಆ ಕೆಲಸ ಆಗಿದೆಯೋ ಇಲ್ಲವೋ ಎಂಬುದನ್ನು ಇಲ್ಲಿಯ ಜನ ತೀರ್ಮಾನಿಸಬೇಕು. ನಾಳೆ ಬಹುಶಃ ಆ ಪ್ರಶ್ನೆ ಇತ್ಯರ್ಥವಾದೀತು...
ಇತಿ
ಬಾಪು’’
ಅಂದು ಬೆಳಗ್ಗೆ ಗಾಂಧೀಜಿ ವಾಯುವಿಹಾರಕ್ಕಾಗಿ ಹೊರಗೆ ಹೋಗಲಿಲ್ಲ. ಕೊಠಡಿಯಲ್ಲೇ ಅತ್ತಿಂದಿತ್ತ ಅಡ್ಡಾಡುತ್ತಿದ್ದರು. ಸಾಧಾರಣವಾಗಿ ಅವರ ಪಕ್ಕದಲ್ಲೇ ಇದ್ದು ಅವರೊಡನೆ ನಡೆಯುತ್ತಿದ್ದ ಮನು ಗಾಂಧಿ, ಅಂದು ಲವಂಗವನ್ನು ಕುಟ್ಟಿಪುಡಿ ಮಾಡುತ್ತಿದ್ದಳು. ಗಾಂಧೀಜಿಗೆ ಸ್ವಲ್ಪ ಕೆಮ್ಮಾಗಿತ್ತು. ಆ ಕೆಮ್ಮಿಗೆ ತಾಳೆ ಬೆಲ್ಲದ ಪಾನಕದಲ್ಲಿ ಲವಂಗದ ಪುಡಿ ಬೆರಸಿ ಕುಡಿಯುತ್ತಿದ್ದರು. ಆ ಪುಡಿ ಮುಗಿದುಹೋಗಿತ್ತು. ಮತ್ತೆ ಆ ಪಾನಕಕ್ಕೆ ಬೆರಸಲು ಪುಡಿ ಅರೆಯುತ್ತಿದ್ದಳು. ಗಾಂಧೀಜಿ: ‘‘ಏನು ಮಾಡುತ್ತಿದ್ದೀ?’’ ಎಂದು ಕೇಳಿದರು. ‘‘ಪುಡಿ ಅರೆಯುತ್ತಿದ್ದೇನೆ. ಇಲ್ಲದಿದ್ದರೆ ರಾತ್ರಿ ಬೇಕೆಂದಾಗ ಏನೂ ಇರುವುದಿಲ್ಲ....’’ ಗಾಂಧೀಜಿ ‘‘ಹೊತ್ತು ಮುಳುಗುವ ಮುಂಚೆ ಏನಾಗುವುದೋ ಯಾರು ಬಲ್ಲರು! ನಾನು ಬದುಕಿರುತ್ತೇನೋ ಇಲ್ಲವೊ ಯಾರಿಗೆ ಗೊತ್ತು?’’ ಎಂದರು.
 ತಮ್ಮ ಕೊಠಡಿಗೆ ಹೋಗುವಾಗ ಪ್ಯಾರೇಲಾಲರ ಕೊಠಡಿಯಲ್ಲಿ ಹಾದುಹೋಗುವಾಗ ಗಾಂಧೀಜಿ ಕಾಂಗ್ರೆಸ್‌ನ ಅಂಗರಚನೆ ಕರಡನ್ನು ಪ್ಯಾರೇಲಾಲರಿಗೆ ಕೊಟ್ಟು: ‘‘ನನ್ನ ಅಭಿಪ್ರಾಯಗಳಲ್ಲಿ ಏನಾದರೂ ಕೊರತೆಗಳಿದ್ದರೆ ಅದನ್ನು ತುಂಬು. ತುಂಬ ಒತ್ತಡದ ಸನ್ನಿವೇಶದಲ್ಲಿ ತಯಾರಿಸಿದ್ದೇನೆ.’’
ಹತ್ತು ಗಂಟೆ ಹೊತ್ತಿನಲ್ಲಿ ತಾವು ಹೊಸದಾಗಿ ಕಲಿತಿದ್ದ ಬೆಂಗಾಲಿ ಭಾಷೆಯ ಬರಹ ಏನೋ ಓದುತ್ತಿದ್ದರು. ತರುವಾಯ ಲಂಡನ್‌ನ ‘ಟೈಮ್ಸ್’ ಪತ್ರಿಕೆಯಲ್ಲಿ ಬಂದಿದ್ದ ಒಂದು ಸುದ್ದಿ ನೆಹರೂ ಮತ್ತು ಪಟೇಲರ ಮಧ್ಯೆ ಭಿನ್ನಾಭಿಪ್ರಾಯಗಳಿವೆ ಎಂಬ ಬಗ್ಗೆ ಪ್ಯಾರೇಲಾಲ್ ಓದಿ ಹೇಳಿದರು. ‘‘ಅದನ್ನು ಗಮನಿಸಿದ್ದೇನೆ. ಆ ಬಗ್ಗೆ ಪ್ರಾರ್ಥನಾ ಸಭೆಯೊಂದರಲ್ಲಿ ಆಗಲೇ ಪ್ರಸ್ತಾಪಿಸಿದ್ದೇನೆ’’ ಎಂದರು. ಪ್ಯಾರೇಲಾಲ್ ಅಲ್ಲಿಂದ ಹೊರಡುವುದರಲ್ಲಿದ್ದಾಗ ದಿಲ್ಲಿಯ ಕೆಲವು ವೌಲಾನಾಗಳು ಗಾಂಧಿ ದರ್ಶನಕ್ಕೆ ಬಂದರು. ‘‘ತಾವು ಇಲ್ಲಿಯೇ ಉಳಿಯಬೇಕೆಂದು ನಾವು ಬಯಸುವುದಿಲ್ಲ. ತಾವು ಎಲ್ಲಿದ್ದರೂ ನಮ್ಮ ಹಿತರಕ್ಷಣೆ ಮಾಡುತ್ತೀರಿ. ತಾವು ಹಿಂದಿರುಗಿ ಬರುವುದರ ಕಾಲಾವಧಿಯಲ್ಲಿ ನಿಮ್ಮ ಉಪವಾಸದ ಫಲ ಎಷ್ಟು ಪ್ರಗತಿಯಾಗಿದೆ ಎಂಬುದನ್ನು ನಾವು ಸಂಗ್ರಹಿಸುತ್ತೇವೆ’’ ಎಂದರು. ಗಾಂಧೀಜಿ: ‘‘ಹದಿನಾಲ್ಕನೇ ತಾರೀಕು ಇಲ್ಲಿರುವ ನಿರೀಕ್ಷೆ. ಆದರೆ ದೈವ ಇನ್ನೊಂದನ್ನು ಇಚ್ಛಿಸಿದರೆ, ಅದು ಬೇರೆ ಮಾತು. ನಾನು ನಾಡಿದ್ದಾದರೂ ಇಲ್ಲಿಂದ ಹೊರಡುತ್ತೇನೆಂಬುದು ನನಗೆ ನಿಶ್ಚಯವಿಲ್ಲ. ಅದೆಲ್ಲ ಭಗವಂತನ ಕೈಯಲ್ಲಿದೆ.’’
ಸಂಜೆ.4:30ರವರೆಗೆ ಸರ್ದಾರ್ ಪಟೇಲರೊಡನೆ ಮಾತನಾಡುತ್ತಾ ಕುಳಿತಿದ್ದರು. ಪ್ರಾರ್ಥನಾ ಸಭೆಗೆ ಹೊತ್ತಾಯಿತೆಂದು ಆಭಾ ಚಡಪಡಿಸುತ್ತಿದ್ದಳು. ಗಾಂಧೀಜಿಗೆ ಗಡಿಯಾರ ತೋರಿಸಿದಳು. ಸರ್ದಾರ್ ಹೊರನಡೆದರು. ಗಾಂಧೀಜಿ ಪ್ರಾರ್ಥನಾ ಸಭೆಗೆ ನಡೆಯಲು ಎದ್ದರು. ಹೋಗುವಾಗ, ಕಾಥಿಯಾವಾಡದಿಂದ ಬಂದಿದ್ದವರು ತಮ್ಮ ದರ್ಶನಕ್ಕೆ ಕಾದಿದ್ದಾರೆ ಎಂದು ಹೇಳಿದಾಗ, ಗಾಂಧೀಜಿ: ‘‘ಪ್ರಾರ್ಥನೆ ಮುಗಿದ ನಂತರ ಬಂದು ಕಾಣಲು ಹೇಳಿ ಆಗ ನಾನು ಬದುಕಿದ್ದರೆ.’’
ಅವರು ಬದುಕಿಗೆ ಹಿಂದಿರುಗಲಿಲ್ಲ!
ಕೈ ಮುಗಿಯುತಾ ನಮಸ್ಕರಿಸುವಂತೆ ನಟಿಸುತ್ತಾ ಬಂದ ಕೊಲೆಗಾರ ‘ಢಮಾರ್, ಢಮಾರ್, ಢಮಾರ್’ ಗಾಂಧಿ ಎದೆಗೆ ಗುಂಡಿಕ್ಕಿದ.
‘‘ಹೇ ರಾಮ್...ರಾ...ಮ್... ರಾ...ಮ್’’ ಉಸಿರು ನಿಂತಿತು.
ಇತ್ತೀಚೆಗೆ ಸಂಘಪರಿವಾರದವರೊಂದು ಸುದ್ದಿ ಹುಟ್ಟಿಸಿದರು: ಎದೆಗೆ ಗುಂಡಿಕ್ಕಿದಾಗ, ಕೊನೆ ಉಸಿರು ಎಳೆಯುವಾಗ, ಗಾಂಧಿ ‘ಹೇ ರಾಮ್’ ಎನ್ನಲೆ ಇಲ್ಲ! ಗಾಂಧೀಜಿ ಬದುಕಿದ್ದಾಗಲೂ ದ್ವೇಷಿಸಿದರು. ಅವರನ್ನು ಕೊಂದ ಮೇಲೂ ದ್ವೇಷಿಸುತ್ತಿದ್ದಾರೆ. ಅವರಷ್ಟೇ ದ್ವೇಷಿಸಿದರೂ ಆ ಜ್ಯೋತಿ ನಂದುವುದಿಲ್ಲ. ಕೋಮುಸೌಹಾರ್ದದ ಆ ಸಂದೇಶ ಸಾಯುವುದಿಲ್ಲ. ಇತ್ತೀಚೆಗೆ ವಿಶ್ವಸಂಸ್ಥೆ (UNO) ಪ್ರತಿ ವರ್ಷ ಗಾಂಧಿ ಜಯಂತಿ ಅಕ್ಟೋಬರ್ 2ರಂದು ಅಹಿಂಸಾ ದಿನವನ್ನಾಗಿ ಆಚರಿಸಬೇಕೆಂದು ಸರ್ವಾನುಮತದಿಂದ ತೀರ್ಮಾನಿಸಿದೆ. ಗಾಂಧಿ ಜ್ಯೋತಿಯನ್ನು ನಂದಿಸಬೇಕೆಂದು ಎಷ್ಟೇ ಪ್ರಯತ್ನ ಮಾಡಿದರೂ ಅದು ಇನ್ನೂ ಉಜ್ವಲವಾಗುತ್ತಿದೆ. ‘‘ಈ ದೇಶವನ್ನು ಬೆಳಗಿಸಿದ ಆ ಬೆಳಕು ಸಾಮಾನ್ಯವಾದ ಬೆಳಕಲ್ಲ. ಸಾವಿರಾರು ವರ್ಷಗಳವರೆಗೆ ಆ ಬೆಳಕು ಕಾಣಿಸುತ್ತಲೇ ಇರುತ್ತದೆ... ಆ ಬೆಳಕು ನಿತ್ಯ ಸತ್ಯಗಳನ್ನು ಪ್ರತಿನಿಧಿಸುತ್ತದೆ’’ ಎಂದು ಅಂದು ನೆಹರೂ ಹೇಳಿದ ಮಾತು ಇಂದು ದಿಟವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News