ಅಗ್ರ-100ರಲ್ಲಿ ಲಕ್ಷ್ಯ ಸೇನ್, ರಿಯಾ ಮುಖರ್ಜಿಗೆ ಸ್ಥಾನ

Update: 2019-03-20 04:23 GMT

ಹೊಸದಿಲ್ಲಿ, ಮಾ.19: ಭಾರತದ ಯುವ ಶಟ್ಲರ್‌ಗಳಾದ ಲಕ್ಷ ಸೇನ್ ಹಾಗೂ ರಿಯಾ ಮುಖರ್ಜಿ ಮಂಗಳವಾರ ಬಿಡುಗಡೆಯಾದ ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್‌ನಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ 76ನೇ ಹಾಗೂ 94ನೇ ಸ್ಥಾನ ಪಡೆದರು. ಈ ಮೂಲಕ ಅಗ್ರ-100ರಲ್ಲಿ ಸ್ಥಾನ ಗಿಟ್ಟಿಸಿಕೊಂಡರು.

ಬಿಡಬ್ಲುಎಫ್ ರ್ಯಾಂಕಿಂಗ್‌ನಲ್ಲಿ ಲಕ್ಷ 28 ಸ್ಥಾನ ಭಡ್ತಿ ಪಡೆದರೆ, ರಿಯಾ 19 ಸ್ಥಾನ ಮೇಲಕ್ಕೇರಿದ್ದಾರೆ.

   ಕಳೆದ ರವಿವಾರ ಬಾಸೆಲ್‌ನಲ್ಲಿ ನಡೆದ ಸ್ವಿಸ್ ಓಪನ್ ಫೈನಲ್‌ನಲ್ಲಿ ಚೀನಾದ ಶಿ ಯುಖಿಗೆ ಶರಣಾಗಿ ಎರಡನೇ ಸ್ಥಾನ ಪಡೆದ ಬಿ.ಸಾಯಿ ಪ್ರಣೀತ್ ಮೂರು ಸ್ಥಾನ ಭಡ್ತಿ ಪಡೆದು 19ನೇ ಸ್ಥಾನ ತಲುಪಿದರು. ಕಿಡಂಬಿ ಶ್ರೀಕಾಂತ್ ಏಳನೇ ಸ್ಥಾನ ಉಳಿಸಿಕೊಂಡರು. ಈ ಮೂಲಕ ಅಗ್ರ-10ರಲ್ಲಿ ಭಾರತದ ಏಕೈಕ ಆಟಗಾರ ಎನಿಸಿಕೊಂಡರು. ಸಮೀರ್ ವರ್ಮಾ(14ನೇ), ಎಚ್.ಎಸ್. ಪ್ರಣಯ್(24ನೇ ನಿ.), ಶುಭಾಂಕರ್ ಡೇ(43ನೇ ನಿ.), ಪರುಪಲ್ಲಿ ಕಶ್ಯಪ್(49ನೇ), ಅಜಯ್ ಜಯರಾಮ್(52ನೇ) ಹಾಗೂ ಸೌರವ್ ವರ್ಮಾ(53ನೇ ನಿ.)ಆ ನಂತರದ ಸ್ಥಾನದಲ್ಲಿದ್ದಾರೆ. ಮಹಿಳೆಯರ ಸಿಂಗಲ್ಸ್ ರ್ಯಾಂಕಿಂಗ್‌ನಲ್ಲಿ ಪಿ.ವಿ.ಸಿಂಧು ಹಾಗೂ ಸೈನಾ ನೆಹ್ವಾಲ್ ಕ್ರಮವಾಗಿ 6ನೇ ಹಾಗೂ 9ನೇ ಸ್ಥಾನದಲ್ಲಿದ್ದಾರೆ. ಚೈನೀಸ್ ತೈಪೆಯ ತೈ ಝು ಯಿಂಗ್ ಮಹಿಳೆಯರ ಸಿಂಗಲ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಚೀನಾದ ಚೆನ್ ಯುಫೈ ಹಾಗೂ ಜಪಾನ್‌ನ ನೊರೊಮಿ ಒಕುಹರಾ 2ನೇ, 3ನೇ ಸ್ಥಾನದಲ್ಲಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ 24ನೇ ಸ್ಥಾನದಲ್ಲಿದ್ದಾರೆ. ಮನು ಅತ್ರಿ ಹಾಗೂ ಬಿ.ಸುಮೀತ್ ರೆಡ್ಡಿ 27ನೇ ಸ್ಥಾನಕ್ಕೆ ಕುಸಿದರು. ಭಾರತದ ಮಹಿಳಾ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ ಹಾಗೂ ಎನ್.ಸಿಕ್ಕಿ ರೆಡ್ಡಿ 23ನೇ ಸ್ಥಾನದಲ್ಲಿದ್ದಾರೆ. ಮಿಶ್ರ ಡಬಲ್ಸ್ ಜೋಡಿ ಅಶ್ವಿನಿ ಹಾಗೂ ರಾನಿಕ್‌ರೆಡ್ಡಿ 24ನೇ ಸ್ಥಾನ ಉಳಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News