ಲಂಡನ್ ನಲ್ಲಿ ನೀರವ್ ಮೋದಿ ಬಂಧನ

Update: 2019-03-20 17:16 GMT

ಹೊಸದಿಲ್ಲಿ, ಮಾ.20: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ)ಗೆ 13,000 ಕೋ.ರೂ.ವಂಚಿಸಿ ದೇಶದಿಂದ ಪರಾರಿಯಾಗಿದ್ದ ವಜ್ರಾಭರಣ ವ್ಯಾಪಾರಿ ನೀರವ್ ಮೋದಿಯನ್ನು ಲಂಡನ್‌ನಲ್ಲಿ ಬಂಧಿಸಲಾಗಿದೆ.

ಮಂಗಳವಾರ ಮಧ್ಯ ಲಂಡನ್‌ನ ಹಾಲ್‌ಬೋರ್ನ್ ಮೆಟ್ರೋ ನಿಲ್ದಾಣದಲ್ಲಿ ಮೋದಿಯನ್ನು ಬಂಧಿಸಲಾಗಿದ್ದು, ಬುಧವಾರ ವೆಸ್ಟ್ ಮಿನಸ್ಟರ್ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ ಎಂದು ಬ್ರಿಟನ್ ಪೊಲೀಸರು ತಿಳಿಸಿದ್ದಾರೆ.

ಮೋದಿಯನ್ನು ಗಡಿಪಾರು ಮಾಡುವಂತೆ ಜಾರಿ ನಿರ್ದೇಶನಾಲಯದ ಕೋರಿಕೆಯ ಮೇರೆಗೆ ಬ್ರಿಟನ್‌ನ ನ್ಯಾಯಾಲಯವು ಕಳೆದ ವಾರ ಆತನ ವಿರುದ್ಧ ವಾರಂಟ್ ಹೊರಡಿಸಿತ್ತು. ಆದರೆ ಭಾರತದ ಬ್ಯಾಂಕುಗಳಿಗೆ 9,000 ಕೋ.ರೂ.ಗಳ ಸಾಲವನ್ನು ಬಾಕಿಯಿರಿಸಿ 2017ರಲ್ಲಿ ಬ್ರಿಟನ್‌ಗೆ ಪರಾರಿಯಾಗಿದ್ದ ಮಾಜಿ ಮದ್ಯದ ದೊರೆ ವಿಜಯ ಮಲ್ಯ ಪ್ರಕರಣದಲ್ಲಿ ನಡೆಯುತ್ತಿರುವಂತೆ ಸುದೀರ್ಘ ಕಾನೂನು ಪ್ರಕ್ರಿಯೆಯ ಬಳಿಕವಷ್ಟೇ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಬ್ರಿಟನ್ ಇತ್ತೀಚಿಗಷ್ಟೇ ಮಲ್ಯ ಗಡಿಪಾರಿಗೆ ಸಮ್ಮತಿ ನೀಡಿದೆಯಾದರೂ,ಈ ವಿಷಯವೀಗ ಅಲ್ಲಿಯ ಗೃಹಸಚಿವಾಲಯದಲ್ಲಿ ಬಾಕಿಯಾಗಿದೆ.

  ಲಂಡನ್ನಿನ ಐಷಾರಾಮಿ ವಸತಿ ಪ್ರದೇಶವಾಗಿರುವ ವೆಸ್ಟ್‌ಎಂಡ್‌ನ 33 ಅಂತಸ್ತುಗಳ ಭವ್ಯ ವಸತಿ ಸಮುಚ್ಚಯದಲ್ಲಿ ಮೋದಿ ವಾಸವಿದ್ದನೆನ್ನಲಾಗಿದೆ. ಕಳೆದ ತಿಂಗಳು ದುಬಾರಿ ಬೆಲೆಯ ಜಾಕೆಟ್ ತೊಟ್ಟು ಲಂಡನ್‌ನ ಬೀದಿಯಲ್ಲಿ ನಡೆದುಕೊಂಡು ಸಾಗುತ್ತಿದ್ದ ಮೋದಿಯನ್ನು ದಿ ಟೆಲಿಗ್ರಾಫ್ ಪತ್ರಿಕೆಯ ವರದಿಗಾರನೋರ್ವ ಗುರುತಿಸಿದ್ದ. ಆತನ ಪ್ರಶ್ನೆಗೆ ಉತ್ತರಿಸಲು ಮೋದಿ ನಿರಾಕರಿಸಿದ್ದ. ಮೋದಿ ಅಗತ್ಯ ಪರವಾನಿಗೆಯನ್ನು ಪಡೆದುಕೊಂಡು ಸೋಹೊದಲ್ಲಿ ವಜ್ರಗಳ ಉದ್ಯಮವನ್ನು ಆರಂಭಿಸಿದ್ದಾನೆ ಎಂದು ದಿ ಟೆಲಿಗ್ರಾಫ್ ಬಳಿಕ ವರದಿ ಮಾಡಿತ್ತು.

ಪಿಎನ್‌ಬಿ ಬ್ಯಾಂಕಿಗೆ 13,000 ಕೋ.ರೂ.ಗಳ ವಂಚನೆ ಹಗರಣ ಬೆಳಕಿಗೆ ಬರುವ ಮುನ್ನವೇ ಮೋದಿ ಕಳೆದ ವರ್ಷ ದೇಶದಿಂದ ಪರಾರಿಯಾಗಿದ್ದ. ಪ್ರಕರಣದಲ್ಲಿ ಇನ್ನೋರ್ವ ಆರೋಪಿಯಾಗಿರುವ ಆತನ ಸಂಬಂಧಿ ಮೆಹುಲ್ ಚೋಕ್ಸಿ ಕೂಡ ದೇಶದಿಂದ ಪರಾರಿಯಾಗಿದ್ದು,ಕಳೆದ ವರ್ಷದ ಜ.15ರಂದು ಆಂಟಿಗುವಾ ಮತ್ತು ಬರ್ಬುಡಾ ಪೌರತ್ವವನ್ನು ಪಡೆದುಕೊಂಡಿದ್ದಾನೆ.

ವಿದೇಶಗಳಲ್ಲಿ ಸಾಲವನ್ನು ಪಡೆಯಲು ಪಿಎನ್‌ಬಿಯ ನಕಲಿ ಗ್ಯಾರಂಟಿಗಳನ್ನು ಬಳಸಲಾಗಿದ್ದ ಹಗರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ.

ಪಿಎನ್‌ಬಿ ಹಗರಣದಲ್ಲಿ ಕಾಂಗ್ರೆಸ್‌ನಿಂದ ನಿರಂತರ ದಾಳಿಗೊಳಗಾಗಿರುವ ಬಿಜೆಪಿಗೆ ಮೋದಿಯ ಬಂಧನ ಹೆಚ್ಚಿನ ಬಲವನ್ನು ನೀಡುವ ನಿರೀಕ್ಷೆಯಿದೆ. ಮೋದಿ ಮತ್ತು ಚೋಕ್ಸಿಯಂತಹ ಉದ್ಯಮಿಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ನೆರವಾಗುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

ಮೋದಿ ಬಂಧನದ ಬೆನ್ನಲ್ಲೇ ಕೇಂದ್ರ ಸಚಿವ ಹರ್ದೀಪ್ ಪುರಿ ಅವರು,‘‘ನೀವು ಪರಾರಿಯಾಗಬಹುದು,ಆದರೆ ದೇಶದ ‘ಚೌಕಿದಾರ’ನಿಂದ ಬಚ್ಚಿಟ್ಟುಕೊಳ್ಳಲು ಸಾಧ್ಯವಿಲ್ಲ. ನ್ಯಾಯಚಕ್ರ ಉರುಳುತ್ತಲೇ ಇರುತ್ತದೆ. ವಿಜಯ ಮಲ್ಯ ಬಳಿಕ ನೀರವ್ ಮೋದಿಯನ್ನು ಲಂಡನ್ನಿನಲ್ಲಿ ಬಂಧಿಸಲಾಗಿದೆ. ಇದು ಆರ್ಥಿಕ ಅಪರಾಧಿಗಳು ದೇಶವನ್ನು ಕೊಳ್ಳೆ ಹೊಡೆಯಲು ಮತ್ತು ಕಾನೂನಿನ ಕಬಂಧಬಾಹುಗಳಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡುವ ಭಾರತವಲ್ಲ ಎನ್ನುವುದಕ್ಕೆ ಸ್ಪಷ್ಟ ಸಂಕೇತವಾಗಿದೆ ’’ಎಂದು ಟ್ವೀಟಿಸಿದ್ದಾರೆ.

ಇದಕ್ಕೆ ಚುರುಕಾಗಿ ಪ್ರತಿಕ್ರಿಯಿಸಿರುವ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬ್ದುಲ್ಲಾ ಅವರು,‘‘ಬಿಜೆಪಿಯು ನೀರವ್ ಮೋದಿಯನ್ನು ಪತ್ತೆ ಹಚ್ಚಿದ್ದು ಲಂಡನ್ನಿನ ‘ದಿ ಟೆಲಿಗ್ರಾಫ್’ ಮತ್ತು ಅದರ ವರದಿಗಾರ ಎಂಬ ಸತ್ಯವನ್ನು ಸಂಪೂರ್ಣವಾಗಿ ಕಡೆಗಣಿಸಿ ಆತನ ಬಂಧನದ ಹೆಗ್ಗಳಿಕೆಯನ್ನು ಪ್ರಧಾನಿಗೆ ನೀಡುತ್ತಿರುವುದು ಮೋಜಿನ ವಿಷಯವಾಗಿದೆ ’’ಎಂದು ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News