ನೀರವ್ ಮೋದಿಗೆ ಜಾಮೀನು ನಿರಾಕರಣೆ: ಮಾ.29ರವರೆಗೆ ಪೊಲೀಸ್ ಕಸ್ಟಡಿ

Update: 2019-03-20 18:20 GMT

ಲಂಡನ್, ಮಾ.20: ಮಂಗಳವಾರ ಲಂಡನ್‌ನಲ್ಲಿ ಬಂಧನಕ್ಕೆ ಒಳಗಾಗಿರುವ ನೀರವ್ ಮೋದಿಗೆ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಬುಧವಾರ ಜಾಮೀನು ನಿರಾಕರಿಸಿದ್ದು , ಮಾರ್ಚ್ 29ರವರೆಗೆ ಪೊಲೀಸ್ ಕಸ್ಟಡಿಯಲ್ಲಿರುವಂತೆ ಆದೇಶಿಸಿದೆ.

ಭಾರತ ಸರಕಾರ 2018ರಲ್ಲಿ ಮಾಡಿಕೊಂಡಿದ್ದ ಗಡೀಪಾರು ಕೋರಿಕೆಯನ್ವಯ ನೀರವ್ ಮೋದಿಯನ್ನು ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ. ಗಡೀಪಾರು ಕೋರಿಕೆ ವಿರುದ್ಧ ಮೇಲ್ಮನವಿ ಸಲ್ಲಿಸಲು ತನ್ನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಬೇಕು. ಈ ನಿಟ್ಟಿನಲ್ಲಿ 5 ಲಕ್ಷ ಪೌಂಡ್‌ಗಳನ್ನು ಭದ್ರತಾ ಠೇವಣಿಯಾಗಿ ಇಡಲು ತಾನು ಸಿದ್ಧ ಎಂದು ಮೋದಿ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು.

ಆದರೆ , ಭಾರೀ ಮೊತ್ತದ ವಂಚನೆ ಪ್ರಕರಣ ಇದಾಗಿರುವ ಕಾರಣ , ಹಾಗೂ ಮೋದಿ ಪಲಾಯನ ಮಾಡುವ ಸಾಧ್ಯತೆ ಇರುವುದರಿಂದ ಜಾಮೀನು ನೀಡಲಾಗದು. ಮುಂದಿನ ವಿಚಾರಣೆ ನಡೆಯುವ ಮಾರ್ಚ್ 29ರವರೆಗೆ ಮೋದಿಯನ್ನು ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ನ್ಯಾಯಾಧೀಶರು ತಿಳಿಸಿದರು. ಒಮ್ಮೆ ಜಾಮೀನು ದೊರತರೆ ಮತ್ತೆ ನೀವು ಶರಣಾಗುವುದಿಲ್ಲ ಎಂದು ಭಾವಿಸಲು ನನಗೆ ಸಾಕಷ್ಟು ಆಧಾರಗಳಿವೆ ಎಂದು ನ್ಯಾಯಾಧೀಶರು ಹೇಳಿದರು.

ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆ 1 ವರ್ಷಕ್ಕೂ ಅಧಿಕ ಕಾಲ ನಡೆಯುವ ನಿರೀಕ್ಷೆಯಿದೆ. ಈ ಹಿಂದೆ ವಿಜಯ್ ಮಲ್ಯ ಪ್ರಕರಣವೂ ಸುಮಾರು 1 ವರ್ಷ ಸಾಗಿತ್ತು. ಮೋದಿ ಲಂಡನ್‌ನಲ್ಲಿ ಆಶ್ರಯ ಕೇಳಿದ್ದ . ಆದರೆ ದೀರ್ಘಕಾಲೀನ ನೀತಿಯ ಅನ್ವಯ ಅಧಿಕಾರಿಗಳು ಈ ಕುರಿತು ಯಾವುದೇ ನಿರ್ಧಾರಕ್ಕೆ ಬಂದಿರಲಿಲ್ಲ ಎನ್ನಲಾಗಿದೆ.

 ಮೋದಿ ಮತ್ತು ಮಲ್ಯರ ಪ್ರಕರಣದಲ್ಲಿ ಇರುವ ವಿಭಿನ್ನತೆ ಎಂದರೆ, ಮೋದಿಯ ವಿರುದ್ಧ ದಾಖಲಿಸಿರುವ ಆರೋಪದಲ್ಲಿ ಆತನ, ಕುಟುಂಬದವರ ಹಾಗೂ ಇತರರ ವಿರುದ್ಧ ವಂಚನೆಯ ಪ್ರಕರಣವನ್ನು ಸ್ಪಷ್ಟವಾಗಿ ದಾಖಲಿಸಲಾಗಿದೆ. ಭಾರತ-ಬ್ರಿಟನ್ ಗಡೀಪಾರು ಒಪ್ಪಂದದಂತೆ, ಓರ್ವ ವ್ಯಕ್ತಿ ಈ ಎರಡೂ ದೇಶಗಳಲ್ಲಿ ಕ್ರಿಮಿನಲ್ ದುಷ್ಕೃತ್ಯ ನಡೆಸಿದ್ದರೆ ಆತನನ್ನು ಪರಸ್ಪರ ದೇಶಕ್ಕೆ ಗಡೀಪಾರು ಮಾಡಬಹುದಾಗಿದೆ.

ಆದರೆ ಮಲ್ಯ ಗಡೀಪಾರು ಪ್ರಕರಣದಲ್ಲಿ ಆದಂತೆಯೇ, ಮೋದಿಯ ವಕೀಲರೂ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಲೋಪವಿದೆ ಎಂದು ಆರೋಪಿಸಬಹುದು. ಮೋದಿಯನ್ನು ಭಾರತದ ಜೈಲಿನಲ್ಲಿರಿಸಿದರೆ ಅವರ ಮಾನವ ಹಕ್ಕುಗಳಿಗೆ ಅಪಾಯ ಎದುರಾಗಬಹುದು, ಅಲ್ಲದೆ ರಾಜಕೀಯ ಕಿರುಕುಳ, ಒತ್ತಡ ಮತ್ತು ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿರುವ ದೌರ್ಬಲ್ಯದಿಂದ ನ್ಯಾಯ ತೀರ್ಮಾನಕ್ಕೆ ತಡೆಯಾಗಬಹುದು ಎಂದು ಮೋದಿರ ವಕೀಲರು ವಾದ ಮಂಡಿಸುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News