ಲೋಕಪಾಲ ಸ್ವತಂತ್ರವಾಗಿ ಕಾರ್ಯನಿರ್ವಹಿಸೀತೇ?

Update: 2019-03-20 18:32 GMT

ಒ ಂದು ತನಿಖಾ ಸಂಸ್ಥೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲು ರಾಜಕಾರಣಿಗಳು ಅವಕಾಶ ನೀಡಿದರೆ, ಅದು ಭ್ರಷ್ಟಾಚಾರಿಗಳಿಗೆ ಯಾವ ಸ್ಥಿತಿ ತಂದು ಹಾಕಬಹುದು ಎನ್ನುವುದಕ್ಕೆ ಕರ್ನಾಟಕ ಲೋಕಾಯುಕ್ತ ಅತ್ಯುತ್ತಮ ಉದಾಹರಣೆ. ದೇಶದಲ್ಲಿ ಅಸ್ತಿತ್ವದಲ್ಲಿರುವ ಲೋಕಾಯುಕ್ತ ಸಂಸ್ಥೆಗಳಲ್ಲಿ ಕರ್ನಾಟಕದ ಲೋಕಾಯುಕ್ತಕ್ಕೆ ವಿಶೇಷ ಗೌರವವಿದೆ. ಅಕ್ರಮ ಗಣಿಗಾರಿಕೆಯ ಲೋಕಾಯುಕ್ತ ತನಿಖೆ ಅಂತಿಮವಾಗಿ ಒಬ್ಬ ಮುಖ್ಯಮಂತ್ರಿಯನ್ನು ರಾಜೀನಾಮೆ ಸಲ್ಲಿಸುವ ಸ್ಥಿತಿಗೆ ತಂದು ನಿಲ್ಲಿಸಿತು. ಸರಕಾರದ ಅತ್ಯುನ್ನತ ಸ್ಥಾನದಲ್ಲಿದ್ದ ಹಲವು ಗಣ್ಯರು ಜೈಲು ಸೇರುವಂತಾಯಿತು ಹಾಗೂ ಅವರು ರಾಜಕೀಯವಾಗಿ ಸಂಪೂರ್ಣ ನೆಲೆ ಕಳೆದುಕೊಂಡರು. ರಾಜ್ಯದ ಲೋಕಾಯುಕ್ತದ ಕುರಿತಂತೆ ದೇಶವೇ ಹುಬ್ಬೇರಿಸುವಂತಾಗಿತ್ತು. ಲೋಕಾಯುಕ್ತ ಯಾವಾಗ ರಾಜಕಾರಣಿಗಳ ಮೇಲೆಯೇ ದಾಳಿ ನಡೆಸತೊಡಗಿತೋ, ಸರ್ವ ಪಕ್ಷಗಳೂ ಜೊತೆ ಸೇರಿ ರಾಜ್ಯದಲ್ಲಿ ಲೋಕಾಯುಕ್ತವನ್ನು ಮುಗಿಸಿದರು. ಅದರ ರೆಕ್ಕೆ ಪುಕ್ಕಗಳನ್ನೆಲ್ಲ ಕತ್ತರಿಸಿ, ಲೋಕಾಯುಕ್ತರು ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದಕ್ಕೇ ಸಾಧ್ಯವಾಗದಂತಹ ಸ್ಥಿತಿಗೆ ರಾಜಕಾರಣಿಗಳು ತಂದಿಟ್ಟಿದ್ದಾರೆ.

ಇತ್ತ ಕೇಂದ್ರದಲ್ಲಿ ಎಲ್ಲ ಉನ್ನತ ತನಿಖಾ ಸಂಸ್ಥೆಗಳು ಸರಕಾರದ ಹಸ್ತಕ್ಷೇಪದಿಂದ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿರುವ ಸಂದರ್ಭದಲ್ಲಿ ಭಾರತದ ಪ್ರಪ್ರಥಮ ಲೋಕಪಾಲರ ನೇಮಕವಾಗಿದೆ. ಲೋಕಪಾಲ ಸ್ಥಾಪನೆಗೆ ಒಂದು ದೊಡ್ಡ ಜನಾಂದೋಲನವೇ ನಡೆದಿತ್ತು. ಲೋಕಪಾಲರಿಗೆ ಕೇಂದ್ರದಲ್ಲಿರುವ ಜನನಾಯಕರನ್ನೂ ತನಿಖೆಗೊಳಪಡಿಸುವ ಅಧಿಕಾರವಿರುವುದರಿಂದ ಈ ನೇಮಕ ಮಹತ್ವವನ್ನು ಪಡೆದಿದೆ. ಯುಪಿಎ ಅಧಿಕಾರದಲ್ಲಿದ್ದಾಗ ಲೋಕಪಾಲ ಸ್ಥಾಪನೆಗೆ ಬಿಜೆಪಿಯೂ ಆಗ್ರಹಿಸಿತ್ತು. ಆದರೆ ಯಾವಾಗ ಮೋದಿ ನೇತೃತ್ವದಲ್ಲಿ ಬಿಜೆಪಿ ಅಧಿಕಾರ ಹಿಡಿಯಿತೋ ಲೋಕಪಾಲದ ಕುರಿತಂತೆ ವೌನ ತಾಳಿತು. ಅಣ್ಣಾಹಝಾರೆ ಸೇರಿದಂತೆ ಹಲವು ಸಾಮಾಜಿಕ ಹೋರಾಟಗಾರರು ಲೋಕಪಾಲ ನೇಮಕಕ್ಕಾಗಿ ಧ್ವನಿಯೆತ್ತಿದರಾದರೂ, ಮೋದಿ ಸರಕಾರ ಅವುಗಳಿಗೆ ಸ್ಪಂದಿಸಲೇ ಇಲ್ಲ. ಇದೀಗ ಸರಕಾರದ ಅಧಿಕಾರಾವಧಿ ಮುಗಿದು ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಲೋಕಪಾಲರ ನೇಮಕವಾಗಿದೆ. ಲೋಕಪಾಲ ಸಂಸ್ಥೆಯ ಕುರಿತಂತೆ ಸರಕಾರ ಎಷ್ಟು ಗಂಭೀರವಾಗಿದೆ ಎನ್ನುವುದನ್ನು ಇದು ಹೇಳುತ್ತದೆ.

ಚುನಾವಣೆಯ ಸಂದರ್ಭದಲ್ಲಿ ಮತದಾರರ ಕಣ್ಣಿಗೆ ಮಣ್ಣೆರಚುವ ಏಕೈಕ ಉದ್ದೇಶದಿಂದ ಲೋಕಪಾಲರನ್ನು ನೇಮಕ ಮಾಡಲಾಗಿದೆ. ಲೋಕಪಾಲರನ್ನು ನೇಮಕ ಮಾಡಿದಾಕ್ಷಣ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ ಎನ್ನುವಂತಿಲ್ಲ. ಕರ್ನಾಟಕವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಇಂದಿಗೂ ಲೋಕಾಯುಕ್ತಕ್ಕೆ ಸರಕಾರ ಪೂರ್ಣ ಅಧಿಕಾರವನ್ನು ನೀಡಿಲ್ಲ. ಹಾಗೆಯೇ ರಾಜಕಾರಣಿಗಳು ಮನಸ್ಸು ಮಾಡಿದರೆ, ಲೋಕಾಯುಕ್ತವನ್ನು ಮೂಲೆಗುಂಪು ಮಾಡುವುದು ದೊಡ್ಡ ವಿಷಯವೇನಲ್ಲ ಎನ್ನುವುದು ರಾಜ್ಯದಲ್ಲಿ ಸಾಬೀತಾಗಿದೆ. ವರ್ಷಗಳ ಕಾಲ ಮುಖ್ಯ ಲೋಕಾಯುಕ್ತ ಸ್ಥಾನವನ್ನು ತುಂಬುವುದಕ್ಕೆ ನ್ಯಾಯಾಧೀಶರೇ ಇದ್ದಿರಲಿಲ್ಲ. ಸಂತೋಷ್ ಹೆಗ್ಡೆಯವರ ಕಾಲದಲ್ಲಿ ಸದ್ದು ಮಾಡಿದ ಲೋಕಾಯುಕ್ತ, ಇಂದು ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ ಎಂದು ಅನುಮಾನ ಪಡುವಂತಾಗಿದೆ. ಸಿಬಿಐ ಸಂಸ್ಥೆಗೆ ಇತ್ತೀಚೆಗೆ ಒದಗಿದ ದೈನೇಸಿ ಸ್ಥಿತಿಯನ್ನು ದೇಶ ನೋಡಿದೆ. ರಫೇಲ್ ಹಗರಣದ ಕುರಿತಂತೆ ಸಿಬಿಐ ಮುಖ್ಯಸ್ಥರು ಆಸಕ್ತಿ ತೋರಿಸಿದರು ಎನ್ನುವ ಒಂದೇ ಕಾರಣಕ್ಕಾಗಿ ಅಸಾಂವಿಧಾನಿಕವಾಗಿ ಅವರನ್ನು ವಜಾಗೊಳಿಸಿತು. ಸುಪ್ರೀಂಕೋರ್ಟ್ ಆದೇಶಕ್ಕೂ ಸರಕಾರ ತಲೆಬಾಗಲಿಲ್ಲ. ಅಂತಿಮವಾಗಿ ಮುಖ್ಯಸ್ಥರೇ ರಾಜೀನಾಮೆ ನೀಡಿ ನಿರ್ಗಮಿಸುವಂತಹ ಸನ್ನಿವೇಶವನ್ನು ನಿರ್ಮಾಣ ಮಾಡಿತು.

ದೇಶದ ವಿವಿಧ ತನಿಖಾ ಸಂಸ್ಥೆಗಳನ್ನು ತನ್ನ ರಾಜಕೀಯ ದುರುದ್ದೇಶಗಳಿಗೆ ಬಳಸಿಕೊಳ್ಳುವ ಮೂಲಕ ಜನರು ಆ ಸಂಸ್ಥೆಗಳ ಮೇಲೆ ಅನುಮಾನ ಪಡುವಂತಾಗಿದೆ. ತನ್ನ ರಾಜಕೀಯ ವಿರೋಧಿಗಳನ್ನು ಮಣಿಸುವುದಕ್ಕೆ, ಬೆದರಿಸುವುದಕ್ಕೆ ಸರಕಾರ ಅವುಗಳನ್ನು ಬಹಿರಂಗವಾಗಿಯೇ ಬಳಸಿಕೊಂಡಿತು. ಈ ಹಿಂದಿನ ಸರಕಾರಗಳು ಗುಟ್ಟಾಗಿ ಸಿಬಿಐಯನ್ನು ನಿಯಂತ್ರಿಸಲು ಯತ್ನಿಸಿದ್ದರೆ ಮೋದಿ ಸರಕಾರ ಬಹಿರಂಗವಾಗಿಯೇ ಸಿಬಿಐ ಸಂಸ್ಥೆಯ ಮೇಲೆ ಎರಗಿ ಬಿತ್ತು. ಇಂದು ಸಿಬಿಐ ಸಂಪೂರ್ಣ ಸರಕಾರದ ಸೂತ್ರದ ಗೊಂಬೆಯಾಗಿ ಬಿಟ್ಟಿದೆ. ಹೀಗಿರುವಾಗ, ಕೇಂದ್ರ ಸರಕಾರ ಲೋಕಪಾಲರ ನೇಮಕ ಮಾಡಿದೆ ಎನ್ನುವ ಕಾರಣಕ್ಕೆ ಹರ್ಷಿಸಲು ಸಕಾರಣವಿಲ್ಲ. ಯಾಕೆಂದರೆ ಸಿಬಿಐಯಂತಹ ಸಂಸ್ಥೆಯನ್ನೇ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡದ ಕೇಂದ್ರ ಸರಕಾರ, ಲೋಕಪಾಲಕ್ಕೆ ಆ ಅವಕಾಶ ನೀಡುತ್ತದೆ ಎಂದು ನಿರೀಕ್ಷಿಸುವುದಾದರೂ ಹೇಗೆ? ತನ್ನ ರಾಜಕೀಯ ದುರುದ್ದೇಶವನ್ನು ಸಾಧಿಸಲು ಅವರು ಸ್ಥಾಪಿಸಿದ ಇನ್ನೊಂದು ಸಂಸ್ಥೆಯಾಗಿಯಷ್ಟೇ ನಾವು ಭಾವಿಸಬೇಕಾಗಿದೆ.

 ಲೋಕಪಾಲಕ್ಕೆ ಜನನಾಯಕರನ್ನೂ ಪ್ರಶ್ನಿಸುವ, ತನಿಖೆಗೊಳಪಡಿಸುವ ಅಧಿಕಾರವಿದೆ. ಅದು ಒಂದು ರೀತಿಯಲ್ಲಿ ಪ್ರಜಾಸತ್ತೆಯ ಕಾವಲುಗಾರನಂತೆ ಕೆಲಸ ಮಾಡುತ್ತದೆ. ರಫೇಲ್‌ನಂತಹ ಹಗರಣವನ್ನು ಅದು ಕೈಗೆತ್ತಿಕೊಂಡರೆ ಪ್ರಧಾನಿ ಮೋದಿಯ ಪ್ರತಿಕ್ರಿಯೆ ಹೇಗಿರಬಹುದು ಎನ್ನುವುದನ್ನು ಊಹಿಸುವುದಕ್ಕೆ ಕಷ್ಟವೇನಿಲ್ಲ. ಲೋಕಪಾಲ ನೇಮಕದಿಂದಷ್ಟೇ ಭ್ರಷ್ಟಾಚಾರವನ್ನು ತಡೆಯಲು ಸಾಧ್ಯವಿಲ್ಲ. ಆ ಲೋಕಪಾಲ ಸಂಸ್ಥೆಗೆ ಪೂರ್ಣ ಅಧಿಕಾರವನ್ನು ನೀಡಿದಾಗಷ್ಟೇ ಭ್ರಷ್ಟರಲ್ಲಿ ನಡುಕ ಹುಟ್ಟಬಹುದು. ಇಲ್ಲವಾದರೆ ಹತ್ತರಲ್ಲಿ ಹನ್ನೊಂದಾಗಿ ಲೋಕಪಾಲವೂ ಕೇಂದ್ರ ಸರಕಾರದ ಜೀತದಾಳುವಿನಂತೆ ಕೆಲಸ ನಿರ್ವಹಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಲೋಕಪಾಲಕ್ಕೆ ಸರ್ವ ಅಧಿಕಾರವನ್ನು ನೀಡುವುದು, ಯಾವುದೇ ಆರೋಪಗಳಿಲ್ಲದ ಸಮರ್ಥ ಅಧಿಕಾರಿಗಳನ್ನು, ಮುಖ್ಯಸ್ಥರನ್ನು ನೇಮಕ ಮಾಡುವುದು, ಯಾವುದೇ ರಾಜಕೀಯ ಹಿತಾಸಕ್ತಿಗೆ ಬಗ್ಗದೆ ಕೆಲಸ ನಿರ್ವಹಿಸಲು ಅವಕಾಶ ನೀಡುವುದು ಅತ್ಯಗತ್ಯವಾಗಿದೆ. ಹಾಗೆ ಅವಕಾಶ ನೀಡಿದ್ದೇ ಆದಲ್ಲಿ, ಲೋಕಪಾಲಕ್ಕೆ ಮೊದಲ ಆಹಾರವೇ ನಮ್ಮ ರಾಜಕೀಯ ನಾಯಕರು. ಹೀಗಿರುವಾಗ, ಲೋಕಪಾಲವನ್ನು ಸಶಕ್ತಗೊಳಿಸುವ ತಪ್ಪನ್ನು ನಮ್ಮ ರಾಜಕೀಯ ನಾಯಕರು ಮಾಡುತ್ತಾರೆ ಎಂದು ಅನ್ನಿಸುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News