ಜೆಟ್ ಉಳಿಸಲು ಮೋದಿಯಿಂದ ಸಾರ್ವಜನಿಕ ಹಣ ದುರ್ಬಳಕೆ: ಕಾಂಗ್ರೆಸ್

Update: 2019-03-21 03:51 GMT

ಹೊಸದಿಲ್ಲಿ, ಮಾ.21: ಜೆಟ್ ಏರ್‌ವೇಸ್‌ನ ಸಾಲವನ್ನು ಈಕ್ವಿಟಿಯಾಗಿ ಮಾರ್ಪಡಿಸುವಂತೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಸೂಚನೆ ನೀಡುವ ಮೂಲಕ ಕೇಂದ್ರ ಸರ್ಕಾರ, ಸಾರ್ವಜನಿಕ ಹಣ ದುರ್ಬಳಕೆ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ಆಪಾದಿಸಿದೆ.

"ದಿವಾಳಿ"ಯಾಗಿರುವ ಜೆಟ್ ಏರ್‌ವೇಸ್‌ಗೆ ನೆರವು ನೀಡುವ ಸಂಬಂಧ ಭಾರತೀಯ ಸ್ಟೇಟ್ ಬ್ಯಾಂಕ್ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟದ ಪ್ರಸ್ತಾವಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪಕ್ಷದ ವಕ್ತಾರ ಸುರ್ಜೇವಾಲಾ, "ಒಂದೆಡೆ ಸರ್ಕಾರ ಏರ್‌ ಇಂಡಿಯಾವನ್ನು ಖಾಸಗೀಕರಿಸಲು ಹೊರಟಿದೆ. ಇನ್ನೊಂದೆಡೆ ಮುಳುಗುವ ಹಡಗಿನ ಷೇರುಗಳನ್ನು ಖರೀದಿಸುವಂತೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಮೇಲೆ ಒತ್ತಡ ಹೇರುತ್ತಿದೆ" ಎಂದು ಆಕ್ಷೇಪಿಸಿದರು.

ಜೆಟ್ ಏರ್‌ವೇಸ್ ನೆರವಿಗೆ ಧಾವಿಸಿರುವ ಪ್ರಧಾನಿ ನರೇಂದ್ರ ಮೋದಿ, ಜೆಟ್ ಏರ್‌ವೇಸ್‌ನ 8,500 ಕೋಟಿ ರೂಪಾಯಿ ಸಾಲವನ್ನು ಈಕ್ವಿಟಿ ಷೇರುಗಳಾಗಿ ಪರಿವರ್ತಿಸಿಕೊಳ್ಳುವಂತೆ ಎಸ್‌ಬಿಐ ಹಾಗೂ ಇತರ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಸೂಚನೆ ನೀಡಿದ್ದಾರೆ ಎಂದು ಜಾಲತಾಣಗಳಲ್ಲಿ ವರದಿಯಾಗಿದೆ. ಇದರಿಂದಾಗಿ ಎಸ್‌ಬಿಐ ಹಾಗೂ ಇತರ ಬ್ಯಾಂಕ್‌ಗಳು ದಿವಾಳಿ ಖಾಸಗಿ ಏರ್‌ಲೈನ್ಸ್‌ನ ಶೇಕಡ 51ರಷ್ಟು ಷೇರುಗಳನ್ನು ಹೊಂದಿದ ಮಾಲಕರಾಗಲಿವೆ. ಬ್ಯಾಂಕ್‌ಗಳು ವಿಮಾನ ಓಡಿಸುತ್ತವೆಯೇ? ಎಂದು ಅವರು ಪ್ರಶ್ನಿಸಿದರು.

ಅಂತೆಯೇ ಇತಿಹಾದ್ ಏರ್‌ಲೈನ್ಸ್‌ನ ಶೇಕಡ 24ರಷ್ಟು ಷೇರುಗಳನ್ನು 150 ರೂಪಾಯಿ ದರದಲ್ಲಿ ಖರೀದಿಸುವಂತೆ ರಾಷ್ಟ್ರೀಯ ಮೂಲಸೌಕರ್ಯ ಹೂಡಿಕೆ ನಿಧಿಗೆ ಸೂಚಿಸಲಾಗಿದೆ ಎಂದೂ ಆಪಾದಿಸಿದರು. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ವಿದೇಶಿ ಕಂಪೆನಿಯ ಸಾಲವನ್ನು ಮನ್ನಾ ಮಾಡಲು ಷೇರುಗಳನ್ನು ಖರೀದಿಸುತ್ತಿರುವುದು ಇದೇ ಮೊದಲು ಎಂದು ಅವರು ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News