ಬಂಗುಡೆ ಮೀನು ಪ್ರಕಾಶಿಸಿತು...!

Update: 2019-03-21 05:50 GMT

ತಿರೂರ್ (ಕೇರಳ), ಮಾ. 21: ಪದಾರ್ಥ ಮಾಡಲೆಂದು ಖರೀದಿಸಿದ ಮೀನು ಪ್ರಕಾಶಿಸತೊಡಗಿದರೆ ಹೇಗಿರಬಹುದು? ಇಂತಹದ್ದೊಂದು ಘಟನೆ ಇತ್ತೀಚೆಗೆ ಕೇರಳದ ತಿರೂರ್ ಎಂಬಲ್ಲಿ ನಡೆದಿದ್ದು, ಮೊದಲಿಗೆ ಆಶ್ಚರ್ಯಗೊಂಡ ಮನೆಯವರು ಬಳಿಕ ಪದಾರ್ಥ ಮಾಡಲು ಹೆದರಿದರು. ಹೆಚ್ಚಿನ ಬೆಲೆ ಕೊಟ್ಟು ಖರೀದಿಸಿದ ಮೀನನ್ನು ಬಳಿಕ ಮನೆಯವರು ಬಿಸಾಡಿದರು.

ಕಳೆದ ಕೆಲ ದಿನಗಳ ಹಿಂದೆ ತಿರೂರ್ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಅಲ್ಲಿನ ನಿವಾಸಿಗಳು ಖರೀದಿಸಿದ ಬಂಗುಡೆ ಮೀನು ಕತ್ತಲೆಯಲ್ಲಿ ಪ್ರಕಾಶಿಸತೊಡಗಿದೆ. ಹೊರನೋಟಕ್ಕೆ ತಾಜಾ ಎಂದು ಗೋಚರಿಸುತ್ತಿದ್ದ ಬಂಗುಡೆ ಮೀನನ್ನು ಕಿ.ಲೋ.ಗೆ 200 ರೂ. ಕೊಟ್ಟು ಅವರು ಖರೀದಿಸಿದ್ದರು. ಕೊಳ್ಳುವಾಗ ದೃಢವಾಗಿದ್ದ ಬಂಗುಡೆ ಮೀನು ಬಿಳಿ ಮತ್ತು ಹಸಿರು ಬಣ್ಣದ ಮಿಶ್ರಣ ಹೊಂದಿತ್ತು.ರಾತ್ರಿ ವೇಳೆ ಪದಾರ್ಥ ಮಾಡಲೆಂದು ಮೀನನ್ನು ಹೊರ ತೆಗೆದಾಗ ಪ್ರಕಾಶಿಸುವುದು ಕಂಡಿತು. ಮೀನು ವಾರಗಳವರೆಗೆ ಹಾಳಾಗದಿರಲು ಅದಕ್ಕೆ ಸೇರಿಸುವ ರಾಸಾಯನಿಕವೇ ಮೀನು ಪ್ರಕಾಶಿಸಲು ಕಾರಣ ಎಂದು ಮೀನುಗಾರರು ಹೇಳಿದ್ದಾರೆ.

ಕೇರಳದಲ್ಲಿ ಮೀನಿನ ಕ್ಷಾಮ ಹೆಚ್ಚಾಗಿದ್ದು, ಬಂಗುಡೆ, ಭೂತಾಯಿ ಮತ್ತಿತರ ಜಾತಿಯ ಮೀನುಗಳನ್ನು ನೆರೆ ರಾಜ್ಯಗಳಿಂದ ತರಿಸಿಕೊಳ್ಳಲಾಗುತ್ತಿದೆ. ಹೊರಗಿನಿಂದ ಬರುವ ಈ ಮೀನುಗಳಿಗೆ ವಿಷಾಂಶ ಸೇರಿಸಲಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಾಗರಿಕರು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News