ನಮ್ಮೆಲ್ಲ ಸಾಮಾಜಿಕ ವೇದನೆಗೆ ಉಚ್ಚಶಿಕ್ಷಣವೇ ಸಿದ್ಧೌಷಧ

Update: 2019-03-21 18:33 GMT

ಭಾಗ-2

ಸದ್ಯ ಕಾಲೇಜಿನಲ್ಲಿ ಬಿ.ಎ. ಮತ್ತು ಇಂಟರ್ ಸೈನ್ಸ್‌ವರೆಗೆ ಶಿಕ್ಷಣ ನೀಡಲಾಗುತ್ತಿದೆ. ಮುಂದಿನ ವರ್ಷ ಸೈನ್ಸ್ ಡಿಗ್ರಿಯವರಿಗೆ ಕ್ಲಾಸ್ ಆರಂಭಿಸಿ ಸಂಪೂರ್ಣ ಕಾಲೇಜನ್ನಾಗಿ ಪರಿವರ್ತಿಸುವ ನಿರ್ಧಾರ ಕೈಗೊಳ್ಳಲಾಗಿದೆ.ಸದ್ಯ ಕಾಲೇಜು ಬಾಡಿಗೆ ಕಟ್ಟಡದಲ್ಲಿದೆ. ಇದು ಕಂಟೋಮೆಂಟ್ ವಿಭಾಗಕ್ಕೆ ಸೇರಿದ್ದರಿಂದ ಎರಡು ತಿಂಗಳ ನೋಟಿಸ್ ನೀಡಿ ಖಾಲಿ ಮಾಡಲು ಮಿಲಿಟರಿ ಯಾವಾಗಲೂ ಸೂಚಿಸಬಹುದು. ಪರಿಸ್ಥಿತಿ ತುಂಬಾ ನಾಜೂಕಾಗಿದೆ. ಈ ಪರಿಸ್ಥಿತಿಯಿಂದಾಗಿ ಕಾಲೇಜಿನ ಅಸ್ತಿತ್ವದ ಬಗೆಗೆ ಶಂಕೆ ನಿರ್ಮಾಣವಾಗಬಹುದು. ಕಾಲೇಜಿನ ಅಗತ್ಯವನ್ನು ಗಮನಿಸಿದರೆ ಸದ್ಯದ ಜಾಗ ಅಪೂರ್ಣವಾಗಿದೆ. ಹಾಗೆಯೇ ವಿದ್ಯಾರ್ಥಿಗಳು ಹಾಸ್ಟೆಲ್‌ನ ಬೇಡಿಕೆಯನ್ನು ಸಲ್ಲಿಸಿದ್ದಾರೆ.

ಏಕೆಂದರೆ ಸ್ಥಳೀಯ ವಿದ್ಯಾರ್ಥಿಗಳಿಗಿಂತ ಹೊರಗಿನಿಂದ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ನಗರದಲ್ಲಿ ಉಳಿದುಕೊಳ್ಳುವ ಸರಿಯಾದ ವ್ಯವಸ್ಥೆ ಇಲ್ಲ. ಈ ಎಲ್ಲಾ ಕಾರಣದಿಂದಾಗಿ ಕಾಲೇಜು ಸ್ವಂತ ಕಟ್ಟಡವನ್ನು ಹೊಂದುವುದು ತೀರಾ ಅಗತ್ಯದ್ದಾಗಿದೆ. ಆ ದೃಷ್ಟಿಯಿಂದ ಸಂಸ್ಥೆಯ ಕಟ್ಟಡ ನಿರ್ಮಾಣಕ್ಕೆ ಕೈ ಹಾಕಿದೆ. ಈ ಕಟ್ಟಡದಲ್ಲಿ 1,200 ವಿದ್ಯಾರ್ಥಿಗಳಿಗೆ ಅನುಕೂಲವಾಗುವಂಥ ಕ್ಲಾಸ್‌ರೂಮ್‌ಗಳು, ಒಂದು ಸಭಾ ಗೃಹ ಮತ್ತು ಹಾಸ್ಟೆಲ್ ಇರುತ್ತದೆ. ಅದಕ್ಕಾಗಿ ಸಂಸ್ಥೆಯು ನಗರದಿಂದ ಎರಡು ಮೈಲು ದೂರದಲ್ಲಿರುವ 155 ಎಕರೆಯಷ್ಟು ಭೂಮಿಯನ್ನು ಖರೀದಿಸಿದೆ. ಈ ಭೂಮಿಯ ಸುತ್ತಲಿನ ಪ್ರದೇಶ ರಮಣೀಯವಾಗಿದ್ದು ಈಜುವ ಮತ್ತು ಬೋಟಿಂಗ್ ವ್ಯವಸ್ಥೆ ಇರುವ ಔರಂಗಾಬಾದಿನ ಪ್ರಸಿದ್ಧ ಸರೋವರವಿದೆ.

ಈ ರೀತಿಯಲ್ಲಿ ಈ ಕಾಲೇಜನ್ನು ಹೈದರಾಬಾದ್ ಸಂಸ್ಥಾನ ಮತ್ತು ಔರಂಗಾಬಾದ್ ನಗರಕ್ಕೆ ಭೂಷಣಪ್ರಾಯವನ್ನಾಗಿ ಮಾಡುವ ಬಯಕೆ ಸಂಸ್ಥೆಯದು. ಆದರೂ ಸಹ ಕಾಲೇಜಿಗೆ ಇಂಥ ಸ್ಥಿತಿ ಪ್ರಾಪ್ತವಾಗುತ್ತದೆಯೋ ಇಲ್ಲವೋ ಎಂಬ ಚಿಂತೆ ಸಂಸ್ಥೆಗೆ ಕಾಡುತ್ತಿದೆ. ಕಾಲೇಜಿನ ಮೊದಲ ವರ್ಷವೇ ಸಂಸ್ಥೆಗೆ 1,07,000 ರೂ. ಕೊರತೆ ಬಿದ್ದಿದೆ. ವಿದ್ಯಾರ್ಥಿಗಳ ಸಂಖ್ಯೆಯು ಸ್ವಲ್ಪ ಹೆಚ್ಚಾಗಿದ್ದರಿಂದ ಈ ವರ್ಷ ಸ್ವಲ್ಪ ಕೊರತೆ ಕಡಿಮೆಯಾಗಬಹುದು. ಈ ಕೊರತೆಯು ಅನಿಶ್ಚಿತ ಕಾಲದ ವರೆಗೆ ಮುಂದುವರಿದು ಕಾಲೇಜನ್ನು ಮುನ್ನಡೆಸುವ ಸಂಸ್ಥೆಯ ಪ್ರಯತ್ನ ನಿಷ್ಫಲಗೊಳ್ಳುತ್ತದೆಯೋ ಏನೋ ಎಂಬ ಭೀತಿಯೂ ಕಾಡುತ್ತಲಿದೆ. ಅದರ ಕಾರಣ ಸ್ವಲ್ಪ ಗಂಭೀರ ಸ್ವರೂಪದ್ದು. ಅದು ಕೆಲವರಿಗೆ ಮಾತ್ರ ಗೊತ್ತಿದೆ. ಹೀಗಾಗಿ ಅದನ್ನು ಬಹಿರಂಗವಾಗಿ ಹೇಳಿಬಿಡುವುದೇ ವಾಸಿ ಎಂದೆನಿಸುತ್ತಿದೆ.
ಮೊದಲನೇ ಕಾರಣವೆಂದರೆ, ಉಸ್ಮಾನಿಯ ಯೂನಿವರ್ಸಿಟಿಯ ಇಂಟರ್‌ವರೆಗಿನ ಕಾಲೇಜಿನ ಅಸ್ತಿತ್ವ ಪೀಪಲ್ಸ್ ಎಜುಕೇಶನ್ ಸೊಸೈಟಿಯು ಔರಂಗಾಬಾದಿನಲ್ಲಿ ತಮ್ಮ ಕಾಲೇಜು ಆರಂಭಿಸುವ ಮೊದಲಿನಿಂದಲೂ ಉಸ್ಮಾನಿಯಾ ಯೂನಿವರ್ಸಿಟಿಯ ಈ ಕಾಲೇಜು ಇಲ್ಲಿದೆ. ಆದರೆ ಎರಡೂ ಕಾಲೇಜು ನಡೆಯುವಷ್ಟು ವಿದ್ಯಾರ್ಥಿಗಳ ಸಂಖ್ಯೆಯು ಇಲ್ಲದ್ದರಿಂದ ಆ ಕಾಲೇಜು ಸೊಸೈಟಿಯ ಕಾಲೇಜಿನೊಂದಿಗೆ ಪ್ರತಿಸ್ಪರ್ಧಿಯಂತೆ ವರ್ತಿಸುತ್ತಿದೆ.

ಸಂಸ್ಥಾನದಲ್ಲಿ ಹಲವು ನಗರಗಳಿವೆ. ಅಲ್ಲಿ ಕಟ್ಟಡಗಳೂ ಇವೆ. ಆದರೆ ಕಾಲೇಜುಗಳಿಲ್ಲ. ಸಂಸ್ಥಾನದ ಪ್ರಜೆಗಳ ಮತ್ತು ತಮ್ಮ ಸ್ವಂತಲಾಭದ ದೃಷ್ಟಿಯಿಂದ ತಮ್ಮ ಕಾಲೇಜನ್ನು ಇಂತಹದೇ ಬೇರೆ ಯಾವುದೇ ನಗರಕ್ಕೆ ಒಯ್ಯುವುದು ಸುಲಭವಾಗಬಲ್ಲದು. ಹಾಗೆ ಯೂನಿವರ್ಸಿಟಿಯು ನಮ್ಮ ಸಂಸ್ಥೆಗೆ ತಿಳಿಸಿಯೂ ಇತ್ತು. ಆದರೆ ಅದನ್ನು ಮಾಡದೆ ಅದನ್ನು ಇಲ್ಲೇ ಉಳಿಸುವ ಪ್ರಯತ್ನ ನಡೆಸಿದೆ. ಯೂನಿವರ್ಸಿಟಿಯ ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥೆಯು ಅವಕಾಶ ಮಾಡಿಕೊಡಬಲ್ಲದು. ಅದರ ಬದಲು ಯೂನಿವರ್ಸಿಟಿಯ ಕಾಲೇಜಿಗೂ ಸ್ಥಳದ ಆಭಾವವಿದ್ದು ಅದು ತನ್ನ ಲ್ಯಾಬೋರೆಟರಿಯನ್ನು ಕಾಲೇಜಿನ (ನಿಜಾಮನ ಹಳೆಯ ರಾಜವಾಡೆ) ಕಟ್ಟಡಕ್ಕೆ ಸ್ಥಳಾಂತರಿಸುತ್ತಿದೆ. ಈ ಕಾರ್ಯಕ್ಕಾಗಿ 10,000 ರೂಪಾಯಿ ಮಂಜೂರು ಮಾಡಲಾಗಿದೆಯಂತೆ. ಆದರೆ ಕಾಲೇಜಿಗೆ ಯೋಗ್ಯವಾದ ಸರಕಾರದ ಕಟ್ಟಡವಿರುವ ಮರಾಠಾವಾಡಾ ಪ್ರದೇಶದಲ್ಲಿಯ ಮೋಮಿನಾಬಾಗ್ ಎಂಬ ನಗರಕ್ಕೆ ಕಾಲೇಜು ಮತ್ತು ಪ್ರಯೋಗಶಾಲೆಯನ್ನು ಸ್ಥಳಾಂತರಿಸುವುದು ಯೋಗ್ಯವಾಗಲಿಕ್ಕಿಲ್ಲವೇ? ಹೀಗೆ ನಿರರ್ಥಕ ಏರುಪೇರಿನಿಂದ ಮುಕ್ತವಾಗಬಹುದಾಗಿದೆ.

ಎರಡನೇ ಸಮಸ್ಯೆಯು ಶುಲ್ಕಕ್ಕೆ ಸಂಬಂಧಿಸಿದ್ದು. ಉಸ್ಮಾನಿಯಾ ಯೂನಿವರ್ಸಿಟಿಗೆ ತಮ್ಮ ಅಧಿಕಾರದಲ್ಲಿ ಕಾಲೇಜಿನ ಶುಲ್ಕವನ್ನು ನಿರ್ಧರಿಸುವ ಅಧಿಕಾರವಿದೆ. ಅದು ತೀರಾ ಕಡಿಮೆ ಎಂದು ಭಾವಿಸುವ ವರ್ಷಕ್ಕೆ 60 ರೂಪಾಯಿಯನ್ನು ನಿಗದಿಪಡಿಸಿದೆ. ನಮ್ಮ ಸಂಸ್ಥೆಯ ಶುಲ್ಕವನ್ನು 120 ರೂಪಾಯಿ ಸ್ವೀಕರಿಸುವಂತೆ ಯೂನಿವರ್ಸಿಟಿಯು ಅನುಮತಿ ನೀಡಿದೆ. ಆದಾಗ್ಯೂ ಸಹ ನಾಶಿಕ್ ಮತ್ತು ಖಾನ್ ದೇಶದ ಕಾಲೇಜಿನಲ್ಲಿ (ಮುಂಬೈ ವಿವಿ) ತೆಗೆದುಕೊಳ್ಳುವ ಶುಲ್ಕಕ್ಕಿಂತ ಇದು ತೀರ ಕಡಿಮೆ. ಫೀಯ ಈ ಕಡಿಮೆ ಪ್ರಮಾಣಕ್ಕೆ ಸಂಸ್ಥಾನದಲ್ಲಿಯ ಪ್ರಜೆಗಳ ಆರ್ಥಿಕ ಸ್ಥಿತಿಗೂ ಯಾವ ಸಂಬಂಧವೂ ಇಲ್ಲ. ಅದರ ಆರ್ಥಿಕ ದರ್ಜೆಯು ಸನಿಹದ ಉಳಿದ ಸಂಸ್ಥಾನಗಳ ಪ್ರಜೆಗಳ ಆರ್ಥಿಕ ದರ್ಜೆಗಿಂತ ಕಡಿಮೆಯಿಲ್ಲ. ಆದಾಯದ ಒಂದು ಮಾರ್ಗವೆಂದು ಯೂನಿವರ್ಸಿಟಿಯು ಫೀಯನ್ನು ನೋಡದೆ ಇರುವುದರಿಂದ, ಅದಕ್ಕೆ ಕಡಿಮೆ ಶುಲ್ಕವನ್ನು ತೆಗೆದುಕೊಳ್ಳುವುದು ಸಾಧ್ಯವಾಗುತ್ತದೆ. ಹಿಂದಿನ ಕರಾರಿನಂತೆ (ಚಾರ್ಟರ್) ಹೈದರಾಬಾದ್ ಸರಕಾರವು ಯೂನಿವರ್ಸಿಟಿಯ ಎಲ್ಲ ಬಗೆಯ ಆದಾಯವನ್ನು ಸರಕಾರಿ ಕಂದಾಯವೆಂದು ಭಾವಿಸುತ್ತಿತ್ತು. ಯೂನಿವರ್ಸಿಟಿ ಕೇವಲ ವಸೂಲಿ ಮಾಡುವ ಒಂದು ಏಜಂಟ್. ಅದಕ್ಕೆ ಆದಾಯಕ್ಕಾಗಿ ಏನೂ ಸಂಬಂಧವಿರಲಿಲ್ಲ. ಯೂನಿವರ್ಸಿಟಿಯ ಪ್ರಾಪ್ತಿ ಎಂದರೆ ಸರಕಾರದಿಂದ ಸಿಗುವ ವಾರ್ಷಿಕ ಅನುದಾನ.
ಮೂರನೇ ಸಮಸ್ಯೆ ಪ್ರಾಧ್ಯಾಪಕರ ಸಂಬಳಕ್ಕೆ ಸಂಬಂಧಿಸಿದ್ದಾಗಿದೆ. ಉಸ್ಮಾನಿಯ ಯೂನಿವರ್ಸಿಟಿಯು ತನ್ನ ಅಧಿಕಾರದಿಂದಾಗಿ ಖಾಸಗಿ ಕಾಲೇಜ್ ಪ್ರಾಧ್ಯಾಪಕರ ಸಂಬಳದ ಪ್ರಮಾಣವನ್ನು ನಿರ್ಧರಿಸುವ ಹಕ್ಕು ಪಡೆದಿದೆ. ಆ ಪ್ರಮಾಣ ಈ ಕೆಳಗಿನಂತಿದೆ.

ಉಸ್ಮಾನಿಯಾ ಯೂನಿವರ್ಸಿಟಿಯ ಕಾಲೇಜಿನ ಪ್ರಾಧ್ಯಾಪಕರ ಸಂಬಳ ಖಂಡಿತವಾಗಿಯೂ ಹೆಚ್ಚಾಗಿದೆ. ನಮ್ಮಂಥ ಖಾಸಗಿ ಸಂಸ್ಥೆಗಳಿಗಾಗಿ ಸಿರ್ಧರಿಸಿದ ಪ್ರಮಾಣ ಕೆಲಮಟ್ಟಿಗೆ ಕಡಿಮೆಯಾಗಿದೆ. ಆದರೆ ನೆರೆಯ ನಾಶಿಕ್ ಮತ್ತು ಖಾನ್ ದೇಶದಲ್ಲಿಯ ಕಾಲೇಜಿನ ಶುಲ್ಕ ಮತ್ತು ಸಂಬಳದ ವ್ಯತ್ಯಾಸ ಹಾಗೂ ಪ್ರಮಾಣವನ್ನು ಹೋಲಿಸಿ ನೋಡಿದಾಗ ಈ ಪ್ರಮಾಣ ತುಂಬ ಜಾಸ್ತಿಯಾಗಿದೆ. ಕಾಲೇಜಿನ ಆರ್ಥಿಕ ಸ್ಥಿತಿಯ ಹೊರೆಯೂ ಭಾರವಾಗಿರುತ್ತದೆ.

ನಾಲ್ಕನೇ ಕಾರಣ ಸರಕಾರಿ ಅನುದಾನಕ್ಕೆ ಸಂಬಂಧಿಸಿದ್ದು. ಹೈದರಾಬಾದ್ ಸಂಸ್ಥಾನದಲ್ಲಿಯ ಕಾಲೇಜ್ ಶಿಕ್ಷಣವೆಂದರೆ ಉಸ್ಮಾನಿಯ ವಿಶ್ವವಿದ್ಯಾನಿಲಯದ ಗುತ್ತಿಗೆಯೇ ಆಗಿ ಪರಿಣಮಿಸಿದೆ. ಹೈದರಾಬಾದ್ ಸರಕಾರವು ಉಚ್ಚ ಶಿಕ್ಷಣದ ಸಕಲ ಜವಾಬ್ದಾರಿಯಿಂದ ಹೊರಗುಳಿದು ಅದನ್ನು ಉಸ್ಮಾನಿಯಾ ವಿ.ವಿ.ಗೆ ಒಪ್ಪಿಸಿದೆ. ಸರಕಾರದ ಜವಾಬ್ದಾರಿ ಏನೆಂದರೆ ಸಂಸ್ಥಾನದಲ್ಲಿಯ ಕಾಲೇಜುಗಳಿಗೆ ಶೈಕ್ಷಣಿಕ ಅನುದಾನವನ್ನು ನೀಡುವುದು. ಅದೇ ಹಣದಿಂದ ನಮ್ಮ ಕಾಲೇಜಿಗೂ ಅನುದಾನ ಸಿಗಬಹುದೆಂಬ ಅಪೇಕ್ಷೆ ನಮ್ಮ ಸಂಸ್ಥೆಗಿತ್ತು. ಆದರೆ ಘಟಕ ಕಾಲೇಜಿನ ಯೋಗಕ್ಷೇಮ ನೋಡಿಕೊಳ್ಳುವುದಷ್ಟೇ ತಮ್ಮ ಹೊಣೆಯಾಗಿದ್ದು ಸಂಲಗ್ನ ಕಾಲೇಜಿನ ಅನುದಾನದ ಮೇಲೆ ಯಾವ ಹಕ್ಕೂ ಇಲ್ಲ ಎನ್ನುವುದು ಉಸ್ಮಾನಿಯಾ ವಿ.ವಿ.ಯ ಯುಕ್ತಿವಾದ. ಹೀಗಾಗಿ ನಮ್ಮ ಸಂಸ್ಥೆಯ ಕಾಲೇಜು ಆ ಯುನಿವರ್ಸಿಟಿಗೆ ಜೋಡಿಸಲಾಗಿದ್ದರಿಂದ ಅದಕ್ಕೆ ಅವರಿಂದ ಸಹಾಯ ಅನುದಾನ ನಿರಾಕರಿಸಲಾಗಿದೆ.

ತದ್ವಿರುದ್ಧವಾಗಿ ಸರಕಾರ ಹೇಳುವುದೇನೆಂದರೆ ನಮ್ಮಿಂದ ಎಷ್ಟು ಗ್ರಾಂಟ್ ಕೊಡಬೇಕೆಂದು ನಿಗದಿಯಾಗಿತ್ತೋ ಅದನ್ನೆಲ್ಲ ಉಸ್ಮಾನಿಯಾ ವಿ.ವಿ.ಗೆ ಕೊಡಲಾಗಿದೆ. ಹೀಗಾಗಿ ಸಂಸ್ಥೆಯ ಕಾಲೇಜಿನ ಅನುದಾನ ನೀಡುವ ಜವಾಬ್ದಾರಿ ನಮ್ಮ ಮೇಲಿಲ್ಲ. ಇದಕ್ಕಿಂತ ಹೆಚ್ಚು ನಾವೇನೂ ಮಾಡುವುದು ಸಾಧ್ಯವಿಲ್ಲ. ಇದೆಲ್ಲದರ ಪರಿಣಾಮ ಏನಾಯಿತೆಂದರೆ, ಎಲ್ಲ ರೀತಿಯ ವಾರ್ಷಿಕ ಕೊರತೆಯ ಭಾರ ಸಂಸ್ಥೆ ಸಹಿಸಬೇಕಾಗುತ್ತದೆ. ಈ ಕಾರಣಗಳ ಪರಿಣಾಮ ಘಾತಕವಾಗಿದ್ದು ಕಾಲೇಜು ಎದುರಿಗೆ ದುಸ್ತರ ಸಮಸ್ಯೆ ನಿರ್ಮಾಣಗೊಂಡಿದೆ. ಎಲ್ಲ ಕಡೆಗಳಿಂದಲೂ ಕಾಲೇಜು ಇಂಥ ಅಡಚಣೆಯಲ್ಲಿ ಸಿಲುಕಿದ್ದು ಇದನ್ನು ದೂರ ಮಾಡಲು ಅದು ಅಸಮರ್ಥವಾಗಿದೆ. ಕಾಲೇಜಿಗೆ ವಾರ್ಷಿಕ ಗ್ರಾಂಟು ನಿರಾಕರಿಸಲಾಗಿದ್ದರಿಂದ ಫೀಯು ಅಲ್ಪ ಪ್ರಮಾಣದಲ್ಲಿರುವುದರಿಂದ ಮತ್ತು ಪ್ರತಿಸ್ಪರ್ಧಿ ಕಾಲೇಜಿರುವುದರಿಂದಾಗಿಯೂ ಆರ್ಥಿಕ ಪರಿಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ. ಸಂಬಳದ ಅಸಮರ್ಥ ಮತು ಭಾರವಾದ ಸ್ಕೇಲ್‌ನಿಂದಾಗಿ ಖರ್ಚಿನ ಪ್ರಮಾಣ ಯೋಗ್ಯಕ್ಕಿಂತ ಹೆಚ್ಚಾಗಿದೆ.

ಕಾಲೇಜಿನ ಭವಿತವ್ಯವು ಸಂಪೂರ್ಣವಾಗಿ ಈ ಅಡಚಣೆಯ ನಿರಸನವನ್ನು ಅವಲಂಬಿಸಿದೆ. ಉಸ್ಮಾನಿಯಾ ವಿ.ವಿ. ಮತ್ತು ಸಾಂಸ್ಥಾನಿಕ ಸರಕಾರದ ಸಂಯೋಗದಿಂದ ಈ ಸಮಸ್ಯೆಯನ್ನು ದೂರ ಮಾಡಿ ಕಾಲೇಜಿನ ಭವಿಷ್ಯವು ಸುರಕ್ಷಿತ ಮತ್ತು ನಿರ್ಭಯ ಮಾಡಲಾಗುವುದೆಂಬ ನಿರೀಕ್ಷೆ ನನ್ನದು. ಸಂಸ್ಥೆಗೆ ಅಂಥ ವಿಶೇಷ ಸವಲತ್ತು ಬೇಡ. ಕಾರ್ಯಮಾಡಲು ಉತ್ತಮ ಮತ್ತು ಮುಕ್ತಕ್ಷೇತ್ರ ಬೇಕಾಗಿದೆ. ನನಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ ಆದರೆ ಕಿವಿಗೆ ಬಿದ್ದಿರುವುದೇನೆಂದರೆ ನಮ್ಮ ಸಂಸ್ಥೆಯ ಕಾಲೇಜಿಗೆ ವಾರ್ಷಿಕ ಅನುದಾನವನ್ನು ನೀಡುವ ನಿರ್ಧಾರವನ್ನು ಸರಕಾರ ತೆಗೆದುಕೊಂಡಿದೆಯಂತೆ. ನಿಜವಾಗಿಯೂ ಇದು ಅಭಿನಂದನೀಯ ವಾರ್ತೆ. ಅದು ಸತ್ಯವಾಗಿದ್ದರೆ ಸಹಾಯ ಮಾಡಿದ ಸಂಸ್ಥಾನದ ಸಚಿವರಿಗೆ ತುಂಬ ಕೃತಜ್ಞನಾಗಿದ್ದೇನೆ. ಈಗ ಉಪಕುಲಪತಿಗಳ ಕಾಲೇಜಿನ ಮಾರ್ಗದಲ್ಲಿರುವ ಇತರ ಅಡ್ಡಿ ಆತಂಕಗಳನ್ನು ದೂರ ಮಾಡುವುದಷ್ಟೇ ಬಾಕಿ ಉಳಿದಿರುವ ಕೆಲಸ. ನಾನು ಅವರಿಗೆ ವಿನಂತಿ ಮಾಡಿಕೊಳ್ಳುವುದೇನೆಂದರೆ ಉಸ್ಮಾನಿಯಾ ವಿ.ವಿ.ಯ ಕಾಲೇಜನ್ನು ಔರಂಗಾಬಾದಿನಿಂದ ಬೇರೆಡೆ ಸ್ಥಳಾಂತರಿಸಬೇಕು ಮತ್ತು ಮುಂಬೈ ರಾಜ್ಯದ ನೆರೆಯ ಜಿಲ್ಲೆಗಳ ಕಾಲೇಜು ಫೀಯ ಪ್ರಮಾಣದಲ್ಲಿ ನಮಗೂ ಫೀಯನ್ನು ಏರಿಕೆ ಮಾಡಲು ಅನುಮತಿ ನೀಡಬೇಕು. ನನ್ನ ಸೂಚನೆಯ ಬಗೆಗೆ ಅವರು ಯೋಚಿಸುತ್ತಾರೆ ಎಂಬ ನಂಬಿಕೆ ನನಗಿದೆ.

ಸಂಸ್ಥೆಯ ಭಾರೀ ಬಂಡೆಗಲ್ಲನ್ನು ಹೊತ್ತು ಈ ಕಾಲೇಜನ್ನು ಆರಂಭಿಸಿದೆ. ಬಂಡೆಗಲ್ಲು ಎಷ್ಟು ಭಾರವಾಗಿದೆ. ಎನ್ನುವುದು ಕೆಲವರಿಗೆ ಮಾತ್ರ ಗೊತ್ತಿದೆ. ಹೈದರಾಬಾದ್‌ನ ಉನ್ನತಿಗಾಗಿ ನಿಜಾಮ ಸರಕಾರದ ಬಳಿಯಿರುವ ‘ಶೆಡ್ಯೂಲ್ಡ್ ಕಾಸ್ಟ್ ಟ್ರಸ್ಟ್ ಫಂಡ್’ ಒಂದು ಕೋಟಿ ರೂಪಾಯಿಯಲ್ಲಿ 12 ಲಕ್ಷ ರೂ. ಸಾಲ ಪಡೆದು ಸಂಸ್ಥೆಯ ಈ ಕಾಲೇಜು ಆರಂಭಿಸಿದೆ. ನಮಗೆ ಸಾಲವನ್ನು ಬಡ್ಡಿ ರಹಿತವಾಗಿ ನೀಡಿದ್ದಕ್ಕೆ ನಾನು ಫಂಡ್ ಬೋರ್ಡಿಗೆ ಆಬಾರಿಯಾಗಿದ್ದೇನೆ. ಉಪಕಾರ ಸ್ಮರಿಸುವಂತಹ ವಿಷಯ ಇದಾಗಿದ್ದರೂ ವರ್ಷಕ್ಕೆ 50,000 ರೂ. ಕಂತನ್ನು ತುಂಬಿ ಈ ಸಾಲವನ್ನು ತೀರಿಸಬೇಕಾಗಿದೆ. ಈ ಸಂಗತಿಯನ್ನು ಮರೆಯುವ ಹಾಗೆ ಇಲ್ಲ. 12 ಲಕ್ಷ ರೂ. ಸಾಲವನ್ನು ಕಟ್ಟಡ ಮತ್ತು ಉಳಿದ ಖರ್ಚಿಗಾಗಿ ವಿನಿಯೋಗಿಸಬೇಕಾಗಿದೆ. ಇಲ್ಲಿಯವರಗೆ ಉಪಕರಣ ಮತ್ತು ಫರ್ನಿಚರ್‌ಗಾಗಿ 3 ಲಕ್ಷ ರೂ. ಖರ್ಚಾಗಿದೆ. ಉಳಿದ 9 ಲಕ್ಷ ರೂ. ಸಂಸ್ಥೆಯ ಕೈಯಲ್ಲಿದೆ. ಕಾಲೇಜು ಕಟ್ಟಡಕ್ಕಾಗಿ 20 ಲಕ್ಷ ತಗಲುವ ಅಂದಾಜಿದೆ. ಅಂದರೆ ಸಂಸ್ಥೆಯ ಬಜೆಟ್‌ನಲ್ಲಿ ಸುಮಾರು 11 ಲಕ್ಷ ರೂ. ಕೊರತೆ ಉಂಟಾಗುತ್ತದೆ. ಸಂಸ್ಥೆಗೆ ಅಂಥ ಬೇರೆ ಯಾವ ಪರ್ಯಾಯ ವ್ಯವಸ್ಥೆ ಇಲ್ಲ. ಈ ಕೊರತೆ ನೀಗಿಸಲು ಸಂಸ್ಥೆಯ ಜನರ ದೇಣಿಗೆಯನ್ನು ಅವಲಂಬಿಸಬೇಕಾಗುತ್ತದೆ. ಸಂಸ್ಥೆಯು ಅಂಗೀಕರಿಸಿದ ಕಾರ್ಯವು ಸಂಪೂರ್ಣ ರಾಜಕೀಯ ರಹಿತ ಸ್ವರೂಪದ್ದು. ಅದು ಸಂಪೂರ್ಣ ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿದೆ.

ಯಾರಿಗೆ ಇಚ್ಛೆ ಮತ್ತು ಶಕ್ತಿ ಇದೆಯೋ ಅಂತಹ ಯಾವುದೇ ರಾಜಕೀಯ ಪಕ್ಷದ ವ್ಯಕ್ತಿಗಳು ಈ ಕಾರ್ಯಕ್ಕಾಗಿ ಸಹಾಯ ಮಾಡುವುದು ಸಾಧ್ಯ. ಹೈದರಾಬಾದ್ ಸಂಸ್ಥಾನದಲ್ಲಿಯ ಮರಾಠಾವಾಡ ಮತ್ತು ಔರಂಗಾಬಾದಿನ ಜನರಿಗೆ ಹಾಗೆಯೇ ಹೈದರಾಬಾದ್ ಸಂಸ್ಥಾನದ ಹೊರಗಿರುವ ಜನರಿಗೆ ಉದಾರಹಸ್ತದಿಂದ ದೇಣಿಗೆಯನ್ನು ನೀಡಿ ಈ ಶೈಕ್ಷಣಿಕ ಕಾರ್ಯಕ್ಕೆ ಉತ್ತೇಜನ ನೀಡಬೇಕೆಂದು ಸಂಸ್ಥೆಯ ಪರವಾಗಿ ನಾನು ವಿನಂತಿ ಮಾಡುತ್ತೇನೆ. ಹಲವರು ನನ್ನ ಕೋರಿಕೆಯನ್ನು ಬೆಂಬಲಿಸುತ್ತೀರಿ ಎಂಬ ನಂಬಿಕೆ ನನಗಿದೆ. ತನ್ನ ಧ್ಯೇಯವನ್ನು ಪೂರ್ಣಮಾಡಲು ಎಂತಹ ಸಮಸ್ಯೆಯನ್ನು ಎದುರಿಸುತ್ತಿದೆ ಎನ್ನುವುದು ಇದರಿಂದ ತಿಳಿದು ಬರುತ್ತದೆ. ಸಂಸ್ಥೆಯ ಮೇಲೆ ಇಬ್ಬಗೆಯ ಭಾರವಿದೆ. ಕಟ್ಟಡದ ಕಾರ್ಯವನ್ನು ಪೂರ್ಣ ಮಾಡಲು 11 ಲಕ್ಷ ರೂ. ಮತ್ತು ಸಾಲ ತೀರಿಸಲು ವರ್ಷಕ್ಕೆ 50,000 ರೂ. ವ್ಯವಸ್ಥೆ ಮಾಡುವುದು. ಆದರೂ ಸಹ ಕಟ್ಟಡ ನಿರ್ಮಾಣಕ್ಕೆ ಅನುಕೂಲ ಪರಿಸ್ಥಿತಿ ಒದಗಿ ಹಣ ಸಿಗುವವರೆಗೆ ಸಂಸ್ಥೆಯು ಮುನ್ನಡೆಯುತ್ತಾ ಇರುತ್ತದೆ. ಸಂಸ್ಥೆಯ ಕಾರ್ಯದ ಬಗೆಗಿನ ಕಳಕಳಿ ಮತ್ತು ನಿಶ್ಚಯವನ್ನು ಅರ್ಥಮಾಡಿಕೊಳ್ಳುತ್ತೀರಿ ಎಂಬ ನಂಬಿಕೆ ನನಗಿದೆ. ಜನರು ಕೆಲಸ ಆರಂಭವಾಗಿರುವುದನ್ನು ಕಂಡಾಗ ದೇಣಿಗೆ ಕೊಡುತ್ತಾರೆ ಎಂಬ ಆತ್ಮ ವಿಶ್ವಾಸ ಸಂಸ್ಥೆಗೆ ಇದೆ.

ವಿದ್ಯಾರ್ಥಿಗಳ ದೃಷ್ಟಿಯಿಂದ ಕಾಲೇಜಿನ ಕಟ್ಟಡ ಭವ್ಯವೋ, ಸುಶೋಭಿತವೂ ಆಗಿರುತ್ತದೆ. ಶಿಲ್ಪ ಕಲೆಯ ದೃಷ್ಟಿಯಿಂದಂತೂ ಅದು ಔರಂಗಾಬಾದ್ ನಗರದ ಅಲಂಕಾರವೆನಿಸಿಕೊಳ್ಳುತ್ತದೆ. ಸಮಾಜದ ತಳವರ್ಗದಿಂದ ಬಂದಿರುವುದರಿಂದ ಶಿಕ್ಷಣಕ್ಕೆ ಎಷ್ಟು ಮಹತ್ವವಿದೆ ಎನ್ನುವುದು ನನಗೆ ಗೊತ್ತಿದೆ. ತಳ ವರ್ಗದ ಉನ್ನತಿಯ ಪ್ರಶ್ನೆಯೂ ಆರ್ಥಿಕವಾಗಿದೆ ಎಂದು ಭಾವಿಸಲಾಗುತ್ತದೆ. ಆದರೆ ಇದು ದೊಡ್ಡ ತಪ್ಪು ಭಾವನೆ. ಹಿಂದೂಸ್ಥಾನದಲ್ಲಿಯ ದಲಿತ ವರ್ಗದವರ ಉನ್ನತಿ ಮಾಡುವುದೆಂದರೆ ಅವರ ಅನ್ನ ಬಟ್ಟೆ ಮತ್ತು ಮನೆಯ ಅನುಕೂಲ ಮಾಡಿಕೊಟ್ಟು ಹಿಂದಿನಂತೆಯೇ ಉಚ್ಚ ಕುಲದವರ ಸೇವೆ ಮಾಡಿಸಿಕೊಳ್ಳುವುದಲ್ಲ. ತಳವರ್ಗದವರು ಪರರ ಗುಲಾಮರಾಗಬೇಕಾಗುವ ಕೀಳರಿಮೆಯನ್ನು ತೊಡೆದುಹಾಕುವುದು. ಸದ್ಯದ ಸಮಾಜ ಪದ್ಧತಿಯಿಂದಾಗಿ ಅವರ ಜೀವನವನ್ನು ನಿರ್ದಯವಾಗಿ ದೋಚಲಾಗುತ್ತಿದೆ. ಅದರ ಬಗೆಗೆ ಸ್ವಂತ ಅವರ ಮತ್ತು ದೇಶದ ದೃಷ್ಟಿಯಿಂದ ಏನು ಮಹತ್ವವಿದೆ ಎಂಬ ಅರಿವನ್ನು ಅವರಿಗೆ ತಂದುಕೊಡುವುದೇ ತಳವರ್ಗದವರ ಪ್ರಶ್ನೆಯಾಗಿದೆ. ಉಚ್ಚಶಿಕ್ಷಣದ ಪ್ರಸಾರದ ಹೊರತು ಬೇರೆ ಯಾವುದರಿಂದಲೂ ಇದು ಸಾಧ್ಯವಾಗಲಾರದು. ನಮ್ಮೆಲ್ಲ ಸಾಮಾಜಿಕ ವೇದನೆಗೆ ಇದೇ ಔಷಧಿ ಎಂದೇ ನನ್ನ ಅನಿಸಿಕೆ.

ಅಧ್ಯಕ್ಷ ಮಹಾಶಯರೇ, ಶೈಕ್ಷಣಿಕ ಪ್ರಸಾರಕ್ಕಾಗಿ ಏನಾದರೂ ಮಾಡಬೇಕೆನ್ನುವುದು ನನ್ನ ಬಾಲ್ಯದ ಕನಸಾಗಿತ್ತು. ನನ್ನ ಕನಸನ್ನು ನನಸಾಗಿಸುವುದು ಸಾಧ್ಯವಾಗಿದ್ದಕ್ಕೆ ನನಗೆ ಸಂತೋಷ ವಾಗಿದೆ. ಅದಕ್ಕಿಂತಲೂ ಕಾಲೇಜು ಕಟ್ಟಡದ ಅಡಿಗಲ್ಲು ಸಮಾರಂಭಕ್ಕೆ ತಾವು ಆಗಮಿಸಿದ್ದು ನನಗೆ ಮತ್ತಷ್ಟು ಸಂತಸ ನೀಡಿದೆ. ಕಾಲೇಜಿನ ಅಡಿಗಲ್ಲು ಸ್ಥಾಪಿಸಲು, ನಮ್ಮನ್ನು ಆಶೀರ್ವದಿಸಲು ವಿದ್ಯೆ ಮತ್ತು ಸಂಸ್ಕೃತಿಯ ದೃಷ್ಟಿಯಿಂದ ತಮಗಿಂತಲೂ ಯೋಗ್ಯವ್ಯಕ್ತಿ ಬೇರೆ ಯಾರಿಲ್ಲ. ನಾನು ಹೊಗಳುವುದಕ್ಕಾಗಿ ಈ ಮಾತು ಹೇಳುತ್ತಿಲ್ಲ. ನನ್ನ ಮಾತಿನ ಮೇಲೆ ನಂಬಿಕೆಯಿರಲಿ. ಅಧ್ಯಕ್ಷ ಮಹನೀಯರೆ ಈಗ ನಾನು ತಮಗೆ ಅಡಿಗಲ್ಲು ಸ್ಥಾಪಿಸಲು ವಿನಂತಿ ಮಾಡುತ್ತೇನೆ.


(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News