ಬೆಂಗಳೂರಿನ ನೀರಿನ ಸಮಸ್ಯೆ: ಸಮರ್ಥನೀಯ ಪರ್ಯಾಯಕ್ಕಾಗಿ ಹುಡುಕಾಟ

Update: 2019-03-21 18:35 GMT

 ಕಳೆದ ಎರಡು ದಶಕಗಳಲ್ಲಿ ನಗರದಲ್ಲಿ ಕೊರೆಯಲ್ಪಟ್ಟ ಕೊಳವೆಬಾವಿಗಳಲ್ಲಿ ಅರ್ಧದಷ್ಟು ನೀರಿನ ಕೊರತೆಯಿಂದಾಗಿ ಒಣಗಿ ಹೋಗಿದ್ದು ಮಾಡಿದ ವೆಚ್ಚಕ್ಕೆ ಫಲವಿಲ್ಲದಂತಾಗಿದೆ. ಬತ್ತುತ್ತಿರುವ ಸರೋವರಗಳು ಮತ್ತು ಕಟ್ಟಡ ನಿರ್ಮಾಣ ಕಂಪೆನಿಗಳಿಂದ ಅಂತರ್ಜಲದ ಅನಿಯಂತ್ರಿತ ಬಳಕೆಯ ಪರಿಣಾಮವಾಗಿ 2020ರ ವೇಳೆಗೆ ಸದ್ಯ ನೀರುಣಿಸುತ್ತಿರುವ ಕೊಳವೆಬಾವಿಗಳೂ ಬರಿದಾಗುವುದರಲ್ಲಿ ಸಂಶಯವಿಲ್ಲ.

ಬೇಸಿಗೆ ಅದಾಗಲೇ ಬಂದಾಗಿದೆ ಮತ್ತು ನೀರಿನ ಸಮಸ್ಯೆ ಆರಂಭದಲ್ಲೇ ಬೆಂಗಳೂರು ನಗರದ ಗೃಹಿಣಿಯರಿಗೆ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡುತ್ತಿದ್ದರೆ ನಗರಾಡಳಿತ ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಕಳೆದ ವರ್ಷ ವ್ಯಾಪಕವಾಗಿ ಸುರಿದ ಮಳೆ ಈ ಬಾರಿಯೂ ಕರುಣೆ ತೋರಿ ನಮ್ಮ ನದಿ ಮತ್ತು ಜಲಾಶಯಗಳು ತುಂಬುವಂತೆ ಮಾಡುವುದೇ, ಸದ್ಯ ಯಾರಿಗೂ ತಿಳಿದಿಲ್ಲ. ಅತ್ಯಂತ ವೇಗವಾಗಿ ವಿಸ್ತರಣೆಗೊಳ್ಳುತ್ತಿರುವ ಬೆಂಗಳೂರಿನ ನಿವಾಸಿಗಳ ದಾಹವನ್ನು ತಣಿಸಲು ಕೇವಲ ದೂರದೃಷ್ಟಿ ಹೊಂದಿರುವ ಸಮರ್ಥ ಯೋಜನೆಯಿಂದ ಮಾತ್ರ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಪೂರೈಸಲು ಸಾಧ್ಯ.
ಸದ್ಯ ಬೆಂಗಳೂರಿನ ನೀರಿನ ಅಗತ್ಯವನ್ನು ಎರಡು ಮೂಲಗಳಿಂದ ಭರಿಸಲಾಗುತ್ತಿದೆ, ಒಂದು ಕಾವೇರಿ ನದಿ ಮತ್ತು ಇನ್ನೊಂದು ಅಂತರ್ಜಲ. ಕಾವೇರಿಯ ಒಟ್ಟಾರೆ 29 ಟಿಎಂಸಿ (1 ಟಿಎಂಸಿ=78 ಮಿ.ಲೀ. (ಎಂಎಲ್‌ಡಿ)) ನೀರಿನಲ್ಲಿ ಬಿಬಿಎಂಪಿಗೆ ದೊರೆಯುವ ಒಟ್ಟಾರೆ ಪ್ರಮಾಣ 2,262 ಎಂಎಲ್‌ಡಿ (ಮಿ.ಲೀ ಪರ್ ಡೇ). ಬಿಡಬ್ಲೂಎಸ್‌ಎಸ್‌ಬಿ ಅಂಕಿಅಂಶಗಳ ಪ್ರಕಾರ, ಜಲ ಮಂಡಳಿ ಪೂರೈಸುವ ಒಟ್ಟಾರೆ ನೀರಿನ ಶೇ.41ಕ್ಕೆ ಆದಾಯವೇ ದೊರೆಯುತ್ತಿಲ್ಲ.
ನಗರದ 27 ಲಕ್ಷ ಮನೆಗಳ ಪೈಕಿ ಕೇವಲ ಏಳು ಲಕ್ಷ ಮನೆಗಳು ಬೆಂಗಳೂರು ಜಲಮಂಡಳಿಯಿಂದ ನೀರಿನ ಬಿಲ್ ಪಡೆಯುತ್ತಿವೆ. ಆದರೆ ನಾಲ್ಕು ಲಕ್ಷ ಮನೆಗಳು ಬೆಂಗಳೂರು ಜಲಮಂಡಳಿಯಿಂದ ಅನಧಿಕೃತವಾಗಿ ನೀರಿನ ಸಂಪರ್ಕಪಡೆದುಕೊಂಡಿದೆಯೆಂದು ವರದಿಯಾಗಿದೆ. ಇನ್ನೊಂದು ಅಧ್ಯಯನದ ಪ್ರಕಾರ ನಗರದಲ್ಲಿ ಸುಮಾರು ಒಂದೂವರೆ ಲಕ್ಷ ಅನಧಿಕೃತ ಸಂಪರ್ಕಗಳಿವೆ. ಇವುಗಳ ಪೈಕಿ 80,000 ಸಂಪರ್ಕಗಳು ನಗರದ 375 ಕೊಳೆಗೇರಿ ಪ್ರದೇಶಗಳಲ್ಲಿವೆ. ಈ ನೀರಿಗೆ ಯಾವುದೇ ಬಿಲ್ ನೀಡಲಾಗುವುದಿಲ್ಲ.


15,000 ಸಾರ್ವಜನಿಕ ನಳ್ಳಿಗಳ ಮೂಲಕವೂ ಸಾಕಷ್ಟು ನೀರು ಪೂರೈಸಲಾಗುತ್ತದೆ. ಇನ್ನು, ಹಳೆಯ ಸೋರುವ ಮತ್ತು ಕಳಪೆ ನೀರು ಸರಬರಾಜು ಪೈಪ್‌ಗಳ ಮೂಲಕವೂ ಆದಾಯ ಖೋತಾವಾಗುತ್ತದೆ. ಇದು ನಷ್ಟ ಎಂದು ಹೇಳಲಾಗುವುದಿಲ್ಲ. ಯಾಕೆಂದರೆ ಇದರಿಂದ ಅಂತರ್ಜಲ ಪುನಃಶ್ಚೇತನಗೊಳ್ಳುತ್ತದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸದ್ಯ ವಾಸಿಸುವ ಜನಸಂಖ್ಯೆಗೆ ಲಭ್ಯವಿರುವ ಒಟ್ಟಾರೆ ನೀರಿನ ಪ್ರಮಾಣ 1,470 ಎಂಎಲ್‌ಡಿ. ಈ ಪೈಕಿ 300 ಎಂಎಲ್‌ಡಿ ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಗಳು ಬಳಸಿಕೊಂಡು ಗೃಹೋಪಯೋಗಕ್ಕೆ 1,170 ಎಂಎಲ್‌ಡಿ ಉಳಿಯುತ್ತದೆ. ಹಾಗಾಗಿ ಪ್ರತಿದಿನ ತಲಾವಾರು 100 ಲೀಟರ್ ನೀರು (ಎಲ್‌ಪಿಸಿಡಿ) ಲಭ್ಯವಾಗುತ್ತದೆ.

2030ರ ವೇಳೆಗೆ ಬಿಬಿಎಂಪಿ ವ್ಯಾಪ್ತಿಯ ಜನಸಂಖ್ಯೆ 19 ಮಿಲಿಯನ್‌ಗೆ ತಲುಪುವ ನಿರೀಕ್ಷೆಯಿದೆ. ಹಾಗಾಗಿ ಕಾವೇರಿ ನೀರಿನ ಲಭ್ಯತೆ ಕೇವಲ 62 ಎಲ್‌ಪಿಸಿಡಿಗೆ ತಲುಪಲಿದೆ. 2050ರ ವೇಳೆಗೆ ಜನಸಂಖ್ಯೆ 25 ಮಿಲಿಯನ್ ತಲುಪಿದರೆ (ಅದು ಅಸಾಧ್ಯವೇನೂ ಅಲ್ಲ) ತಲಾವಾರು ನೀರಿನ ಲಭ್ಯತೆ ಮತ್ತಷ್ಟು ಕಡಿಮೆಯಾಗಿ 47 ಲೀಟರ್‌ಗೆ ಕುಸಿಯಲಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡದ ಪ್ರಕಾರ ಓರ್ವ ವ್ಯಕ್ತಿಗೆ ಪ್ರತಿದಿನ 135 ಲೀ. ನೀರಿನ ಅಗತ್ಯವಿದೆ.

ಕಾವೇರಿ ನೀರು ಹಂಚಿಕೆ ಬಗ್ಗೆ ಇರುವ ಭಿನ್ನಾಭಿಪ್ರಾಯದಿಂದಾಗಿ ಬೆಂಗಳೂರು ಜಲಮಂಡಳಿ ಹೆಚ್ಚು ನೀರನ್ನು ಪಡೆದುಕೊಳ್ಳುವ ಹಾಗಿಲ್ಲ. ಅಷ್ಟು ದೂರದಿಂದ ನೀರನ್ನು ಪಂಪ್ ಮೂಲಕ ಎತ್ತುವ ಮತ್ತು ನಗರಕ್ಕೆ ಪೂರೈಸುವ ವೆಚ್ಚ ಪ್ರತಿ ಕಿಲೋ ಲೀ. (1,000 ಲೀ)ಗೆ 29 ರೂ. ಎಂದು ಲೆಕ್ಕಹಾಕಲಾಗಿದೆ.

 ಇನ್ನು ಎರಡನೆ ಮೂಲವಾದ ಅಂತರ್ಜಲ ವೇಗವಾಗಿ ಕುಸಿಯುತ್ತಿದ್ದು 800ರಿಂದ 1,000 ಅಡಿ ಆಳದಿಂದ ಮಾತ್ರ ಪಡೆಯಬಹುದಾಗಿದೆ. ಕಳೆದ ಎರಡು ದಶಕಗಳಲ್ಲಿ ನಗರದಲ್ಲಿ ಕೊರೆಯಲ್ಪಟ್ಟ ಕೊಳವೆಬಾವಿಗಳಲ್ಲಿ ಅರ್ಧದಷ್ಟು ನೀರಿನ ಕೊರತೆಯಿಂದಾಗಿ ಒಣಗಿ ಹೋಗಿದ್ದು ಮಾಡಿದ ವೆಚ್ಚಕ್ಕೆ ಫಲವಿಲ್ಲದಂತಾಗಿದೆ. ಬತ್ತುತ್ತಿರುವ ಸರೋವರಗಳು ಮತ್ತು ಕಟ್ಟಡ ನಿರ್ಮಾಣ ಕಂಪೆನಿಗಳಿಂದ ಅಂತರ್ಜಲದ ಅನಿಯಂತ್ರಿತ ಬಳಕೆಯ ಪರಿಣಾಮವಾಗಿ 2020ರ ವೇಳೆಗೆ ಸದ್ಯ ನೀರುಣಿಸುತ್ತಿರುವ ಕೊಳವೆಬಾವಿಗಳೂ ಬರಿದಾಗುವುದರಲ್ಲಿ ಸಂಶಯವಿಲ್ಲ.
ಇತ್ತೀಚಿನ ಅಧ್ಯಯನಗಳಲ್ಲಿ ಕೆಲವೊಂದು ಆತಂಕದ ಅಂಶಗಳು ಬೆಳಕಿಗೆ ಬಂದಿದ್ದು ಈ ಬಗ್ಗೆ ಗಮನಹರಿಸುವ ಅಗತ್ಯವಿದೆ. ಕಳೆದ ಎರಡು ದಶಕಗಳಲ್ಲಿ ಕಾವೇರಿ ನದಿ ಪ್ರದೇಶದಲ್ಲಿ ಮಳೆ ಪ್ರಮಾಣ ಶೇ.19.5 ಕಡಿಮೆಯಾಗಿದೆ. ನಗರದ ಶೇ.52 ಕೊಳವೆಬಾವಿಗಳು ಮತ್ತು ಶೇ.59 ನಳ್ಳಿಗಳ ನೀರು ಚರಂಡಿ ನೀರಿನಿಂದ ಕಲುಷಿತಗೊಂಡಿದ್ದು ಕುಡಿಯಲು ಯೋಗ್ಯವಿಲ್ಲ ಎಂದು ಗಣಿ ಮತ್ತು ಭೂಗರ್ಭಶಾಸ್ತ್ರ ಇಲಾಖೆಯ ವರದಿ ತಿಳಿಸಿದೆ.

ಸರೋವರ ಅಭಿವೃದ್ಧಿ ಪ್ರಾಧಿಕಾರ (ಎಲ್‌ಡಿಎ) ಮುಂತಾದ ಯೋಜನೆಗಳನ್ನು ಪರಿಸರತಜ್ಞರು ಸಂಶಯದಿಂದ ನೋಡುತ್ತಾರೆ. ಇಂಥ ಸರಕಾರಿ ಪ್ರಾಯೋಜಿತ ಸಂಸ್ಥೆಗಳನ್ನು ಬಹಳಷ್ಟು ಸಂದರ್ಭಗಳಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಬದಲು ಅವುಗಳನ್ನು ಖಾಸಗೀಕರಣಗೊಳಿಸುವ ವಾಸ್ತವವನ್ನು ಮರೆಮಾಚಲು ರಚಿಸಲಾಗುತ್ತದೆ ಎನ್ನುವುದು ಪರಿಸರತಜ್ಞರ ಅನಿಸಿಕೆ. ನಮ್ಮ ಜೀವನದ ಅವಧಿಯಲ್ಲೇ ನಗರದ ಕೆರೆಗಳ ಸಂಖ್ಯೆ 200 (1970ರಲ್ಲಿ) ರಿಂದ 140ಕ್ಕೆ ಕುಸಿದಿರುವುದನ್ನು ಕಂಡಿದ್ದೇವೆ. ಉಳಿದ ಕೆರೆಗಳೂ ಉಸಿರು ಹಿಡಿದುಕೊಳ್ಳಲು ಹೋರಾಡುತ್ತಿವೆ. ಕೆರೆಗಳನ್ನು ಕಳೆದುಕೊಂಡಿರುವ ಅಥವಾ ಸೋರಿಕೆಯಾದ ನೀರಿಗೆ ಕೊರಗುವುದು ಪರಿಹಾರವಲ್ಲ. ನಗರದ ನೀರಿನ ಅಗತ್ಯವನ್ನು ಪೂರೈಸಲು ಇರುವ ಪರ್ಯಾಯ ಮಾರ್ಗ ಯಾವುದು? ಪರಿಸ್ಥಿತಿ ಅಷ್ಟೊಂದು ಕೈಮೀರಿ ಹೋಗಿಲ್ಲ. ಮಾನ್ಸೂನ್‌ನ 57 ಮಳೆದಿನಗಳಲ್ಲಿ ಬೆಂಗಳೂರು 92 ಸೆ.ಮೀ. ಮಳೆ ಪಡೆಯುತ್ತದೆ. ಇದು 21 ಟಿಎಂಸಿ ಮಳೆನೀರಿಗೆ ಸಮ. ಈ ಪೈಕಿ 3.6 ಟಿಎಂಸಿ ನೀರು 16 ಲಕ್ಷ ಕಟ್ಟಡಗಳ ಛಾವಣಿಗಳ ಮೇಲೆ ಬೀಳುತ್ತಿದೆ. ಈ ಕಟ್ಟಡಗಳು ಒಟ್ಟಾರೆಯಾಗಿ 110ಚ.ಕಿ.ಮೀ. ಅಥವಾ ನಗರ ಪ್ರದೇಶದ ಶೇ. 14 ಭಾಗವನ್ನು ಆವರಿಸಿಕೊಂಡಿದೆ. ಈ ಕಟ್ಟಡಗಳ ಮಾಲಕರು ಪರಿಣಾಮಕಾರಿ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಂತೆ ಮಾಡಿದರೆ ಈ ನೀರನ್ನು ಸುಲಭವಾಗಿ ಸಂಗ್ರಹಿಸಬಹುದಾಗಿದೆ.
ಇದನ್ನು ಮಾಡುವುದು ಹೇಳುವಷ್ಟು ಸುಲಭವಲ್ಲ. ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯಲ್ಲಿ ವಿಜ್ಞಾನಿಯಾಗಿರುವ ಎ.ಆರ್.ಶಿವಕುಮಾರ್ ಹೇಳುವಂತೆ, ಆರಂಭಿಕ ಪೈಪ್ ಸಂಪ್ ವ್ಯವಸ್ಥೆಯನ್ನು ರೂಪಿಸಿದ ಬಳಿಕ ಪ್ರತಿ 1,000 ಲೀ. ಮಳೆನೀರು ಸಂಗ್ರಹಿಸಲು 2.50ರೂ. ವೆಚ್ಚ ತಗಲುತ್ತದೆ.
ಇನ್ನು ತೆರೆದ ಪ್ರದೇಶಗಳಲ್ಲಿ ಬೀಳುವ ಮಳೆನೀರನ್ನೂ ಜಲಮೂಲಗಳಿಗೆ ಹರಿಸಬಹುದು ಮತ್ತು ಸಂಗ್ರಹಿಸಬಹುದು. ಇದು ಕೆರೆಗಳು ಅಂತರ್ಜಲ ಹೆಚ್ಚುವಂತೆ ಮಾಡುತ್ತದೆ ಜೊತೆಗೆ ನಗರದ ಅಂದವನ್ನೂ ಹೆಚ್ಚಿಸಿ ಪ್ರವಾಸೋ ದ್ಯಮಕ್ಕೆ ಪ್ರೇರಣೆ ನೀಡುತ್ತದೆ ಮತ್ತು ನೆಲ ಮಟ್ಟದಲ್ಲಿ ನೀರಿನ ಮಟ್ಟವನ್ನೂ ಕಾಪಾಡುತ್ತದೆ. ಪರಿಸರ ವ್ಯವಸ್ಥೆಗೂ ಈ ಕೆರೆಗಳು ನೆರವು ನೀಡುತ್ತವೆ ಮತ್ತು ಗಾಳಿಗೆ ತಂಪನ್ನು ನೀಡುವ ಮೂಲಕ ವಾತಾವರಣವನ್ನೂ ಉತ್ತಮಗೊಳಿಸುತ್ತದೆ.
ರೈಲ್ವೆ, ರಕ್ಷಣಾ ಇಲಾಖೆ ಹಾಗೂ ಸಂಶೋಧನಾ ಸಂಸ್ಥೆಗಳಂಥ ಬೃಹತ್ ಸಂಸ್ಥೆಗಳು ಬಳಸಿದ ನೀರನ್ನೇ ಸಂಸ್ಕರಿಸಿ ಪುನಃ ಬಳಸುವಂತೆ ಮನವಿ ಮಾಡಬಹುದಾಗಿದೆ.

Writer - ಎಂ.ಎ. ಸಿರಾಜ್

contributor

Editor - ಎಂ.ಎ. ಸಿರಾಜ್

contributor

Similar News

ಜಗದಗಲ
ಜಗ ದಗಲ