ಶೂಟೌಟ್ ಸಂತ್ರಸ್ತರಿಗೆ ನೈತಿಕ ಬೆಂಬಲ: ಶುಕ್ರವಾರ ಸ್ಕಾರ್ಫ್ ಧರಿಸಿದ ನ್ಯೂಝಿಲ್ಯಾಂಡ್ ನ ಮಹಿಳೆಯರು

Update: 2019-03-22 06:21 GMT

ಕ್ರೈಸ್ಟ್‌ಚರ್ಚ್, ಮಾ. 22: ನಗರದ ಎರಡು ಮಸೀದಿಗಳಲ್ಲಿ ಗುಂಡಿನ ದಾಳಿಗೆ 50 ಮಂದಿ ಬಲಿಯಾಗಿ ಒಂದು ವಾರದ ಬಳಿಕ ದೇಶಾದ್ಯಂತ ಶುಕ್ರವಾರ ಎಲ್ಲ ಮಹಿಳೆಯರು ಶಿರವಸ್ತ್ರ ಧರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ದೇಶದ ಮುಸ್ಲಿಮರಿಗೆ ನೈತಿಕ ಬೆಂಬಲ ನೀಡಲಿದ್ದಾರೆ.

ಶಿರವಸ್ತ್ರ ಧರಿಸಿ ಹೊರಗೆ ಅಡ್ಡಾಡಿದಲ್ಲಿ ಉಗ್ರರ ಕೆಂಗಣ್ಣಿಗೆ ಗುರಿಯಾಗಬಹುದು ಎಂಬ ಭೀತಿಯನ್ನು ಮಹಿಳೆಯೊಬ್ಬರು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಆಕ್ಲೆಂಡ್‌ನ ವೈದ್ಯ ತಯಾ ಅಶ್ಮನ್ ಎಂಬವರು ಈ ವಿಶಿಷ್ಟ ಯೋಚನೆಯನ್ನು ಮುಂದಿಟ್ಟರು. ಇದರಂತೆ ದೇಶಾದ್ಯಂತ ಶುಕ್ರವಾರ ಎಲ್ಲ ಮಹಿಳೆಯರೂ ಶಿರವಸ್ತ್ರ ಧರಿಸಲಿದ್ದಾರೆ.

"ನಾವು ನಿಮ್ಮೊಂದಿಗೆ ಇದ್ದೇವೆ; ನಿಮ್ಮ ಬೀದಿಗಳು ಕೂಡಾ ನಿಮಗೆ ಮನೆಯಷ್ಟೇ ಸುರಕ್ಷಿತ ಎಂಬ ಭಾವನೆ ನಿಮ್ಮಲ್ಲಿ ಬರಬೇಕು, ನಿಮ್ಮನ್ನು ನಾವು ಪ್ರೀತಿಸುತ್ತೇವೆ; ಬೆಂಬಲಿಸುತ್ತೇವೆ ಮತ್ತು ಗೌರವಿಸುತ್ತೇವೆ" ಎಂದು ಅಶ್ಮನ್ ಹೇಳಿದ್ದಾರೆ.

ಕಳೆದ ವಾರ 50 ಮಂದಿ ಬಲಿಯಾದ ಅಲ್ ನೂರ್ ಮಸೀದಿ ಮುಂದಿನ ಉದ್ಯಾನವನದಲ್ಲಿ ಶುಕ್ರವಾರದ ಪ್ರಾರ್ಥನೆಗೆ ಕ್ರೈಸ್ಟ್‌ಚರ್ಚ್ ಸಜ್ಜಾಗುತ್ತಿದ್ದು, ಮುಸ್ಲಿಂ ಸಮುದಾಯಕ್ಕೆ ಬೆಂಬಲಾರ್ಥವಾಗಿ ಆಕ್ಲೆಂಡ್, ವೆಲ್ಲಿಂಗ್ಟನ್ ಮತ್ತು ಕ್ರೈಸ್ಟ್‌ಚರ್ಚ್‌ನ ಮಹಿಳೆಯರು ಶಿರವಸ್ತ್ರ ಧರಿಸಿ ಫೋಟೊಗಳಿಗೆ ಫೋಸ್ ನೀಡುತ್ತಿದ್ದಾರೆ.

"ನಾನು ಏಕೆ ಶಿರವಸ್ತ್ರ ಧರಿಸಿದ್ದೇನೆ ಗೊತ್ತೇ ? ಮುಖ್ಯ ಕಾರಣವೆಂದರೆ, ಶಿರವಸ್ತ್ರ ಧರಿಸಿದ ಮಹಿಳೆಯರನ್ನು ಯಾರಾದರೂ ಗುರಿ ಮಾಡಿದರೆ ಅವರಿಬ್ಬರ ನಡುವೆ ನಿಲ್ಲಲು ನಾನು ಬಯಸುತ್ತೇನೆ. ಭಿನ್ನತೆ ಆತನಿಗೆ ತಿಳಿಯಬಾರದು; ಏಕೆಂದರೆ ವಾಸ್ತವವಾಗಿ ಯಾವ ಭಿನ್ನತೆಯೂ ಇಲ್ಲ" ಎಂದು ಕ್ರೈಸ್ಟ್‌ಚರ್ಚ್‌ನ ಬೆಲ್ ಸಿಬ್ಲಿ ಎಂಬ ಮಹಿಳೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News