2013ರ ಫಿಕ್ಸಿಂಗ್ ಹಗರಣದಿಂದ ಖಿನ್ನತೆಗೆ ಒಳಗಾಗಿದ್ದೆ: ಧೋನಿ

Update: 2019-03-22 19:07 GMT

ಹೊಸದಿಲ್ಲಿ, ಮಾ.21: ‘‘2013ರ ಐಪಿಎಲ್ ಫಿಕ್ಸಿಂಗ್ ಹಗರಣವು ನನ್ನ ಜೀವನವನ್ನು ಅತ್ಯಂತ ಕಷ್ಟ ಹಾಗೂ ಖಿನ್ನತೆಗೆ ದೂಡಿತ್ತು. ಆಗ ಆಟಗಾರರು ಮಾಡಿದ ತಪ್ಪಾದರೂ ಏನು? ಎಂದು ಎರಡು ಬಾರಿಯ ವಿಶ್ವಕಪ್ ವಿಜೇತ ನಾಯಕ ಎಂ.ಎಸ್. ಧೋನಿ ಭಾರತೀಯ ಕ್ರಿಕೆಟ್‌ನ್ನು ಬೆಚ್ಚಿ ಬೀಳಿಸಿದ್ದ ಹಗರಣದ ಕುರಿತು ಮೊದಲ ಬಾರಿ ಮೌನ ಮುರಿದಿದ್ದಾರೆ. 2013ರ ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎರಡು ವರ್ಷಗಳ ಕಾಲ ನಿಷೇಧಿಸಲಾಗಿತ್ತು.

‘‘2013 ನನ್ನ ಜೀವನದ ಅತ್ಯಂತ ಕಠಿಣ ಹಂತವಾಗಿತ್ತು. ಆಗ ನಾನು ತುಂಬಾ ಖಿನ್ನತೆಗೆ ಒಳಗಾಗಿದ್ದೆ. 2007ರ ವಿಶ್ವಕಪ್‌ನ ಗ್ರೂಪ್ ಹಂತದಲ್ಲಿ ನಮ್ಮ ತಂಡ ಸೋತಾಗ ಸ್ವಲ್ಪ ಮಟ್ಟಿನ ಹತಾಶೆಯಾಗಿತ್ತು. ಆದರೆ, ಆಗ ನಾವು ಉತ್ತಮ ಕ್ರಿಕೆಟ್ ಆಡದೇ ಇದ್ದ ಕಾರಣ ಕಳಪೆ ಫಲಿತಾಂಶ ಬಂದಿತ್ತು’’ಎಂದು ಧೋನಿ ಹೇಳಿದ್ದಾರೆ. ‘‘2013ರ ಆಯಾಮ ಸಂಪೂರ್ಣ ಭಿನ್ನವಾಗಿತ್ತು. ಜನರು ಮ್ಯಾಚ್ ಫಿಕ್ಸಿಂಗ್ ಹಾಗೂ ಸ್ಪಾಟ್-ಫಿಕ್ಸಿಂಗ್ ಕುರಿತು ಮಾತನಾಡುತ್ತಿದ್ದರು. ಇದು ದೇಶದಲ್ಲಿ ಹೆಚ್ಚು ಚರ್ಚೆಗೊಳಗಾದ ವಿಚಾರವಾಗಿತ್ತು. ಸ್ಪಾಟ್ ಫಿಕ್ಸಿಂಗ್‌ಗೆ ಸಂಬಂಧಿಸಿ ನಾವು ಕಠಿಣ ಶಿಕ್ಷೆಯನ್ನು ನಿರೀಕ್ಷಿಸಿದ್ದೆವು. ಆ ಶಿಕ್ಷೆಗೆ ನಾವು ಅರ್ಹರಾಗಿದ್ದೆವು. ಆದರೆ, ಶಿಕ್ಷೆಯ ಪ್ರಮಾಣದ ಬಗ್ಗೆ ನಮಗೆ ಬೇಸರವಿದೆ. ಚೆನ್ನೈ ತಂಡ 2 ವರ್ಷ ಕಾಲ ನಿಷೇಧಕ್ಕೆ ಒಳಗಾದಾಗ ನಮ್ಮಲ್ಲಿ ಆಗ ಮಿಶ್ರ ಭಾವನೆ ಉಂಟಾಗಿತ್ತು. ನಾವು ವೈಯಕ್ತಿಕವಾಗಿ ಹಲವು ವಿಚಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ನಾಯಕನಾಗಿ ತಂಡ ಯಾವ ತಪ್ಪು ಮಾಡಿದೆ ಎನ್ನುವುದು ನನ್ನ ಪ್ರಶ್ನೆಯಾಗಿದೆ. ಹೌದು, ನಮ್ಮ ಫ್ರಾಂಚೈಸಿ ಕಡೆಯಿಂದ ತಪ್ಪಾಗಿದೆ. ಆದರೆ, ಆಟಗಾರರು ಇದರಲ್ಲಿ ಭಾಗಿಯಾಗಿದ್ದರೇ? ನಾವು ಯಾವ ತಪ್ಪು ಮಾಡಿದ್ದೆವು? ಎಂದು ಧೋನಿ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News