ಅಮಾಯಕರ ಬಲಿ: ಹೊಣೆಗಾರರು ಯಾರು?

Update: 2019-03-22 18:06 GMT

ಮಾನ್ಯರೇ,

ಧಾರವಾಡದಲ್ಲಿ ಬಹುಮಹಡಿ ಕಟ್ಟಡ ಕುಸಿದು ಅನೇಕ ಅಮಾಯಕ ಜೀವಗಳು ಬಲಿಯಾಗಿವೆ. ಇಂತಹ ಪ್ರಕರಣ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ನಡೆದದ್ದಲ್ಲ. ಈ ಹಿಂದೆಯೂ ಬೆಂಗಳೂರು ನಗರ ಸೇರಿ ಅನೇಕ ನಗರಗಳಲ್ಲಿ ಇಂತಹ ಘಟನೆಗಳು ನಡೆದಿವೆ. ಪ್ರಾಥಮಿಕ ತನಿಖೆ ವೇಳೆ ಕಟ್ಟಡ ಮಾಲಕರು, ಇಂಜಿನಿಯರ್‌ಗಳನ್ನು ತಪ್ಪಿತಸ್ಥರೆಂದು ಗುರುತಿಸಲಾಗಿದೆ. ಆದರೆ ಇವರನ್ನು ತಪ್ಪಿತಸ್ಥರೆಂದು ಗುರುತಿಸಲಾಗುತ್ತದೆಯೇ ಹೊರತು ಕಠಿಣ ಶಿಕ್ಷೆ ನೀಡುವ ಪ್ರಯತ್ನ ಆಗುವುದೇ ಇಲ್ಲ. ಕಟ್ಟಡ ದುರಂತದಂತಹ ಪ್ರಕರಣಗಳು ಅಮಾಯಕರ ಜೀವಗಳನ್ನು ಬಲಿ ಪಡೆದಿವೆ. ಒಂದಷ್ಟು ದಿನ ಸುದ್ದಿ, ಪರಿಹಾರ, ಸಾಂತ್ವನ ನೀಡುವ ಬೆಳವಣಿಗೆ ನಡೆಯುತ್ತದೆ. ಇದರಿಂದ ಹೋದ ಜೀವವನ್ನು ಮರಳಿ ಪಡೆಯಲು ಸಾಧ್ಯವೇ..? ನಗರದಲ್ಲಿ ಬಹುಮಹಡಿ ಕಟ್ಟಡಗಳ ನಿರ್ಮಾಣದ ವೇಳೆ ಕಾನೂನು ಕ್ರಮಗಳನ್ನು ಪಾಲಿಸದಿರುವುದು ಕೂಡಾ ದುರಂತಕ್ಕೆ ಕಾರಣ. ರಸ್ತೆಗೂ, ಕಟ್ಟಡಕ್ಕೂ ಇಂತಿಷ್ಟು ಅಂತರ ಇರಬೇಕೆಂಬ ಕಾನೂನು ಇದೆ. ಆದರೆ ಇದನ್ನು ಎಷ್ಟರಮಟ್ಟಿಗೆ ಪಾಲಿಸಲಾಗುತ್ತಿದೆ..? ಇನ್ನು ಸ್ಥಳೀಯ ಅಧಿಕಾರಿಗಳು ಮತ್ತು ರಿಯಲ್ ಎಸ್ಟೇಟ್ ನಡುವಿನ ಅಪವಿತ್ರ ಮೈತ್ರಿ, ಕಳಪೆ ಕಾಮಗಾರಿ, ಅಸುರಕ್ಷಿತ ವ್ಯವಸ್ಥೆ, ಸುರಕ್ಷತಾ ಕ್ರಮಗಳನ್ನು ಆಳವಡಿಸದೇ ಇರುವ ಕಾರಣಗಳಿಂದ ಕಟ್ಟಡ ದುರಂತ ಪ್ರಕರಣಗಳು ನಡೆಯುತ್ತಲೇ ಇವೆ. ಆದರೆ ಇದಕ್ಕೆಲ್ಲಾ ಬಲಿಯಾಗಿರುವುದು ದೂರದೂರಿನಿಂದ ಒಂದು ಹೊತ್ತಿನ ಊಟಕ್ಕಾಗಿ ಬಂದ ಅಮಾಯಕರು. ಇವರನ್ನೇ ನಂಬಿ ಬದುಕು ಸಾಗಿಸುವ ಕುಟುಂಬದ ಮಂದಿಗೆ ಒಂದಿಷ್ಟು ಹಣ ಪರಿಹಾರ ನೀಡಿದರೆ ಜೀವನ ಪರ್ಯಂತ ವ್ಯವಸ್ಥೆ ಮಾಡಿಕೊಟ್ಟಂತಾಗುತ್ತದೆಯೇ?. ಸ್ವಾರ್ಥಕ್ಕಾಗಿ ನಿಯಮಗಳನ್ನು ಗಾಳಿಗೆ ತೂರಿ ಕಟ್ಟಡ ನಿರ್ಮಿಸುವವರ ವಿರುದ್ಧ ಹಾಗೂ ಕಾನೂನು ಕ್ರಮಗಳನ್ನು ಪಾಲಿಸದೆ ಪರವಾನಿಗೆ ನೀಡುವ ಅಧಿಕಾರಿಗಳನ್ನು ಮಟ್ಟ ಹಾಕಬೇಕಾಗಿದೆ.

Writer - -ಶಂಶೀರ್ ಬುಡೋಳಿ, ಬಂಟ್ವಾಳ

contributor

Editor - -ಶಂಶೀರ್ ಬುಡೋಳಿ, ಬಂಟ್ವಾಳ

contributor

Similar News