ಶೋಷಣೆಮುಕ್ತ ಸಮಸಮಾಜದ ಕನಸು ಕಂಡಿದ್ದ ಭಗತ್‌ಸಿಂಗ್

Update: 2019-03-22 18:54 GMT

1931ರ ಮಾರ್ಚ್ 23ರಂದು ಭಗತ್‌ಸಿಂಗ್, ಸುಖದೇವ್, ರಾಜಗುರು ನಗುನಗುತ್ತಲೇ ನೇಣುಗಂಬಕ್ಕೆ ತಲೆಯೊಡ್ಡಿದ ದಿನ. ದೇಶವನ್ನು ಪ್ರೀತಿಸಿದವರು ಸಾವನ್ನು ಪ್ರೀತಿಸುತ್ತಾರೆ ಎಂಬುದಕ್ಕೆ ಈ ಕ್ರಾಂತಿಕಾರರೇ ಸಾಕ್ಷಿಯಾಗಿದ್ದಾರೆ. ಇಂತಹ ದೇಶಪ್ರೇಮಿಗಳನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ.

ದೇಶಪ್ರೇಮವೆಂದರೆ ದೇಶಕ್ಕಾಗಿ, ದೇಶದ ಹಿತಾಸಕ್ತಿಗಾಗಿ ಹೋರಾಡುವುದಾಗಿದೆ. ಪ್ರಸ್ತುತ ಅದನ್ನು ದೇಶಭಕ್ತಿ ಎಂದು ಕೆಲವರು ಗುತ್ತಿಗೆ ಪಡೆದುಕೊಂಡು ಜಾತಿ, ಧರ್ಮಕ್ಕೆ ದೇಶಪ್ರೇಮವನ್ನು ಸೀಮಿತಗೊಳಿಸುತ್ತಿದ್ದಾರೆ. ದೇಶಪ್ರೇಮವೆಂಬುದು ದೇಶಭಕ್ತಿಯಾಗಿ ವೌಢ್ಯದ ಸೆರೆಯಾಳಾಗಿದೆ. ಸರಕಾರವನ್ನು ಪ್ರಶ್ನಿಸುವುದೇ ಇಂದು ದೇಶದ್ರೋಹವಾಗಿದೆ.
‘‘ಕ್ರಾಂತಿ ಎಂದರೆ ಅಲ್ಲಿ ರಕ್ತಮಯ ಕಲಹ ಇರಬೇಕು ಎಂದೇನೂ ಇಲ್ಲ. ಹಾಗೆಯೇ ವೈಯಕ್ತಿಕ ದ್ವೇಷವೂ ಅಲ್ಲ. ಅದು ಬಾಂಬ್ ಮತ್ತು ಪಿಸ್ತೂಲುಗಳ ಸಂಸ್ಕೃತಿ ಅಲ್ಲ. ಅನ್ಯಾಯದಿಂದ ಕೂಡಿದ ವ್ಯವಸ್ಥೆ ಬದಲಾಗಬೇಕು’’ ಎಂದು ಸಾರಿದ್ದ ಭಗತ್‌ಸಿಂಗ್ ಅನ್ಯಾಯ, ಶೋಷಣೆ ಮುಕ್ತ ಸಮಾಜ ನಿರ್ಮಾಣದ ಕನಸು ಕಂಡಿದ್ದರು.
ಸಮಾಜವಾದದ ಕನಸು ಕಂಡಿದ್ದ ಭಗತ್‌ಸಿಂಗ್ ಸ್ವಾತಂತ್ರ, ಸಹೋದರತೆ, ಸಮಾನತೆ, ಸೌಹಾರ್ದದ ಬಗ್ಗೆ ಅಪಾರವಾದ ತಿಳುವಳಿಕೆಯನ್ನು ಹೊಂದಿದ್ದರು. ಸಹೋದರತೆ, ಸಮಾನತೆ ಸಮಾಜದಲ್ಲಿದ್ದಾಗಲೇ ನಿಜವಾದ ಸ್ವಾತಂತ್ರ ಸಿಕ್ಕಂತಾಗುತ್ತದೆ ಎಂಬುದು ಭಗತ್‌ಸಿಂಗ್ ಅಭಿಪ್ರಾಯವಾಗಿತ್ತು.
‘‘ಇಂಕ್ವಿಲಾಬ್ ಜಿಂದಾಬಾದ್ ಸಾಮ್ರಾಜ್ಯಶಾಹಿ ಮುರ್ದಾಬಾದ್’’ ಎಂದು ಬ್ರಿಟಿಷರ ನಿದ್ದೆಗೆಡಿಸಿದ್ದ ಭಗತ್‌ಸಿಂಗ್ ಚಿಕ್ಕವಯಸ್ಸಿನಲ್ಲಿಯೇ ಸಮಾಜದಲ್ಲಿ ಸ್ವಾತಂತ್ರದ ಕಿಚ್ಚು ಹಚ್ಚಲು ಪ್ರಾರಂಭಿಸಿದರು. ‘‘ನನ್ನ ಬದುಕು ಒಂದು ಉನ್ನತ ಧ್ಯೇಯಕ್ಕೆ, ದೇಶದ ಸ್ವಾತಂತ್ರಕ್ಕೆ ಮೀಸಲು. ಯಾವುದೇ ಆಸೆ, ಆಮಿಷಗಳೂ ನನ್ನನ್ನು ಸೆಳೆಯಲಾರವು’’ಎಂದು 1923ರಲ್ಲಿ ಪತ್ರ ಬರೆದು ಮನೆಯಿಂದ ಹೊರನಡೆದರು.
‘‘ನನ್ನನ್ನು ಕೊಲ್ಲಬಹುದು ನನ್ನ ವಿಚಾರಗಳನ್ನಲ್ಲ. ವಿಚಾರಗಳಿಗೆ ಸಾವಿಲ್ಲ, ಸಿದ್ಧಾಂತಗಳಿಗೆ ಅಳಿವಿಲ್ಲ’’ ಎಂದಿದ್ದ ಭಗತ್‌ಸಿಂಗ್ ‘‘ಬೂದಿಯ ಪ್ರತಿ ಕಣವೂ ನನ್ನ ಬೆಂಕಿಯ ಜೊತೆ ಚಲಿಸುತ್ತಿರುತ್ತದೆ. ನಾನೆಂಥ ಹುಚ್ಚನೆಂದರೆ ಬಂದಿಖಾನೆಯಲ್ಲಿಯೂ ಸ್ವತಂತ್ರನಾಗಿರುವೆ’’ ಎಂದು ಭಗತ್‌ಸಿಂಗ್ ಜೈಲಿನ ದಿನಚರಿಯಲ್ಲಿ ದಾಖಲಿಸಿದ್ದಾರೆ.

ಮಾರ್ಕ್ಸ್‌ವಾದದ ಬಗ್ಗೆ ಹೆಚ್ಚು ಅಧ್ಯಯನ ಮಾಡುತ್ತಿದ್ದ ಭಗತ್‌ಸಿಂಗ್ ಜೈಲಿನಲ್ಲಿದ್ದಾಗ ಅನೇಕ ಪುಸ್ತಕಗಳನ್ನು ತರಿಸಿಕೊಂಡು ಓದುತ್ತಿದ್ದರು. ಲೆನಿನ್, ಮಾರ್ಕ್ಸ್ ಹೀಗೆ ಅನೇಕ ಮಹಾನ್ ವ್ಯಕ್ತಿಗಳ ಬಗ್ಗೆ ಅಧ್ಯಯನ ಮಾಡಿ ಅವರ ಜೀವನ ಆದರ್ಶಗಳನ್ನು ಇಷ್ಟಪಟ್ಟಿದ್ದರು. ಮಾರ್ಕ್ಸ್‌ವಾದದತ್ತ ಮುಖಮಾಡಿದರು. ಸಮಾಜವಾದ ಮತ್ತು ಸಮಾಜವಾದಿ ಕ್ರಾಂತಿಯ ಬಗೆಗಿನ ಸಾಹಿತ್ಯವನ್ನು ಭಗತ್‌ಸಿಂಗ್ ಚಿಕ್ಕ ವಯಸ್ಸಿನಲ್ಲಿಯೇ ಓದಲಾರಂಭಿಸಿದ್ದರು. ಅವರಲ್ಲಿದ್ದ ಓದಿನ ಪ್ರೀತಿ ಬದುಕಿನ ಕೊನೆಕ್ಷಣದವರೆಗೂ ಇತ್ತು.

ನಾಸ್ತಿಕನಾಗಿ ಜಾತಿ ವಿರೋಧಿಯಾಗಿ ಮಾರ್ಕ್ಸ್‌ವಾದದ ಬಗ್ಗೆ ಆಸಕ್ತಿ ಹೊಂದಿದ್ದ ಭಗತ್‌ಸಿಂಗ್ ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗ್‌ನ್ನು ವಿರೋಧಿಸುತ್ತಿದ್ದರು. ಕ್ರಾಂತಿಯ ಖಡ್ಗವನ್ನು ವಿಚಾರದ ಸಾಣೆಕಲ್ಲಿನ ಮೇಲೆ ಹರಿತಗೊಳಿಸಲಾಗುತ್ತದೆ ಎಂದು ವೈಚಾರಿಕತೆಯ ಬಗ್ಗೆ ಭಗತ್‌ಸಿಂಗ್ ಹೇಳಿದ್ದಾರೆ.

ಸಮಸಮಾಜದ ನಿರ್ಮಾಣ, ಮನುಷ್ಯನಿಂದ ಮನುಷ್ಯನ ಶೋಷಣೆಯನ್ನು ಕೊನೆಗಾಣಿಸುವುದು ನನ್ನ ಜೀವನದ ಧ್ಯೇಯ ಎಂದು ಭಗತ್‌ಸಿಂಗ್ ಸಾರಿದ್ದರು. ಆ ನಿಟ್ಟಿನಲ್ಲಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು.

‘‘ಮೊದಲು ನಿಮ್ಮ ವೈಯಕ್ತಿಕತೆಯನ್ನು ನುಚ್ಚುನೂರು ಮಾಡಿ, ವೈಯಕ್ತಿಕ ಸುಖದ ಕನಸನ್ನು ಭಗ್ನಗೊಳಿಸಿ, ನಂತರ ಕೆಲಸ ಮಾಡಲು ತೊಡಗಿ. ನೀವು ಒಂದೊಂದೇ ಅಂಗುಲ ಮುಂದಕ್ಕೆ ಸಾಗಬೇಕು. ಅದಕ್ಕೆ ಧೈರ್ಯ ಬೇಕು, ದೃಢ ನಿರ್ಧಾರ ಬೇಕು, ನಿರಂತರ ಪರಿಶ್ರಮ ಬೇಕು, ಯಾವ ಕಷ್ಟ ಕಾರ್ಪಣ್ಯಗಳೂ ನಿರಾಶೆಗೊಳಿಸುವುದಿಲ್ಲ. ಯಾವ ವೈಫಲ್ಯಗಳೂ, ನಿಮ್ಮನ್ನು ಕಂಗೆಡಿಸುವುದಿಲ್ಲ. ತ್ಯಾಗ ಮತ್ತು ನರಳಾಟಗಳ ಅಗ್ನಿದಿವ್ಯವನ್ನು ಹಾದು ನೀವು ವಿಜಯಶಾಲಿಗಳಾಗುತ್ತೀರಿ. ಈ ವೈಯಕ್ತಿಕ ಗೆಲುವುಗಳು ಕ್ರಾಂತಿಯ ಬಹುದೊಡ್ಡ ಆಸ್ತಿ’’ ಇದು ಭಗತ್‌ಸಿಂಗ್ ನೇಣಿಗೇರುವ ಮುನ್ನ ನುಡಿದ ಮಾತು.

ಭಗತ್‌ಸಿಂಗ್, ಸುಖದೇವ್, ರಾಜಗುರುರಂತಹ ಮಹಾನ್ ದೇಶಪ್ರೇಮಿಗಳ ರಾಷ್ಟ್ರಪ್ರೇಮಕ್ಕೆ ಸಿಕ್ಕ ಉಡುಗೊರೆಯೇ ನೇಣು. ಇದನ್ನು ಮೂವರು ನಗುನಗುತ್ತಲೇ ‘‘ಕ್ರಾಂತಿ ಚಿರಾಯುವಾಗಲಿ’’ ಎನ್ನುತ್ತಲೇ ಸ್ವೀಕರಿಸಿದರು. ‘‘ಬಿಳಿ ಜನರ ಜಾಗದಲ್ಲಿ ನಮ್ಮ ಜನರು ಕುಳಿತು ನಮ್ಮನ್ನು ಅದೇ ಶೋಷಣೆ, ಅಸಮಾನತೆ, ದಬ್ಬಾಳಿಕೆಯಿಂದ ಆಳಬಾರದು’’ ಎಂದು ಭಗತ್‌ಸಿಂಗ್ ಎಚ್ಚರಿಸಿದ್ದರು. ಆದರೆ ದುರದೃಷ್ಟವಶಾತ್ ನಾವಿಂದು ಅಂದು ಅವರೇನೆಂದು ಎಚ್ಚರಿಸಿದ್ದರೋ ಅಂತಹವರ ಆಳ್ವಿಕೆಯ ಬಲಿಪಶುಗಳಾಗುತ್ತಿದ್ದೇವೆ. ಇಂದಿನ ಯುವಜನಾಂಗಕ್ಕೆ ಭಗತ್‌ಸಿಂಗ್ ಜೀವನ, ಆಶಯ ದಾರಿದೀಪವಾಗಬೇಕಿದೆ. ಭವಿಷ್ಯದ ದಿನಗಳಲ್ಲಿ ವಿದ್ಯಾರ್ಥಿ, ಯುವಜನ ಸಂಘಟನೆಗಳು ಶೋಷಣೆ ಮುಕ್ತ ಸಮಾಜಕ್ಕಾಗಿ, ಸಮಸಮಾಜದ ನಿರ್ಮಾಣ ಮಾಡಲು ಭಗತ್‌ಸಿಂಗ್ ಆಶಯಗಳನ್ನು ಆದರ್ಶವಾಗಿಟ್ಟುಕೊಂಡು ಕ್ರಾಂತಿಯ ತೇರನ್ನು ಎಳೆಯಬೇಕಾಗಿದೆ.

Writer - ಬಾಲಕೃಷ್ಣ ಜಾಡಬಂಡಿ

contributor

Editor - ಬಾಲಕೃಷ್ಣ ಜಾಡಬಂಡಿ

contributor

Similar News