ಯೋಧರು ಕೇವಲ ಚೌಕಿದಾರರಲ್ಲ, ಅವರ ಬದುಕಿನ ಜೊತೆ ಚೆಲ್ಲಾಟ ಸಲ್ಲ

Update: 2019-03-23 05:15 GMT

ಪುಲ್ವಾಮದಲ್ಲಿ ಕಳೆದ ತಿಂಗಳು ಭಯೋತ್ಪಾದಕನೊಬ್ಬ ನಡೆಸಿದ ಭಯಾನಕ ಆತ್ಮಹತ್ಯಾದಾಳಿಯಲ್ಲಿ ನಮ್ಮ ಕನಿಷ್ಠ 40 ಮಂದಿ ಸಿಆರ್‌ಪಿಎಫ್ ಜವಾನರು ಹುತಾತ್ಮರಾಗಿದ್ದರು. ಆ ದುರಂತದ ಆಘಾತದಿಂದ ನಾವಿನ್ನೂ ಹೊರಬಂದಿಲ್ಲ. ಅಷ್ಟರಲ್ಲೇ ಇನ್ನೊಂದು ಆಘಾತಕಾರಿ ಘಟನೆ ಮೊನ್ನೆ ಬುಧವಾರ ರಾತ್ರಿ ಜಮ್ಮು ಕಾಶ್ಮೀರದ ಉಧಮ್ ಪುರ ಜಿಲ್ಲೆಯ ಅರೆ ಸೇನಾ ಶಿಬಿರವೊಂದರಿಂದ ವರದಿಯಾಗಿದೆ. ಅಲ್ಲಿ ಸಿಆರ್‌ಪಿಎಫ್‌ನ ಒಬ್ಬ ಜವಾನ ತನ್ನ ಮೂರು ಮಂದಿ ಮೇಲಧಿಕಾರಿಗಳನ್ನು ಗುಂಡಿಟ್ಟು ಕೊಂದಿದ್ದಾನೆ ಮತ್ತು ಸ್ವತಃ ತನಗೆ ತಾನೇ ಗುಂಡು ಹೊಡೆದುಕೊಂಡು ಆತ್ಮ ಹತ್ಯೆಗೆ ಯತ್ನಿಸಿದ್ದಾನೆ. ಆ ಜವಾನ ಮಾನಸಿಕ ಉದ್ವಿಗ್ನತೆಗೆ ತುತ್ತಾಗಿ ಈ ಕೃತ್ಯ ಎಸಗಿದ್ದಾನೆಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ದುರದೃಷ್ಟವಶಾತ್ ನಮ್ಮ ಸೈನಿಕ ಹಾಗೂ ಅರೆ ಸೈನಿಕ ದಳಗಳಲ್ಲಿ ನಮ್ಮ ಯೋಧರು ವಿವಿಧ ಕಾರಣಗಳಿಂದ ತೀವ್ರ ಸ್ವರೂಪದ ಮಾನಸಿಕ ಉದ್ವಿಗ್ನತೆಗೆ ತುತ್ತಾಗಿ ಆತ್ಮ ಹತ್ಯೆಗೆ ಶರಣಾಗುವ ಘಟನೆಗಳು ದೊಡ್ಡ ಸಂಖ್ಯೆಯಲ್ಲಿ ನಡೆಯುತ್ತಿವೆ. ಕಳೆದ ವರ್ಷ ಕೇಂದ್ರ ಗೃಹ ಸಚಿವಾಲಯವು ಸಂಸತ್ ಸಮಿತಿಯೊಂದಕ್ಕೆ ನೀಡಿದ ಮಾಹಿತಿ ಪ್ರಕಾರ ಪ್ರತಿ ವರ್ಷ ಯುದ್ಧ ಮತ್ತಿತರ ಕಾರ್ಯಾಚರಣೆ ಗಳಲ್ಲಿ ಹತರಾಗುವ ನಮ್ಮ ಯೋಧರ ಸಂಖ್ಯೆಗೆ ಹೋಲಿಸಿದರೆ ಆತ್ಮ ಹತ್ಯೆ ಮಾಡಿಕೊಳ್ಳುವ ಯೋಧರ ಸಂಖ್ಯೆ ಹೆಚ್ಚಾಗಿದೆ. ಕಳೆದ 6 ವರ್ಷಗಳಲ್ಲಿ ನಮ್ಮ ಅರೆ ಸೈನಿಕ ಪಡೆಗಳ ಸುಮಾರು 700 ಮಂದಿ ಯೋಧರು ಆತ್ಮ ಹತ್ಯೆಗೆ ಶರಣಾಗಿದ್ದಾರೆ. ಇದು ಸಿಆರ್‌ಪಿಎಫ್‌ನಂತಹ ನಮ್ಮ ಅರೆಸೈನಿಕ ದಳಗಳ ಕಥೆಯಾದರೆ ಪೂರ್ಣ ಪ್ರಮಾಣದ ಸೇನೆಯ ಸ್ಥಿತಿ ಇದಕ್ಕಿಂತ ಹೆಚ್ಚೇನೂ ಭಿನ್ನವಾಗಿಲ್ಲ. ಕಳೆದ ಒಂದೇ ವರ್ಷದಲ್ಲಿ ಅಂದರೆ 2018 ರಲ್ಲಿ ನಮ್ಮ ಸೇನೆಯ 80 ಮಂದಿ ಯೋಧರು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ನಮ್ಮ ವಾಯುಪಡೆಯ 16 ಮಂದಿ ಮತ್ತು ನೌಕಾಪಡೆಯ 8 ಮಂದಿಯೂ ಸೇರಿದ್ದಾರೆ. 2017ರಲ್ಲಿ 75 ಮಂದಿ ಮತ್ತು 2016 ರಲ್ಲಿ 104 ಯೋಧರು ಆತ್ಮ ಹತ್ಯೆ ಮಾಡಿಕೊಂಡಿದ್ದರು.

ನಮ್ಮ ರಕ್ಷಣಾ ಸಚಿವಾಲಯವು ಕಲೆಹಾಕಿರುವ ಮಾಹಿತಿ ಪ್ರಕಾರ 2014-2017 ರ ಮಧ್ಯೆ - ಕರ್ತವ್ಯ ನಿರತ ಯೋಧರ ಪೈಕಿ 348 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಪರ್ಯಾಸವೆಂದರೆ, ಬಿಎಸ್‌ಎಫ್, ಸಿಆರ್‌ಪಿಎಫ್, ಸಿಎಪಿಎಫ್, ಐಟಿಬಿಪಿ, ಎಸ್‌ಎಸ್‌ಬಿ ಮುಂತಾದ ನಮ್ಮ ವಿವಿಧ ಸ್ತರದ ಭದ್ರತಾ ಸಂಸ್ಥೆಗಳಲ್ಲಿ ಪ್ರತಿವರ್ಷ ಸೈನಿಕ ಕಾರ್ಯಾಚರಣೆಗಳಲ್ಲಿ ಹತರಾಗುವವರಿಗಿಂತ ಆತ್ಮ ಹತ್ಯೆ ಮಾಡಿಕೊಳ್ಳುವ ಯೋಧರ ಸಂಖ್ಯೆ ಅಧಿಕವಾಗಿದೆ. ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಅದೆಷ್ಟೋ ಮಂದಿ ಯೋಧರು ತಮ್ಮ ಸೇವಾವಧಿ ಪೂರ್ತಿಗೊಳ್ಳುವ ಮುನ್ನವೇ ವಿವಿಧ ಕಾರಣಗಳನ್ನು ಹೇಳಿ ಸೇನಾ ಪಡೆಗಳಿಂದ ಹೊರ ನಡೆಯುತ್ತಿದ್ದಾರೆ. ಉದಾ : 2009 ರಿಂದ 2012 ರ ಮಧ್ಯೆ ಕನಿಷ್ಠ 44,000 ಮಂದಿ ಯೋಧರು ರಾಜೀನಾಮೆ ನೀಡಿ ಅಥವಾ ಸ್ವಯಂ ಪ್ರೇರಿತ ನಿವೃತ್ತಿ ಪಡೆದು ಭದ್ರತಾ ಪಡೆಗಳಿಂದ ಹೊರನಡೆದಿದ್ದಾರೆ. ಈ ಕಳವಳಕಾರಿ ಸನ್ನಿವೇಶವು ನಮ್ಮ ಭದ್ರತಾ ಪಡೆಗಳ ಆಂತರಿಕ ಸ್ವಾಸ್ಥ್ಯದ ಕುರಿತು ಗಂಭೀರ ಪ್ರಶ್ನೆಗಳಿಗೆ ಜನ್ಮ ನೀಡುತ್ತದೆ. ಭದ್ರತಾ ಪಡೆಗಳಲ್ಲಿ ಸೇವೆ ಸಲ್ಲಿಸುವವರೆಂದರೆ ಇತರ ನೌಕರಿಗಳನ್ನು ಮಾಡುವವರ ಹಾಗಲ್ಲ. ದೇಶದ ಮತ್ತು ನಮ್ಮೆಲ್ಲರ ರಕ್ಷಣೆಯ ಹೊಣೆ ಹೊತ್ತವರು ಅವರು. ಅವರ ಸುಖ ಕ್ಷೇಮ ನೋಡಿಕೊಳ್ಳುವುದು ನಮ್ಮೆಲ್ಲರ ಸಾಮೂಹಿಕ ಕರ್ತವ್ಯವಾಗಿದೆ.

ಸಾಮಾನ್ಯವಾಗಿ ಪ್ರತಿಯೊಂದು ಆತ್ಮಹತ್ಯೆ ಸಂಭವಿಸಿದಾಗಲೂ ಅದಕ್ಕೆ ಒಂದು ಸಂಭಾವ್ಯ ಕಾರಣವನ್ನು ಮುಂದಿಡಲಾಗುತ್ತದೆ. ಆದರೆ ಇದು ಏನಾದರೊಂದು ಔಪಚಾರಿಕ ಕಾರಣಹೇಳಿ ಕಡತ ಮುಚ್ಚಿ ಬಿಡಬಹುದಾದ ಸರಳ ಸಮಸ್ಯೆ ಅಲ್ಲ. ಸ್ವತಃ ನಮ್ಮ ವಿವಿಧ ಪಡೆಗಳ ಉನ್ನತಾಧಿಕಾರಿಗಳು ಈ ಸಮಸ್ಯೆಯ ಕುರಿತು ತನಿಖೆ ವಿಚಾರಣೆಗಳನ್ನೆಲ್ಲ ನಡೆಸಿದ್ದು, ಯೋಧರು ಅಷ್ಟೊಂದು ತೀವ್ರ ಸ್ವರೂಪದ ಮಾನಸಿಕ ಉದ್ವಿಗ್ನತೆಗೆ ಒಳಗಾಗುವುದಕ್ಕೆ ಹಲವು ಕಾರಣಗಳನ್ನು ಗುರುತಿಸಿದ್ದಾರೆ. ಉದಾ: ಭದ್ರತಾ ಪಡೆಗಳಲ್ಲಿ ಸೇವೆ ಸಲ್ಲಿಸುವವರು ದೀರ್ಘ ಕಾಲ ಮನೆ -ಸಂಸಾರಗಳಿಂದ ದೂರ ವಿರಬೇಕಾಗುತ್ತದೆ. ಒಬ್ಬ ಸಾಮಾನ್ಯ ಜವಾನ ಸುಮಾರು 30 ವರ್ಷಗಳ ತನ್ನ ಸೇವಾವಧಿಯಲ್ಲಿ ಕನಿಷ್ಠ 25 ವರ್ಷ ಕರ್ತವ್ಯದಲ್ಲೇ ಕಳೆಯಬೇಕಾಗುತ್ತದೆ. ಅವನಿಗೆ ತನ್ನ ಕುಟುಂಬದ ಜೊತೆ ಕಳೆಯಲು ಸಿಗುವ ಸಮಯ ಹೆಚ್ಚೆಂದರೆ 5 ವರ್ಷ ಮಾತ್ರ.

ವರ್ಷದಲ್ಲಿ 11 ತಿಂಗಳು ಸೇವಾನಿರತರಾದ ಬಳಿಕ ಸಿಗುವ ಒಂದು ತಿಂಗಳ ರಜೆಯಲ್ಲಿ ದೂರದ ಪ್ರದೇಶಗಳಿಂದ ಮನೆ ತಲುಪುವುದಕ್ಕೆ ಹಲವು ದಿನಗಳು ಬೇಕಾಗುತ್ತವೆ. ಮನೆ ತಲುಪಿ ಕೆಲವೇ ದಿನಗಳಲ್ಲಿ ಮತ್ತೆ ಶಿಬಿರಕ್ಕೆ ಮರಳುವ ಸಮಯವಾಗಿ ಬಿಡುತ್ತದೆ. ಕಾಶ್ಮೀರ ಮತ್ತು ಈಶಾನ್ಯ ಭಾರತದಂತಹ ಪ್ರದೇಶಗಳಲ್ಲಿನ ಹವಾಮಾನ ತೀರಾ ಪ್ರತಿಕೂಲವಾಗಿರುತ್ತದೆ. ಅಂತಹ ಸ್ಥಳಗಳಲ್ಲಿ ದೀರ್ಘಕಾಲ ಕರ್ತವ್ಯ ನಿರ್ವಹಿಸುವುದರಿಂದ ಶರೀರ ಹಾಗೂ ಮನಸ್ಸು ಎರಡೂ ಬಾಧಿತವಾಗುತ್ತವೆ. ಉನ್ನತ ದರ್ಜೆಯ ಅಧಿಕಾರಿಗಳಿಗೆ ಲಭ್ಯವಿರುವಂತಹ ಉತ್ತಮ ಗುಣಮಟ್ಟದ ಆಹಾರ, ವಸತಿ ಮತ್ತು ಪ್ರಯಾಣ ಸೌಲಭ್ಯಗಳು ಕಠಿಣ ದುಡಿಮೆ ಮಾಡುವ ಸಾಮಾನ್ಯ ಜವಾನರಿಗೆ ಮತ್ತು ಕೆಳ ದರ್ಜೆಯ ಅಧಿಕಾರಿಗಳಿಗೆ ಲಭ್ಯವಿಲ್ಲ. ಈ ತಾರತಮ್ಯದ ಬಗ್ಗೆ ಹಲವರಲ್ಲಿ ತೀವ್ರ ಅಸಮಾಧಾನವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News