‘ಪಿಎಂ ನರೇಂದ್ರ ಮೋದಿ’ ಪೋಸ್ಟರ್ ನಲ್ಲಿ ಜಾವೆದ್ ಅಖ್ತರ್: ಚಿತ್ರದ ನಿರ್ಮಾಪಕ ಹೇಳಿದ್ದು ಹೀಗೆ..

Update: 2019-03-23 14:54 GMT

ಮುಂಬೈ,ಮಾ.23: ಪ್ರಧಾನಿ ನರೇಂದ್ರ ಮೋದಿ ಜೀವನ ಕುರಿತ ಸಿನೆಮಾದಲ್ಲಿ ಚಿತ್ರ ಸಾಹಿತಿ ಜಾವೇದ್ ಅಖ್ತರ್ ಮತ್ತು ಸಮೀರ್ ಹಳೆ ಸಿನೆಮಾಕ್ಕೆ ಬರೆದಿರುವ ಸಾಹಿತ್ಯವನ್ನು ಬಳಸಿರುವ ಕಾರಣಕ್ಕೆ ಅವರ ಹೆಸರನ್ನು ಚಿತ್ರತಂಡ ಟೈಟಲ್‌ ಕಾರ್ಡ್‌ ನಲ್ಲಿ ಹಾಕಿದೆ ಎಂದು ಮೋದಿ ಚಿತ್ರದ ನಿರ್ಮಾಪಕ ಸಂದೀಪ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.

ಪಿಎಂ ನರೇಂದ್ರ ಮೋದಿ ಸಿನೆಮಾಕ್ಕೆ ಸಾಹಿತ್ಯ ಬರೆದಿರುವುದನ್ನು ಅಖ್ತರ್ ಮತ್ತು ಸಮೀರ್ ನಿರಾಕರಿಸಿದ್ದರು. ಚಿತ್ರದ ಟ್ರೈಲರ್‌ನಲ್ಲಿ ಗೀತ ರಚನೆಕಾರರಾದ ಪ್ರಸೂನ್ ಜೋಶಿ, ಅಭೇಂದ್ರ ಕುಮಾರ್ ಉಪಾಧ್ಯಾಯ್, ಸರ್ದಾರಾ ಮತ್ತು ಪ್ಯಾರಿ ಜಿ.ಲವ್‌ರಾಜ್ ಅವರೊಂದಿಗೆ ಜಾವೇದ್ ಅಖ್ತರ್ ಮತ್ತು ಸಮೀರ್ ಅವರ ಹೆಸರುಗಳೂ ಕಾಣಿಸಿಕೊಂಡಿದ್ದವು. ಚಿತ್ರದ ಟ್ರೈಲರ್‌ನಲ್ಲಿ ತಮ್ಮ ಹೆಸರುಗಳನ್ನು ಕಂಡು ಇಬ್ಬರು ಹಿರಿಯ ಸಾಹಿತಿಗಳೂ ಆಶ್ಚರ್ಯ ವ್ಯಕ್ತಪಡಿಸಿದ್ದರು ಮತ್ತು ಈ ಚಿತ್ರಕ್ಕೆ ಗೀತೆಯನ್ನು ಬರೆದಿರುವುದನ್ನು ನಿರಾಕರಿಸಿದ್ದರು.

ಇದಕ್ಕೆ ಸ್ಪಷ್ಟನೆ ನೀಡಿರುವ ನಿರ್ಮಾಪಕರು, ನಾವು ಈ ಹಿಂದೆ ಜಾವೇದ್ ಅಖ್ತರ್ 1947: ಅರ್ಥ್ ಸಿನೆಮಾಕ್ಕೆ ಬರೆದಿರುವ ಈಶ್ವರ್ ಅಲ್ಲಾ....ಹಾಗೂ ಸಮೀರ್ ದಸ್ ಚಿತ್ರಕ್ಕೆ ಬರೆದಿರುವ ‘ಸುನೊ ಗೋರ್ ಸೆ ದುನಿಯಾವಾಲೋ...’ಹಾಡನ್ನು ಪಿಎಂ ನರೇಂದ್ರ ಮೋದಿ ಚಿತ್ರದಲ್ಲಿ ಬಳಸಿಕೊಂಡಿದ್ದೇವೆ. ಆ ಕಾರಣದಿಂದ ಅವರ ಹೆಸರನ್ನು ಟೈಟಲ್ ಕಾರ್ಡ್‌ನಲ್ಲಿ ಹಾಕಲಾಗಿದೆ ಎಂದು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News